ಕರಾವಳಿಯಲ್ಲಿ ಹೃದಯಾಘಾತದಿಂದಾಗಿ ಇಬ್ಬರ ಸಾವು; ಖೋಟಾ ನೋಟು ಪ್ರಕರಣ ಆರೋಪಿಗಳಿಂದ ಮಹತ್ವದ ಮಾಹಿತಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರಾವಳಿಯಲ್ಲಿ ಹೃದಯಾಘಾತದಿಂದಾಗಿ ಇಬ್ಬರ ಸಾವು; ಖೋಟಾ ನೋಟು ಪ್ರಕರಣ ಆರೋಪಿಗಳಿಂದ ಮಹತ್ವದ ಮಾಹಿತಿ

ಕರಾವಳಿಯಲ್ಲಿ ಹೃದಯಾಘಾತದಿಂದಾಗಿ ಇಬ್ಬರ ಸಾವು; ಖೋಟಾ ನೋಟು ಪ್ರಕರಣ ಆರೋಪಿಗಳಿಂದ ಮಹತ್ವದ ಮಾಹಿತಿ

ಕರಾವಳಿಯಲ್ಲಿ ಹೃದಯಾಘಾತದಿಂದಾಗಿ ಇಬ್ಬರ ಸಾವು ಸಂಭವಿಸಿದೆ. ಕೇರಳದಿಂದ ಕರ್ನಾಟಕ್ಕೆ ಬಂದು ಖೋಟಾ ನೋಟಗಳನ್ನು ಅಸಲಿ ನೋಟುಗಳಾಗಿ ಪರಿವರ್ತಿಸುವ ಖೋಟಾ ನೋಟು ಪ್ರಕರಣ ಆರೋಪಿಗಳಿಂದ ಮಹತ್ವದ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಕರಾವಳಿಯಲ್ಲಿ ಹೃದಯಾಘಾತದಿಂದಾಗಿ ಇಬ್ಬರ ಸಾವು ಸಂಭವಿಸಿದೆ. ಖೋಟಾ ನೋಟು ಪ್ರಕರಣ ಆರೋಪಿಗಳಿಂದ ಮಹತ್ವದ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ)
ಕರಾವಳಿಯಲ್ಲಿ ಹೃದಯಾಘಾತದಿಂದಾಗಿ ಇಬ್ಬರ ಸಾವು ಸಂಭವಿಸಿದೆ. ಖೋಟಾ ನೋಟು ಪ್ರಕರಣ ಆರೋಪಿಗಳಿಂದ ಮಹತ್ವದ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಸಾಂಕೇತಿಕ ಚಿತ್ರ)

ಮಂಗಳೂರು: ಪ್ರತ್ಯೇಕ ಪ್ರಕರಣಗಳಲ್ಲಿ ಕರಾವಳಿಯ ಇಬ್ಬರು ದಿಢೀರ್ ಹೃದಯಾಘಾತದಿಂದ ಅಸುನೀಗಿದ್ದಾರೆ. ಕಾಟಿಪಳ್ಳದ ಗಣೇಶಪುರ ಬಳಿ ನಿವಾಸಿ ಸಂದೀಪ್ ಕಾಟಿಪಳ್ಳ (35) ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸಂದರ್ಭ ಕೇರಳದಲ್ಲಿ ಅಯ್ಯಪ್ಪ ಸನ್ನಿಧಿಯಲ್ಲಿ ಹದಿನೆಂಟು ಮೆಟ್ಟಿಲು ಹತ್ತುವಷ್ಟರಲ್ಲಿ ಹೃದಯಾಘಾತಕ್ಕೆ ಒಳಗಾದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಹೊಂದಿದ್ದರು. ಶಬರಿಮಲೆಗೆ ಮಗನ ಹೆಸರಲ್ಲಿ ಹೇಳಿಕೊಂಡಿದ್ದ ಹರಕೆ ಒಪ್ಪಿಸಲು ಶುಕ್ರವಾರ ತೆರಳಿದ್ದ ಅವರು, ಶನಿವಾರ ಅಯ್ಯಪ್ಪನ ಸನ್ನಿಧಿಯಲ್ಲೇ ಅಸು ನೀಗಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಉಡುಪಿ ಜಿಲ್ಲೆಯ ಸಹಕಾರಿ ಸಂಘವೊಂದರ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ನಾಯ್ಕ (54) ರಾತ್ರಿ ದಿಢೀರ್ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ವೇಳೆ ಅವರಿಗೆ ಎದೆ ನೋವಿ ಕಾಣಿಸಿಕೊಂಡಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಆಗಲೇ ಅವರು ಮೃತಪಟ್ಟಿದ್ದರು.

