ಮಂಗಳೂರು ನಿರ್ಮಲಾ ಟ್ರಾವೆಲ್ಸ್ ಸ್ಥಾಪಕಿ ಸಿ ನಿರ್ಮಲಾ ಕಾಮತ್ ನಿಧನ; ಪ್ರವಾಸೋದ್ಯಮದಲ್ಲಿ ಛಾಪು ಮೂಡಿಸಿದ ಸಾಧಕಿ
ಮಂಗಳೂರು ನಿರ್ಮಲಾ ಟ್ರಾವೆಲ್ಸ್ ಸ್ಥಾಪಕಿ ಸಿ ನಿರ್ಮಲಾ ಕಾಮತ್ ಸೋಮವಾರ (ಏಪ್ರಿಲ್ 15) ಸ್ವಗೃಹದಲ್ಲಿ ನಿಧನರಾದರು. ಪ್ರವಾಸೋದ್ಯಮದಲ್ಲಿ ಛಾಪು ಮೂಡಿಸಿದ ಸಾಧಕಿ ಇವರಾಗಿದ್ದು, ಹತ್ತು ಹಲವು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. (ವರದಿ-ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಪ್ರವಾಸೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಂಗಳೂರಿನ ನಿರ್ಮಲಾ ಟ್ರಾವೆಲ್ಸ್‌ನ ಸಂಸ್ಥಾಪಕಿ ಸಿ ನಿರ್ಮಲಾ ಕಾಮತ್ ಮಂಗಳೂರು ಕೊಟ್ಟಾರದಲ್ಲಿರುವ ತಮ್ಮ ಸ್ವಗೃಹದಲ್ಲಿ ಸೋಮವಾರ (ಏಪ್ರಿಲ್ 15) ನಿಧನರಾದರು.
ಪತಿ ಸಿ. ಉಪೇಂದ್ರ ಕಾಮತ್ ಹಾಗೂ ಪುತ್ರಿ ವತಿಕಾ ಪೈ, ಅಪಾರ ಬಂಧು ಮಿತ್ರರನ್ನು ನಿರ್ಮಲಾ ಅಗಲಿದ್ದಾರೆ. ಚೋಲ್ಪಾಡಿ ಮನೆಯವರಾದ ನಿರ್ಮಲಾ ಕಾಮತ್ ಪತಿ ಉಪೇಂದ್ರ ಕಾಮತ್ ಜೊತೆಗೂಡಿ 1971ರಲ್ಲಿ ಪ್ರವಾಸಿಗರ ಸೇವೆಗೆಂದೇ ನಿರ್ಮಲಾ ಟ್ರಾವೆಲ್ಸ್ ಉದ್ಯಮ ಶುರುಮಾಡಿದ್ದು.
ಮಂಗಳೂರು ಕೇಂದ್ರಿತವಾಗಿ ಶುರುವಾದ ಈ ಸೇವಾ ಉದ್ಯಮವು ತನ್ನ ಸೇವಾ ವ್ಯಾಪ್ತಿಯನ್ನು ದೇಶ ವಿದೇಶಗಳಿಗೆ ವಿಸ್ತಿರಿಸಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರದ ಮಾನ್ಯತೆಯನ್ನೂ ಪಡೆದುಕೊಂಡಿದೆ. 20ಕ್ಕೂ ಹೆಚ್ಚು ಐಷಾರಾಮಿ ಬಸ್‌ಗಳನ್ನು ಹೊಂದಿರುವ ನಿರ್ಮಲಾ ಟ್ರಾವೆಲ್ಸ್ ಇಂದು ದೇಶಾದ್ಯಂತ ಪ್ರವಾಸಿ ತಾಣಗಳಿಗೆ ರೈಲು, ವಿಮಾನಗಳ ಮೂಲಕ ಪ್ರವಾಸಿಗರನ್ನು ಕರೆದೊಯ್ಯುವ ಕೆಲಸ ಮಾಡುತ್ತಿದೆ. ತಮ್ಮದೇ ಏಜೆಂಟರನ್ನು ಇಟ್ಟುಕೊಂಡು ಪ್ರವಾಸ ಏರ್ಪಡಿಸುವುದರಲ್ಲಿ ನಿರ್ಮಲಾ ಟ್ರಾವೆಲ್ಸ್ ಹೆಸರುವಾಸಿ. ಅಚ್ಚುಕಟ್ಟುತನಕ್ಕೆ ಜನಪ್ರಿಯವಾಗಿರುವ ಈ ಸಂಸ್ಥೆ ಪ್ರವಾಸೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿದೆ. ಇದರ ಹಿಂದೆ ನಿರ್ಮಲಾ ಅವರ ಪರಿಶ್ರಮವಿದೆ.
ನಿರ್ಮಲಾ ಅವರ ಪುತ್ರಿ ವತಿಕಾ ಪೈ ಕೂಡ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಅವರು ವತಿಕಾ ಇಂಟರ್‌ನ್ಯಾಷನಲ್ ಟ್ರಾವೆಲ್ಸ್ ಅನ್ನು ಸ್ಥಾಪಿಸಿದ್ದಾರೆ. ಇವೆರಡೂ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಪ್ರವಾಸಿಗರಿಗೆ ಸೇವೆ ನೀಡುತ್ತ, ಛಾಪು ಮೂಡಿಸಿವೆ.
ಕರಾವಳಿಯ ಜನರಿಗೆ ಪ್ರವಾಸಿ ಪ್ಯಾಕೇಜ್ ಏರ್ಪಡಿಸಿದ ಖ್ಯಾತಿಯ ಉದ್ಯಮಿ ನಿರ್ಮಲಾ ಕಾಮತ್
ಕಡಲತಡಿಯ ನಗರಿಗಳಾದ ಮಂಗಳೂರು ಮತ್ತು ಉಡುಪಿ ಪರಿಸರದ ಜನರಲ್ಲಿ ಹೆಚ್ಚಿನವರು ಮಧ್ಯಮ ವರ್ಗದವರು. ಬ್ಯಾಂಕ್ ಸಹಿತ ಖಾಸಗಿ ಕಂಪನಿಗಳಲ್ಲಿ ದುಡಿಯುವವರು. ಇಂಥವರಿಗೆಂದೇ ಪ್ರವಾಸಿ ಪ್ಯಾಕೇಜ್ ಗಳನ್ನು ಏರ್ಪಡಿಸುವ ಮೂಲಕ ಕಳೆದ 53 ವರ್ಷಗಳಲ್ಲಿ ಕರಾವಳಿಯ ಜನರಿಗೆ ದೊಡ್ಡ ಮಟ್ಟಿನ ಪ್ಯಾಕೇಜ್ ಟೂರ್ ನ ರುಚಿ ನೀಡಿದ ಖ್ಯಾತಿ ನಿರ್ಮಲಾ ಟ್ರಾವೆಲ್ಸ್ ಸಂಸ್ಥೆಗೆ ಸಲ್ಲುತ್ತದೆ. 1971ರಲ್ಲಿ ಆರಂಭಗೊಂಡ ಸಂಸ್ಥೆ ಇಂದು ವಿಶಾಲವಾಗಿ ಬೆಳೆದಿದೆ. ನಾನಾ ರೀತಿಯ ಪ್ರವಾಸಿ ಪ್ಯಾಕೇಜ್ ಗಳು ಇಲ್ಲಿವೆ.
ವಿಶೇಷವಾಗಿ ಸರಕಾರಿ ಮತ್ತು ಬ್ಯಾಂಕಿಂಗ್ ನಲ್ಲಿ ದುಡಿಯುವವರಿಗೆ ಪ್ರವಾಸಿ ಭತ್ಯೆ ದೊರಕುವುದನ್ನು ಸದುಪಯೋಗಪಡಿಸಿ, ಉತ್ತಮ ಪ್ಯಾಕೇಜ್ ಟೂರ್ ಮೂಲಕ ಉತ್ತರ ಭಾರತ, ದಕ್ಷಿಣ ಭಾರತದ ಖ್ಯಾತ ಪ್ರವಾಸಿ ತಾಣಗಳಿಗೆ ಸುರಕ್ಷಿತವಾಗಿ ಹಾಗೂ ಸುಖಪ್ರಯಾಣದ ಮೂಲಕ ತಿರುಗಾಡಿಸುವ ವ್ಯವಸ್ಥೆಯನ್ನು ನಿರ್ಮಲಾ ಟ್ರಾವೆಲ್ಸ್ ಕಲ್ಪಿಸಿದರೆ, ಅದಕ್ಕೆ ನಿರ್ಮಲಾ ಕಾಮತ್ ಅವರ ದೂರದೃಷ್ಟಿ ಕಾರಣ.
ಸ್ವಾವಲಂಬಿಯಾಗಿ ಬದುಕುವ ಛಲ ಇದಕ್ಕೆ ಪ್ರೇರಣೆ
ಮಂಗಳೂರಲ್ಲೇ ಹುಟ್ಟಿಬೆಳೆದ ನಿರ್ಮಲಾ ಕಾಮತ್ ಅವರು ಉಪೇಂದ್ರ ಕಾಮತ್ ಅವರನ್ನು ವಿವಾಹವಾಗುವ ಮೊದಲು ಮಂಗಳೂರಿನಲ್ಲಿ ವೈದ್ಯರೊಬ್ಬರ ಕ್ಲಿನಿಕ್ ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡಿದ್ದರು. ಮಂಗಳೂರಿನ ಕೆನರಾ ಹೆಣ್ಣುಮಕ್ಕಳ ಹೈಸ್ಕೂಲಿನಲ್ಲಿ ಆರಂಭಿಕ ವಿದ್ಯಾಭ್ಯಾಸ ಮಾಡಿದ ಅವರು, ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನಲ್ಲಿ ಬಿಎಸ್ ಸಿ ಪದವಿಯನ್ನು ಪಡೆದವರು. ಆ ಸಂದರ್ಭ ಮಂಗಳೂರಿನಲ್ಲಿ ಬ್ಯಾಂಕಿಂಗ್ ಕ್ಷೇತ್ರ ಆರಂಭದ ಹೆಜ್ಜೆಯನ್ನು ಇಡುತ್ತಿತ್ತು. ಅದಕ್ಕಾಗಿ ಪ್ರಯತ್ನಪಟ್ಟರೂ ಉದ್ಯೋಗ ದೊರಕುವಲ್ಲಿ ಸಫಲರಾಗದ ಕಾರಣ, ಹೃದ್ರೋಗ ತಜ್ಞರ ಕ್ಲಿನಿಕ್ ನಲ್ಲಿ ಕೆಲಕಾಲ ಕೆಲಸ ಮಾಡಿದರು.
ಸಿ.ಉಮೇಂದ್ರ ಕಾಮತ್ ಅವರನ್ನು ವಿವಾಹವಾದ ಬಳಿಕ ಕಾಶ್ಮೀರ ಪ್ರವಾಸ ಕೈಗೊಂಡಿದ್ದ ಕಾಮತ್ ದಂಪತಿ ಅಲ್ಲಿಂದ ಮರಳಿದ ಕೂಡಲೇ 1971ರಲ್ಲಿ ಟ್ರಾವೆಲ್ ಏಜನ್ಸಿ ಕಂಪನಿಯನ್ನು ಆರಂಭಿಸುವ ಯೋಚನೆ ಮಾಡಿದರು.ಹೀಗೆ ನಿರ್ಮಲಾ ಟ್ರಾವೆಲ್ಸ್ ಜನ್ಮ ತಾಳಿತು.
