ಕನ್ನಡ ಸುದ್ದಿ  /  ಕರ್ನಾಟಕ  /  ಅಡಕೆ ಸಿಪ್ಪೆಯಲ್ಲಿ ಅಣಬೆ ಪ್ರಭೇದ ಸಂರಕ್ಷಿಸಿದ ಪುತ್ತೂರಿನ ಕೃಷಿಕ ಹರೀಶ್ ರೈ ದೇರ್ಲ; ತಿನ್ನಲು ಯೋಗ್ಯ ಮಶ್ರೂಮ್‌

ಅಡಕೆ ಸಿಪ್ಪೆಯಲ್ಲಿ ಅಣಬೆ ಪ್ರಭೇದ ಸಂರಕ್ಷಿಸಿದ ಪುತ್ತೂರಿನ ಕೃಷಿಕ ಹರೀಶ್ ರೈ ದೇರ್ಲ; ತಿನ್ನಲು ಯೋಗ್ಯ ಮಶ್ರೂಮ್‌

ಅಡಕೆ ಸಿಪ್ಪೆಯಲ್ಲಿ ಅಣಬೆ ಪ್ರಭೇದ ಸಂರಕ್ಷಿಸಿದ ಪುತ್ತೂರಿನ ಕೃಷಿಕ ಹರೀಶ್ ರೈ ದೇರ್ಲ ಅವರ ಸಾಧನೆ ಅಂತಾರಾಷ್ಟ್ರೀಯ ಸಂಶೋಧನಾ ಪತ್ರಿಕೆಗಳಲ್ಲೂ ಉಲ್ಲೇಖಿಸಲ್ಪಟ್ಟಿವೆ. ಖಾದ್ಯ ಬಳಕೆಗೆ ಯೋಗ್ಯ ಮಶ್ರೂಮ್‌ ಈಗ ಜಗತ್ತಿನ ಗಮನಸೆಳೆದಿದೆ. (ವರದಿ- ಹರೀಶ ಮಾಂಬಾಡಿ, ಮಂಗಳೂರು)

ಅಡಕೆ ಸಿಪ್ಪೆಯಲ್ಲಿ ಅಣಬೆ ಪ್ರಭೇದ ಸಂರಕ್ಷಿಸಿದ ಪುತ್ತೂರಿನ ಕೃಷಿಕ ಹರೀಶ್ ರೈ ದೇರ್ಲ ಅವರ ಸಾಧನೆ ಈಗ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಖಾದ್ಯ ಬಳಕೆಗೆ ಯೋಗ್ಯ ಮಶ್ರೂಮ್‌ ಕೂಡ ಸಂಶೋಧಕರ ಗಮನಸೆಳೆದಿದೆ.
ಅಡಕೆ ಸಿಪ್ಪೆಯಲ್ಲಿ ಅಣಬೆ ಪ್ರಭೇದ ಸಂರಕ್ಷಿಸಿದ ಪುತ್ತೂರಿನ ಕೃಷಿಕ ಹರೀಶ್ ರೈ ದೇರ್ಲ ಅವರ ಸಾಧನೆ ಈಗ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಖಾದ್ಯ ಬಳಕೆಗೆ ಯೋಗ್ಯ ಮಶ್ರೂಮ್‌ ಕೂಡ ಸಂಶೋಧಕರ ಗಮನಸೆಳೆದಿದೆ.

ಮಂಗಳೂರು: ಮಶ್ರೂಮ್ ಫ್ರೈ, ಮಂಚೂರಿ… ಹೀಗೆ ಅಣಬೆಯ ನಾನಾ ರೀತಿಯ ಖಾದ್ಯಗಳನ್ನು ನಾವು ಸೇವಿಸಿದ್ದೇವೆ. ಅಣಬೆ ತಿನ್ನಲು ಯೋಗ್ಯ ಎಂಬುದೂ ಎಲ್ಲರಿಗೂ ಗೊತ್ತು. ಆದರೆ ಎಲ್ಲ ಅಣಬೆಗಳೂ ತಿನ್ನಲು ಯೋಗ್ಯವಲ್ಲ. ಕೆಲವೊಂದು ವಿಷಕಾರಕಗಳೂ ಇವೆ. ಹೀಗಾಗಿ ಇದರ ಆಯ್ಕೆ ಅತ್ಯಂತ ಜಾಗರೂಕವಾಗಿರಬೇಕು, ಜಾಣ್ಮೆಯೂ ಬೇಕು. ಇದು ವಿಷಕಾರಕವಾಗಿರಬಹುದು ಎಂದು ಅದೆಷ್ಟೋ ಅಣಬೆ ಪ್ರಭೇದಗಳು ಹಾಗೆಯೇ ನಶಿಸಿಹೋಗಿರಬಹುದು.