ಕರಾವಳಿಯಲ್ಲಿ ಕೆಲ ದಿನಗಳ ಹಿಂದೆ ಹೃದಯಾಘಾತದಿಂದ ಆರು ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ಮತ್ತೊಂದು ಪ್ರಕರಣದಲ್ಲಿ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಎಂಬಲ್ಲಿ ಮಹಿಳೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ಖೋಟಾ ನೋಟು ಪ್ರಕರಣದ ಆರೋಪಿಗಳಿಂದ ಮತ್ತಷ್ಟು ಮಾಹಿತಿ, ಲಕ್ಷಾಂತರ ರೂ ಹಣ ಜಪ್ತಿ

ಕೇರಳದಿಂದ ಕರ್ನಾಟಕ್ಕೆ ಬಂದು ಖೋಟಾ ನೋಟಗಳನ್ನು ಅಸಲಿ ನೋಟುಗಳಾಗಿ ಪರಿವರ್ತಿಸುವ ಸಮಯದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಜೈಲು ಪಾಲಾಗಿದ್ದ ಆರೋಪಿಗಳಿಂದ ಇದೀಗ ಮತ್ತೆ ಲಕ್ಷಾಂತರ ರೂ ಹಣವನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದೀಗ ಕೇರಳಕ್ಕೆ ತೆರಳಿರುವ ಬಂಟ್ವಾಳ ಪೊಲೀಸರು ಖೋಟಾ ನೋಟು ಜಾಲವನ್ನು ಪತ್ತೆಹಚ್ಚಲು ಶೋಧ ಕಾರ್ಯ ನಡೆಸುತ್ತಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ತಾಲೂಕು ಕೂಡ್ಲು ಗ್ರಾಮದ ಚೂರಿ ಎಂಬಲ್ಲಿನ ಮೊಹಮ್ಮದ್ ಸಿ.ಎ (61) ಹಾಗೂ ಕಮರುನ್ನೀಸಾ (41) ಎಂಬವರನ್ನು ಮೇ.10ರಂದು ರಾತ್ರಿ ಬಿ.ಸಿ.ರೋಡ್ ಸೋಮಯಾಜಿ ಆಸ್ಪತ್ರೆಯ ಬಳಿ ಬಂಧಿಸಿದ್ದರು.

ಈ ಸಂದರ್ಭ ಶೆರೀಫ್ ಎಂಬಾತ ಪರಾರಿಯಾಗಿದ್ದ. ವಿಚಾರಣೆಯ ವೇಳೆ ಆರೋಪಿಗಳು ಖೋಟಾ ನೋಟುಗಳನ್ನು ವಿನಿಮಯ ಮಾಡಲು ಬಂದಿರುವುದಾಗಿ ತಿಳಿಸಿ, ತಮ್ಮ ಸ್ವಾಧೀನದಲ್ಲಿದ್ದ 500 ರೂಪಾಯಿ ಮುಖ ಬೆಲೆಯ 46 ಖೋಟಾ ನೋಟುಗಳನ್ನು ಹಾಜರುಪಡಿಸಿದ್ದರು. ಈ ನೋಟುಗಳನ್ನು ವಶಕ್ಕೆ ಪಡೆದಿದ್ದು, ಬಳಿಕ ಆರೋಪಿಗಳನ್ನು ಹಾಗೂ ಅವರ ಬಳಿಯಿದ್ದ ರೂ 5,300 ನಗದು ಹಣ ಮತ್ತು 3 ಮೊಬೈಲ್ ಗಳನ್ನು ಸ್ವಾಧೀನಪಡಿಸಿದ ಬಂಟ್ವಾಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು.

ಆರೋಪಿಗಳಿಗೆ ನ್ಯಾಯಾಂಗ ಬಂಧನ

ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದರೆ ಆರೋಪಿಗಳ ಹೆಚ್ಚಿನ ತನಿಖೆ ನಡೆಸುವ ಉದ್ದೇಶದಿಂದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆ ನಡೆಸಿದಾಗ, ಆರೋಪಿಗಳು ಅಸಲಿ ನೋಟುಗಳನ್ನಾಗಿ ಮಾಡಲು ಕೇರಳದಲ್ಲಿ ಸ್ವಾಧೀನದಲ್ಲಿಟ್ಟುಕೊಂಡಿದ್ದ ಒಟ್ಟು 2,30,000 ರೂಪಾಯಿ ಮೌಲ್ಯದ 500 ರೂಪಾಯಿಯ 460 ನೋಟುಗಳಿರುವುದು ಗೊತ್ತಾಗಿದ್ದು, ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಇದೀಗ ಆರೋಪಿಗಳನ್ನು ಬಂಧಿಸಿದ ದಿನ ವಶ ಪಡಿಸಿಕೊಂಡ 23 ಸಾವಿರ ರೂ ಹೀಗೆ ಒಟ್ಟು 2,53,000 ರೂಪಾಯಿ ಮೌಲ್ಯದ 500 ರೂಪಾಯಿ ಮುಖಬೆಲೆಯ 506 ಖೋಟಾ ನೋಟುಗಳನ್ನು ಹಾಗೂ 6 ಲಕ್ಷ ರೂ ಮೌಲ್ಯದ ಕಾರನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner