Mangaluru News: ಪೊಲೀಸ್ ಸಿಬ್ಬಂದಿಯ ಮೊಬೈಲ್ ಅನ್ನೇ ಎಗರಿಸಿದ ಚಾಣಾಕ್ಷ ಕಳ್ಳ, ಆಟೊ ಚಾಲಕನಿಂದ ಪ್ರಯಾಣಿಕನ ಮೇಲೆ ಹಲ್ಲೆ, ದರೋಡೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊಬೈಲ್ ಕಳ್ಳತನ, ಆಟೋ ಚಾಲಕನಿಂದ ಪ್ರಯಾಣಿಕನ ಮೇಲೆ ಹಲ್ಲೆ, ದರೊಡೆ, ಯುವತಿಗೆ ಲೈಂಗಿಕ ಕಿರುಕುಳ ಮುಂತಾದ ಘಟನೆಗಳು ಹಲವು ಕಡೆ ವರದಿಯಾಗಿದೆ.
ಮಂಗಳೂರು: ಆನಾರೋಗ್ಯದ ನಿಮಿತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ಪೋಲಿಸ್ ಸಿಬ್ಬಂದಿಯೋರ್ವರ ಎರಡು ಮೊಬೈಲ್ ಫೋನ್ ಕಳವಾದ ಘಟನೆ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಮೆಲ್ಕಾರ್ ಟ್ರಾಫಿಕ್ ಎಚ್.ಸಿ.ದೇವರಾಜ್ ಅವರು ಅನಾರೋಗ್ಯದ ಕಾರಣ ಸೆ.17ರಂದು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಅವರು ಸೆ.19 ರಂದು ಜನರಲ್ ವಾರ್ಡ್ ಗೆ ಸ್ಥಳಾಂತರವಾಗಿದ್ದರು. ಬೆಡ್ ನಲ್ಲಿ ಮಲಗಿದ್ದ ವೇಳೆ ಇವರ ಬೆಡ್ ಪಕ್ಕದಲ್ಲಿ ಟೇಬಲ್ ಮೇಲೆ ಇರಿಸಲಾಗಿದ್ದ ಸಾವಿರಾರು ರೂ ಮುಖಬೆಲೆಯ ಒಂದು ಮೊಬೈಲ್ ಹಾಗೂ ಕೀ ಪೇಡ್ ಮೊಬೈಲ್ ಫೋನ್ ಎರಡನ್ನೂ ಕಳ್ಳ ಕದ್ದು ಕೊಂಡು ಹೋಗಿದ್ದಾನೆ.
ಕಳ್ಳ ಮೊಬೈಲ್ ಕಳ್ಳತನ ಮಾಡಿದ ಮತ್ತು ಆತ ಆಸ್ಪತ್ರೆಗೆ ಬಂದು ಹೋಗುವ ಬಗ್ಗೆ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ. ಈತ ಕಳೆದ ವಾರ ಐಸಿಯು ಘಟಕದೊಳಗೆ ನುಗ್ಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯೋರ್ವರಲ್ಲಿ ಒಮ್ಮೆ ಪೋನ್ ಕೊಡಿ ಅಜ್ಜಿ ಅರ್ಜೆಂಟಾಗಿ ಪೋನ್ ಮಾಡಲು ಇದೆ ಎಂದು ಹೇಳಿ ಮೊಬೈಲ್ ಪಡೆದುಕೊಂಡು ಹೋದಾತ ಬರಲೇ ಇಲ್ಲ.
ಅದೇ ವ್ಯಕ್ತಿ ಮತ್ತೆ ಪೋಲೀಸ್ ಸಿಬ್ಬಂದಿಯ ಪೋನ್ ಕಳ್ಳತನ ಮಾಡಿದ್ದಾನೆ. ಇದು ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿದೆ. ಇದೀಗ ಆಸ್ಪತ್ರೆಯಲ್ಲಿ ಈತನ ಪೋಟೋ ಅಂಟಿಸಲಾಗಿದ್ದು, ಈತನ ಮೊಬೈಲ್ ಕಳ್ಳ ಈತನ ಚಹರೆ ಯನ್ನು ಗಮನಿಸಿದವರು ಕೂಡಲೇ ಪೋಲಿಸರಿಗೆ ಮಾಹಿತಿ ನೀಡಿ ಎಂದು ತಿಳಿಸಲಾಗಿದೆ.
