ಆಟಿ ತಿಂಗಳಿನಲ್ಲಿ ಮರ ಕೆಸುವಿಗೆ ಎಲ್ಲಿಲ್ಲದ ಬೇಡಿಕೆ; ಈ ಎಲೆ ಬೆಳೆಯುವುದರಲ್ಲಿ ಯಶಸ್ಸು ಕಂಡ ಮಂಗಳೂರಿನ ಕರ್ಣಾಟಕ ಬ್ಯಾಂಕ್ ಅಧಿಕಾರಿ-mangaluru news demand for mara kesu in the month of ati or ashada a bank officer successful in growing this leaf ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಆಟಿ ತಿಂಗಳಿನಲ್ಲಿ ಮರ ಕೆಸುವಿಗೆ ಎಲ್ಲಿಲ್ಲದ ಬೇಡಿಕೆ; ಈ ಎಲೆ ಬೆಳೆಯುವುದರಲ್ಲಿ ಯಶಸ್ಸು ಕಂಡ ಮಂಗಳೂರಿನ ಕರ್ಣಾಟಕ ಬ್ಯಾಂಕ್ ಅಧಿಕಾರಿ

ಆಟಿ ತಿಂಗಳಿನಲ್ಲಿ ಮರ ಕೆಸುವಿಗೆ ಎಲ್ಲಿಲ್ಲದ ಬೇಡಿಕೆ; ಈ ಎಲೆ ಬೆಳೆಯುವುದರಲ್ಲಿ ಯಶಸ್ಸು ಕಂಡ ಮಂಗಳೂರಿನ ಕರ್ಣಾಟಕ ಬ್ಯಾಂಕ್ ಅಧಿಕಾರಿ

ಕರಾವಳಿಯಲ್ಲಿ ಈಗ ಆಟಿ (ಆಷಾಢ) ತಿಂಗಳು ನಡೆಯುತ್ತಿದೆ. ಈ ತಿಂಗಳಿನಲ್ಲಿ ಮಳೆ ವಿಪರೀತವಾಗಿದ್ದು, ಪತ್ರೊಡೆ ಖಾದ್ಯ ಈ ತಿಂಗಳಿನಲ್ಲಿ ಮಾಡುವ ಪ್ರಸಿದ್ಧ ರೆಸಿಪಿಯಾಗಿದೆ. ಇದನ್ನು ಮರಕೆಸುವಿನಿಂದ ಮಾಡಲಾಗುತ್ತದೆ. ಇಂದು ಅಷ್ಟೊಂದು ಸುಲಭವಾಗಿ ಮರಕೆಸು ಸಿಗುತ್ತಿಲ್ಲ. ಆದರೆ, ಇಲ್ಲೊಬ್ಬರು ಮರಕೆಸು ಕೃಷಿ ಮೂಲಕ ಯಶಸ್ಸು ಕಂಡಿದ್ದಾರೆ.(ವರದಿ-ಹರೀಶ ಮಾಂಬಾಡಿ,ಮಂಗಳೂರು)

