ಕನ್ನಡ ಸುದ್ದಿ  /  ಕರ್ನಾಟಕ  /  Mangaluru News: ಚುನಾವಣೆ ಮುಗಿದು ಮೂರು ತಿಂಗಳಾದರೂ ಟೂರಿಸ್ಟ್ ಕಾರು ಮಾಲೀಕರಿಗೆ ಇನ್ನೂ ಆಗಿಲ್ಲ ಪೂರ್ಣ ಪಾವತಿ

Mangaluru News: ಚುನಾವಣೆ ಮುಗಿದು ಮೂರು ತಿಂಗಳಾದರೂ ಟೂರಿಸ್ಟ್ ಕಾರು ಮಾಲೀಕರಿಗೆ ಇನ್ನೂ ಆಗಿಲ್ಲ ಪೂರ್ಣ ಪಾವತಿ

Mangaluru News: ಕರ್ನಾಟಕ ವಿಧಾನಸಭಾ ಚುನಾವಣೆ ಕಾರ್ಯಗಳಿಗಾಗಿ ದ.ಕ. ಜಿಲ್ಲೆಯಲ್ಲಿ ಬಳಸಿದ ಖಾಸಗಿ ಕ್ಯಾಬ್, ಮ್ಯಾಕ್ಸಿ ಕ್ಯಾಬ್ ಸೇರಿದಂತೆ ಹಲವು ವಾಹನಗಳ ಮಾಲೀಕರಿಗೆ ಚುನಾವಣಾ ಆಯೋಗ ನಿಗದಿಪಡಿಸಿದ್ದ ಬಾಡಿಗೆ ಮೊತ್ತವನ್ನು‌ ಕಡಿತಗೊಳಿಸಿ ಹಣ ಪಾವತಿಯಾಗಿದೆ. ಉಳಿಕೆ ಹಣಕ್ಕೆ ಈಗ ಹೋರಾಟ ಮಾಡಬೇಕಾದ ಪರಿಸ್ಥಿತಿಗೆ ಬಂದಿದ್ದಾರೆ ಖಾಸಗಿ ಕ್ಯಾಬ್‌ ಮಾಲೀಕರು.

ಚುನಾವಣೆ ಮುಗಿದು ಮೂರು ತಿಂಗಳಾದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೂರಿಸ್ಟ್ ಕಾರು ಮಾಲೀಕರಿಗೆ ಇನ್ನೂ ಪೂರ್ಣ ಪಾವತಿ ಆಗಿಲ್ಲ. (ಸಾಂಕೇತಿಕ ಚಿತ್ರ)
ಚುನಾವಣೆ ಮುಗಿದು ಮೂರು ತಿಂಗಳಾದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೂರಿಸ್ಟ್ ಕಾರು ಮಾಲೀಕರಿಗೆ ಇನ್ನೂ ಪೂರ್ಣ ಪಾವತಿ ಆಗಿಲ್ಲ. (ಸಾಂಕೇತಿಕ ಚಿತ್ರ) (Social Media)

ಮಂಗಳೂರು: ಎರಡು ತಿಂಗಳ ಹಿಂದೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆ ಕಾರ್ಯಗಳಿಗಾಗಿ ದ.ಕ. ಜಿಲ್ಲೆಯಲ್ಲಿ ಬಳಸಿದ ಖಾಸಗಿ ಕ್ಯಾಬ್, ಮ್ಯಾಕ್ಸಿ ಕ್ಯಾಬ್ ಸೇರಿದಂತೆ ಹಲವು ವಾಹನಗಳ ಮಾಲೀಕರಿಗೆ ಚುನಾವಣಾ ಆಯೋಗ ನಿಗದಿಪಡಿಸಿದ್ದ ಬಾಡಿಗೆ ಮೊತ್ತವನ್ನು‌ ಕಡಿತಗೊಳಿಸಿ ಹಣ ಪಾವತಿಯಾಗಿದ್ದು, ತಮಗೆ ಬರಬೇಕಾದ ಉಳಿಕೆ ಹಣವನ್ನು ಪಡೆಯಲು ಟೂರಿಸ್ಟ್ ಕ್ಯಾಬ್ ಚಾಲಕರ ಸಂಘ ಹೋರಾಟಕ್ಕಿಳಿಯಬೇಕಾದ ಸ್ಥಿತಿ‌ ಉಂಟಾಗಿದೆ.

