ಕನ್ನಡ ಸುದ್ದಿ  /  ಕರ್ನಾಟಕ  /  ದಕ್ಷಿಣ ಕನ್ನಡದ ಅಳಕೆ ಸಮೀಪ ಪಡಿಬಾಗಿಲು ಗ್ರಾಮದಲ್ಲಿ ಬಾವಿಗೆ ರಿಂಗ್ ಹಾಕಲು ಇಳಿದ ಇಬ್ಬರ ದುರ್ಮರಣ, ರೈಲು ಡಿಕ್ಕಿಯಾಗಿ ವ್ಯಕ್ತಿ ಸಾವು

ದಕ್ಷಿಣ ಕನ್ನಡದ ಅಳಕೆ ಸಮೀಪ ಪಡಿಬಾಗಿಲು ಗ್ರಾಮದಲ್ಲಿ ಬಾವಿಗೆ ರಿಂಗ್ ಹಾಕಲು ಇಳಿದ ಇಬ್ಬರ ದುರ್ಮರಣ, ರೈಲು ಡಿಕ್ಕಿಯಾಗಿ ವ್ಯಕ್ತಿ ಸಾವು

ದಕ್ಷಿಣ ಕನ್ನಡ ಜಿಲ್ಲೆಯ ಅಳಕೆ ಸಮೀಪ ಪಡಿಬಾಗಿಲು ಎಂಬಲ್ಲಿ ಬಾವಿಗೆ ರಿಂಗ್ ಹಾಕಲು ಇಳಿದ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಪುತ್ತೂರು ಸಮೀಪ ರೈಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಸಮೀಪ ರೈಲು ಡಿಕ್ಕಿಯಾಗಿ ವ್ಯಕ್ತಿ ಮೃತಪಟ್ಟಿದ್ದಾರೆ. ಇನ್ನೊಂದು ಪ್ರಕರಣದಲ್ಲಿ  ಅಳಕೆ ಸಮೀಪ ಪಡಿಬಾಗಿಲು ಗ್ರಾಮದಲ್ಲಿ ಬಾವಿಗೆ ರಿಂಗ್ ಹಾಕಲು ಇಳಿದ ಇಬ್ಬರ ದುರ್ಮರಣವಾಗಿದೆ. (ಸಾಂಕೇತಿಕ ಚಿತ್ರ)
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಸಮೀಪ ರೈಲು ಡಿಕ್ಕಿಯಾಗಿ ವ್ಯಕ್ತಿ ಮೃತಪಟ್ಟಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಅಳಕೆ ಸಮೀಪ ಪಡಿಬಾಗಿಲು ಗ್ರಾಮದಲ್ಲಿ ಬಾವಿಗೆ ರಿಂಗ್ ಹಾಕಲು ಇಳಿದ ಇಬ್ಬರ ದುರ್ಮರಣವಾಗಿದೆ. (ಸಾಂಕೇತಿಕ ಚಿತ್ರ)

ಮಂಗಳೂರು: ಬಾವಿಗೆ ರಿಂಗ್ ಹಾಕುವ ವೇಳೆ ಆಮ್ಲಜನಕದ ಕೊರತೆಯುಂಟಾಗಿ ಕಾರ್ಮಿಕರಿಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದ ಪಡಿಬಾಗಿಲು ಎಂಬಲ್ಲಿ ಮಂಗಳವಾರ ನಡೆದಿದೆ. ಕುಕ್ಕಿಲ ನಿವಾಸಿ ಪ್ರಸ್ತುತ ಪರ್ತಿಪ್ಪಾಡಿಯಲ್ಲಿ ವಾಸವಿರುವ ಇಬ್ಬು ಯಾನೆ ಇಬ್ರಾಹಿಂ ಮತ್ತು ಮಲಾರ್ ನಿವಾಸಿ ಆಲಿ ಸಾವನ್ನಪ್ಪಿದವರು.

