Mangaluru News: ಆಟ ಆಡುವ ವಯಸ್ಸಲ್ಲಿ ಸಮಾಜ ಸೇವೆ; ಮತದಾನ ಜಾಗೃತಿ ಕಾರ್ಯಕ್ಕೆ ಮುಂದಾದ ಬಂಟ್ವಾಳ ಬಾಲಕಿ ಸನ್ನಿಧಿ ಕಶೆಕೋಡಿ
Mangaluru News: ಬಂಟ್ವಾಳ ತಾಲೂಕಿನ ಮಾಣಿ ಬಾಲ ವಿಕಾಸ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿರುವ ಸನ್ನಿಧಿ ಕೆಶೆಕೋಡಿ ಎಂಬ ಬಾಲಕಿ ಪ್ರತಿ ವರ್ಷ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾಳೆ. ಕಳೆದ ವರ್ಷದಂತೆ ಈ ಬಾರಿ ಕೂಡಾ ಅರಿವು ಮೂಡಿಸಲು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದಾಳೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)
ಮಂಗಳೂರು: ಕಳೆದ ವರ್ಷದ ಬೇಸಿಗೆ ರಜಾದಲ್ಲಿ ಎಲ್ಲಾ ಮಕ್ಕಳೂ ಆಟೋಟದಲ್ಲಿ ನಿರತರಾಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸನ್ನಿಧಿ ಕಶೆಕೋಡಿ ತನ್ನದೇ ವಯಸ್ಸಿನ 4-5 ಪುಟ್ಟ ಮಕ್ಕಳನ್ನು ಸೇರಿಸಿಕೊಂಡು, ಮನೆ, ಅಂಗಡಿ, ಹೋಟೆಲ್, ಆಟೋ ನಿಲ್ದಾಣಗಳು, ಹೀಗೆ ಗುರುತು ಪರಿಚಯದವರಷ್ಟೇ ಅಲ್ಲ, ಅಪರಿಚಿತರನ್ನೂ ಮಾತಾಡಿಸಿ, ಅಣ್ಣ, ಎಲ್ಲೊಂಜಿ ಓಟು ಪಾಡ್ಲೆ, ಅವು ಕಡ್ಡಾಯ ನೀವು ಮತದಾನ ಮಾಡಿ, ಅದು ಕಡ್ಡಾಯ) ಎಂಬುದನ್ನು ತನ್ನ ಮುದ್ದಾದ ಮಾತಲ್ಲಿ ಮನದಟ್ಟು ಮಾಡುತ್ತಿದ್ದ ದೃಶ್ಯಗಳು ಕಂಡುಬಂದಿತ್ತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಜಾಗೃತಿಗೆ ಸನ್ನಿಧಿ ಮಾಡಿದ ಪ್ರಯತ್ನ ಮನೆಮಾತಾಗಿತ್ತು. ಇದೀಗ ಲೋಕಸಭೆ ಚುನಾವಣೆಗೂ ತನ್ನ ಸಮಾಜಮುಖಿ ಚಟುವಟಿಕೆಯಲ್ಲಿ ಸನ್ನಿಧಿ ಮುಂದಾಗಿದ್ದಾಳೆ. ಈ ಕುರಿತು ಆಯೋಗಕ್ಕೆ ಪತ್ರವೂ ಬರೆದಿದ್ದು, ಈಕೆಯ ಪ್ರಯತ್ನಕ್ಕೆ ಆಯೋಗವೂ ಶ್ಲಾಘಿಸಿದೆ, ಖುದ್ದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸನ್ನಿಧಿ ಪ್ರಯತ್ನಕ್ಕೆ ಭೇಷ್ ಎಂದಿದ್ದಾರೆ.