ಟ್ರೆಂಡಿಂಗ್​ ಸುದ್ದಿ

ತಮಗೆ ಪೂರ್ಣ ಮೊತ್ತವನ್ನೇ ಪಾವತಿಸಬೇಕೆಂದು ಒತ್ತಾಯಿಸಿ ಕ್ಯಾಬ್ ಚಾಲಕ ಮಾಲೀಕರ ಸಂಘ ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲೆಯ ಜನಪ್ರತಿನಿಧಿಗಳು,ಆರ್. ಟಿ. ಒ.ಅಧಿಕಾರಿಗಳು ಮಾತ್ರವಲ್ಲ ರಾಜ್ಯ ಚುನಾವಣಾ ಆಯೋಗಕ್ಕು ಮೊದಲ ಹಂತವಾಗಿ ಮನವಿಯನ್ನು ಸಲ್ಲಿಸಿದೆ. ಇದಕ್ಕೂ ಸ್ಪಂದಿಸದಿದ್ದಲ್ಲಿ ಕಾನೂನು ಹೋರಾಟಕ್ಕೂ ಬಾಡಿಗೆ ವಂಚಿತ ಕ್ಯಾಬ್ ಚಾಲಕ, ಮಾಲೀಕರು ಚಿಂತನೆ ನಡೆಸುತ್ತಿದ್ದಾರೆ.

ಮಾರ್ಚ್ 30ರಿಂದ ಮೇ 15ರ ತನಕ ದ.ಕ.ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿತ್ತು. ಈ ವೇಳೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲು ಪ್ಲಯಿಂಗ್ ಸ್ಕಾಡ್, ಹಾಗೂ ಸ್ಥಿರ ಸರ್ವೇಕ್ಷಣಾ ತಂಡ, ಚೆಕ್‌ಪೋಸ್ಟ್,ಆರೆ ಸೇನಾ ತುಕುಡಿ ಸೇರಿದಂತೆ ಮತದಾನ ಸಂಪರ್ಕ ಸಿದ್ಧತೆಗೆ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಇವರಿಗಾಗಿ ಸರ್ಕಾರಿ ಸುತ್ತೋಲೆಯಂತೆ ಮಂಗಳೂರು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲೂಕುಗಳಲ್ಲಿ ಸಾರಿಗೆ ಇಲಾಖೆ ಕಚೇರಿ ವ್ಯಾಪ್ತಿಯ ಖಾಸಗಿ ಕ್ಯಾಬ್, ಮ್ಯಾಕ್ಸಿಕ್ಯಾಬ್ ಸೇರಿದಂತೆ ಒಟ್ಟು 617 ವಾಹನಗಳನ್ನು ಬಳಸಿಕೊಳ್ಳಲಾಗಿತ್ತು.

