ಕನ್ನಡ ಸುದ್ದಿ  /  Karnataka  /  Mangaluru News Anti Communal Wing To Be Formed To Tackle Moral Policing Karnataka Home Minister G Parameshwar Mgb

Mangaluru News: ನೈತಿಕ ಪೊಲೀಸ್ ಗಿರಿ ತಡೆಯಲು ಆ್ಯಂಟಿ ಕಮ್ಯೂನಲ್‌ ವಿಂಗ್ : ಮಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಘೋಷಣೆ

Moral Policing: ಕರಾವಳಿಯಲ್ಲಿ ಇಂದು ಭಯದ ವಾತಾವರಣ ಇದೆ ಅಂತಾ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯನ್ನು ನಾವು ತಡೆಯಲಿದ್ದೇವೆ. ಕೋಮುಸೌಹಾರ್ದತೆಯನ್ನು ತರಲು ಪೊಲೀಸರಿಗೆ ಕಠಿಣ ಸೂಚನೆ ನೀಡಿದ್ದೇನೆ.‌ ನೈತಿಕ ಪೊಲೀಸ್ ಗಿರಿ ಇಲ್ಲಿ ತುಂಬಾ ನಡೆಯುತ್ತಿದೆ . ನೈತಿಕ ಪೊಲೀಸ್ ಗಿರಿ ನಾವು ತಡೆಯದಿದ್ದರೆ ಇಲಾಖೆ, ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ.

ಗೃಹಸಚಿವ ಡಾ. ಜಿ.ಪರಮೇಶ್ವರ್
ಗೃಹಸಚಿವ ಡಾ. ಜಿ.ಪರಮೇಶ್ವರ್

ಮಂಗಳೂರು: ಮಂಗಳೂರಿಗೆ ಆಗಮಿಸಿದ ಗೃಹಸಚಿವ ಡಾ. ಜಿ.ಪರಮೇಶ್ವರ್ (Home Minister G Parameshwar) ಅವರು, ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈತಿಕ ಪೊಲೀಸ್ ಗಿರಿ (moral policing) ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ (Anti communal wing) ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

ಪಶ್ಚಿಮ ವಲಯ ಐಜಿಪಿ ವ್ಯಾಪ್ತಿಯ ಮತ್ತು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ನೈತಿಕ ಪೊಲೀಸ್ ಗಿರಿ ತಡೆಯಲು ಮಂಗಳೂರು ಕಮೀಷನೇಟರ್ ವ್ಯಾಪ್ತಿಯಲ್ಲಿ ನೂತನ ಪಡೆಯಾದ ಆ್ಯಂಟಿ ಕಮ್ಯೂನಲ್ ವಿಂಗ್ (ಕೋಮುವಾದಿ ವಿರೋಧಿ ವಿಭಾಗ) ಸ್ಥಾಪಿಸುವ ಅಗತ್ಯವಿದೆ ಎಂದು ಮನಗಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದರು.

ಡ್ರಗ್ಸ್ ಮಟ್ಟ ಹಾಕಲು ಅಭಿಯಾನ:

ಯುವಕರಲ್ಲಿ ಡ್ರಗ್ಸ್ ಚಟ ಜಾಸ್ತಿಯಾಗಿದೆ. ಅದನ್ನು ಯಾವುದೇ ಕಾರಣಕ್ಕೂ ನಡೆಯಲು‌ ಬಿಡುವುದಿಲ್ಲ. ಇದಕ್ಕಾಗಿ ವಿಶೇಷ ಅಭಿಯಾನ ಮಾಡುತ್ತೇವೆ. ಡ್ರಗ್ ಪೆಡ್ಲರ್, ಡ್ರಗ್ ಉಪಯೋಗ ಮಾಡುವವರನ್ನು ಹತ್ತಿಕ್ಕುವ ಕೆಲಸ ಮಾಡುತ್ತೇವೆ. ಆಗಷ್ಟ್ 15 ತಾರೀಕಿನೊಳಗೆ ಈ ಭಾಗದಲ್ಲಿ ಡ್ರಗ್ಸ್ ಚಟುವಟಿಕೆಗಳನ್ನು ಹತ್ತಿಕ್ಕುವಂತೆ ಸೂಚಿಸಿದ್ದೇನೆ. ಡ್ರಗ್ಸ್ ಸರಬರಾಜು ಮಾಡುವವರು, ಉಪಯೋಗ ಮಾಡುವವರಿಗೆ ಸೂಕ್ತ ಕ್ರಮಕ್ಕೆ ಸೂಚನೆ ಕೊಟ್ಟಿದ್ದೇನೆ ಎಂದರು. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗೃಹ ಸಚಿವನಾಗಿ ಮನವಿ ಮಾಡುತ್ತಿದ್ದೇನೆ. ಯಾರು ಕೂಡ ಡ್ರಗ್ಸ್ ದಂಧೆ, ಬೇರೆ ಬೇರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಬೇಡಿ. ಇಂತವುಗಳು ನಡೆಯದಂತೆ ಸಹಕರಿಸಬೇಕು. ಗತಕಾಲದ ವೈಭವ ಮತ್ತೊಮ್ಮೆ ವಾಪಸು ತರೋಣ. ಮಂಗಳೂರಿಗೆ ಎಲ್ಲರೂ ಬರುವಂತಹ ವಾತವರಣ ಸೃಷ್ಟಿಸಬೇಕು ಎಂದವರು ಮನವಿ ಮಾಡಿದರು.

