14,500 ವೆಚ್ಚದಲ್ಲೇ ಸ್ನೇಹಿತರಿಂದ ಮಧ್ಯಭಾರತ ಟೂರ್; ರಿಕ್ಷಾದಲ್ಲೇ 11 ದಿನ ಪ್ರಯಾಣ, ಐದು ಜ್ಯೋತಿರ್ಲಿಂಗಗಳ ದರ್ಶನ
Mangaluru News: ಕರಾವಳಿಯ ಯುವಕರಿಬ್ಬರು ಆಟೋ ರಿಕ್ಷಾದಲ್ಲಿಯೇ ಮಧ್ಯ ಭಾರತವನ್ನು ಸುತ್ತಾಡಿ ಬಂದಿದ್ದಾರೆ. ಐದು ಜ್ಯೋತಿರ್ಲಿಂಗಗಳ ದರ್ಶನ ಪೂರೈಸಿ ಬಂದಿದ್ದಾರೆ. ದೋಸ್ತಿಗಳ ಪ್ರವಾಸ ಕಥನ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.
ಮಂಗಳೂರು: ಪ್ರವಾಸ ಅಂದರೆ ಯುವಕರು ಬೈಕ್, ಕಾರನ್ನು ನೆಚ್ಚಿಕೊಳ್ಳುತ್ತಾರೆ. ಆದರೆ ಕರಾವಳಿಯ ಯುವಕರಿಬ್ಬರು ಆಟೋ ರಿಕ್ಷಾದಲ್ಲಿಯೇ ಮಧ್ಯ ಭಾರತದಲ್ಲಿ ಸುತ್ತಾಡಿ ಐದು ಜ್ಯೋತಿರ್ಲಿಂಗಗಳ ದರ್ಶನ ಪೂರೈಸಿ ಬಂದಿದ್ದಾರೆ!
ಇವರು ದಕ್ಷಿಣ ಕನ್ನಡ ಜಿಲ್ಲೆಯವರು. ಬಂಟ್ವಾಳ ತಾಲೂಕಿನ ಮೆಲ್ಕಾರ್ ನಿವಾಸಿ ಕ್ಯಾಟರಿಂಗ್ ಉದ್ಯಮಿ ವಿಜೇತ್ ನಾಯಕ್ ಹಾಗೂ ಕಲ್ಲಡ್ಕ ನಿವಾಸಿ ಸಾಫ್ಟ್‌ವೇರ್ ಇಂಜಿನಿಯರ್ ವಿಶ್ವಾಸ್ ಪ್ರಭು ಸ್ನೇಹಿತರು. ಟೂರ್ ಹೋಗುವುದು ಇವರಿಗೆ ಇಷ್ಟವೂ ಹೌದು. ಹಾಗೆಂದು ವಿಭಿನ್ನವಾಗಿ ಪ್ರಯೋಗಗಳನ್ನು ಮಾಡುವುದರಲ್ಲೂ ಎತ್ತಿದ ಕೈ.
ವಿಜೇತ್ ನಾಯಕ್ ಅವರಿಗೆ ಕ್ಯಾಟರಿಂಗ್ ಕೆಲಸವಿದ್ದರೆ, ವಿಶ್ವಾಸ್ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದ ಕಾರಣ ಸಮಯದ ಹೊಂದಾಣಿಕೆಯೂ ಬೇಕಾಗುತ್ತದೆ. ಕಾರ್ಯಕ್ರಮಗಳ ಸೀಸನ್ ಮುಗಿದ ಬಳಿಕ ಕ್ಯಾಟರಿಂಗ್ಗೆ ಫ್ರೀ ಇರುತ್ತದೆ. ಈ ಸಮಯವನ್ನು ಹೊಂದಿಸಿ ಯುವಕರು ಸುತ್ತಾಟ ನಡೆಸಿದ್ದಾರೆ.
ಜ್ಯೋತಿರ್ಲಿಂಗ ದರ್ಶನ ಮಾಡಿದ್ದು ಹೇಗೆ?
ಆಟೋ ರಿಕ್ಷಾದಲ್ಲಿಯೇ ಸಂಚರಿಸಿ ಜ್ಯೋತಿರ್ಲಿಂಗಗಳ ದರ್ಶನ ಮಾಡಿದ ಬಾಲ್ಯ ಸ್ನೇಹಿತರು ಜೂನ್ 29ರಂದು ನಸುಕಿನ ವೇಳೆ 4.05ಕ್ಕೆ ಪ್ರವಾಸ ಆರಂಭಿಸಿದ್ದಾರೆ. ಜುಲೈ 9ರಂದು ಮರಳಿದ್ದಾರೆ. ತಮ್ಮ ಊರಿನಿಂದಲೇ ಇವರು ಆಟೋ ಹಿಡಿದು ಹೊರಟಿದ್ದಾರೆ. ಕ್ಯಾಟರಿಂಗ್ ಉದ್ಯಮದ ಆಟೋ ಆದ ಕಾರಣ ಸಮಸ್ಯೆ ಇರಲಿಲ್ಲ.