ಟ್ರೆಂಡಿಂಗ್​ ಸುದ್ದಿ

ಅಳಕೆ ಸಮೀಪ ಪಡಿಬಾಗಿಲಿನಲ್ಲಿ ಸುಮಾರು30 ಅಡಿ ಆಳದ ಬಾವಿಗೆ ರಿಂಗ್ ಹಾಕಿ ನಂತರ ಕ್ಲೀನಿಂಗ್ ಮಾಡಲೆಂದು ಓರ್ವ ಕಾರ್ಮಿಕ ಬಾವಿಗಿಳಿದಿದ್ದರು. ಕೆಳಗಿಳಿದವರು ಮೇಲೆರಲಾರದೆ ಒದ್ದಾಟ ನಡೆಸುತ್ತಿರುವುದನ್ನು ಕಂಡ ಮತ್ತೊಬ್ಬರು ಅವರ ಸಹಾಯಕ್ಕೆಂದು ಕೆಳಗಿಳಿದಿದ್ದರು. ಕೆಳಗಿಳಿದ ಇಬ್ಬರಿಗೂ ಆಮ್ಲಜನಕದ ಕೊರತೆ ಉಂಟಾಯಿತು ಎನ್ನಲಾಗಿದೆ.

ಈ ಸಂದರ್ಭ ಇಬ್ಬರೂ ಹೊರಬಾರಲಾಗದೆ ಸಾವನ್ನಪ್ಪಿದ್ದಾರೆ. ನಂತರ ಸ್ಥಳಿಯರ ಸಹಾಯದಿಂದ ಫ್ರೆಂಡ್ಸ್ ವಿಟ್ಲ ಮುರಳೀಧರ ಅವರ ನೇತೃತ್ವದ ತಂಡ ಎರಡು ಶವಗಳನ್ನು ಮೇಲಕ್ಕೆತ್ತಿದರು. ಮೃತದೇಹಗಳನ್ನು ವಿಟ್ಲ ಸಮುದಾಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಇಬ್ರಾಹಿಂ ಅವರು ಕಳೆದ ಇಪ್ಪತ್ತು ವರ್ಷದಿಂದ ರಿಂಗ್ ಹಾಕುವ ಕೆಲಸದಲ್ಲಿ ಪರಿಣತರಾಗಿದ್ದರು. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ರೈಲು ಡಿಕ್ಕಿ, ವ್ಯಕ್ತಿ ಸಾವು

ಪುತ್ತೂರು-ಮಂಗಳೂರು ರೈಲು ಮಾರ್ಗದ ಮುರ ಎಂಬಲ್ಲಿ ರೈಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಏ.23ರ ಬೆಳಗಿನ ಜಾವ ನಡೆದಿದೆ. ಮೃತ ವ್ಯಕ್ತಿಯನ್ನು ಸಮೀರುಲ್ಲಾ ಎಂದು ಗುರುತಿಸಲಾಗಿದೆ. ಈತ ಕಾಸರಗೋಡು ಚಂದ್ರಗಿರಿ ಸಮೀಪದ ಮೇಲ್ಪರಂಬ ಕಲನಾಡಿನ ಜಿಎನ್ ಕ್ವಾರ್ಟ್ರಸ್‌ ನಿವಾಸಿ ಇಸ್ಲಾಮುದ್ದೀನ್ ಎಂಬುವವರ ಪುತ್ರ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 26ಕ್ಕೆ ಉಡುಪಿ, ದಕ್ಷಿಣ ಕನ್ನಡಗಳಲ್ಲಿ ಮತದಾನ, ನಾಳೆಯಿಂದ ಪ್ರತಿಬಂಧಕಾಜ್ಞೆ