ಕಮ್ಯೂನಲ್ ಮರ್ಡರ್:

ಈ ಭಾಗದಲ್ಲಿ ನಡೆದ ಕೋಮು ಹತ್ಯೆಗೆ ಸಂಬಂಧಿಸಿದಂತೆ 6-7 ಮರ್ಡರ್ ಪ್ರಕರಣಗಳಲ್ಲಿ ಪರಿಹಾರ ಕೊಡಲಿಲ್ಲ ಎಂಬ ವಿಚಾರ ಇದೆ. ಮಸೂದ್, ದೀಪಕ್ ರಾವ್, ಫೈಜಲ್ ಸೇರಿದಂತೆ ಹತ್ಯೆಗೊಳಗಾದವರ ಕುಟುಂಬಕ್ಕೆ ಪರಿಹಾರ ಕೊಡಲು ಪ್ರಸ್ತಾವನೆ ಕಳುಹಿಸಲು ಕ್ರಮಕ್ಕೆ ಸೂಚಿಸಿದ್ದೇನೆ ಎಂದೂ ಅವರು ಹೇಳಿದರು.

ಇವತ್ತು ಪಶ್ಚಿಮ ವಲಯದ ಉತ್ತರ ಕನ್ನಡ, ಚಿಕ್ಕ ಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಿದ್ದೇನೆ. ಪೊಲೀಸ್ ‌ಇಲಾಖೆಯ ಸವಾಲುಗಳ ಬಗ್ಗೆ ಪರಿಶೀಲನೆ ‌ಮಾಡಿದ್ದೇನೆ. ನನಗೆ ಈ ಇಲಾಖೆ ಹೊಸತಲ್ಲ,ಮೂರನೇ ಬಾರಿ ‌ಈ ಇಲಾಖೆ ಗೆ ಬಂದಿದ್ದೇನೆ. ಈಗ ಹೊಸ ಸವಾಲು ಇದೆ. ಪೊಲೀಸ್ ಇಲಾಖೆ ಗೆ ಅನೇಕ ಸವಾಲು ಬಂದಿವೆ ಎಂದರು.

ಯಾಕೆ ಸ್ಥಾಪನೆ?

ಕರಾವಳಿಯಲ್ಲಿ ಇಂದು ಭಯದ ವಾತಾವರಣ ಇದೆ ಅಂತಾ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯನ್ನು ನಾವು ತಡೆಯಲಿದ್ದೇವೆ. ಕೋಮುಸೌಹಾರ್ದತೆಯನ್ನು ತರಲು ಪೊಲೀಸರಿಗೆ ಕಠಿಣ ಸೂಚನೆ ನೀಡಿದ್ದೇನೆ.‌ ನೈತಿಕ ಪೊಲೀಸ್ ಗಿರಿ ಇಲ್ಲಿ ತುಂಬಾ ನಡೆಯುತ್ತಿದೆ . ನೈತಿಕ ಪೊಲೀಸ್ ಗಿರಿ ನಾವು ತಡೆಯದಿದ್ದರೆ ಇಲಾಖೆ, ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನೈತಿಕ ಪೊಲೀಸ್ ಗಿರಿಯನ್ನು ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುತ್ತಿದ್ದೇವೆ ಎಂದು ಡಾ. ಪರಮೇಶ್ವರ್ ಹೇಳಿದರು.

ಹೇಗಿದೆ ಕೆಲಸ?

