Mangaluru News: ಮಂಗಳೂರಿಗೆ ಬರುತ್ತಿದ್ದ ತೈಲ ಹಡಗಿಗೆ ಗುಜರಾತ್ ಬಳಿ ನಿಗೂಢ ಡ್ರೋಣ್ ದಾಳಿ, 20 ಭಾರತೀಯರು ಸೇರಿ ಸಿಬ್ಬಂದಿ ಸುರಕ್ಷಿತ
ಕಚ್ಚಾ ತೈಲ ಹೊತ್ತು ಸೌದಿ ಅರೇಬಿಯಾದಿಂದ ಮಂಗಳೂರು ಕಡೆಗೆ ಆಗಮಿಸುತ್ತಿದ್ದ ಇಸ್ರೇಲ್‌ನ ಹಡಗಿನ ಮೇಲೆ ಗುಜರಾತ್ ಸಮುದ್ರ ವ್ಯಾಪ್ತಿಯಲ್ಲಿ ನಿಗೂಢ ಡ್ರೋಣ್ ದಾಳಿ ನಡೆದಿದೆ. ಆದಾಗ್ಯೂ, ಹಡಗಿನಲ್ಲಿದ್ದ 20 ಭಾರತೀಯರು ಸೇರಿ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಕರಾವಳಿ ರಕ್ಷಣಾ ಪಡೆ ಹೇಳಿದೆ.
ಮಂಗಳೂರು: ಸೌದಿ ಅರೇಬಿಯಾದಿಂದ ಮಂಗಳೂರು ಬಂದರಿಗೆ ಬರುತ್ತಿದ್ದ ಹಡಗೊಂದರ ಮೇಲೆ ಡ್ರೋನ್ ದಾಳಿ ನಡೆದ ಕುರಿತು ವರದಿಯಾಗಿದೆ. ಯಾವುದೇ ಅಪಾಯ ಯಾರಿಗೂ ಉಂಟಾಗಿಲ್ಲ. ಇಸ್ರೇಲ್ ದೇಶಕ್ಕೆ ಸೇರಿದ ಈ ಹಡಗು, ಸೌದಿ ಅರೇಬಿಯಾದಿಂದ ಮಂಗಳೂರಿಗೆ ಆಗಮಿಸುತ್ತಿತ್ತು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಇದು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಕದನಕ್ಕೆ ಸಂಬಂಧಿಸಿದ ಕೃತ್ಯವೋ ಎಂಬ ಶಂಕೆಯೂ ವ್ಯಕ್ತವಾಗಿದ್ದು, ಇದುವರೆಗೂ ಈ ಕೃತ್ಯದ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಅಲ್ಲದೆ, ಈ ಘಟನೆ ಭಾರತದ ಜಲಪ್ರದೇಶ ವ್ಯಾಪ್ತಿಯಲ್ಲೂ ನಡೆದಿಲ್ಲ ಎಂದು ಕೇಂದ್ರ ಸರಕಾರ ಖಚಿತಪಡಿಸಿದ್ದಾಗಿ ಮಾಧ್ಯಮಗಳು ಬಿತ್ತರಿಸಿವೆ.
ಕಚ್ಚಾ ತೈಲ ತರುತ್ತಿದ್ದ ಈ ಹಡಗಿನ ಮೇಲೆ ಗುಜರಾತ್ ನ ಮೇರಾವಲ್ ಕರಾವಳಿಯ ನೈರುತ್ಯ ದಿಂದ 217 ನಾಟಿಕಲ್ ಮೈಲು ಅಂದರೆ 401 ಕಿಲೊಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಕರಾವಳಿ ರಕ್ಷಣಾ ಪಡೆಯ ಹಡಗು ಸಕಾಲದಲ್ಲಿ ನೆರವು ನೀಡಿದೆ.