ನಿಮ್ಮ ಪರಿಚಿತರೊಂದಿಗೆ ಪ್ರವಾಸದ ಅನುಭವ
ಸಾಮಾನ್ಯವಾಗಿ ಒಂಟಿಯಾಗಿ ಅಥವಾ ಇಬ್ಬರೇ ವಾಸಿಸುವವರು ಅಪರಿಚಿತರೊಂದಿಗೆ ಪ್ರವಾಸ ಕೈಗೊಳ್ಳಲು ಹಿಂಜರಿಯುತ್ತಾರೆ. ಇಂಥ ಸಂದರ್ಭ ಫ್ಯಾಮಿಲಿ ಅಥವಾ ಸ್ನೇಹಿತರ ಕೂಟದೊಂದಿಗೆ ಸೇರಿ ಇಪ್ಪತ್ತು, ಮೂವತ್ತು ಮಂದಿ ಪ್ರವಾಸ ಕೈಗೊಳ್ಳುವುದಾದರೆ ಅದಕ್ಕಿತ ಮಜ ಇನ್ನೇನು ಬೇಕು? ನಿರ್ಮಲಾ ಕಾಮತ್ ಅವರು ಮಧ್ಯಮ ವರ್ಗದ ಜನತೆಯ ಇಂಥ ಬಯಕೆಯನ್ನು ಅರಿತಿದ್ದರು. ಹೀಗಾಗಿಯೇ ಅವರು ಫ್ಯಾಮಿಲಿ ಟೂರ್, ಫ್ರೆಂಡ್ಸ್ ಟೂರ್ ಮಾಡುವವರಿಗಾಗಿ ಪ್ಯಾಕೇಜ್ ಗಳನ್ನು ಆರಂಭಿಸಿದರು. ಇದು ಯಶಸ್ವಿಯೂ ಆಯಿತು. ನಿರ್ಮಲಾ ಟ್ರಾವೆಲ್ಸ್ ನಲ್ಲಿ ಸಂಚರಿಸುವುದೆಂದರೆ ಸುರಕ್ಷಿತವಾಗಿ ಮನೆಮಂದಿಯೊಂದಿಗೆ ಪ್ರವಾಸ ಮಾಡಿದ ಅನುಭವವೂ ಆಗುವಂತೆ ಮಾಡಿದರು. ಒಂಟಿಯಾಗಿ ರೈಲು, ಬಸ್ಸುಗಳಲ್ಲಿ ಸಂಚರಿಸುತ್ತಿದ್ದವರಿಗೆ ಟೂರ್ ಏರ್ಪಡಿಸುವ ಈ ಸಂಸ್ಥೆಯ ಯೋಜನೆಗಳು ರುಚಿಸಿದವು. ಇದರ ಸುವಾಸನೆ ಇಂದಿಗೂ ಪಸರಿಸುತ್ತಿದೆ. ನಿರಂತರ 53 ವರ್ಷಗಳಿಂದ ನಿರ್ಮಲಾ ಟ್ರಾವೆಲ್ಸ್ ದೇಶ, ವಿದೇಶದ ಟೂರ್ ಗಳನ್ನು ಯಶಸ್ವಿಯಾಗಿ ಸಂಘಟಿಸುತ್ತಿರುವುದರ ಹಿಂದೆ ನಿರ್ಮಲಾ ಕಾಮತ್ ಅವರು ಗ್ರಾಹಕರ ಮನೋಧರ್ಮವನ್ನು ಅರಿತುಕೊಳ್ಳುವ ಜಾಣ್ಮೆ ಕಾರಣವಾಗಿದೆ.
ಆರಂಭಗೊಂಡ ನಾಲ್ಕೈದು ವರ್ಷಗಳಲ್ಲಿ ನಿರ್ಮಲಾ ಟ್ರಾವೆಲ್ಸ್ ಉತ್ತರ ಭಾರತ ಪ್ರವಾಸದ 45 ದಿನಗಳ ಪ್ಯಾಕೇಜ್ ಆರಂಭಿಸಿ ಯಶಸ್ವಿಯಾಗಿತ್ತು. ದೆಹಲಿ, ಬದರೀನಾಥ, ಕೇದಾರನಾಥ, ಜಮ್ಮು ಕಾಶ್ಮೀರ, ಹರಿದ್ವಾರ, ವಾರಣಾಸಿ, ಕೋಲ್ಕತ್ತ, ಪುರಿ, ಕೊನಾರ್ಕ್ ಹೀಗೆ ದೊಡ್ಡ ಪ್ರವಾಸವನ್ನು ಏರ್ಪಡಿಸುವ ಕಾರ್ಯವನ್ನು ಉಪೇಂದ್ರ ಕಾಮತ್ ನಿರ್ಮಲಾ ಕಾಮತ್ ಯಶಸ್ವಿಯಾಗಿ ಕೈಗೊಂಡು ಮನೆಮಾತಾದರು. ಹೀಗಾಗಿಯೇ ಟೂರ್ ಗೆ ಹೋಗ್ತೀರಾ, ಎಂದರೆ ನಿರ್ಮಲಾ ಟ್ರಾವೆಲ್ಸ್ ನಲ್ಲಾ ಎಂಬ ಸಂಭಾಷಣೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಳಿಸುವಷ್ಟರ ಮಟ್ಟಿಗೆ ನಿರ್ಮಲಾ ಕಾಮತ್ ಅವರು ಮನೆಮಾತಾಗಿ ಹೋಗಿದ್ದರು.
(ವರದಿ-ಹರೀಶ್ ಮಾಂಬಾಡಿ, ಮಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.