ಮಂಗಳೂರು ಕಮೀಷನೇಟರ್ ವ್ಯಾಪ್ತಿಯಲ್ಲಿ ಈ ವಿಂಗ್ ಪ್ರಾರಂಭ ಮಾಡುತ್ತಿದ್ದೇವೆ. ಈ ವಿಂಗ್ ನಲ್ಲಿ ಸಮರ್ಥವಾದ ಅಧಿಕಾರಿಗಳು ಇರಲಿದ್ದಾರೆ. ಇದರ ರೂಪುರೇಷೆಯನ್ನು ಮಂಗಳೂರು ನಗರ ಪೊಲೀಸ್ ‌ಕಮೀಷನರ್ ಕುಲದೀಪ್ ಕುಮಾರ್ ಜೈನ್ ಮಾಡಲಿದ್ದಾರೆ. ಆ್ಯಂಟಿ ಕಮ್ಯೂ‌ನಲ್ ವಿಂಗ್ ನ್ನು ಮುಂದೆ ಎಲ್ಲೆಲ್ಲಿ ಅವಶ್ಯಕತೆ ಬರುತ್ತದೆಯೊ ಅಲ್ಲಿ ಮಾಡುತ್ತೇವೆ. ಇರುವ ಪೊಲೀಸ್ ಬಲದಲ್ಲಿಯೆ ಈ ತಂಡವನ್ನು ಮಾಡಲಿದ್ದೇವೆ . ಈ ವಿಂಗ್ ಕಾನೂನಿನ ಚೌಕಟ್ಟು ಮೀರುವವರನ್ನು, ಸೈಬರ್ ಕ್ರೈಮ್ ಮೂಲಕ ಕೋಮು ದ್ವೇಷ ಹರಡುವವರನ್ನು, ನೈತಿಕ ಪೊಲೀಸ್ ಗಿರಿ ಮಾಡುವವರನ್ನು ಹತ್ತಿಕ್ಕಲಿದೆ. ಈ ವಿಂಗ್ ನ ಅಧಿಕಾರಿಗಳು ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳ ಜೊತೆಗೆ ಮಾತನಾಡಿ ಜಾಗೃತಿ ಮೂಡಿಸಲಿದ್ದಾರೆ. ಈ ವಿಂಗ್ ಯಶಸ್ವಿಯಾದರೆ ಮುಂದೆ ಅವಶ್ಯಕತೆ ಬೀಳುವಲ್ಲಿ ಮಾಡಲಾಗುವುದು ಎಂದರು.

ಯಾರೇ ಆಗಲಿ ಎಷ್ಟು ದೊಡ್ಡ ಹುದ್ದೆಯಲ್ಲಿರಲಿ, ಕಾನೂನು ‌ಕೈಗೆತ್ತಿಕೊಂಡರೆ ಪೊಲೀಸ್ ‌ಇಲಾಖೆ ಬಿಡುವುದಿಲ್ಲ. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇಷ್ಟ ಬಂದಾಗೆ ಮಾತಾಡಿದ್ರೆ ಕಾನೂನು ಇದೆ. ಕಾನೂನು ನೋಡಿಕೊಳ್ಳುತ್ತದೆ.ಪ್ರಚೋದನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವ ಎಂದು ಡಾ. ಪರಮೇಶ್ವರ್ ಹೇಳಿದರು. ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿರಿಯೋಡಿಕಲ್ ರಿವ್ಯೂ ಮಾಡಿ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.

ಕೋಮು ಸಾಮರಸ್ಯಕ್ಕೆ ಧಕ್ಕೆ:

ಕರಾವಳಿ ಭಾಗದಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಕರಣಗಳು ಆಗಾಗ್ಗೆ ನಡೀತಾ ಇವೆ. ಕರಾವಳಿ ಭಾಗದಲ್ಲಿ ಒಳ್ಳೆಯ ಜನ ಇದ್ದಾರೆ ಅಂತಾ ನಂಬಿಕೆ‌ ಇದೆ. ಆದರೆ ಅದರ ಜೊತೆಗೆ ದ.ಕ ಜಿಲ್ಲೆಯಲ್ಲಿ ಭಾಗದಲ್ಲಿ ಶಾಂತಿ ಇಲ್ಲ, ಕೋಮು ಸಾಮರಸ್ಯ ಇಲ್ಲ ಎಂಬ ಮಾತೂ ಇದೆ. ಪ್ರಣಾಳಿಕೆ ಸಮಿತಿ ಅಧ್ಯಕ್ಷನಾದ ಸಂದರ್ಭದಲ್ಲೂ ಇಪ್ಪತ್ತು ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಯಾಗಿದ್ದೆ. ಆಗ ಇಲ್ಲಿನ ಜನ ಶಾಂತಿ ಕೊಡಿ ಎಂಬ ಮಾತೂ ಹೇಳಿದ್ದಾರೆ. ಕೋಮು ಸೌಹಾರ್ದತೆಗೆ ಈ ಹಿಂದೆ ಪಾದಯಾತ್ರೆಯನ್ನೂ ಮಾಡಿದ್ದೆ ಎಂದರು.

ವರದಿ: ಹರೀಶ ಮಾಂಬಾಡಿ, ಮಂಗಳೂರು