Crime News; ಮಂಗಳೂರಲ್ಲಿ ಪುಟ್ಬಾಲ್ ಆಟದ ವೇಳೆ ವಿದ್ಯಾರ್ಥಿಗಳ ನಡುವೆ ಕಿರಿಕ್, ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ ಬಾಲಕರ ತಂಡ, ಇಬ್ಬರ ಬಂಧನ
Mangaluru Crime News; ಮಂಗಳೂರಿನ ನೆಹರೂ ಮೈದಾನ ಫುಟ್‌ಬಾಲ್ ಮೈದಾನದಲ್ಲಿ ವಿದ್ಯಾರ್ಥಿಗಳ ತಂಡದ ನಡುವೆ ಆಟದ ವೇಳೆ ಆದ ಘರ್ಷಣೆ, ಅಪಹರಣ ಮತ್ತು ಹಲ್ಲೆ ತನಕ ಹೋಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಫುಟ್ಬಾಲ್ ಆಟ ಆಡುತ್ತಿರುವ ವೇಳೆ ಎರಡು ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ಜಗಳ ನಡೆದು ತಂಡವೊಂದು ಮತ್ತೊಂದು ತಂಡದ ವಿದ್ಯಾರ್ಥಿಗಳನ್ನು ಕಿಡ್ನ್ಯಾಪ್ ಮಾಡಿದ ಘಟನೆ ನಡೆದಿದ್ದು, ಈ ಸಂದರ್ಭ ಹಲ್ಲೆಯೂ ಆಗಿದೆ ಎನ್ನಲಾಗಿದೆ.
ಮಂಗಳೂರಿನ ಯೆನಪೊಯ ಮತ್ತು ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳ ನಡುವೆ ಫುಟ್ಬಾಲ್ ಆಟದ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ಮಹಮ್ಮದ್ ಶುರೈ, ಮಹಮ್ಮದ್ ಅಫ್ರಾನ್, ಇಬ್ರಾಹಿಂ ಖಲೀಲ್ ಮತ್ತು ಮಹಮ್ಮದ್ ಜನ್ಮದ್ ಎಂಬ ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದಿಯಾನ್, ಅನ್ನೈ, ತಸ್ಮಿನ್, ಸಲ್ಮಾನ್, ಅನಾಸ್ ಹಲ್ಲೆಗೈದಿರುವ ಆರೋಪಿಗಳು ಎಂದು ಹೆಸರಿಸಲಾಗಿದೆ.
ಕಿಡ್ನಾಪ್ ಮಾಡಿ ಮನಸೋ ಇಚ್ಛೆ ಹಲ್ಲೆ
ಆರೋಪಿಗಳು ಮತ್ತೊಂದು ತಂಡದ ವಿದ್ಯಾರ್ಥಿಗಳನ್ನು ಕಿಡ್ನ್ಯಾಪ್ ಮಾಡಿ ಮಂಗಳೂರು ಮಹಾಕಾಳಿ ಪಡ್ಪು ಬಳಿ ಹಲ್ಲೆಗೈದಿದ್ದಾರೆ. ಅಷ್ಟೇ ಅಲ್ಲ, ಯದ್ವಾತದ್ವಾ ಹೊಡೆದು ಸಿಗರೇಟ್‌ನಿಂದ ಸುಟ್ಟು ಗಾಯ ಮಾಡಲಾಗಿದೆ ಎನ್ನಲಾಗಿದೆ.. ಮಂಗಳೂರಿನ ಮೂರು ಕಡೆಗಳಿಗೆ ಕರೆದೊಯ್ದು ಹಲ್ಲೆಗೈದು ಅರೆಬೆತ್ತಲು ಮಾಡಿ ಬಸ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳ ಪೈಕಿ, ದಿಯಾನ್ ಮತ್ತು 17 ವರ್ಷದ ಅಪ್ರಾಪ್ತ ಬಾಲಕರು ಎಂದು ಗುರುತಿಸಲಾಗಿದೆ.ಸಂತ್ರಸ್ತರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ದೂರಿನ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 162/2024 U/s - 109, 115(2), 118(1), 127(2), 137(2), 189(2), 190, 191 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ದಿಯಾನ್ ಮತ್ತು ಸಲ್ಮಾನ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಅರೆಬೆತ್ತಲೆಗೊಳಿಸಿ ಥಳಿತ: ಇಬ್ಬರು ವಶಕ್ಕೆ