ಕರ್ಣಾಟಕ ಬ್ಯಾಂಕ್ ಅಧಿಕಾರಿ ವಿಶ್ವಾಸ್ ಸುಬ್ರಹ್ಮಣ್ಯ ಎಂಬುವವರು ಹವ್ಯಾಸವಾಗಿ ಮರಕೆಸು ಎಲೆ ಬೆಳೆದು ಇದೀಗ ಯಶಸ್ಸು ಕಂಡಿದ್ದಾರೆ.
ಕರ್ಣಾಟಕ ಬ್ಯಾಂಕ್ ಅಧಿಕಾರಿ ವಿಶ್ವಾಸ್ ಸುಬ್ರಹ್ಮಣ್ಯ ಎಂಬುವವರು ಹವ್ಯಾಸವಾಗಿ ಮರಕೆಸು ಎಲೆ ಬೆಳೆದು ಇದೀಗ ಯಶಸ್ಸು ಕಂಡಿದ್ದಾರೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಆಟಿ (ಆಷಾಢ) ತಿಂಗಳು ನಡೆಯುತ್ತಿದ್ದು, ಈ ಮಾಸದಲ್ಲಿ ಪ್ರತಿ ಮನೆಯಲ್ಲೂ ಪತ್ರೊಡೆಯ ಘಮ ಮೂಗಿಗೆ ಬಡಿಯುತ್ತದೆ. ಪತ್ರೊಡೆಯನ್ನು ಕೆಸುವಿನ ಎಲೆಯಿಂದ ಮಾಡಲಾಗುತ್ತದೆ. ಅದರಲ್ಲೂ ಮರ ಕೆಸುವಿಗೆ ಎಲ್ಲಿಲ್ಲದ ಬೇಡಿಕೆ. ಹಿಂದೆಲ್ಲಾ ಬಹಳ ಸುಲಭವಾಗಿ ಸಿಗುತ್ತಿದ್ದ ಮರ ಕೆಸು ಈಗ ಕಂಡುಬರುವುದಿಲ್ಲ. ಹಳ್ಳಿಯ ಜನರೂ ಕೂಡ ಹಣ ಕೊಟ್ಟು ತೆಗೆದುಕೊಳ್ಳಬೇಕಾದ ಪರಿಸ್ಥಿತಿಯಿದೆ. ಆದರೆ, ಮಂಗಳೂರಿನ ಕರ್ಣಾಟಕ ಬ್ಯಾಂಕ್ ಅಧಿಕಾರಿ ವಿಶ್ವಾಸ್ ಸುಬ್ರಹ್ಮಣ್ಯ ಎಂಬುವವರು ಹವ್ಯಾಸವಾಗಿ ಮರಕೆಸು ಎಲೆ ಬೆಳೆದು ಇದೀಗ ಯಶಸ್ಸು ಕಂಡಿದ್ದಾರೆ.

ಮೂಲತಃ ಪುತ್ತೂರು ತಾಲೂಕಿನ ಇರ್ದೆ ಬೆಟ್ಟಂಪಾಡಿಯ ಕುಕ್ಕುಪುಣಿಯವರಾದ ವಿಶ್ವಾಸ ಸುಬ್ರಹ್ಮಣ್ಯ ಕುಕ್ಕುಪುಣಿ ಅಡಿಕೆ ತೋಟ ಹೊಂದಿದ್ದಾರೆ. ಮಂಗಳೂರಿನಲ್ಲಿ ಕರ್ಣಾಟಕ ಬ್ಯಾಂಕ್ ಉದ್ಯೋಗಿಯಾಗಿರುವ ಇವರು ಪ್ರಸ್ತುತ ತಂದೆ, ತಾಯಿ, ಪತ್ನಿ ಸುಪ್ರಿಯಾ ಮತ್ತು ಪುತ್ರಿಯ ಜತೆ ಪುತ್ತೂರಿನ ನೆಹರೂ ನಗರದಲ್ಲಿ ವಾಸಿಸುತ್ತಿದ್ದು, ಮನೆಯಂಗಳದಲ್ಲಿ ಮರಕೆಸು ಕೃಷಿ ಮಾಡುತ್ತಿದ್ದಾರೆ. ತಂದೆ ವೆಂಕಟೇಶ್ವರ ಭಟ್ ಕ್ಯಾಂಪ್ಕೊ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಾಯಿ ಜಯಲಕ್ಷ್ಮೀ ವಿ. ಭಟ್ ಕೂಡ ಪದವೀದರೆಯಾಗಿದ್ದು, ಸುಪ್ರಸಿದ್ಧ ಯಕ್ಷಗಾನ ಅರ್ಥಧಾರಿಯೂ ಹೌದು.

ಬಾಲ್ಯದ ಕನಸು ನನಸು

ಚಿಕ್ಕಂದಿನಲ್ಲಿ ಅಜ್ಜನ ಮನೆಗೆ, ಚಿಕ್ಕಮ್ಮಂದಿರ ಮನೆಗೆಲ್ಲ ಹೋದಾಗ ಪತ್ರೊಡೆ ಸಹಿತ ಕೆಸುವಿನ ಖಾದ್ಯಗಳನ್ನು ತಿನ್ನುತ್ತಿದ್ದೆ. ಇದನ್ನು ಮರದ ಮೇಲಿಂದ ಕೊಯ್ಯುವುದು ತುಂಬಾನೆ ಕಷ್ಟ. ಮನೆ ಆವರಣದಲ್ಲಿ ಇದನ್ನು ಯಾಕೆ ಬೆಳೆಯುವುದಿಲ್ಲ? ಹಾಗೂ ಯಾಕೆ ಬೆಳೆಸಬಾರದು ಎಂಬ ಯೋಚನೆ ಹುಟ್ಟಿಕೊಂಡಿತ್ತು‌. ನಂತರ ಇದನ್ನು 2018 ರಿಂದ ಕೃಷಿ ಹವ್ಯಾಸವಾಗಿ ಶುರು ಮಾಡಿದೆ ಎನ್ನುತ್ತಾರೆ ವಿಶ್ವಾಸ್.

