ನೇಣುಬಿಗಿದ ಸ್ಥಿತಿಯಲ್ಲಿ 34 ವರ್ಷದ ಯುವಕನ ಮೃತದೇಹ ಪತ್ತೆ, ವಾಮದಪದವು ಕಾಂಗ್ರೆಸ್ ಕಾರ್ಯಕರ್ತನ ಅನುಮಾನಾಸ್ಪದ ಸಾವು-mangaluru news body of a 34 yr old man was found hanging a congress worker who died under suspicious circumstances hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ನೇಣುಬಿಗಿದ ಸ್ಥಿತಿಯಲ್ಲಿ 34 ವರ್ಷದ ಯುವಕನ ಮೃತದೇಹ ಪತ್ತೆ, ವಾಮದಪದವು ಕಾಂಗ್ರೆಸ್ ಕಾರ್ಯಕರ್ತನ ಅನುಮಾನಾಸ್ಪದ ಸಾವು

ನೇಣುಬಿಗಿದ ಸ್ಥಿತಿಯಲ್ಲಿ 34 ವರ್ಷದ ಯುವಕನ ಮೃತದೇಹ ಪತ್ತೆ, ವಾಮದಪದವು ಕಾಂಗ್ರೆಸ್ ಕಾರ್ಯಕರ್ತನ ಅನುಮಾನಾಸ್ಪದ ಸಾವು

ಬಂಟ್ವಾಳ ತಾಲೂಕು ವಾಮದಪದವಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ 34 ವರ್ಷದ ಕಾಂಗ್ರೆಸ್ ಕಾರ್ಯಕರ್ತನ ಮೃತದೇಹ ಪತ್ತೆಯಾಗಿದೆ. ಮೃತ ಪದ್ಮನಾಭ ಸೇವಂತ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷರಾಗಿದ್ದರು. ಇನ್ನೊಂದು ಪ್ರಕರಣದಲ್ಲಿ, ಆರು ‌ದಿನಗಳ ‌ಹಿಂದೆ ಕಾಣೆಯಾಗಿದ್ದ ಸರಕಾರಿ ಅಧಿಕಾರಿಯ ಮೃತದೇಹ ಪತ್ತೆಯಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಅನುಮಾನಾಸ್ಪದವಾಗಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ಪದ್ಮನಾಭ ಸೇವಂತ. ನೇಣು ಬಿಗಿದ ಸ್ಥಿತಿಯಲ್ಲಿ 34 ವರ್ಷದ ಯುವಕನ ಮೃತದೇಹ ಪತ್ತೆಯಾಗಿದೆ.
ಅನುಮಾನಾಸ್ಪದವಾಗಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ಪದ್ಮನಾಭ ಸೇವಂತ. ನೇಣು ಬಿಗಿದ ಸ್ಥಿತಿಯಲ್ಲಿ 34 ವರ್ಷದ ಯುವಕನ ಮೃತದೇಹ ಪತ್ತೆಯಾಗಿದೆ.

ಮಂಗಳೂರು: ಬಂಟ್ವಾಳ ತಾಲೂಕಿನ ವಾಮದಪದವಿನಲ್ಲಿ ಪದ್ಮನಾಭ ಸೇವಂತ (34) ಎಂಬವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚೆನ್ನೈತೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಮದಪದವು ತಿಮರಡ್ಡ ನಿವಾಸಿಯಾಗಿರುವ ಇವರು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷರಾಗಿದ್ದರು. ಭಾನುವಾರ ಬೆಳಗ್ಗೆ ಅವರ ಮೃತದೇಹ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಕುರಿತು ಅವರ ಸಹೋದರ ನೀಡಿದ ದೂರಿನಂತೆ, ಪದ್ಮನಾಭ ಅವರು ಕ್ಯಾಟರಿಂಗ್‌ ಕೆಲಸ ಮಾಡಿಕೊಂಡಿದ್ದು, ಮನೆಗೆ 2-3 ದಿನಗಳಿಗೊಮ್ಮೆ ಬರುತ್ತಿದ್ದರು. ಮಾರ್ಚ್ 28ರಂದು ಪದ್ಮನಾಭ ಸಾವಂತ ಮನೆಯಲ್ಲಿರದೆ ಮೋಟಾರು ಸೈಕಲ್ ಮಾತ್ರ ಮನೆಯಲ್ಲಿದ್ದು, ರಾತ್ರಿ ದೂರವಾಣಿ ಕರೆಮಾಡಿದಾಗ ಕರೆಯನ್ನು ಸ್ವೀಕರಿಸಿರಲಿಲ್ಲ. ಮಾರ್ಚ್ 31ರಂದು ಬೆಳಿಗ್ಗೆ ಮೃತದೇಹ ತೋಟದ ಹತ್ತಿರ ಇರುವ ಗುಡ್ಡ ಜಾಗದಲ್ಲಿ ನೇಣು ಬಿಗಿದುಕೊಂಡ ಸ್ಥೀತಿಯಲ್ಲಿ, ಅನುಮಾನಾಸ್ಪದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಮೃತದೇಹ ಕೊಳೆತ ಸ್ಥಿತಿಯಲ್ಲಿ, ಅನುಮಾನಾಸ್ಪದ ರೀತಿಯಲ್ಲಿ ನೇತಾಡುತ್ತಿರುವುದು ಕಂಡುಬಂದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಠಾಣೆಯಲ್ಲಿ 174 (3)(vi)ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ನಾಪತ್ತೆಯಾಗಿದ್ದ ಸರಕಾರಿ ಅಧಿಕಾರಿಯ ಮೃತದೇಹ ನದಿಯಲ್ಲಿ ಪತ್ತೆ

ಕಳೆದ ಆರು ‌ದಿನಗಳ ‌ಹಿಂದೆ ಕಾಣೆಯಾಗಿದ್ದ ಸರಕಾರಿ ಅಧಿಕಾರಿಯ ಮೃತದೇಹ ಭಾನುವಾರ ಸಂಜೆ ಧರ್ಮಸ್ಥಳ ಪೋಲೀಸ್ ಠಾಣಾ ವ್ಯಾಪ್ತಿಯ ಪಟ್ರಮೆ ಎಂಬಲ್ಲಿ ನದಿಯಲ್ಲಿ ಪತ್ತೆಯಾಗಿದೆ. ಚುನಾವಣಾ ಕರ್ತವ್ಯದಲ್ಲಿರುವ ಸರಕಾರಿ ಅಧಿಕಾರಿ ಲಕ್ಷ್ಮೀನಾರಾಯಣ ಕರ್ತವ್ಯಕ್ಕೆ ಹಾಜರಾಗದೆ ಮನೆಗೂ ತೆರಳದೆ ಕಾಣೆಯಾಗಿರುವ ಬಗ್ಗೆ ಮಾ.27ರಂದು ಪುಂಜಾಲಕಟ್ಟೆ ‌ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿದ್ದ ಇವರು ಮಾ.27 ರಂದು ಬುಧವಾರ ಮಧ್ಯಾಹ್ನದ ಬಳಿಕ ಕಚೇರಿಯಿಂದ ತೆರಳಿದ್ದರು. ಪೋನ್ ಸ್ವಿಚ್ ಆಪ್ ಆಗಿತ್ತು. ಮನೆಗೂ ಹೋಗದೆ ಮನೆಯವರ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿದ್ದಾರೆ ಎಂದು ಲಕ್ಷ್ಮೀನಾರಾಯಣ ಅವರ ತಮ್ಮ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಚುನಾವಣೆಗೆ ಸಂಬಂಧಿಸಿದ ಎಸ್ಎಸ್‌ಟಿ ತಂಡದಲ್ಲಿ ಇವರು ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ತಂಡದವರು ಬಂಟ್ವಾಳ ಸಹಾಯಕ ಚುನಾವಣಾಧಿಕಾರಿಗೆ ದೂರು ನೀಡಿದ್ದರು. ಹಿಂದೆ ಕೂಡ ಇದೇ ರೀತಿ ಕಾಣೆಯಾಗಿದ್ದ ಲಕ್ಷ್ಮೀನಾರಾಯಣ ಅವರನ್ನು ಪೋಲೀಸರು ಪತ್ತೆ ಹಚ್ಚಿದ್ದರು. ಲಕ್ಷ್ಮೀನಾರಾಯಣ ಅವರ ಬೈಕ್ ಬೆಳ್ತಂಗಡಿಯಲ್ಲಿ ಪತ್ತೆಯಾಗಿತ್ತು.

ನೇತ್ರಾವತಿ ನದಿಯಲ್ಲಿ ಈಜಲು ಹೋದ ಯುವಕನ ಸಾವು

ನೇತ್ರಾವತಿ ನದಿಯಲ್ಲಿ ಈಜಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ಸಂಜೆ ವೇಳೆ ನರಿಕೊಂಬು ಗ್ರಾಮದಲ್ಲಿ ನಡೆದಿದೆ. ನರಿಕೊಂಬು ಗ್ರಾಮದ ಬೀರಕೋಡಿ ನಿವಾಸಿ ಯೋಗೀಶ್ ಪೂಜಾರಿ ಅವರ ಪುತ್ರ ಆನುಶ್ (20) ಮೃತಪಟ್ಟ ಯುವಕ.

ನರಿಕೊಂಬು ಗ್ರಾಮದ ಪೊಯಿತಾಜೆ ಎಂಬಲ್ಲಿ ಘಟನೆ ನಡೆದಿದೆ. ಭಾನುವಾರ ರಜಾದಿನವಾದ ಕಾರಣ ಅನುಶ್ ಹಾಗೂ ಆತನ ಸಹೋದರ ಸೇರಿ ಒಟ್ಟು ನಾಲ್ವರು ಜೊತೆಯಲ್ಲಿ ನದಿಗೆ ಈಜಲು ತೆರಳಿದ್ದರು. ಈ ಸಂದರ್ಭದಲ್ಲಿ ಅನುಶ್‌ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ದುರಂತ ನಡೆದ ಕೂಡಲೇ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಗಿತ್ತು. ಅವರು ಘಟನಾ ಸ್ಥಳಕ್ಕೆ ಬಂದು ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ. ಬಂಟ್ವಾಳ ನಗರ ಪೊಲೀಸರು‌ ಸ್ಥಳಕ್ಕೆ ‌ಭೇಟಿ ನೀಡಿ ಸ್ಥಳ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)