ಈ ಬಾರಿಯೂ ಜಾಗೃತಿಗೆ ಅವಕಾಶ ಕೋರಿ ಪತ್ರ
ಮತದಾನ ಜಾಗೃತಿಯ ಹಿನ್ನೆಲೆಯಲ್ಲಿ ಮಾಣಿ ಪೆರಾಜೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ, ಬಾಳ್ತಿಲ ಗ್ರಾಮದ ಕಶೆಕೋಡಿ ನಿವಾಸಿ ಸನ್ನಿಧಿ ಎಲ್.ಎಸ್. ಅವರು ರಾಜ್ಯ ಚುನಾವಣಾ ಆಯೋಗದ ಮುಖ್ಯಚುನಾವಣಾಧಿಕಾರಿಗಳಿಗೆ ಬರೆದಿರುವ ಪತ್ರವನ್ನು ಪುರಸ್ಕರಿಸಿರುವ ಆಯೋಗ ಅವರು ಕಳುಹಿಸಿರುವ ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಆಯೋಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಆದೇಶಿಸಿದೆ. ಬಾಲಕಿಯು ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ತನ್ನ ಸ್ನೇಹಿತರ ಜತೆಗೂಡಿ ಬಾಳ್ತಿಲ ಭಾಗದಲ್ಲಿ ಮತದಾನದ ಕುರಿತು ಜಾಗೃತಿಯ ಕಾರ್ಯ ಮಾಡಿದ್ದು, ಈ ಬಾರಿ ಲೋಕಸಭಾ ಚುನಾವಣೆಯ ಸಂದರ್ಭ 100 ಶೇ. ಮತದಾನವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಲು ಅವಕಾಶ ನೀಡಬೇಕು, ಈ ನಿಟ್ಟಿನಲ್ಲಿ ತಾವು ದ.ಕ.ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮುಖ್ಯ ಚುನಾವಣಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ವಿವರಿಸಿದ್ದರು. ಇದಕ್ಕೆ ಕೇಂದ್ರ ಚುನಾವಣಾ ಆಯೋಗವು ಪ್ರಶಂಸಾ ಪತ್ರ ನೀಡಿದೆ.
ಈ ಬಾಲಕಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೇ.100 ಮತದಾನದ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದ್ದು, ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಕಳೆದ ಚುನಾವಣೆಯಲ್ಲಿ ತಾನು ಮಾಡಿದ ಮತದಾನ ಜಾಗೃತಿಯ ದಾಖಲೆಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸನ್ನಿಧಿ ಈ ಮೇಲ್ ಮೂಲಕ ಕಳುಹಿಸಿದ್ದಳು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನ ನಡೆಯಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದು ಅದರ ಸಹಕಾರ ಕೋರಿದ್ದಳು. ಕಳೆದ ಚುನಾವಣೆಯಲ್ಲಿ ಸನ್ನಿ ತನ್ನ ನಾಲ್ಕೈದು ಮಂದಿ ಪುಟ್ಟ ಸಹಪಾಠಿಗಳೊಂದಿಗೆ ಮನೆ, ಅಂಗಡಿ, ಸಾರ್ವಜನಿಕ ಪ್ರದೇಶದಲ್ಲಿ ಜಾಗೃತಿ ಮೂಡಿಸಿದ್ದಳು.
ಸನ್ನಿಧಿ ಪ್ರಸ್ತಾವನೆ ಪರಿಶೀಲಿಸಲು ಸೂಚನೆ
ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನದ ಅರಿವು ಹಾಗೂ ಜಾಗೃತಿ ಕೈಗೊಳ್ಳಲು ಸ್ವೀಪ್ ಕಾರ್ಯಕ್ರಮಗಳಲ್ಲಿ ಸನ್ನಿಧಿಯ ಪ್ರಸ್ತಾವನೆಯನ್ನು ಪರಿಶೀಲಿಸಬೇಕು ಎಂದು ದ.ಕ.ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಡಿಸಿಯವರು ಹಾಗೂ ಜಿಲ್ಲಾ ಸ್ವೀಪ್‌ನ ನೋಡೆಲ್ ಅಧಿಕಾರಿಯಾಗಿರುವ ಜಿ.ಪಂ.ಸಿಇಒಗೆ ಪತ್ರ ಬರೆದಿದ್ದಾರೆ. ಚುನಾವಣೆಯ ಸಂದರ್ಭ ಯಾವುದೇ ರಾಜಕೀಯ ವ್ಯಕ್ತಿ ಮತ್ತು ಪಕ್ಷದ ಪರವಾಗಿರದೆ ತಟಸ್ಥವಾಗಿರುವ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಬಂಧ, ವಿವಿಧ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅಗತ್ಯ ಸಲಹೆ ಮತ್ತು ಸಹಕಾರವನ್ನು ನೀಡಲು ಸನ್ನಿಧಿ ಎಸ್.ಎಸ್. ಅವರ ಪ್ರಸ್ತಾವನೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಚುನಾವಣೆಗೆ)ಯ ಸರ್ಕಾರದ ಅಧೀನ ಕಾರ್ಯದರ್ಶಿ ಮಧು ಎ.ಸಿ. ಅವರು ಪತ್ರ ಬರೆದು ಆದೇಶಿಸಿದ್ದಾರೆ.