ವಿಶ್ವಾಸ ಸುಬ್ರಹ್ಮಣ್ಯ ಅವರಿಗೆ ‌ಬಾಲ್ಯದಿಂದಲೇ ಮರಕೆಸು‌ ಎಂದರೆ ತುಂಬಾ ಇಷ್ಟ. ಮರ ಕೆಸುವಿನ ಪತ್ರೊಡೆ ಹಾಗೂ ಇತರ ಪದಾರ್ಥಗಳೆಂದರೆ ವಿಶೇಷ ಪ್ರೀತಿ. ಹೀಗಾಗಿ ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಎತ್ತರದಲ್ಲಿರುವ ಮರಕೆಸು ಕೊಯ್ಯುವ ಕೆಲಸ ಸುಲಭವಲ್ಲದ ಕಾರಣ ಮನೆಯ ಆವರಣದಲ್ಲಿ ಯಾಕೆ ಬೆಳೆಯಬಾರದು ಎಂಬ ಪ್ರಶ್ನೆ ಅವರಲ್ಲಿ ಮೂಡಿತ್ತು. ಕಾಲೇಜು ಶಿಕ್ಷಣ ಮುಗಿಸಿ ಉದ್ಯೋಗ ಪಡೆದ ಬಳಿಕ ಈ ಆಸೆ ಚಿಗುರೊಡೆಯಿತು. ಮರಕೆಸು ಬೆಳೆಸುವುದನ್ನು ಪ್ರವೃತ್ತಿ ಮಾಡಿಕೊಳ್ಳುವ ಯೋಚನೆಗೆ ಬಂದರು. ಹೀಗೆ ಕಳೆದ ಆರು ವರ್ಷಗಳಿಂದ ಈ ಮರಕೆಸು ಅಥವಾ ಕಾಡುಕೆಸುವಿನ ಯಶಸ್ವಿ ಕೃಷಿಕನಾಗಿ ಅವರು ಗುರುತಿಸಿಕೊಂಡಿದ್ದಾರೆ. ಕೃಷಿಕರ ವಲಯದಲ್ಲಿ ಕರಾವಳಿ ಮಲೆನಾಡಿನ ಸುತ್ತಲೆಲ್ಲಾ ಅವರು ಗಮನ ಸೆಳೆದಿದ್ದಾರೆ. ಹೂಕುಂಡದಲ್ಲಿ, ಬುಟ್ಟಿಯಲ್ಲಿ ಮರದ ಫೀಟ್‍ನಲ್ಲಿ ಮರಕೆಸುವನ್ನು ಅವರು ಬೆಳೆಸುವ ವೈಖರಿಗೆ ಎಲ್ಲರೂ ಬೆರಗಾಗಿದ್ದಾರೆ. ಇದನ್ನು ಮಾರಾಟದ ದೃಷ್ಟಿಯಿಂದ ಅವರು ಮಾಡುತ್ತಿಲ್ಲ. ಮಾರಾಟ ಮಾಡುವ ಮನಸ್ಸೂ ಅವರಿಗಿಲ್ಲ, ಕೇವಲ ಹವ್ಯಾಸವಾಗಿಯಷ್ಟೇ ಬೆಳೆಯುತ್ತಿದ್ದಾರೆ.

ಮರಕೆಸುವನ್ನು ಹೇಗೆ ಬೆಳೆಸುತ್ತಾರೆ?

ಮರ ಕೆಸು ಬೆಳೆಯಲು ವಿಶ್ವಾಸ್ ಅವರು ಕೋಕೋ ಫೀಟ್ ಮತ್ತು ಮರದ ತುಂಡುಗಳನ್ನು ಬಳಕೆ ಮಾಡಿದ್ದಾರೆ. ಒಂದರಿಂದ ಒಂದೂವರೆ ವರ್ಷಗಳ ಕಾಲ ಮಳೆಗೆ ಒಡ್ಡಿಕೊಂಡ ಮರದ ತುಂಡುಗಳನ್ನು, ಮರದ ಹುಡಿಯನ್ನು ತೆಂಗಿನಕಾಯಿ ಸಿಪ್ಪೆಯ ನಾರನ್ನು, ಒಣಗಿದ ಸೆಗಣಿಯನ್ನು ಬಳಕೆ ಮಾಡಬಹುದು. ಮರದ ಹುಡಿ ಒಣಗಿದ ಸೆಗಣಿಯನ್ನು ವಿಶ್ವಾಸ್ ಬಳಕೆ ಮಾಡಿದ್ದಾರೆ.