ಟ್ರೆಂಡಿಂಗ್​ ಸುದ್ದಿ

ವಿಶೇಷವಾಗಿ ತೋಟಗಳಲ್ಲಿ ಇಂಥ ಪ್ರಭೇದಗಳು ಜಾಸ್ತಿ. ಹೀಗೆ ನಶಿಸಿಹೋಗುತ್ತಿರುವ ಅಥವಾ ಅಜ್ಞಾತವಾಗುಳಿದ ಪ್ರಭೇದವೊಂದನ್ನು ಪತ್ತೆಹಚ್ಚಿದ ಪುತ್ತೂರಿನ ಕೃಷಿಕರೊಬ್ಬರು, ಇದನ್ನು ಅಡಕೆ ಸಿಪ್ಪೆಯಲ್ಲೇ ಬೆಳೆದು, ಸಂರಕ್ಷಿಸಿ, ವೈಜ್ಞಾನಿಕ ಅಧ್ಯಯನವನ್ನು ಸಂಶೋಧನಾ ಸಂಸ್ಥೆಗಳ ಸಹಾಯದಿಂದ ಮಾಡಿಸಿ ಗಮನ ಸೆಳೆದಿದ್ದಾರೆ. ಇದೊಂದು ವಿಶ್ವದ ಅಪರೂಪದ ಅಣಬೆ ತಳಿ ಎಂಬುದನ್ನು ಗುರುತಿಸಿದ್ದಾರೆ. ಇದೀಗ ಅವರ ಸಾಧನೆ ವಿಶ್ವದ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇವರು ದಕ್ಷಿಣ ಕನ್ನಡ ಪುತ್ತೂರಿನ ಹರೀಶ್ ರೈ ದೇರ್ಲ.

ಸಂಶೋಧನಾ ಪತ್ರಿಕೆಗಳಲ್ಲಿ ಮುಡಿಪಿನಡ್ಕ ಹರೀಶ್ ರೈ ದೇರ್ಲ ಸಾಧನೆ

ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಡಿಪಿನಡ್ಕ ನಿವಾಸಿ ಹರೀಶ್ ರೈ ವಿಶ್ವದ ಅಪೂರ್ವ ಅಣಬೆ ಪ್ರಭೇದವೊಂದನ್ನು ಅಡಕೆ ಸಿಪ್ಪೆರಾಶಿಯಲ್ಲಿ ಬೆಳೆಸಿ, ಗಮನ ಸೆಳೆದಿದ್ದಾರೆ. ಕಾಪ್ರಿನೋಪ್ಸಿಸ್ ಸಿನೆರಿಯಾ ಪ್ರಭೇದದ ಕುರಿತು ಅಂತಾರಾಷ್ಟ್ರೀಯ ಜರ್ನಲ್ ಇವರ ಸಾಧನೆಯ ಸುದ್ದಿ ಪ್ರಕಟಸಿದೆ. ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದ ವಿಟ್ಲ ಮತ್ತು ಕಾಸರಗೋಡಿನ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿ, ಇದು ಖಾದ್ಯ ವರ್ಗಕ್ಕೆ ಸೇರಿದ ಅಣಬೆ ಎಂಬುದನ್ನು ಖಚಿತಪಡಿಸಿದೆ.

ಒಂದೇ ದಿನದಲ್ಲಿ ಈ ಅಣಬೆ ಹುಟ್ಟಿ, ಬೆಳೆದು ಮಾಯವಾಗುತ್ತಿತ್ತು. ಇದನ್ನು ನನ್ನ ಪರಿಚಯದ ರಾಮಕೃಷ್ಣ ಪ್ರಭು ಅವರ ತೋಟದಲ್ಲಿ ನೋಡಿದ್ದೆ, ವಿಚಾರಿಸಿದಾಗ ಇದನ್ನು ಹಿರಿಯರ ಕಾಲದಲ್ಲಿ ತಿನ್ನುತ್ತಿದ್ದರು ಎಂದು ಗೊತ್ತಾಯಿತು. ಬಳಿಕ ನಾನೂ ಅಡಕೆ ಸಿಪ್ಪೆ ಹರಡಿ, ಕೊಳೆಯುವಂತೆ ಮಾಡಿ, ಗಮನಿಸಿ, ಅಭ್ಯಸಿಸಿದೆ. ಅದೇ ಜಾತಿಯ ಅಣಬೆ ಹುಟ್ಟಿಕೊಂಡಿತು. ಬೇಸಗೆಯಲ್ಲೂ ಈ ಪ್ರಯೋಗ ಮಾಡಿದ್ದೆ. ಬಳಕೆಯೇ ನಿಂತುಹೋಗಿದ್ದ ಪ್ರಭೇದ ಈಗ ಮತ್ತೊಮ್ಮೆ ಕಾಣಿಸುತ್ತಿದೆ. ಇದರಲ್ಲಿ ರೋಗನಿರೋಧಕ ಶಕ್ತಿ ಇದೆ ಎಂದು ಹರೀಶ್ ರೈ ದೇರ್ಲ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿಜ್ಞಾನಿಗಳ ಸಂಶೋಧನೆಯಿಂದ ಗುರುತು ಪತ್ತೆ

