Dakshina Kannada: ನಿಮ್ಮ ಮಕ್ಕಳಿಗೆ ಹೀಗಾಗಿದ್ರೆ ಬಿಡ್ತಿದ್ರಾ? 5, 8, 9ನೇ ತರಗತಿ ಪರೀಕ್ಷಾ ರದ್ದು ಪ್ರಕ್ರಿಯೆಗೆ ಪೋಷಕರ ಪ್ರಶ್ನೆ
ಕರ್ನಾಟಕ ಬೋರ್ಡ್ ಪರೀಕ್ಷೆ ಕುರಿತಾದ ಕರ್ನಾಟಕ ಹೈಕೋರ್ಟ್ ತೀರ್ಪು ಕುರಿತು ನಿರೀಕ್ಷೆ ಹೆಚ್ಚಾಗಿದೆ. ಈ ನಡುವೆ ಮಕ್ಕಳು ಮತ್ತು ಪೋಷಕರು ಪರೀಕ್ಷೆ ಗೊಂದಲದಲ್ಳೇ ಮುಂದುವರೆದಿದ್ದಾರೆ. ಪರೀಕ್ಷೆ ಕುರಿತು ಇನ್ನೂ ಗೊಂದಲ ಇರುವುದು ಪೋಷಕರಿಗೆ ತಲೆನೋವಾಗಿದೆ. ದಕ್ಷಿಣ ಕನ್ನಡದಲ್ಲಿ ವಿದ್ಯಾರ್ಥಿಗಳ ಪೋಷಕರು ತಮ್ಮ ಸಮಸ್ಯೆಗಳ ಕುರಿತು ಹೇಳಿಕೊಂಡಿದ್ದಾರೆ.
ಮಂಗಳೂರು: ಪರೀಕ್ಷೆ ಆರಂಭಗೊಳ್ಳುವ ಮೊದಲೇ ಈ ಪ್ರಕ್ರಿಯೆಗಳು ನಡೆಯಬೇಕಿತ್ತು. ಕೋರ್ಟಿಗೆ ಹೋಗುವುದು ಹಾಗೂ ಅಲ್ಲಿಯ ಪ್ರಕ್ರಿಯೆಗಳು ಈಗ ನಡೆಯುತ್ತಿರುವುದರಿಂದ ಶಿಕ್ಷಣ ಸಂಸ್ಥೆಗಳಿಗೂ ತೊಂದರೆ ಇಲ್ಲ, ಶಾಲೆಗಳಿಗೂ ನಷ್ಟವಿಲ್ಲ. ಸಮಸ್ಯೆ ಉಂಟಾಗುವುದು ಮಕ್ಕಳಿಗೆ ಹಾಗೂ ಅವರ ಹೆತ್ತವರಿಗೆ. ಪ್ರತಿದಿನ ಮನೆಯಲ್ಲಿ ಮಕ್ಕಳು ಅಪ್ಪಾ, ನನ್ನ ಪರೀಕ್ಷೆ ಯಾವಾಗ ಎಂದು ಕೇಳುವಾಗ ಉತ್ತರಿಸಲು ಅಸಾಧ್ಯವಾಗುತ್ತದೆ. ನನ್ನ ಪರಿಚಯದ ಮಕ್ಕಳು ಮಾನಸಿಕವಾಗಿ ಕುಸಿದುಹೋಗಿದ್ದಾರೆ. ನಿಮ್ಮ ಮಕ್ಕಳಿಗೆ ಹೀಗಾದರೆ ಬಿಡ್ತಿದ್ರಾ?
ಹೀಗೆಂದು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತನ್ನ ಮಗನ ಸ್ಥಿತಿ ಹಾಗೂ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಮಾತನಾಡಿದವರು ಯಾಸೀರ್. ಇಂಥದ್ದನ್ನೆಲ್ಲಾ ಶೈಕ್ಷಣಿಕ ವರ್ಷ ಆರಂಭದಲ್ಲೇ ಮುಗಿಸಿಬಿಡಬೇಕು. ಅಕ್ಟೋಬರ್ ನಂತರ ಪರೀಕ್ಷೆಯ ಕಡೆಗೆ ಗಮನಹರಿಸಬೇಕು ಎಂದರು.
ಸನಿವಾಸ ಶಾಲೆಗಳ ಸಮಸ್ಯೆ ಇನ್ನೊಂದು
ಬೇಸಗೆಯಲ್ಲಿ ನೀರಿನ ಸಮಸ್ಯೆ ಶುರುವಾಗಿದೆ. ಹಲವು ಸನಿವಾಸ ಶಾಲೆಗಳು ಕಾರ್ಯಾಚರಿಸುತ್ತಿವೆ. ಹಾಸ್ಟೆಲ್‌ನಲ್ಲಿ ಇದ್ದುಕೊಂಡು, ಅಲ್ಲೇ ಕ್ಯಾಂಪಸ್‌ನಲ್ಲಿರುವ ಶಾಲೆಗೆ ಹೋಗುವ ಶಾಲೆಗಳಿರುವ ಜಾಗದಲ್ಲೀಗ ನೀರಿನ ಸಮಸ್ಯೆ ಉದ್ಭವವಾಗಿವೆ. ಬೇರೆ ದಿನಗಳಾದರೆ ಊರಿಗೆ ಹೋಗುತ್ತಿದ್ದ ಮಕ್ಕಳು ಪರೀಕ್ಷೆ ಯಾವಾಗ ಎಂಬುದು ಇನ್ನೂ ನಿರ್ಧಾರವಾಗದ ಕಾರಣ, ಅಲ್ಲೇ ಉಳಿಯಬೇಕಾದ ಸ್ಥಿತಿ. ವಿಪರೀತ ನೀರಿನ ಸಮಸ್ಯೆ ಇದೆ. ಇದೀಗ ಎಲ್ಲವೂ ಅನಿಶ್ಚಿತ. ಸುಪ್ರೀಂ ಕೋರ್ಟ್ ಸಹ ಪರೀಕ್ಷೆ ರದ್ದು ಮಾಡಬಾರದಿತ್ತು. ಪಬ್ಲಿಕ್ ಪರೀಕ್ಷೆ ಎಂಬ ಹಣೆ ಪಟ್ಟಿಯನ್ನು ತೆಗೆದಿದ್ದರೆ ಸಾಕಿತ್ತು ಎಂದು ಸನಿವಾಸ ಶಾಲೆಯ ಮಕ್ಕಳ ಪೋಷಕರಾದ ಉಡುಪಿಯ ರಾಜೇಂದ್ರ ಹೇಳಿದ್ದಾರೆ.