ಮರಕೆಸು ಮಳೆಗಾಲದಲ್ಲಿ ಬೆಳೆಯುವ ಎಲೆ. ಹಾಗಾಗಿ ಮೇ ತಿಂಗಳಿನಲ್ಲಿ ನಾಟಿ ಮಾಡಿದರೆ, ಜೂನ್ ತಿಂಗಳಿನಲ್ಲಿ ಚಿಗುರಿ ಜುಲೈ ತಿಂಗಳಿನಲ್ಲಿ ಎಲೆ ಕೊಯ್ಯಲು ಸಿಗುತ್ತದೆ. ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತನಕ ಆರೇಳು ಸಲ ಕೆಸುವಿನ ಎಲೆ ಬಳಕೆಗೆ ಸಿಗುತ್ತದೆ. ಅಕ್ಟೋಬರ್‍ ನಲ್ಲಿ ಎಲೆ ಒಣಗುತ್ತದೆ. ನಂತರ ಗಡ್ಡೆಯನ್ನು ಸಂಗ್ರಹ ಮಾಡಿಟ್ಟುಕೊಂಡು ಮುಂದಿನ ಮಳೆಗಾಲಕ್ಕೆ ಅವಶ್ಯಕತೆಯಷ್ಟು ವೃದ್ಧಿಸಿ ಕೊಳ್ಳಬಹುದು. ಇದಕ್ಕೆ ರೋಗ ಬಾಧೆ ಕಡಿಮೆ. ಮಳೆ ಅತಿಯಾದರೆ ಛಾವಣಿಯ ಅವಲಂಬನೆ ಅಗತ್ಯ. ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಮಾಡಬಹುದಾಗಿದೆ ಎನ್ನುತ್ತಾರೆ ವಿಶ್ವಾಸ್.

ಆಯುರ್ವೇದ ಪ್ರಕಾರ ಮರ ಕೆಸು ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಆಷಾಡ ಅಥವಾ ಆಟಿ ತಿಂಗಳಿನಲ್ಲಿ ಪತ್ರೊಡೆ ಸಹಿತ ಇದರ ಖಾದ್ಯಗಳ ಬಳಕೆ ಹೆಚ್ಚು. ಕೆಸುವಿನ ಎಲೆಯಂತೆ ದಂಟು ಕೂಡ ಖಾದ್ಯಗಳಿಗೆ ಬಳಕೆಯಾಗುತ್ತದೆ. ಇದರ ದಂಟಿನ ಪಲ್ಯವನ್ನು ಮಾಡಿ ಸವಿಯಲಾಗುತ್ತದೆ.

ಮರಕೆಸು ಮಾತ್ರವಲ್ಲ ಜೇನುಕೃಷಿಕನೂ ಹೌದು

ಕೆಸುವಿನ ಜತೆ ಮುಜಂಟಿ ಜೇನು ಕೃಷಿ ಕೂಡ ಇವರ ಹವ್ಯಾಸವಾಗಿದೆ. ಮುಜಂಟಿ ಜೇನು ಔಷಧಿಯಾಗಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಇತರ ಜೇನ್ನೋಣಗಳಂತೆ ದೊಡ್ಡ ನೊಣಗಳಲ್ಲ, ಇವು ಪುಟ್ಟ ನೊಣಗಳು. ಹಿಂದೆ ಬಿದಿರಿನ, ಅಡಕೆ ಮರದ ದಂಬೆಗಳನ್ನು ಮುಜಂಟಿ ಜೇನುಕೃಷಿಗೆ ಬಳಕೆ ಮಾಡುತ್ತಿದ್ದರು‌. ವಿಶ್ವಾಸ ಅವರು ಮರದ ಪೆಟ್ಟಿಗೆ ಹಾಗೂ ಕೊಳವೆ ಮಾದರಿಯನ್ನು ಬಳಕೆ ಮಾಡುತ್ತಾರೆ‌.

(ವರದಿ-ಹರೀಶ ಮಾಂಬಾಡಿ, ಮಂಗಳೂರು)