ದಕ್ಷಿಣ ಕನ್ನಡ ಉಡುಪಿಯ ಕೆಲ ತಾಲೂಕು ಪಂಚಾಯಿತಿಗಳಲ್ಲಿ ಇಒಗಳಿಗೆ ಪ್ರಭಾರಿ ಹೊಣೆ, ಯಾರಿಗೆ ಎಲ್ಲಿ ಪ್ರಭಾರ ಇಲ್ಲಿದೆ ವಿವರ
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಹೊಣೆಗಾರಿಕೆಯನ್ನು ನಿಭಾಯಿಸಬೇಕಾದ ಸ್ಥಿತಿ ಪಕ್ಕದ ತಾಲೂಕುಗಳ ಕಾರ್ಯನಿರ್ವಹಣಾಧಿಕಾರಿಗಳ ಹೆಗಲೇರಿದೆ. ಯಾರಿಗೆ ಯಾವ ತಾಲೂಕು ಹೊಣೆಗಾರಿಕೆ, ಇಲ್ಲಿದೆ ಸಂಪೂರ್ಣ ವಿವರ.

ಮಂಗಳೂರು/ಉಡುಪಿ: ಸರಕಾರವು ತಾಲೂಕುಗಳನ್ನು ಹೆಚ್ಚು ಮಾಡಿದಂತೆ ತಾ.ಪಂ.ಗಳಿಗೆ ಕಾರ್ಯನಿರ್ವಹಣಾಧಿಕಾರಿ(ಇಒ)ಗಳನ್ನು ನಿಯೋಜನೆ ಮಾಡದಿರುವ ಹಿನ್ನೆಲೆಯಲ್ಲಿ ಇರುವ ಕಾರ್ಯನಿರ್ವಹಣಾಧಿಕಾರಿಗಳು ಕಳೆದ ಎರಡು, ಮೂರು ತಿಂಗಳುಗಳಿಂದ 2-3 ತಾಲೂಕುಗಳ ಜವಾಬ್ದಾರಿ ಹೊರಬೇಕಾದ ಸ್ಥಿತಿ ಇದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಈಗ ಪ್ರಭಾರ ಹೊಣೆಗಾರಿಕೆಯನ್ನು ಪಕ್ಕದ ತಾಲೂಕುಗಳ ಇಒಗಳು ಹೊತ್ತಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಈಗ ಕರ್ತವ್ಯ ನಿರ್ವಹಿಸುತ್ತಿರುವವರು ಯಾರು?
ದಕ್ಷಿಣ ಕನ್ನಡ: ಸುಳ್ಯ, ಬಂಟ್ವಾಳ, ತಾ.ಪಂ ಇಒ ಆಗಿ ರಾಜಣ್ಣ ಕರ್ತವ್ಯ ನಿರ್ವಹಿಸುತ್ತಿದ್ದರೆ, ಉಳ್ಳಾಲವನ್ನು ಸ್ಥಳೀಯ ಅನ್ಯ ಇಲಾಖೆ ಅಧಿಕಾರಿಯೊಬ್ಬರು ಹೆಚ್ಚುವರಿ ಹೊಣೆಗಾರಿಕೆಯಲ್ಲಿ ನಿರ್ವಹಿಸುತ್ತಿದ್ದಾರೆ. ಮಂಗಳೂರು ತಾ.ಪಂಗೆ ಮಹೇಶ್ ಹೊಳ್ಳ, ಬೆಳ್ತಂಗಡಿ, ಮೂಡಬಿದಿರೆ ತಾ.ಪಂ.ಕುಸುಮಾಧರ ಬಿ., ಪುತ್ತೂರು, ತಾ.ಪಂ.ನವೀನ್‌ಕುಮಾರ್ ಭಂಡಾರಿ ಎಚ್., ಮೂಲ್ಕಿ ತಾ.ಪಂ.- ಬೇರೆ ಇಲಾಖೆಯಿಂದ ಜವಾಬ್ದಾರಿ, ಕಡಬಕ್ಕೆ ಭವಾನಿಶಂಕರ್ ಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉಡುಪಿ ಜಿಲ್ಲೆ: ಹೆಬ್ರಿ ತಾ.ಪಂ ಮತ್ತು ಕುಂದಾಪುರಕ್ಕೆ ಶಶಿಧರ್, ಉಡುಪಿ, ಕಾಪು ತಾ.ಪಂಗಳಿಗೆ.-ವಿಜಯ, ಕಾರ್ಕಳ ತಾ.ಪಂ.-ಗುರುದತ್ ಎಂ.ಎನ್., ಕುಂದಾಪುರ, ಬೈಂದೂರು ತಾ.ಪಂ.-ಭಾರತಿ, ಬ್ರಹ್ಮಾವರ ತಾ.ಪಂ.-ಇಬ್ರಾಹಿಂ ಪುರ.
ಗ್ರಾಮೀಣ ಅಭಿವೃದ್ಧಿ ಕಾರ್ಯಗಳಿಗೆ ಹೊಡೆತ
ಇಡೀ ತಾಲೂಕಿನ ಗ್ರಾ.ಪಂ.ಗಳ ಹೊಣೆಗಾರಿಕೆ ಇಒಗಳ ಮೇಲಿದ್ದು, ಆದರೆ ಈ ರೀತಿ ತಾ.ಪಂ.ಗಳ ಮುಖ್ಯಸ್ಥರ ಹುದ್ದೆಯನ್ನೇ ಖಾಲಿ ಇಟ್ಟರೆ ಗ್ರಾಮೀಣ ಭಾಗದ ಅಭಿವೃದ್ಧಿಗೆ ತೊಡಕಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಹೊಸ ತಾಲೂಕುಗಳಲ್ಲಿ ಕೊರತೆ ಇರುವ ಜತೆಗೆ ಇರುವ ಇಒಗಳನ್ನು ವರ್ಗಾವಣೆ ಮಾಡಿದ ಬಳಿಕ ಹೊಸ ನಿಯೋಜನೆ ಆಗದೇ ಇರುವುದರಿಂದ ಅವುಗಳ ಜವಾಬ್ದಾರಿಗಳನ್ನು ಮತ್ತೊಬ್ಬರಿಗೆ ನೀಡಲಾಗುತ್ತಿದೆ.
ಸಾಮಾನ್ಯವಾಗಿ ಸಣ್ಣ ಹುದ್ದೆಗಳಾದರೆ 2-3 ಜವಾಬ್ದಾರಿಗಳನ್ನು ಒಬ್ಬರೇ ನಿರ್ವಹಿಸುವುದು ಕಷ್ಟವೇನಲ್ಲ. ಅದರಲ್ಲೂ ತಾಲೂಕಿನ ಒಳಗೆ ಹೇಗಾದರೂ ಮಾಡಿ ನಿರ್ವಹಿಸಬಹುದಾಗಿದೆ. ಆದರೆ ಒಂದು ತಾಲೂಕಿನ ಎಲ್ಲಾ ಗ್ರಾ.ಪಂ.ಗಳ ಮುಖ್ಯಸ್ಥನಂತಿರುವವನು ಮತ್ತೊಂದು ತಾಲೂಕಿನ ಅದೇ ಜವಾಬ್ದಾರಿಯನ್ನು ನಿರ್ವಹಿಸುವುದು ಸವಾಲಿನ ವಿಚಾರವಾಗಿದೆ.
ಒಂದಕ್ಕಿಂತ ಹೆಚ್ಚಿನ ಜವಾಬ್ದಾರಿ
ಪ್ರಸ್ತುತ ದ.ಕ.ಜಿಲ್ಲೆಯಲ್ಲಿ ಬಂಟ್ವಾಳ ತಾ.ಪಂ.ನಿಂದ ಸುಳ್ಯಕ್ಕೆ ವರ್ಗಾವಣೆಗೊಂಡಿರುವ ಇಒ ಅವರು ಹಿಂದೆ ಬಂಟ್ವಾಳದ ಜತೆಗೆ ಉಳ್ಳಾಲ ತಾ.ಪಂ.ಅನ್ನೂ ನೋಡಿಕೊಳ್ಳುತ್ತಿದ್ದು, ಪ್ರಸ್ತುತ ಅವರು ವರ್ಗಾವಣೆಗೊಂಡ ಬಳಿಕ ಸುಳ್ಯ, ಬಂಟ್ವಾಳ, ತಾ.ಪಂ.ಗಳು ಕೂಡ ಅವರ ಹೆಗಲ ಮೇಲಿದೆ. ಮೂಡಬಿದಿರೆಯ ಇಒ ಹುದ್ದೆ ತೆರವಾದುದಕ್ಕೆ ಬೆಳ್ತಂಗಡಿಯ ಇಒಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಪುತ್ತೂರಿನ ಇಒ ಅವರು ಈ ಹಿಂದಿನಿಂದಲೂ ಕಡಬ ತಾ.ಪಂ.ನೋಡಿಕೊಳ್ಳುತ್ತಿದ್ದಾರೆ.