ಯುವತಿಗೆ ಲೈಂಗಿಕ ಕಿರುಕುಳ ಯತ್ನ: ಪೊಲೀಸರಿಗೆ ದೂರು
ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಮಲಗಿದ್ದ ಯುವತಿಗೆ ಕೋಣೆಯ ಕಿಟಕಿ ತೆರೆದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೆ.20 ರಂದು ರಾತ್ರಿ 10 ಗಂಟೆಯ ಬಳಿಕ ಘಟನೆ ನಡೆದಿದ್ದು, ಪಕ್ಕದ ಮನೆಯಾತನ ವಿರುದ್ಧ ದೂರು ದಾಖಲಾಗಿದೆ. ದೂರುದಾರರ ತಂದೆ ನಿಧನ ಹೊಂದಿದ್ದು, ತಾಯಿ ಹಾಗೂ ಮೂವರು ಹೆಣ್ಣುಮಕ್ಕಳು ಮನೆಯಲ್ಲಿ ಇದ್ದಾರೆ. ಮನೆಯಲ್ಲಿ ಮಹಿಳೆಯರೇ ಇರುವ ಕಾರಣ ಈತ ರಾತ್ರಿ ವೇಳೆ ಲೈಂಗಿಕ ಕಿರುಕುಳ ನೀಡಲು ಬಂದಿದ್ದ ಎಂದು ಸ್ಥಳೀಯರು ಹೇಳಿದ್ದಾರೆ. ಈತನ ಬಂಧಿಸಿ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪೋಲೀಸರಿಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಹ್ಯುಮನ್ ರೈಟ್ಸ್ ಸಂಘಟನೆ ಹೆಸರು ದುರ್ಬಳಕೆ: ಪ್ರಕರಣ ದಾಖಲು
ರಾಷ್ಟ್ರೀಯ ಹ್ಯುಮನ್ ರೈಟ್ಸ್ ಕಮೀಷನ್ ಎಂಬ ಸಂಘಟನೆಯ ಹೆಸರು, ಲೋಗೊ ದುರ್ಬಳಕೆ ಮಾಡಿಕೊಳ್ಳುವ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿನೇಶ್ ಗಾಣಿಗ ಎಂಬಾತ ಈ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಾನೆ ಎಂಬ ಮಾಹಿತಿಯನ್ವಯ ಈ ಪ್ರಕರಣ ದಾಖಲಾಗಿದೆ. ಪ್ರಕರಣದ ಪಿರ್ಯಾದಿದಾರರಾದ ಕಾರುಗುಂದ ಗ್ರಾಮ, ಮಡಿಕೇರಿ ತಾಲೂಕು, ಕೊಡಗು ಜಿಲ್ಲೆಯ ನಿವಾಸಿ ದರ್ಶನ್ (27ವರ್ಷ) ಎಂಬವರ ದೂರಿನಂತೆ, ಪಿರ್ಯಾದಿರವರು.
ಆಟೊ ಚಾಲಕನಿಂದ ಪ್ರಯಾಣಿಕನ ಮೇಲೆ ಹಲ್ಲೆ, ದರೋಡೆ
ಆಟೊದಲ್ಲಿ ಕುಳಿತ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿ ಆತನ ಬ್ಯಾಗ್ ಕಿತ್ತುಕೊಂಡ ಪ್ರಕರಣ ಸುಳ್ಯದಲ್ಲಿ ನಡೆದಿದೆ. ಈ ಕುರಿತು ದೂರು ನೀಡಿರುವ ಪ್ರಯಾಣಿಕ ಮಡಿಕೇರಿ ನಿವಾಸಿ ದರ್ಶನ್ ತಾನು ಸುಳ್ಯಕ್ಕೆ ಬಂದಿದ್ದು, ಹಳೆಗೇಟು ಎಂಬಲ್ಲಿ ಆಟೋ ಒಂದನ್ನು ರಾತ್ರಿಯ ವೇಳೆ ಹತ್ತಿದ್ದೇನೆ. ಈ ಸಂದರ್ಭ, ಆಟೋದ ಹಿಂಬದಿ ಸೀಟಿನಲ್ಲಿ ಇಬ್ಬರು ಪ್ರಯಾಣಿಕರು ಕುಳಿತಿದ್ದು, ತಾನು ಆಟೋದಲ್ಲಿ ಕುಳಿತ ಕೂಡಲೇ ಚಾಲಕ ಹಾಗೂ ಪ್ರಯಾಣಿಕರಿಬ್ಬರು ಸೇರಿ ತನ್ನ ಬ್ಯಾಗ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಪ್ರತಿರೋಧ ತೋರಿದ ತನ್ನ ಮೇಲೆ ಹಲ್ಲೆ ನಡೆಸಿ, ಬ್ಯಾಗನ್ನು ಕಿತ್ತುಕೊಂಡು ದೂಡಿ ಹಾಕಿ ಆಟೋದಲ್ಲಿ ಪರಾರಿಯಾಗಿರುತ್ತಾರೆ. ಬ್ಯಾಗಿನಲ್ಲಿ ವ್ಯವಹಾರದ ಹಣ ಒಟ್ಟು 3.5 ಲಕ್ಷ ರೂಪಾಯಿ, ಎರಡು ಮೊಬೈಲ್ ಗಳು, ವಿವಿಧ ಗುರುತಿನ ಚೀಟಿಗಳು ಹಾಗೂ ಮೂರು ಎಟಿಎಂ ಕಾರ್ಡ್ ಗಳಿದ್ದು, ಘಟನೆಯ ಸಮಯ ಅಟೋ ರಿಕ್ಷಾದ ನೋಂದಣಿ ಸಂಖ್ಯೆಯನ್ನು ತಾನು ಗಮನಿಸಿರುವುದಿಲ್ಲ ಎಂಬುದಾಗಿ ನೀಡಿದ ದೂರಿನಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
(ವರದಿ: ಹರೀಶ್ ಮಾಂಬಾಡಿ)