Mangaluru News: ಒಂದೇ ಉಸಿರಲ್ಲಿ 28 ಬಾರಿ ತಿರುವು ಹೊಡೆಯುವ ಕಲೆ: ವರ್ಲ್ಡ್ ವೈಡ್ ಬುಕ್ ರೆಕಾರ್ಡ್‌ಗೆ ಸೇರಿದ ಮಂಗಳೂರಿನ ಈಜುಪಟು
ನೀರಿನಲ್ಲಿ ಮುಳುಗಿ ಉಸಿರು ಕಟ್ಟಿಕೊಂಡು 28 ತಿರುವು ಹೊಡೆಯುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಸೂರಿಕುಮೇರು ನಿವಾಸಿ ಕೆ. ಚಂದ್ರಶೇಖರ ರೈ ವರ್ಲ್ಡ್ ವೈಡ್ ಬುಕ್ ರೆಕಾರ್ಡ್ ಸೇರಿದ್ದಾರೆ.
ಮಂಗಳೂರು: ನೀರಿನಲ್ಲಿ ಒಂದೇ ಉಸಿರಿನಲ್ಲಿ 28 ಬಾರಿ ತಿರುವು ಹಾಕುವ ಕಲೆಯಲ್ಲಿ ಮಂಗಳೂರಿನ ಈಜುಪಟುವೊಬ್ಬರು ವರ್ಲ್ಡ್ ವೈಡ್ ಬುಕ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾರೆ.
ನೀರಿನಲ್ಲಿ ಮುಳುಗಿ ಉಸಿರು ಕಟ್ಟಿಕೊಂಡು 28 ತಿರುವು ಹೊಡೆಯುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸೂರಿಕುಮೇರು ನಿವಾಸಿ ಕೆ. ಚಂದ್ರಶೇಖರ ರೈ ವರ್ಲ್ಡ್ ವೈಡ್ ಬುಕ್ ರೆಕಾರ್ಡ್‌ನಲ್ಲಿ ದಾಖಲೆ ಬರೆದ ಸಾಧಕ. 2023ರ ಎಪ್ರಿಲ್ 13 ರಂದು ವರ್ಲ್ಡ್ ವೈಡ್ ಬುಕ್ ರೆಕಾರ್ಡ್ ದಾಖಲೆ ನಿರ್ಮಿಸಿದ್ದಾರೆ.
ಸೀತಾರಾಮ ಶೆಟ್ಟಿ, ಮುಹಮ್ಮದ್, ಲಿಯೋ ಎಂಬುವರ ಪ್ರೋತ್ಸಾಹದಿಂದ ಇದನ್ನು ಮಾಡಲು ಸಾಧ್ಯವಾಗಿದೆ. ಇದೀಗ ಗಿನ್ನಿಸ್ ದಾಖಲೆಗೆ ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಾರೆ ರೈ. ನೀರಿನಲ್ಲಿ ಒಂದೆರಡು ತಿರುವು ಹೊಡೆಯುವುದು ತುಂಬಾ ಕಷ್ಟ. ಅಂತದರಲ್ಲಿ ಚಂದ್ರಶೇಖರ ರೈ ಅವರು ಒಂದೇ ಉಸಿರಿನಲ್ಲಿ 28 ತಿರುವು ಮಾಡಿರುವುದು ಅದ್ಬುತ ಸಾಧನೆಯಾಗಿದೆ.
ವಾಸ್ತವವಾಗಿ ಅವರು 29 ಬಾರಿ ತಿರುವು ಹೊಡೆದಿದ್ದರು. ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿತ್ತು. ಆದರೆ ವರ್ಲ್ಡ್ ವೈಡ್ ಬುಕ್ ರೆಕಾರ್ಡ್‌ನಲ್ಲಿ 28 ತಿರುವುಗಳನ್ನು ಪರಿಗಣಿಸಲಾಗಿದೆ ಎಂದು ಚಂದ್ರಶೇಖರ ರೈ ಮಾಹಿತಿ ನೀಡಿದ್ದಾರೆ.