ಶತಮಾನದ ಹಿಂದೆ ಕೆಲವೆಡೆ ಈ ಜಾತಿಯ ಅಣಬೆಗಳನ್ನು ತಿನ್ನುತ್ತಿದ್ದರು. ಆದರೆ ಅದು ನಿಂತುಹೋಗಿತ್ತು. ಹಾಗೂ ಇದನ್ನು ತಿನ್ನಬಹುದಾ, ಅಥವಾ ಹಾನಿಕಾರಕವೇ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಗೊತ್ತಿದ್ದವರಿಗೂ ಇದು ಖಚಿತವಾಗಿ ಹೇಳಲು ಬರುತ್ತಿರಲಿಲ್ಲ. ಇಂಥ ಹೊತ್ತಿನಲ್ಲಿ ಇದು ಬೆಳಗ್ಗಿನ ಹೊತ್ತಿಗೆ ಕಪ್ಪಾಗಿ ಕಾಣುತ್ತಿದ್ದ ಕಾರಣ ಇದೊಂದು ವಿಷ ಅಣಬೆ ಇರಬೇಕು ಎಂದೇ ಎಲ್ಲರೂ ಭಾವಿಸಿದ್ದರು. ಹೀಗಾಗಿ ಹರೀಶ್ ರೈ ಅವರ ಪ್ರಯೋಗ ಗಮನ ಸೆಳೆಯಿತು. ಅವರು ಇದರ ಗುರುತು ಪತ್ತೆ ಹಚ್ಚಬೇಕೆಂಬ ಛಲ ಹೊತ್ತು ಬೆಳೆಸಿದರು. ಬಳಿಕ ಸಿಪಿಸಿಆರ್ ಐ ವಿಜ್ಞಾನಿಗಳು ಮಾದರಿ ಸಂಗ್ರಹಿಸಿದರು. ಕೇರಳದ ಕ್ಯಾಲಿಕಟ್ ವಿವಿಯ ದಜ್ಞ ದೀಪನ್ ಲತಾ ನೇತೃತ್ವದ ತಂಡ ಅಧ್ಯಯನ ನಡೆಸಿತು. ಬಳಿಕ ಇದು ಕ್ಯಾಪ್ರಿನೋಪ್ಸಿಸ್ ಸಿನೆರಿಯಾ ಎಂಬ ಪ್ರಭೇದದ ಅಣಬೆ ಎಂಬುದು ದೃಢಪಟ್ಟಿತು. ಇದು ತಿನ್ನುವ ವಸ್ತು ಎಂಬುದನ್ನು ಖಚಿತಪಡಿಸಲಾಯಿತು. ವಿಟ್ಲ ಸಿಪಿಸಿಆರ್ ಐ ಮುಖ್ಯಸ್ಥ ಡಾ. ರಾಜೇಶ್ ನೇತೃತ್ವದ ತಂಡ ಮೊಲೆಕ್ಯುಲರ್ ಅನಾಲಿಸಿಸ್ ಮಾಡಿತು.

ಅಮಲು ಪದಾರ್ಥ ಜೊತೆ ಇದನ್ನು ಈ ಅಣಬೆಯನ್ನು ತಿನ್ನಬಹುದು, ಆದರೆ ಅಮಲು ಪದಾರ್ಥ ಜೊತೆ ತೆಗೆದುಕೊಳ್ಳಬಾರದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದಕ್ಕೆ ರೋಗನಿರೋಧಕ ಶಕ್ತಿಯೂ ಇದೆ. ಹರೀಶ್ ರೈ ಅವರು ಸುಲಿದ ಅಡಕೆ ಸಿಪ್ಪೆಯನ್ನು ಹರಡಿ, ನೀರು ಸಿಂಪಡಿಸಿ, ಕೊಳೆಯಲು ಬಿಟ್ಟರು. 10ನೇ ದಿನಕ್ಕೆ ಹುಟ್ಟಿಕೊಳ್ಳುವ ಅಣಬೆಯನ್ನು ಪ್ರತಿದಿನ ಸಂಜೆ ಕೊಯ್ದರು. ಹತ್ತು ದಿನ ಕೊಯ್ಲು ಮಾಡಿದಾಗ ಒಂದು ಬ್ಯಾಚ್ ಆಗುತ್ತದೆ. ಹೀಗೆ 24 ಬ್ಯಾಚ್ ಗಳನ್ನು ಅವರು ಮಾಡಿದ್ದಾರೆ.

(ವರದಿ- ಹರೀಶ ಮಾಂಬಾಡಿ, ಮಂಗಳೂರು)

ಟಿ20 ವರ್ಲ್ಡ್‌ಕಪ್ 2024