ಈ ಕುರಿತು ಅಮೇರಿಕಾ ಹೇಳಿಕೆ ನೀಡಿದ್ದು, 20 ಭಾರತೀಯರು ಇದ್ದ ಈ ಹಡಗಿನ ಮೇಲೆ ಶನಿವಾರ ದಾಳಿ ನಡೆದಿದ್ದು, ಯು.ಎಸ್. ಮಿಲಿಟರಿ ನಿರಂತರವಾಗಿ ಭಾರತದ ಸಂಪರ್ಕದಲ್ಲಿದೆ ಎಂದಿದೆ. ಸೌದಿ ಅರೇಬಿಯಾದ ಜುಬಾಲಿ ಬಂದರಿನಿಂದ ಮಂಗಳೂರಿಗೆ ಈ ಹಡಗು ತೆರಳುತ್ತಿತ್ತು. ಶನಿವಾರ ಬೆಳಗ್ಗೆ ಪೋರಬಂದರಿನಿಂದ 217 ನಾಟಿಕಲ್ ಮೈಲು ದೂರದಲ್ಲಿ ಸುಮಾರು 11.30ಕ್ಕೆ ಈ ದಾಳಿ ನಡೆದಿದೆ ಎನ್ನಲಾಗಿದೆ.
ಗುಜರಾತ್ ನ ವೇರಾವಲ್ ಕರಾವಳಿ ವ್ಯಾಪ್ತಿಯಿಂದ ಆಚೆ 217 ನಾಟಿಕಲ್ ಮೈಲು ದೂರದಲ್ಲಿ ಎಂ.ವಿ. ಚಮ್ ಫ್ಲುಟೊ ಎಂಬ ಸರಕು ಸಾಗಣೆ ಹಡಗಿನ ಮೇಲೆ ಈ ದಾಳಿ ನಡೆಸಲಾಗಿದೆ. ಹಡಗನ್ನು ಕರಾವಳಿ ರಕ್ಷಕ ಪಡೆಯ ಬೆಂಗಾವಲಿನೊಂದಿಗೆ ಮುಂಬೈನತ್ತ ಕರೆತರಲಾಗಿದೆ. ಡಿ.19ರಂದು ಯುಎಇಯಿಂದ ಹಡಗು ಹೊರಟಿತ್ತು. ಡಿ.25ರಂದು ಮಂಗಳೂರು ತಲುಪಬೇಕಿತ್ತು. ದಾಳಿಯಿಂದ ಯಾವುದೇ ಜೀವಹಾನಿ ಉಂಟಾಗಿಲ್ಲ.
ಕರಾವಳಿ ರಕ್ಷಣಾ ಪಡೆ ಕಾರ್ಯಾಚರಣೆ
ದಾಳಿ ಮಾಹಿತಿ ಗೊತ್ತಾದ ಕೂಡಲೇ ಭಾರತೀಯ ಕರಾವಳಿ ರಕ್ಷಣಾ ಪಡೆ ಹಡಗು ಐಸಿಜಿಎಸ್ ವಿಕ್ರಮ್, ತೊಂದರೆಗೆ ಒಳಗಾದ ಹಡಗಿನ ಬಳಿ ತೆರಳಲು ಸೂಚಿಸಲಾಗಿತ್ತು. ಅರಬ್ಬೀ ಸಮುದ್ರದ ವ್ಯಾಪ್ತಿಯಲ್ಲಿ ಭಾರತೀಯ ಪರಿಮಿತಿಯೊಳಗೆ ಅದು ಗಸ್ತು ತಿರುಗುತ್ತಿತ್ತು. ಹಡಗಿನ ರಕ್ಷಣಾ ಕಾರ್ಯಾಚರಣೆಯನ್ನು ಕೋಸ್ಟ್ ಗಾರ್ಡ್ ಕೈಗೊಂಡಿದೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಹೇಳಿಕೆಯೊಂದನ್ನು ನೀಡಿದ್ದು, ಭಾರತೀಯ ಕೋಸ್ಟ್ ಗಾರ್ಡ್ ಗೆ ಈ ಕುರಿತು ಮಾಹಿತಿ ಬಂದಿದ್ದು, 20 ಭಾರತೀಯರು ಮತ್ತು ಒಬ್ಬರು ವಿಯೆಟ್ನಾಮ್ ನಾಗರಿಕರು ಇದ್ದ ಹಡಗು ಶಂಕಿತ ಡ್ರೋಣ್ ದಾಳಿಗೆ ತುತ್ತಾಗಿದೆ ಎಂದು ತಿಳಿಸಿದ್ದು, ರಕ್ಷಣೆಯ ವಿಡಿಯೋವನ್ನು ಬಿಡುಗಡೆ ಮಾಡಿದೆ.