1 ನಿಮಿಷ 2 ಸೆಕೆಂಡ್‌ನಲ್ಲಿ ಸಾಧನೆ: ಇವರು ನೀರಿನಲ್ಲಿ ಉಸಿರು ಕಟ್ಟಿಕೊಂಡು ಮುಂಭಾಗದಿಂದ ತಿರುವು ಹೊಡೆಯುವ ವಿಶೇಷ ಪ್ರತಿಭೆ ಹೊಂದಿದ್ದಾರೆ. ಒಂದು ನಿಮಿಷ ಎರಡು ಸೆಕೆಂಡ್‌ನಲ್ಲಿ ಉಸಿರು ಕಟ್ಟಿಕೊಂಡು ಮುಂಭಾಗದಿಂದ 28 ತಿರುವು ಹೊಡೆದದ್ದು, ವರ್ಲ್ಡ್ ವೈಡ್ ಬುಕ್ ರೆಕಾರ್ಡ್ ಸೇರಿದ್ದಾರೆ.
ಚಂದ್ರಶೇಖರ ರೈ ಅವರು ಉಸಿರು ಕಟ್ಟಿಕೊಂಡು ಮುಂಭಾಗದಿಂದ ತಿರುವು ಹೊಡೆಯುವ ಮೂಲಕ ಈ ಮೊದಲು ಇಂಡಿಯಾ ಬುಕ್ ಅಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದರು. ಇಂಡಿಯಾ ಬುಕ್ ಆಪ್ ರೆಕಾರ್ಡ್‌ನಿಂದ ಪ್ರಮಾಣಪತ್ರ ಮತ್ತು ಪದಕ ಇವರಿಗೆ ದೊರೆತಿತ್ತು. ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆಯಾದ ಕುರಿತ ಸಾಧನೆಯ ವಿಡಿಯೋವನ್ನು ವರ್ಲ್ಡ್ ವೈಡ್ ಬುಕ್ ರೆಕಾರ್ಡ್ ಸಂಸ್ಥೆಗೆ ಕಳುಹಿಸಿದ್ದರು. ಅಲ್ಲಿಯೂ ಅವರ ಸಾಧನೆಯನ್ನು ದಾಖಲಿಸಲಾಗಿದೆ.
ಮಂಗಳೂರಿನ ಈಜುಕೊಳದಲ್ಲಿ ಸಾಧನೆ: ಮಂಗಳೂರು ಈಜುಕೊಳದಲ್ಲಿ ಚಂದ್ರ ಶೇಖರ ರೈ ಮುಂಭಾಗದಿಂದ ತಿರುವು ಹೊಡೆಯುವುದನ್ನು ಗಮನಿಸಿದ ರಾಷ್ಟ್ರೀಯ ಈಜುಪಟುಗಳಾದ ಸೀತಾರಾಮ್ ಮತ್ತು ಮಹಮ್ಮದ್ ಅವರು ಇದೊಂದು ದಾಖಲೆಯಾಗಲಿದೆ ಎಂದು ತಿಳಿಸಿದ್ದರು. ಇದು ಗಿನ್ನಿಸ್‌ನಲ್ಲಿ ದಾಖಲಾಗಿದ್ದು, ಅಮೆರಿಕಾದ ವ್ಯಕ್ತಿಯೊಬ್ಬರು ಉಸಿರು ಕಟ್ಟಿ 36 ಬಾರಿ ಮುಂಭಾಗದಿಂದ ತಿರುವು ಮಾಡಿ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದ್ದಾರೆ. ಇದೀಗ ಚಂದ್ರಶೇಖರ ರೈ ಅವರು ಇಂಡಿಯಾ ಬುಕ್ ಅಫ್ ರೆಕಾರ್ಡ್ ಮತ್ತು ವರ್ಲ್ಡ್ ವೈಡ್ ಬುಕ್ ರೆಕಾರ್ಡ್‌ನಲ್ಲಿ ದಾಖಲೆ ಮಾಡಿದ್ದು, ಗಿನ್ನಿಸ್ ದಾಖಲೆಗಾಗಿ ಪ್ರಯತ್ನಿಸುತ್ತಿದ್ದಾರೆ.