ಷರತ್ತಿನ ಮತ್ತೋಲೆ

ಇಪ್ಪತ್ತಾರು ದಿನಗಳ ಚುನಾವಣಾ ಪ್ರಕ್ರಿಯೆಗೆ ಬಳಸುವ ಕ್ಯಾಬ್‌ಗೆ 2,700 ರೂ., ಮ್ಯಾಕ್ಸಿಕ್ಯಾಬ್‌ಗೆ 3800 ರೂ. ದಿನ ಬಾಡಿಗೆ ನಿಗದಿಸಲಾಗಿತ್ತು, ಮತದಾನದ ದಿನ ಹಾಗೂ ಹಿಂದಿನ ದಿನ (2 ದಿನಗಳವರೆಗೆ) ಮ್ಯಾಕ್ಸಿಕ್ಯಾಬ್ ನಿಯೋಜಿಸಿ 2 ದಿನಕ್ಕೆ ಒಟ್ಟು 7600 ರೂ. ದರ ನಿಗದಿಪಡಿಸಲಾಗಿತ್ತು. ಚುನಾವಣಾ ಕರ್ತವ್ಯದಲ್ಲಿದ್ದ ವಾಹನಗಳಿಗೆ ಇಂಧನ ಹಾಗೂ ಡ್ರೈವರ್‌ಗಳನ್ನು ವಾಹನ ಮಾಲೀಕರೇ ಭರಿಸಬೇಕು, ದಿನದ 24 ಗಂಟೆಯು ಕರ್ತವ್ಯದಲ್ಲಿರಬೇಕು, ವಾಹನಗಳು ಕೆಟ್ಟರೆ ಬದಲಿ ವ್ಯವಸ್ಥೆಯನ್ನು ಮಾಲೀಕರೇ ಮಾಡಬೇಕು ಮೊದಲಾದ ಷರತ್ತುಗಳನ್ನು ವಿಧಿಸಲಾಗಿತ್ತು.

ಆದರೆ, ಈಗ ಬಾಡಿಗೆಯಲ್ಲಿ ಕಡಿತಗೊಳಿಸಿ ಮೊತ್ತ ಪಾವತಿ ಮಾಡಲಾಗಿದೆ. ಕೆಲವು ಮಾಲೀಕರು ತೆರಿಗೆ,ವಿಮೆ,ಸಾಲದ ಕಂತು ಪಾವತಿ,ವಾಹನದ ರಿಪೇರಿ ಮತ್ತಿತರ ಅನಿವಾರ್ಯತೆಯಿಂದ ಈ ಕಡಿಮೆ ಮೊತ್ತವನ್ನು ಸ್ವೀಕರಿಸಿದ್ದರೆ, ಇನ್ನಷ್ಟು ಮಂದಿ ಚಾಲಕರು ಸ್ವೀಕರಿಸಿಲ್ಲ. ಇದರಿಂದಾಗಿ ಕ್ಯಾಬ್ ಮಾಲೀಕರು ಸಂಕಷ್ಟಕ್ಕೊಳಗಾಗಿದ್ದಾರೆ.

ದ.ಕ.ಜಿಲ್ಲಾ ಚುನಾವಣಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳು,ಸಿಬ್ಬಂದಿವರ್ಗ, ಸೆಕ್ಟರ್ ಅಧಿಕಾರಿಗಳು-170, ಸ್ಥಿರ ಸರ್ವೇಕ್ಷಣಾ ತಂಡ-140, ವಿಡಿಯೋ ವೀಕ್ಷಣಾ ತಂಡ-30 ಸೇರಿದಂತೆ ಸುಮಾರು 1,637 ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿದ್ದರು. ಇವರಿಗಾಗಿ ವಾಹನ ಬಳಸಲಾಗಿತ್ತು. ಕ್ಯಾಬ್‌ಗಳಿಗೆ ಬಾಡಿಗೆ ಹಣ ಪಾವತಿಗೆ ಜಿಲ್ಲಾ ಚುನಾವಣಾಧಿಕಾರಿ ಅಥವಾ ಜಿಲ್ಲಾಧಿಕಾರಿ ಆದೇಶ ಸಹಿತ ಅನುದಾನ ನೀಡಲಾಗಿತ್ತು.

