LPG Subsidy: ಎಲ್‌ಪಿಜಿ ಸಬ್ಸಿಡಿ ಮತ್ತು ಗ್ಯಾಸ್ ಸಂಪರ್ಕಕ್ಕೆ ಇ-ಕೆವೈಸಿ: ಏಜನ್ಸಿಗಳ ಮುಂದೆ ಗ್ರಾಹಕರ ಸಾಲು; ಏನಿದು ಗೊಂದಲ
ಕನ್ನಡ ಸುದ್ದಿ  /  ಕರ್ನಾಟಕ  /  Lpg Subsidy: ಎಲ್‌ಪಿಜಿ ಸಬ್ಸಿಡಿ ಮತ್ತು ಗ್ಯಾಸ್ ಸಂಪರ್ಕಕ್ಕೆ ಇ-ಕೆವೈಸಿ: ಏಜನ್ಸಿಗಳ ಮುಂದೆ ಗ್ರಾಹಕರ ಸಾಲು; ಏನಿದು ಗೊಂದಲ

LPG Subsidy: ಎಲ್‌ಪಿಜಿ ಸಬ್ಸಿಡಿ ಮತ್ತು ಗ್ಯಾಸ್ ಸಂಪರ್ಕಕ್ಕೆ ಇ-ಕೆವೈಸಿ: ಏಜನ್ಸಿಗಳ ಮುಂದೆ ಗ್ರಾಹಕರ ಸಾಲು; ಏನಿದು ಗೊಂದಲ

ಎಲ್‌ಪಿಜಿ ಗೃಹಬಳಕೆ ಸಂಪರ್ಕ ಪಡೆದವರು ಇ-ಕೆವೈಸಿ ಮಾಡಿಸಬೇಕು ಎಂಬ ಸಂದೇಶ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹರಿದಾಡುತ್ತಿದ್ದು, ಗ್ರಾಹಕರಲ್ಲಿ ಗೊಂದಲ ಉಂಟಾಗಿದೆ. ಈ ಕುರಿತು ಏಜೆನ್ಸಿ ಮೂಲಗಳು ನೀಡಿರುವ ಸ್ಪಷ್ಟೀಕರಣ ಹೀಗಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎಲ್‌ಪಿಜಿ ಸಬ್ಸಿಡಿ ಮತ್ತು ಗ್ಯಾಸ್ ಸಂಪರ್ಕಕ್ಕೆ ಇ-ಕೆವೈಸಿ ಮಾಡಿಸಲು ಏಜನ್ಸಿಗಳ ಮುಂದೆ ಗ್ರಾಹಕರು ಸಾಲು ನಿಂತ ಪ್ರಸಂಗ ನಡೆಯಿತು. ಈ ಕುರಿತು ಅನೇಕರಲ್ಲಿ ಗೊಂದಲವೂ ಉಂಟಾಗಿತ್ತು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎಲ್‌ಪಿಜಿ ಸಬ್ಸಿಡಿ ಮತ್ತು ಗ್ಯಾಸ್ ಸಂಪರ್ಕಕ್ಕೆ ಇ-ಕೆವೈಸಿ ಮಾಡಿಸಲು ಏಜನ್ಸಿಗಳ ಮುಂದೆ ಗ್ರಾಹಕರು ಸಾಲು ನಿಂತ ಪ್ರಸಂಗ ನಡೆಯಿತು. ಈ ಕುರಿತು ಅನೇಕರಲ್ಲಿ ಗೊಂದಲವೂ ಉಂಟಾಗಿತ್ತು.

ಮಂಗಳೂರು/ಉಡುಪಿ: ಗೃಹಬಳಕೆ ಅನಿಲ ಸಂಪರ್ಕ ಪಡೆದವರು ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎನ್ನುವ ಮಾಹಿತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಅಡುಗೆ ಅನಿಲ ಏಜನ್ಸಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಲ್ಲುವ ದೃಶ್ಯ ಇದೀಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಡುಬರುತ್ತಿದೆ.

ಆಧಾರ್ ಲಿಂಕ್ ಮಾಡಿಸಲು ಸೂಚನೆ ಬಂದಿದೆ. ಹೀಗಾಗಿ ಇ-ಕೆವೈಸಿ ಮಾಡುತ್ತಿದ್ದೇವೆ. ಡಿಸೆಂಬರ್ 31ರೊಳಗೆ ಮುಗಿಸುವ ಯಾವುದೇ ಗಡುವು ನೀಡಿಲ್ಲ. ಇದಕ್ಕೂ ಸಬ್ಸಿಡಿ ವಿಚಾರಕ್ಕೂ ಸಂಬಂಧ ಇರುವ ಕುರಿತು ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಗ್ರಾಹಕರು ಗಲಿಬಿಲಿಗೊಳಗಾಗುವ ಅಗತ್ಯವಿಲ್ಲ ಎಂದು ಅಡುಗೆ ಅನಿಲ ವಿತರಕರು ಸಾರಿ ಹೇಳುತ್ತಿದ್ದರೂ ಗ್ರಾಹಕರು ಕೇಳುತ್ತಿಲ್ಲ.

ಆಧಾರ್ ದೃಢೀಕರಣವು ಉಜ್ವಲ ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಮಾತ್ರವಷ್ಟೇ ಕಡ್ಡಾಯ. ಉಳಿದ ಬಳಕೆದಾರರಿಗೆ ಗ್ಯಾಸ್ ಸಬ್ಸಿಡಿಯ ಕುರಿತು ಪ್ರಸ್ತುತ ಯಾವುದೇ ಘೋಷಣೆ ಆಗಿರುವುದಿಲ್ಲ. ಹೆಚ್ಚುವರಿ ಸಂಪರ್ಕ ಗುರುತಿಸುವ ಸಲುವಾಗಿ ಕೆವೈಸಿ ಮಾಡಲಾಗುತ್ತಿದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ಹರಿದಾಡುತ್ತಿರುವ ಸಂದೇಶ ಹೀಗಿದೆ: ಗ್ಯಾಸ್ ಸಂಪರ್ಕ ಇರುವವರು ಡಿಸೆಂಬರ್ 31ರೊಳಗೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕ, ಗ್ಯಾಸ್ ಏಜನ್ಸಿ ನೀಡಿರುವ ಪುಸ್ತಕ ಅಥವಾ ಕಾರ್ಡ್ ಜೊತೆ ಏಜನ್ಸಿ ಕಚೇರಿಗೆ ಭೇಟಿ ನೀಡಿ, ಕೆವೈಸಿ ಮಾಡಿಸಬೇಕು. ಕೆವೈಸಿ ಮಾಡಿಸಿದರೆ, ಜನರಿ 1ರಿಂದ ಸಬ್ಸಿಡಿ ಬರುತ್ತದೆ. ಈಗ ಇರುವ ಸಿಲಿಂಡರ್ ಗೆ 903 ರೂ ಇದ್ದು, ಸಬ್ಸಿಡಿಯ ಬಳಿಕ 500 ರೂಗಳಿಗೆ ದೊರಕುತ್ತದೆ. ಕೆವೈಸಿ ಮಾಡದೇ ಇದ್ದರೆ, ಸಬ್ಸಿಡಿರಹಿತವಾಗಿ ಗ್ಯಾಸ್ ಸಂಪರ್ಕವು ಕಮರ್ಷಿಯಲ್ ಆಗಿ ಮಾರ್ಪಾಡಾಗುತ್ತದೆ. ಆಗ ಗ್ಯಾಸ್ ಗೆ 1,400 ರೂ ಕೊಡಬೇಕು ಎಂಬ ಸಂದೇಶ ಹರಿದಾಡುತ್ತಿದೆ.

ಇದೊಂದು ಸುಳ್ಳು ಸಂದೇಶ. ಮೊಬೈಲ್ ಜಾಲತಾಣದಲ್ಲಿ ಕಳೆದೊಂದು ವಾರದಿಂದ ಸಿಕ್ಕಾಪಟ್ಟೆ ಓಡಾಡುತ್ತಿದೆ. ಸಹಜವಾಗಿಯೇ ಗ್ರಾಹಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಯಾರು ಹೇಳಿದ್ದನ್ನೂ ನಂಬುವ ಸ್ಥಿತಿಯಲ್ಲಿಲ್ಲ. ನೇರವಾಗಿ ಗ್ಯಾಸ್ ಏಜನ್ಸಿಗಳ ಮುಂದೆ ಬಂದು ಕೂಡಲೇ ಮಾಡಿಕೊಡಿ ಎಂದು ಎಡತಾಕುತ್ತಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉಜ್ವಲ ಗ್ಯಾಸ್ ಸಂಪರ್ಕಕ್ಕೆ ಸಂಬಂಧಿಸಿದಂತೆ 70 ಸಾವಿರದಷ್ಟು ಫಲಾನುಭವಿಗಳು ಇದ್ದಾರೆ. ಅವರಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಉಳಿದಂತೆ ಆಧಾರ್ ಒದಗಿಸಿದ ಫಲಾನುಭವಿಗಳಿಂದ ಬಯೋಮೆಟ್ರಿಕ್ ಪಡೆದುಕೊಳ್ಳಬೇಕಾಗುತ್ತದೆ ಎಂದು ಉಜ್ವಲ ಯೋಜನೆ ನೋಡಲ್ ಅಧಿಕಾರಿ ತಿಳಿಸಿದ್ದಾರೆ.

ಆಧಾರ್ ದೃಢೀಕರಣವನ್ನು ಉಜ್ವಲ ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಮಾತ್ರ ಕಡ್ಡಾಯ ಮಾಡಲಾಗಿದ್ದು, ಉಳಿದ ಬಳಕೆದಾರರಿಗೆ ಗ್ಯಾಸ್ ಸಬ್ಸಿಡಿ ಕುರಿತು ಪ್ರಸ್ತುತ ಯಾವುದೇ ಘೋಷಣೆ ಆಗಿಲ್ಲ. ಗ್ಯಾಸ್ ಬಳಕೆದಾರರು ಗೊಂದಲಕ್ಕೆ ಒಳಗಾಗಬಾರದು, ಮೊದಲ ಆದ್ಯತೆಯನ್ನು ಉಜ್ವಲ ಬಳಕೆದಾರರಿಗೆ ನೀಡಿ ಎಂದು ಸಾರಿ ಹೇಳಲಾಗುತ್ತಿದೆ.

ಉಜ್ವಲ ಫಲಾನುಭವಿಗಳಿಗೆ ಸಿಲಿಂಡರಿಗೆ 300 ರೂ ಸಹಾಯಧನ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೆವೈಸಿ ಮಾಡಲಾಗುತ್ತಿದೆ. ಉಜ್ವಲ ಯೋಜನೆ ಫಲಾನುಭವಿಗಳನ್ನು ಗೊಂದಲಕ್ಕೆ ಕೆಡಹಲು ಹಾಗೂ ಇದರ ಮೂಲಕ ಯಾವುದಾದರೂ ದುಷ್ಪ್ರಯೋಜನ ಪಡೆಯಲು ಈ ರೀತಿಯಾಗಿ ಗೊಂದಲ ಸೃಷ್ಟಿಯನ್ನು ಯಾರಾದರು ಮಾಡಿರಬಹುದೇ ಎಂಬ ಸಂಶಯವೂ ವ್ಯಕ್ತವಾಗಿದೆ.

Whats_app_banner