ಮಕ್ಕಳ ಮನಸ್ಸು ಏನಾಗಬೇಡ?
ಈ ಕುರಿತು ಮಾತನಾಡಿದ ಐದನೇ ತರಗತಿಯ ಬಾಲಕನ ತಂದೆಯೂ ಆಗಿರುವ ಕೃಷಿಕ ಹಾಗೂ ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ, ಮನೆಯಲ್ಲಿ ಮಕ್ಕಳು ಪರೀಕ್ಷೆ ಯಾವಾಗ ನಡೆಯುತ್ತದೆ ಎಂಬುದೂ ಗೊತ್ತಿಲ್ಲದ ಅತಂತ್ರ ಸ್ಥಿತಿಯಲ್ಲಿರುವುದನ್ನು ನೋಡಿದಾಗ ಬೇಸರವಾಗುತ್ತದೆ. ಮಕ್ಕಳ ಮನಸ್ಸು ಏನಾಗಬೇಡ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | Heat Wave: ಕರ್ನಾಟಕ ಸೇರಿ 5 ರಾಜ್ಯಗಳಿಗೆ ಏಪ್ರಿಲ್‌ನಲ್ಲಿ ಶಾಖದ ಅಲೆಗಳ ಆಘಾತ, ಏನಿದು ಶಾಖದ ಅಲೆಗಳು, ಎಲ್ಲೆಲ್ಲಿ ಪರಿಣಾಮ
"ಇದು ಮಕ್ಕಳ ಓದಿನ ಜೊತೆ ಆಟ. ಯಾಕೆ ಎಲ್ಲರಿಗೂ ಶಿಕ್ಷಣ ಕ್ಷೇತ್ರದ ಮೇಲೆಯೇ ಕಣ್ಣು? ಆಡಳಿತಕ್ಕೆ, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸ್ವಲ್ಪವಾದರೂ ಕಾಳಜಿ ಉಂಟಾ? ಎಲ್ಲರಿಗೂ, ಒಮ್ಮೆ ಪರೀಕ್ಷೆ ಉಂಟು-ಇಲ್ಲ, ಉಂಟು-ಇಲ್ಲ, ಮುಂದೂಡಿಕೆ ಎಂಬ ಗೊಂದಲ. ಈಗ ಯಾವ ರೋಷ, ಆವೇಶ ಇಲ್ಲ. ಏಕೆಂದರೆ ಇದರಲ್ಲಿ ಯಾರಿಗೂ ಮೈಲೇಜು ಇಲ್ಲ. ಸಂಕಷ್ಟ ಮಕ್ಕಳಿಗಲ್ವಾ?" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲೂ ಅನಿಸಿಕೆ ಹಂಚಿಕೊಂಡಿದ್ದಾರೆ.
ಧೂಳು, ಸೆಖೆಯೊಂದಿಗೆ ಟೆನ್ಶನ್
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸೆಖೆ ಎಂದರೆ ಸ್ನಾನ ಮಾಡಿದಂತೆ ಬೆವರು. ಇಂಥ ಸನ್ನಿವೇಶದಲ್ಲಿ ಒಮ್ಮೆ ಪರೀಕ್ಷೆ ಮುಗಿಸಿ, ಮನೆ ಸೇರಿಕೊಂಡರೆ ಸಾಕು ಎಂಬ ಪರಿಸ್ಥಿತಿ ಇರುತ್ತದೆ. ಇಂಥ ಸನ್ನಿವೇಶದಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿಯುವ ಬಡ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಧೂಳು, ಸೆಖೆಯೊಂದಿಗೆ ಈ ಮಕ್ಕಳಿಗೆ ಪರೀಕ್ಷೆ ಯಾವಾಗ ಇರುತ್ತೆ ಎಂಬ ಟೆನ್ಶನ್. ಹಾಸ್ಟೆಲ್‌ನಲ್ಲೂ ನೀರು ಸರಿಯಾಗಿ ಇರುವುದಿಲ್ಲ. ಶಾಲೆಗೆ ಬಂದರೆ ಇವತ್ತು ಪರೀಕ್ಷೆ ಇಲ್ಲ ಎನ್ನುತ್ತಾರೆ. ಊರಿಗೆ ಹೋಗಲೂ ಗೊತ್ತಿಲ್ಲ. ಅಸಲಿಗೆ, ಪರೀಕ್ಷೆ ನಡೆಯುತ್ತಾ, ಇಲ್ಲವಾ ಎಂಬುದೂ ಗೊತ್ತಿಲ್ಲ. ಒಂಥರಾ ಅತಂತ್ರ ಸನ್ನಿವೇಶ.