ಪುಟ್ಬಾಲ್ ಪಂದ್ಯಾಟ ವಿಚಾರದಲ್ಲಿ ಕಾಲೇಜು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದು ಒಂದು ಕಾಲೇಜಿನ ವಿದ್ಯಾರ್ಥಿಯನ್ನು ಅರೆಬೆತ್ತಲೆಗೊಳಿಸಿ ಥಳಿಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಅವರು ಮಂಗಳೂರು ನಗರದಲ್ಲಿ ಎರಡು ಗುಂಪುಗಳ ವಿದ್ಯಾರ್ಥಿಗಳ ಅಪಹರಣ ಮತ್ತು ಹಲ್ಲೆಯ ಘಟನೆ ವರದಿಯಾಗಿದೆ. ಈ ಘಟನೆಯು 14 ಆಗಸ್ಟ್ 2024 ರಂದು ನೆಹರು ಮೈದಾನದಲ್ಲಿ ಯೆನೆಪೋಯ ಫುಟ್‌ಬಾಲ್ ತಂಡ ಮತ್ತು ಅಲೋಶಿಯಸ್ ಫುಟ್‌ಬಾಲ್ ತಂಡದ ನಡುವಿನ ಫುಟ್‌ಬಾಲ್ ಪಂದ್ಯದ ಸಂದರ್ಭದಲ್ಲಿ ಪ್ರಾರಂಭವಾಯಿತು. ಪಂದ್ಯದಲ್ಲಿ ಯೆನೆಪೊಯ ತಂಡ ಜಯ ಗಳಿಸಿತ್ತು. ಪಂದ್ಯದ ವೇಳೆ ನಡೆದ ವಿವಾದ ಈ ಅಪರಾಧಕ್ಕೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.
ಆಗಸ್ಟ್ 19ರಂದು ಮುಸ್ಸಂಜೆ 6:15 ಕ್ಕೆ, ಪಾಂಡೇಶ್ವರ ಫೋರಂ ಮಾಲ್ ಬಳಿ, ದೂರುದಾರ, 17 ವರ್ಷದ ಅಪ್ರಾಪ್ತ ಬಾಲಕ, ಯೆನೆಪೋಯ ಕಾಲೇಜಿನ ವಿದ್ಯಾರ್ಥಿಯನ್ನು 18-19 ವರ್ಷ ವಯಸ್ಸಿನ ವ್ಯಕ್ತಿಗಳ ಗುಂಪೊಂದು ಕರೆದುಕೊಂಡು ಹೋಗಿದ್ದಾರೆ. ಇವರನ್ನು ದಿಯಾನ್, ತಸ್ಲಿಮ್, ಸಲ್ಮಾನ್ ಮತ್ತು 17 ವರ್ಷ ವಯಸ್ಸಿನ ಇತರ 2 ಅಪ್ರಾಪ್ತ ವ್ಯಕ್ತಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಕರೆದೊಯ್ದು ಕೈ ಮತ್ತು ಕಾಲಿನಿಂದ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ನಂತರ ಸಂತ್ರಸ್ತರನ್ನು ಮಹಾಕಾಳಿ ಪಡ್ಡು ಮತ್ತು ಜಪ್ಪು ಮಹಾಕಾಳಿ ಪದ್ದು ಮಸೀದಿ ಬಳಿ ಸೇರಿದಂತೆ ವಿವಿಧ ಸ್ಥಳಗಳಿಗೆ ಕರೆದೊಯ್ಯಲಾಯಿತು. ಅಲ್ಲಿ ಅವರ ಮೇಲೆ ಮತ್ತಷ್ಟು ಹಲ್ಲೆ ನಡೆಸಲಾಯಿತು. ಆರೋಪಿಗಳು ಸಂತ್ರಸ್ತರ ಮೇಲೆ ಹಲ್ಲೆ ನಡೆಸುವಾಗ ಚಿತ್ರೀಕರಣ ಮಾಡಿದ್ದಾರೆ. ನಂತರ ಸಂತ್ರಸ್ತರನ್ನು ಬಿಡಲಾಯಿತು ಎಂದು ತಿಳಿಸಿದ್ದಾರೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)