ಲೋಕಸಭೆಯ ಉಡುಪಿ ಮತ್ತು ದಕ್ಷಿಣ ಕನ್ನಡ ಕ್ಷೇತ್ರಗಳಲ್ಲಿ ಏ.26ರಂದು ಮತದಾನ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಉಭಯ ಜಿಲ್ಲಾಧಿಕಾರಿಗಳಾದ ಉಡುಪಿಯ ಡಾ. ವಿದ್ಯಾಕುಮಾರಿ ಮತ್ತು ದಕ್ಷಿಣ ಕನ್ನಡದ ಮುಲ್ಲೈ ಮುಗಿಲನ್ ಅವರು ಪ್ರತಿಬಂಧಕಾಜ್ಞೆಯನ್ನು ವಿಧಿಸಿದ್ದಾರೆ. ಇದು ಏಪ್ರಿಲ್ 24ರಿಂದಲೇ ಜಾರಿಗೆ ಬರಲಿದ್ದು, ಚುನಾವಣೆ ಮುಗಿಯುವವರೆಗೂ ಇರುತ್ತದೆ. ಅಂದರೆ ಏ.24ರ ಬುಧವಾರ ಸಂಜೆ 6 ಗಂಟೆಯಿಂದ ಏ.26ರ ಶುಕ್ರವಾರ ರಾತ್ರಿ 10 ಗಂಟೆವರೆಗೆ ಜಾರಿಯಲ್ಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಅವಕಾಶ ಮಾಡಿಕೊಡಲು ಈ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಇದರಲ್ಲಿ ಹಲವು ನಿಬಂಧನೆಗಳು ಇದ್ದು, ಅವುಗಳಲ್ಲಿ ಮುಖ್ಯವಾಗಿ ಐದಕ್ಕಿಂತ ಅಧಿಕ ಮಂದಿ ಗುಂಪು ಸೇರುವುದು, ಸಭೆ ಸಮಾರಂಭ ನಡೆಸುವುದು ಸೇರಿದೆ. ಮಾರಕಾಸ್ತ್ರಗಳನ್ನು ಕೊಂಡೊಯ್ಯುವುದು, ಮತಗಟ್ಟೆಗಳ 200 ಮೀಟರ್ ಒಳಗೆ ಚುನಾವಣಾ ಪ್ರಚಾರವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಧ್ವನಿವರ್ಧಕ ಬಳಕೆಗೆ ನಿರ್ಬಂಧ, ಬಹಿರಂಗ ಘೋಷಣೆ ಮಾಡಬಾರದು, ಸನ್ನೆ ಮೂಲಕ ಚುನಾವಣಾ ಪ್ರಚಾರ ಮಾಡಿದರೂ ಶಿಕ್ಷೆ ಖಚಿತ.

ಶವ ಸಂಸ್ಕಾರ, ಮದುವೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಆಜ್ಞೆ ಅನ್ವಯಿಸದೇ ಇದ್ದರೂ ರಾಜಕೀಯ ಚಟುವಟಿಕೆಗಳನ್ನು ನಡೆಸಲು ನಿರ್ಬಂಧಕಾಜ್ಞೆ ಷರತ್ತುಗಳು ಅನ್ವಯವಾಗುತ್ತದೆ. ಆದಾಗ್ಯೂ, ಮದುವೆ, ಧಾರ್ಮಿಕ ಮೆರವಣಿಗೆಗಳನ್ನು ಮಾಡುವ ವೇಳೆ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಕ್ರಮ ಕೈಗೊಳ್ಳಬೇಕು. ಇದೇ ವೇಳೆ ಯಾವುದೇ ಸಾರ್ವಜನಿಕ ಸಭೆ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಮತದಾರರಲ್ಲದವರು ಕ್ಷೇತ್ರ ಬಿಟ್ಟು ಹೊರಡಿ

ಈ ಅವಧಿಯಲ್ಲಿ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ಮುಖಂಡರು ಕ್ಷೇತ್ರ ವ್ಯಾಪ್ತಿಯಿಂದ ಹೊರಗಿರಬೇಕು ಎಂದು ಖಡಕ್ ಸೂಚನೆಯನ್ನು ಹೊರಡಿಸಲಾಗಿದೆ. ಅಲ್ಲದೆ, ಮತಗಟ್ಟೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮೊಬೈಲ್, ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೆ, ಪೋಸ್ಟರ್, ಬ್ಯಾನರ್ ಬಳಸುವಂತಿಲ್ಲ ಅಲ್ಲದೆ, ಕ್ಷೇತ್ರದ ಮತದಾರರೆಲ್ಲದ ರಾಜಕೀಯ ಪಕ್ಷಗಳ ವ್ಯಕ್ತಿಗಳನ್ನು ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಕಳುಹಿಸಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತದೆ

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

IPL_Entry_Point