ಮೂಲ್ಕಿಯಲ್ಲಿ ಬೇರೆ ಇಲಾಖೆಯವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಉಡುಪಿಯಲ್ಲಿ ಕುಂದಾಪುರ ಹಾಗೂ ಬಂದೂರು ತಾ.ಪಂ.ಗಳನ್ನು ಒಬ್ಬರೇ ನೋಡಿಕೊಳ್ಳುತ್ತಿದ್ದು, ಉಡುಪಿ ಹಾಗೂ ಕಾಪು ತಾ.ಪಂ.ಗಳ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಹಳ್ಳಿ ರಾಜಕೀಯ ನಿರ್ವಹಣೆ ಸವಾಲು
ಹಳ್ಳಿ ರಾಜಕೀಯದ ನಿರ್ವಹಣೆ ದೊಡ್ಡ ಸವಾಲಾಗಿದ್ದು, ಗ್ರಾ.ಪಂ.ಗಳಲ್ಲಿ ಒಂದಿಲ್ಲೊಂದು ಸಮಸ್ಯೆಗಳು ತಲೆದೋರುತ್ತಲೇ ಇರುತ್ತವೆ. ಪ್ರಸ್ತುತ ಬಹುತೇಕ ಎಲ್ಲಾ ಗ್ರಾ.ಪಂ.ಗಳ ೨ನೇ ಅವಽಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಪ್ರಾರಂಭದಲ್ಲಿ ಒಂದಷ್ಟು ಸಮಸ್ಯೆಗಳು ಹೆಚ್ಚಿರುತ್ತವೆ. ಇವೆಲ್ಲವನ್ನೂ ನಿರ್ವಹಿಸುವ ಜವಾಬ್ದಾರಿ ಇಒಗಳದ್ದಾಗಿರುತ್ತದೆ.
ದೊಡ್ಡ ತಾಲೂಕುಗಳಲ್ಲಿ ಪಂಚಾಯತ್‌ಗಳ ಸಂಖ್ಯೆಯೂ ಹೆಚ್ಚಿದ್ದು, ಅದರ ನಿರ್ವಹಣೆಯ ಹೊರೆಯೂ ಇದ್ದು, ಜತೆಗೆ ಒಂದಷ್ಟು ಇಲಾಖೆಗಳಿಗೆ ಕೆ೨ ಮೂಲಕ ಅನುದಾನ, ವೇತನ ಪಾವತಿಯ ಜವಾಬ್ದಾರಿಯೂ ಇಒಗಳದ್ದಾಗಿದೆ. ಈ ನಡುಗೆ ಇಡೀ ತಾಲೂಕನ್ನು ಸುತ್ತಬೇಕಿದ್ದು, ಈ ರೀತಿ ಒಂದೇ ತಾಲೂಕಿನಲ್ಲೇ ಹತ್ತಾರು ಜನಾಬ್ದಾರಿಗಳಿರುವಾಗ ಮತ್ತೊಂದು ತಾಲೂಕಿನ ಜವಾಬ್ದಾರಿ ನಿರ್ವಹಣೆ ಸವಾಲಾಗಲಿದೆ.
ಹೆಚ್ಚುವರಿ ಜವಾಬ್ದಾರಿಯಿಂದ ನಿರ್ವಹಣೆ
ಸರಕಾರದಿಂದ ನೇಮಕಾತಿ ಆಗಬಹುದು. ಅಲ್ಲಿಯವರೆಗೆ ಬೇರೆಯವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಕೆಲಸಗಳನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದೇವೆ ಎನ್ನುತ್ತಾರೆ ಹಿರಿಯ ಅಧಿಕಾರಿ.
(ವರದಿ - ಹರೀಶ್ ಮಾಂಬಾಡಿ)