ಇದು ಪ್ರೈವೇಟ್ ಆಟೋವಾದ್ದರಿಂದ ಆಲ್ ಇಂಡಿಯಾ ಪರ್ಮಿಟ್ ಇತ್ತು. ಹಾಗಾಗಿ ಟೂರಿಸ್ಟ್ ಪಾಸ್ ಬೇಕಾಗಿರಲಿಲ್ಲ. ಟೋಲ್ ಚಾರ್ಜ್ ಕೂಡಾ ಇದಕ್ಕಿಲ್ಲ. ಆದ್ದರಿಂದ ತಲಾ 14,500 ರೂ. ವೆಚ್ಚದಲ್ಲಿ ಪ್ರವಾಸ ಮುಗಿಸಿ ಬಂದಿದ್ದಾರೆ.
ಆಟೋದಲ್ಲಿಯೇ ಕರ್ನಾಟಕದಿಂದ ಮೊದಲ್ಗೊಂಡು ಗೋವಾಕ್ಕೆ ಹೋಗಿದ್ದಾರೆ. ಅಲ್ಲಿ ಸುತ್ತಾಟ ನಡೆಸಿ, ಗೋವಾ ದಾಟಿ ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಿಗೆ ತೆರಳಿದ್ದಾರೆ. ಅಲ್ಲಿ ಗೃಷ್ಣೇಶ್ವರ, ಭೀಮಾಶಂಕರ, ತ್ರಯಂಬಕೇಶ್ವರ, ಗುಜರಾತ್‌ನ ನಾಗೇಶ್ವರ, ಸೋಮನಾಥ ಈ 5 ಜ್ಯೋತಿರ್ಲಿಂಗಗಳನ್ನು ದರ್ಶನ ಮಾಡಿದ್ದಾರೆ.
ಜೊತೆಗೆ ಎಲ್ಲೋರ, ದ್ವಾರಕಾ, ಸ್ಟ್ಯಾಚು ಆಫ್ ಯುನಿಟಿ ಮುಂತಾದ ಕ್ಷೇತ್ರಗಳನ್ನು ಸಂದರ್ಶಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇಷ್ಟೆಲ್ಲಾ ತಿರುಗಾಟಕ್ಕೆ ಬೇಕಾದದ್ದು ಕೇವಲ 11 ದಿನಗಳು.
ಇಬ್ಬರೂ ಡ್ರೈವಿಂಗ್ ಮಾಡ್ತಿದ್ರು
ಗೆಳೆಯರಿಬ್ಬರೂ ರಿಕ್ಷಾವನ್ನು 3 ಗಂಟೆಗೊಮ್ಮೆ ಬದಲಿಸಿ ಓಡಿಸಿದ್ದರಿಂದ ಪ್ರಯಾಣ ಆಯಾಸ ಕಡಿಮೆಯಾಗಿತ್ತು. 11 ದಿನಗಳ ಪ್ರವಾಸದಲ್ಲಿ ಊಟ-ಉಪಹಾರವನ್ನೂ ಇವರೇ ಆಟೋದಲ್ಲಿಯೇ ತಯಾರಿಸಿದ್ದು, ಬೇಕಾದ ದಿನಸಿ ಸಾಮಾಗ್ರಿ, ಗ್ಯಾಸ್‌ಸ್ಟೌ, ಪಾತ್ರೆಗಳನ್ನು ಜೊತೆಗೆ ಒಯ್ದಿದ್ದಾರೆ.
ಒಟ್ಟಿನಲ್ಲಿ ಈ ಪ್ರವಾಸ ಇಬ್ಬರಿಗೂ ತೃಪ್ತಿ ತಂದಿದ್ದು, ಮುಂದೆಯೂ ಇದೇ ರೀತಿ ಪ್ಲ್ಯಾನ್ ಮಾಡಿ ಪ್ರವಾಸ ಹೋಗುವ ಕನಸಿದೆ ಎಂದು ಈ ಸ್ನೇಹಿತ ಜೋಡಿ ಹೇಳಿದೆ.
(ವರದಿ: ಹರೀಶ ಮಾಂಬಾಡಿ)
ಇದನ್ನೂ ಓದಿ: Mangalore Fish Mela: ಮಂಗಳೂರಿನ ಪಿಲಿಕುಳದಲ್ಲಿ ಜುಲೈ 21ರಂದು ಮತ್ಸ್ಯೋತ್ಸವ, ಮೀನು ಮಾರಾಟ,ಏನುಂಟು ವಿಶೇಷ