ಹೇಗೆ ಜಾಗೃತಿ ಮೂಡಿಸುತ್ತಿದ್ದಳು ಸನ್ನಿಧಿ?
ಕಳೆದ ಚುನಾವಣೆಯಲ್ಲಿ ಈಕೆಯ ಜಾಗೃತಿ ಜನಪ್ರಿಯವಾಗಿತ್ತು. ಉತ್ತಮ ಆಡಳಿತಕ್ಕಾಗಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂಬ ಘೋಷವಾಕ್ಯದೊಂದಿಗೆ ಸನ್ನಿಧಿ ಮನೆಯಿಂದ ಹೊರಡುತ್ತಾಳೆ. ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಪ್ರಚಾರ ಮಾಡುತ್ತಾಳೆ. ಮದುವೆ ಸಮಾರಂಭಗಳಿಗೂ ಹೋಗಿ ಮಾತನಾಡಿಸುತ್ತಾಳೆ. ಬಳಿಕ ಕಡ್ಡಾಯವಾಗಿ ಈ ಬಾರಿ ಮತದಾನ ಮಾಡಿ ಎನ್ನುತ್ತಾಳೆ. ಇವಳು ಹೀಗೆ ಹೇಳಿದಾಗ ಕೇಳಿಸಿಕೊಂಡವರೂ ಸುಮ್ಮನಿರುವುದಿಲ್ಲ. ಮಗು ಹೀಗೆ ಹೇಳುತ್ತದಲ್ಲಾ ಎಂದು ಖುಷಿಯಾಗಿ ಚಾಕೊಲೇಟ್ ನೀಡುವುದೂ ಉಂಟು.
ಆ ಪಕ್ಷ, ಈ ಪಕ್ಷ ಎಂದೇನಿಲ್ಲ. ಪಕ್ಷ ಯಾವುದೇ ಇರಲಿ, ಪರವಾಗಿಲ್ಲ, ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ತನ್ನ ತಂಡದೊಂದಿಗೆ ಸನ್ನಿಧಿ ಹೇಳುತ್ತಾ ಬರುತ್ತಾಳೆ. ಮಾಣಿ ಬಾಲವಿಕಾಸ ಶಾಲೆಯಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆ ಈ ಬಾರಿ ರಜೆ ಮುಗಿಸಿದರೆ, 5ನೇ ತರಗತಿಗೆ ಹೋಗುತ್ತಾಳೆ. ಮತಗಟ್ಟೆಗೆ ಹೋಗಿ ಮತದಾನ ಮಾಡಿ, ಎಲ್ಲರೂ ಕಡ್ಡಾಯವಾಗಿ ಓಟು ಹಾಕಲು ಮತಗಟ್ಟೆಗೆ ಬನ್ನಿ ಎನ್ನುತ್ತಾಳೆ. ಸುಡು ಬಿಸಿಲಿನಲ್ಲಿ ಓಟು ಹಾಕಲು ಕೇಳಲು ಸನ್ನಿಧಿ ತಂಡ ಹೋಗುವುದಿಲ್ಲ. ಬೆಳಗ್ಗೆ ಅಥವಾ ಸಂಜೆ ಸಮಯವನ್ನೇ ಆಯ್ಕೆ ಮಾಡುತ್ತದೆ. ಉಳಿದ ಸಂದರ್ಭ ಯಾವುದಾದರೂ ಆಟೋಟದಲ್ಲಿ ತೊಡಗಿಸಿಕೊಳ್ಳುತ್ತಾರೆ. ಕಳೆದ ವರ್ಷ ಸುಮಾರು 130 ಮನೆಗಳಿಗೆ ಈ ತಂಡ ಭೇಟಿ ನೀಡಿತ್ತು.
ವರದಿ: ಹರೀಶ ಮಾಂಬಾಡಿ, ಮಂಗಳೂರು