ಕನ್ನಡ ಸುದ್ದಿ  /  Karnataka  /  Mangaluru News Election Duty Personnel Attempted Suicide In The Premises Of The District Collectors Office Hsm

Mangaluru News: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಚುನಾವಣಾ ಕರ್ತವ್ಯ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ; ಮಂಗಳೂರಿನಲ್ಲಿ ಘಟನೆ

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಚುನಾವಣಾ ಕರ್ತವ್ಯ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ ಜಿಲ್ಲೆಯಲ್ಲಿ 41,93,093 ರೂ ಮೌಲ್ಯದ 12,849 ಲೀಟರ್ ಮದ್ಯ ಹಾಗೂ 8,69,950ರೂ. ಮೌಲ್ಯದ 15.5 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. (ವರದಿ: ಹರೀಶ್‌ ಮಾಂಬಾಡಿ, ಮಂಗಳೂರು)

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಚುನಾವಣಾ ಕರ್ತವ್ಯ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ; ಮಂಗಳೂರಿನಲ್ಲಿ ಘಟನೆ
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಚುನಾವಣಾ ಕರ್ತವ್ಯ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ; ಮಂಗಳೂರಿನಲ್ಲಿ ಘಟನೆ

ಮಂಗಳೂರು: ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಕಾರಣಗಳ ಹಿನ್ನೆಲೆ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಏಪ್ರಿಲ್‌ 2ರ ಮಂಗಳವಾರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದಿದೆ. ಕೂಡಲೇ ಅವರನ್ನು ನಗರದ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.

ಶ್ರೀಧರ್ ಹೆಗಡೆ ಆತ್ಮಹತ್ಯೆಗೆ ಯತ್ನಿಸಿದವರು. ನಗರದ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿರುವ ಏಕಗವಾಕ್ಷಿ ಪದ್ದತಿ ತಂಡದ ಸದಸ್ಯರಾಗಿದ್ದರು. 2019ರಿಂದ ಬೆಳ್ತಂಗಡಿಯ ಕಡಿರುದ್ಯಾವರ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರ ಜಾಗಕ್ಕೆ ಮತ್ತೊಬ್ಬರು ವರ್ಗಾವಣೆಯಾದ ಹಿನ್ನಲೆಯಲ್ಲಿ ಕಳೆದ ಫೆಬ್ರವರಿ ಹಾಗೂ ಮಾರ್ಚ್‌ನಿಂದ ಸ್ಥಳ ನಿರೀಕ್ಷಣೆಯಲ್ಲಿದ್ದರು.

ವೆನ್‌ಲಾಕ್‌ ಆಸ್ಪತ್ರೆಯ ವೈದ್ಯರು ಇವರಿಗೆ ಚಿಕಿತ್ಸೆ ನೀಡಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ನಿಗಾ ವಹಿಸಲು ಇವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ.

ಇವರ ಪತ್ನಿ ಜಯಂತಿ ಸ್ಟಾಫ್ ನರ್ಸ್ ಆಗಿ ಬೆಳ್ತಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮಯ್ಯ, ಜಿಲ್ಲಾ ಪಂಚಾಯತ್‌ನ ಲೆಕ್ಕಾಧೀಕ್ಷ ಬಾಲು ಡಿ.ಎಂ. ಸೇರಿದಂತೆ ಹಲವು ಅಧಿಕಾರಿಗಳು, ಸಿಬ್ಬಂದಿ ಆಸ್ಪತ್ರೆಯಲ್ಲಿದ್ದು, ಅವರ ಚಿಕಿತ್ಸೆಗೆ ನೆರವಾಗಿದ್ದಾರೆ.

12,849 ಲೀಟರ್ ಮದ್ಯ ವಶಕ್ಕೆ

2024ರ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಏಪ್ರಿಲ್ 2ರವರೆಗೆ ಜಿಲ್ಲೆಯಲ್ಲಿ 41,93,093 ರೂಪಾಯಿ ಮೌಲ್ಯದ 12,849 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ ಹಾಗೂ 8,69,950ರೂ. ಮೌಲ್ಯದ 15.5 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ನಿಯಮ ಉಲ್ಲಂಘನೆ ಹಾಗೂ ಇತರೆ ಸೇರಿದಂತೆ ಒಟ್ಟು 257 ಎಫ್‌ಐಆರ್ ಪ್ರಕರಣ ದಾಖಲಾಗಿದೆ. ದೂರವಾಣಿ ಮೂಲಕ (1950) 149 ಸಾರ್ವಜನಿಕರಿಂದ ಮಾಹಿತಿ ಕೋರಿಕೆಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿದೆ. ಸಿ-ವಿಸಿಲ್ ಆಪ್ ಮೂಲಕ ಇಲ್ಲಿಯವರೆಗೆ 54 ದೂರುಗಳು ಸ್ವೀಕೃತಗೊಂಡಿದ್ದು ಎಲ್ಲಾ ದೂರುಗಳನ್ನು ವಿಲೇವಾರಿ ಮಾಡಲಾಗಿರುತ್ತದೆ. ಎನ್.ಜಿ.ಆರ್.ಎಸ್ ಪೋರ್ಟಲ್ (ರಾಷ್ಟ್ರೀಯ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ) ಮೂಲಕ ಜಿಲ್ಲೆಯಲ್ಲಿ ಒಟ್ಟು 85 ದೂರುಗಳು ಸ್ವೀಕೃತಗೊಂಡಿದ್ದು, 84 ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಭಾಗ