Mangaluru News: ಇ ಸಿಗರೇಟ್, ವಿದೇಶಿ ಸಿಗರೇಟ್ ಮಾರುತ್ತಿದ್ದ 3 ಅಂಗಡಿಗಳ ಟ್ರೇಡ್ ಲೈಸೆನ್ಸ್ ರದ್ಧತಿಗೆ ಪತ್ರ
Mangaluru News: ಪರವಾನಗಿ ಇಲ್ಲದೆ ಇ ಸಿಗರೇಟ್, ವಿದೇಶಿ ಸಿಗರೇಟ್ ಮಾರಾಟ ಮಾಡುತ್ತಿದ್ದ ಮೂರು ಅಂಗಡಿಗಳ ಮೇಲೆ ದಾಳಿ ನಡೆಸಿದ ಪೊಲೀಸರು, ಅಲ್ಲಿಂದ 2.7 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಇ ಸಿಗರೇಟ್, ವಿದೇಶಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡರು. ಅಲ್ಲದೆ, ಈ ಅಂಗಡಿಗಳ ಟ್ರೇಡ್ ಲೈಸೆನ್ಸ್ ರದ್ದು ಮಾಡುವಂತೆ ಪತ್ರ ಬರೆದಿದ್ದಾರೆ.

ಮಂಗಳೂರು: ಅಕ್ರಮವಾಗಿ ಇ ಸಿಗರೇಟ್ ಮತ್ತು ವಿದೇಶಿ ಸಿಗರೇಟ್ ಮಾರಾಟ ಮಾಡುತ್ತಿದ್ದ ಮೂರು ಅಂಗಡಿಗಳ ಟ್ರೇಡ್ ಲೈಸೆನ್ಸ್ ರದ್ದು ಪಡಿಸಲು ಮಂಗಳೂರು ಮಹಾನಗರ ಪಾಲಿಕೆಗೆ ನಗರ ಪೊಲೀಸರು ಪತ್ರ ಬರೆದಿದ್ದಾರೆ.
ಆಗಷ್ಟ್ 21 ರಂದು ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ಲಾಲ್‌ಬಾಗ್ ಬಳಿಯ ಸಾಯಿಬಿನ್ ಕಾಂಪ್ಲೆಕ್ಸ್‌ನ ನೆಲಮಹಡಿಯಲ್ಲಿರುವ "ಆಮಂತ್ರಣ", "ಯೂನಿಕ್ ವರ್ಲ್ಡ್ ಮತ್ತು "ಫೆಂಟಾಸ್ಟಿಕ್ ವರ್ಲ್ಡ್" ಎಂಬ ಅಂಗಡಿಗೆ ದಾಳಿ ಮಾಡಲಾಗಿತ್ತು. ಇಲ್ಲಿ ಕೇಂದ್ರ ಸರಕಾರದಿಂದ ನಿಷೇಧವಾಗಿರುವ ಇ-ಸಿಗರೇಟ್‌ಗಳನ್ನು ಮತ್ತು ಸರಕಾರದ ಎಚ್ಚರಿಕೆಯನ್ನು ಪ್ಯಾಕೇಟ್ ಮೇಲೆ ನಮೂದಿಸದ ವಿದೇಶಿ ಸಿಗರೇಟ್‌ಗಳನ್ನು ಕಾನೂನು ಬಾಹಿರವಾಗಿ ಗ್ರಾಹಕರಿಗೆ ಮಾರಾಟ ಮಾಡಿ ಅಕ್ರಮ ಲಾಭಗಳಸುತ್ತಿದ್ದರು.
ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಇ-ಸಿಗರೇಟ್ ಮತ್ತು ವಿದೇಶಿ ಸಿಗರೇಟ್ ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಅಂದಾಜು 2.70.000/- ಮೌಲ್ಯದ ಇ- ಸಿಗರೇಟ್ ಹಾಗೂ ವಿದೇಶಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದರು.
ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಇ ಸಿಗರೇಟ್ ನಿಷೇಧ ಕಾಯ್ದೆ 2019 ಮತ್ತು ಕೊಲ್ದಾ ಕಾಯಿದೆ- 2003 ಹಾಗೂ ಸಿಗರೇಟ್ಸ್ ಆಂಡ್ ಟೊಬ್ಯಾಕೊ ಪ್ರಾಡಕ್ಟ್ಸ್ (ಪ್ಯಾಕಿಂಗ್ ಆಂಡ್ ಲೇಬೆಲಿಂಗ್ ರೂಲ್ಸ್ 2020) ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ತನಿಖೆ ಮಾಡಿದಾಗ ಆರೋಪಿಗಳು ಈ ಹಿಂದೆಯೂ ಕೂಡಾ ಅಂಗಡಿಗಳಲ್ಲಿ ಇ-ಸಿಗರೇಟ್‌ಗಳನ್ನು ಮತ್ತು ಸರಕಾರದ ಎಚ್ಚರಿಕೆಯನ್ನು ಪ್ಯಾಕೇಟ್ ಮೇಲೆ ನಮೂದಿಸದ ವಿದೇಶಿ ಸಿಗರೇಟ್‌ಗಳನ್ನು ಮಾರಾಟ ಮಾಡಿದ್ದರು ಎಂಬುದು ತಿಳಿದುಬಂದಿದೆ.
ಆರೋಪಿತರ ಈ ಪುನರಾವರ್ತಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಂಗಡಿಗಳ ಟ್ರೇಡ್ ಲೈಸನ್ಸ್ ರದ್ದು ಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗಿದೆ.
(Karnataka News, Mangaluru News, Crime News from Hindustan Times Kannada. ಕರ್ನಾಟಕ ಸುದ್ದಿ, ಮಂಗಳೂರು ಸುದ್ದಿ, ಅಪರಾಧ ಸುದ್ದಿಗಳ ಮತ್ತಷ್ಟು ಮಾಹಿತಿಗೆ kannada.hindustantimes.com ಜಾಲತಾಣ ನೋಡಿ)