ಈ ದಾಖಲೆಗೆ ಕಳುಹಿಸುವ ದಿನ ಚಂದ್ರಶೇಖರ್ ರೈ ಉರ್ಧ್ವಾಸನ ಮಾಡಿ ಬಳಿಕ ಇದನ್ನು ಮಾಡಿದ್ದರು. ದೀರ್ಘವಾಗಿ ನೀರಿನಲ್ಲಿ ಉಸಿರು ಕಟ್ಟಿ ನಿಲ್ಲಲ್ಲು ಅಂತಾರಾಷ್ಟ್ರೀಯ ಯೋಗಪಟು ಕವಿತಾ ಅವರ ಮೂಲಕ ಪ್ರಾಣಾಯಾಮ ಅಭ್ಯಸಿಸಿದ್ದಾರೆ.
ಮಂಗಳೂರು ಈಜುಕೊಳದಲ್ಲಿ ಕೆ ಚಂದ್ರಶೇಖರ ರೈ ಅವರು ಮಾಡಿದ ಸಾಧನೆಯನ್ನು ಅಂತಾರಾಷ್ಟ್ರೀಯ ಯೋಗಪಟು ಕವಿತಾ ಎಂಬುವರು ತಮ್ಮ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದರು. ಆ ಬಳಿಕ ಅದನ್ನು ಇಂಡಿಯಾ ಬುಕ್ ಅಫ್ ರೆಕಾರ್ಡ್‌ನ ನಿಯಮಾವಳಿ ಪ್ರಕಾರ ದಾಖಲೆಗೆ ಸಲ್ಲಿಸಿದ್ದು ಇವುಗಳನ್ನು ಪರಿಶೀಲಿಸಿದ ಇಂಡಿಯಾ ಬುಕ್ ಅಫ್ ರೆಕಾರ್ಡ್ ಸಂಸ್ಥೆ ಅವರ ಹೆಸರನ್ನು ದಾಖಲೆಯಲ್ಲಿ ಸೇರಿಸಿದೆ. ಆ ಬಳಿಕ ಇದೇ ವಿಡಿಯೋವನ್ನು ವರ್ಲ್ಡ್ ವೈಡ್ ಬುಕ್ ರೆಕಾರ್ಡ್‌ಗೆ ಕಳುಹಿಸಿದ್ದು, ಅವರು ತಮ್ಮ ದಾಖಲೆಯಲ್ಲಿ ಸೇರಿಸಿದ್ದಾರೆ.
ಚಂದ್ರಶೇಖರ್ ರೈ ಅವರು ಬಾಲ್ಯದಿಂದಲೇ ಕ್ರೀಡಾಸಕ್ತಿ ಹೊಂದಿದವರು. ಯಾರದೇ ಮಾರ್ಗದರ್ಶನ ಇಲ್ಲದೇ 2005 ರಲ್ಲಿ ಈಜು ಕಲಿತ ಅವರು ಈಜಿನಲ್ಲಿ ವಿವಿಧ ಭಂಗಿಗಳನ್ನು ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ಇದೀಗ ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದ ತರಬೇತುದಾರರಾಗಿ, ಲೈಪ್ ಗಾರ್ಡ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಗಿನ್ನೆಸ್ ದಾಖಲೆಗಾಗಿ ಪ್ರಯತ್ನ ಪಡುತ್ತಿದ್ದಾರೆ.(ವರದಿ: ಹರೀಶ ಮಾಂಬಾಡಿ, ಮಂಗಳೂರು)
ವಿಭಾಗ