Mangaluru News: ಸುರತ್ಕಲ್‌ನಿಂದ ನಾಪತ್ತೆಯಾಗಿದ್ದ ನಾಲ್ವರು ಹೈಸ್ಕೂಲ್ ವಿದ್ಯಾರ್ಥಿಗಳ ಶವ ಮಂಗಳೂರು ಹೊರ ವಲಯದಲ್ಲಿ ಪತ್ತೆ
Mangaluru News: ಇತ್ತೀಚೆಗೆ ಪರೀಕ್ಷೆ ಮುಗಿಸಿ ಶಾಲೆಯಿಂದ ಹೊರಟಿದ್ದ ನಾಲ್ವರು ವಿದ್ಯಾರ್ಥಿಗಳ ಶವ ಮಂಗಳೂರು ಹೊರ ವಲಯದಲ್ಲಿ ಪತ್ತೆಯಾಗಿದೆ. ಇವರು ಸುರತ್ಕಲ್ ಖಾಸಗಿ ಶಾಲೆಯಲ್ಲಿ ಓದುತ್ತಿದ್ದರು. ವಿದ್ಯಾರ್ಥಿಗಳು ಈಜಲು ಹೋಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ನಗರದ ಹೊರ ವಲಯದ ಹಳೆಯಂಗಡಿ ಸಮೀಪ ಚೇಳ್ಯಾರು ಬಳಿ ಕರಿತೋಟದ ಅಣೆಕಟ್ಟಿನಲ್ಲಿ ನಾಲ್ವರು ವಿದ್ಯಾರ್ಥಿಗಳ ಶವ ಪತ್ತೆಯಾಗಿದೆ. ಇವರೆಲ್ಲರೂ ಸುರತ್ಕಲ್ ಖಾಸಗಿ ಹೈಸ್ಕೂಲ್ ವಿದ್ಯಾರ್ಥಿಗಳಾಗಿದ್ದು, ಮಂಗಳವಾರ ಮಧ್ಯಾಹ್ನ ಇಲ್ಲಿಂದ ಹೊರಟು, ಮನೆಗೂ ತೆರಳದೆ ನಾಪತ್ತೆಯಾಗಿರುವ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ ಪ್ರಕರಣ ದಾಖಲಾಗಿತ್ತು. ತಡರಾತ್ರಿ ಇವರ ಶವ ಪತ್ತೆಯಾಗಿದ್ದು, ಕುಟುಂಬ ಸದಸ್ಯರ ರೋದನ ಮುಗಿಲುಮುಟ್ಟಿದೆ.
ಏನಿದು ಘಟನೆ?
10ನೇ ತರಗತಿಯ ಯಶ್ವಿತ್, ಚಂದ್ರಕಾಂತ್, ನಿರೂಪ್, ಅನ್ವಿತ್ ಮತ್ತು ರಾಘವೇಂದ್ರ ಮೃತಪಟ್ಟ ವಿದ್ಯಾರ್ಥಿಗಳು. ಹತ್ತನೇ ತರಗತಿಗೆ ಪೂರ್ವಸಿದ್ಧತಾ ಪರೀಕ್ಷೆ ನಡೆಯುತ್ತಿದ್ದು, ಮಂಗಳವಾರ ಮಧ್ಯಾಹ್ನ ಸುಮಾರು 1.30ಕ್ಕೆ ಪರೀಕ್ಷೆ ಮುಗಿಸಿ ಶಾಲೆಯಿಂದ ಹೊರಗೆ ತೆರಳಿದ್ದ ಇವರು ಬಳಿಕ ನಾಪತ್ತೆಯಾಗಿದ್ದರು. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸಂಜೆ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಶಾಲೆಯ ಪರಿಸರದ ಸಿಸಿ ಟಿವಿ ಕ್ಯಾಮರಾ ಪರಿಶೀಲನೆ ನಡೆಸಿ, ಬಳಿಕ ಶೋಧ ಕಾರ್ಯ ಆರಂಭಿಸಿದ್ದರು. ಪರೀಕ್ಷೆ ಮುಗಿಸಿದ ಬಳಿಕ ಸಹಪಾಠಿಗಳೊಂದಿಗೆ ಈ ವಿದ್ಯಾರ್ಥಿಗಳು ಅಣೆಕಟ್ಟಿಗೆ ಈಜಲೆಂದು ತೆರಳಿ ಆಳದ ಅರಿವಿಲ್ಲದೆ ನೀರಿಗೆ ಇಳಿದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪ್ರಿಪರೇಟರಿಯ 3 ಪರೀಕ್ಷೆಗಳು ಮಾತ್ರ ಮುಗಿದಿದ್ದವು. ಇನ್ನು 3 ಪರೀಕ್ಷೆಗಳು ಬಾಕಿ ಇತ್ತು. ಒಟ್ಟು 7 ಮಂದಿ ಸುರತ್ಕಲ್ ಪೇಟೆವರೆಗೆ ಜತೆಗಿದ್ದು ಬಳಿಕ ಮೂವರು ಮನೆಗೆ ತೆರಳಿದ್ದರು. ಇವರು ಸುರತ್ಕಲ್ ಮಾರುಕಟ್ಟೆ ಬಳಿ ತಿಂಡಿ ತಿಂದು, ಬಳಿಕ ರಿಕ್ಷಾ ಪಾರ್ಕ್ ಬಳಿ ಬಂದಿದ್ದಾರೆ. ಬಳಿಕ ಹಳೆಯಂಗಡಿ ಕಡೆ ಹೋಗುವ ಬಸ್ ಹಿಡಿದ್ದಾರೆ ಎಂಬ ಮಾಹಿತಿ ಪೊಲೀಸ್ ತನಿಖೆ ವೇಳೆ ಗೊತ್ತಾಗಿತ್ತು. ಪೋಷಕರು ಹಾಗೂ ಪೊಲೀಸರು ಎಲ್ಲಾ ಕಡೆ ಹುಡುಕಾಡಿದ್ದರು. ಆದರೆ ರಾತ್ರಿ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿಯ ಸಮೀಪದಲ್ಲಿನ ರೈಲ್ವೆ ಸೇತುವೆಯ ಕೆಳಭಾಗದ ನದಿಯ ಬಳಿಯಲ್ಲಿ ಮಕ್ಕಳ ಶಾಲೆಯ ಬ್ಯಾಗ್, ಯೂನಿಫಾರ್ಮ್ ಪತ್ತೆಯಾಗಿತ್ತು ನಂತರ ನದಿಯಲ್ಲಿ ಶೋಧ ಕಾರ್ಯ ನಡೆಸಿದ ಬಳಿಕ ನಾಲ್ವರು ವಿದ್ಯಾರ್ಥಿಗಳ ಶವ ಪತ್ತೆಯಾಗಿದೆ. ಮೃತದೇಹಗಳನ್ನು ನದಿಯಿಂದ ಹೊರಗೆ ತೆಗೆಯಲಾಗಿದ್ದು, ಮಂಗಳೂರು ನಗರದ ವೆನ್‌ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಕಾರ್ಯ ಮಾಡಲಾಗಿದೆ.
ಕಳೆದ ಶನಿವಾರವಷ್ಟೇ ಸಮುದ್ರ ಪಾಲಾಗಿದ್ದ ವಿದ್ಯಾರ್ಥಿ
ವಿದ್ಯಾರ್ಥಿಗಳು ಇದೇ ರೀತಿ ಈಜಲು ತೆರಳಿ ನೀರು ಪಾಲಾಗುವ ಘಟನೆ ಹಲವು ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಶನಿವಾರವಷ್ಟೇ ಪಣಂಬೂರು ಬೀಚ್‌ನಲ್ಲಿ ವಿದ್ಯಾರ್ಥಿಯೊಬ್ಬ ಸಮುದ್ರ ಪಾಲಾಗಿದ್ದ.
ನೀರಿನಲ್ಲಿ ಆಟವಾಡುವುದಕ್ಕೆ ತೆರಳಿದ್ದ ಬೈಕಂಪಾಡಿ ಮೀನಕಳಿಯ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ತುಕಾರಾಮ (13) ಶಾಲೆ ಬಿಟ್ಟ ಬಳಿಕ ಪಣಂಬೂರು ಬೀಚ್ ಗೆ ಬಂದಿದ್ದ. ನೀರಿನಲ್ಲಿ ಆಟವಾಡುತ್ತಿದ್ದ ಸಮಯದಲ್ಲಿ ಬೃಹತ್ ಅಲೆಗೆ ಕೊಚ್ಚಿಹೋಗಿ ನಾಪತ್ತೆಯಾಗಿದ್ದಾನೆ. ಬೀಚ್‌ನಲ್ಲಿ ವಿದ್ಯಾರ್ಥಿ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಇತರರು ರಕ್ಷಣಾ ದಳಕ್ಕೆ ತಿಳಿಸಿದ್ದಾರೆ. ತಕ್ಷಣ ಜೆಟ್ ಸ್ಕೀ ಮೂಲಕ ಕಾಪಾಡಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಉತ್ತರ ಕನ್ನಡ ಮೂಲದ ಈ ಬಾಲಕನ ಪೋಷಕರು ಕೆಲಸದ ನಿಮಿತ್ತ ಬೈಕಂಪಾಡಿಯ ಮೀನಕಳಿಯ ಬಳಿ ವಾಸವಾಗಿದ್ದರು. ಭಾನುವಾರ ಮೀನುಗಾರರು ಮೃತದೇಹ ತೇಲುತ್ತಿರುವುದನ್ನು ಕಂಡು ದಡಕ್ಕೆ ಎಳೆ ತಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕಟಪಾಡಿಯಲ್ಲಿ ಕಾಲೇಜು ವಿದ್ಯಾರ್ಥಿನಿ ನಾಪತ್ತೆ
ಉಡುಪಿ ಜಿಲ್ಲೆಯ ಅಜ್ಜರಕಾಡು ಸರ್ಕಾರಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿನಿ ಶೈನಾಜ್ ಮನೆಯಿಂದ ನಾಪತ್ತೆಯಾಗಿದ್ದಾರೆ. ಮಗಳನ್ನು ಪತ್ತೆ ಮಾಡಿಕೊಡುವಂತೆ ತಾಯಿ ನೂರ್ ಜಹಾನ್ ಕಾಪು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ವರದಿ: ಹರೀಶ್ ಮಾಂಬಾಡಿ, ಮಂಗಳೂರು