ಆದರೆ ಬಂಟ್ವಾಳ ಸಹಿತ ವಿವಿಧ ತಾಲೂಕಿನ ಮ್ಯಾಕ್ಸಿ ಕ್ಯಾಬ್‌ಗೆ ಸರ್ಕಾರಿ ನಿಗದಿತ ದರ 3,800 ರೂ., ಬದಲಾಗಿ 3 ಸಾವಿರ ರೂ, ಕ್ಯಾಬ್‌ಗೆ ಸರ್ಕಾರಿ ನಿಗದಿತ ದರ 2700 ರೂ.ಬದಲಾಗಿ 2 ಸಾವಿರ ರೂ.ವನ್ನು ತಾಲೂಕು ಚುನಾವಣಾ ಅಧಿಕಾರಿಗಳು ವಿತರಿಸಿದ್ದಾರೆ.

ಕಮಿಷನರೇಟ್ ವ್ಯಾಪ್ತಿಯಲ್ಲಿ ಪಾವತಿ

ಮಂಗಳೂರು ಪೊಲೀಸ್ ಕಮಿಷನರ್ ವ್ಯಾಪ್ತಿಗೊಳಪಟ್ಟಂತೆ ಮಂಗಳೂರು ಮೂಡಬಿದ್ರೆ ತಾಲೂಕಿನಲ್ಲ ಬಳಸಿದ ಕ್ಯಾಬ್ ಗಳಿಗೆ ನಿಗದಿತ ಬಾಡಿಗೆಯನ್ನು ಪೂರ್ತಿಯಾಗಿ ಪಾವತಿಸಲಾಗಿದ್ದು,

ದ.ಕ.ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ತಾಲೂಕಿನಲ್ಲಿ ಬಳಸಲಾದ ಕ್ಯಾಬ್ ಗಳಿಗೆ ನಿಗದಿತ ಬಾಡಿಗೆಯಲ್ಲಿ ಕಡಿತಗೊಳಿಸಿ ತಾರತಮ್ಯ ಧೋರಣೆ ಅನುಸರಿಸಲಾಗಿದೆ ಎಂದು ಕ್ಯಾಬ್ ಚಾಲಕರ ಸಂಘ ಆರೋಪಿಸಿದೆ.

ಮಾಲೀಕರಿಗೆ ಅನ್ಯಾಯ

ಬಂಟ್ವಾಳವೊಂದರಲ್ಲೇ 25 ಕ್ಕು ಹೆಚ್ಚು ಕ್ಯಾಬ್ ಸೇರಿದಂತೆ ಇತರ ತಾಲೂಕಿನ 200 ಕ್ಕು ಹೆಚ್ಚು ಕ್ಯಾಬ್, ಮ್ಯಾಕ್ಸಿ ಕ್ಯಾಬ್‌ಗಳಿಗೆ ಸರ್ಕಾರ ನಿಗದಿತ ದರ ಲಭಿಸಿಲ್ಲ. ಇದರಿಂದಾಗಿ ವಾಹನ ಮಾಲೀಕರಿಗೆ ಅನ್ಯಾಯವಾಗಿದೆ ಎಂಬ ಕೂಗು ಚಾಲಕ ಸಮುದಾಯದಿಂದ ಕೇಳಿಬರುತ್ತಿದೆ. ಚುನಾವಣಾ ಕಾರ್ಯಕ್ಕೆ ಕ್ಯಾಬ್ ಬಳಸುವ ಸಂದರ್ಭ ಮದುವೆ ಸಹಿತ ಸಾಕಷ್ಟು ಕಾರ್ಯಕ್ರಮದ ಬಾಡಿಗೆಯನ್ನು ಬಿಟ್ಟು ಕ್ಯಾಬ್ ಒದಗಿಸಿದ್ದರೂ ಇದೀಗ ಬಾಡಿಗೆಯನ್ನು ಕಡಿತಗೊಳಿಸಿ ಬರುವುದಕ್ಕೆ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಉಡುಪಿಯಲ್ಲಿ ಪೂರ್ತಿ ಹಣ ಪಾವತಿಯಾಗಿದೆ, ದಕ್ಷಿಣ ಕನ್ನಡಕ್ಕೆ ಏನು ಗತಿ

ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ಉಡುಪಿ ಜಿಲ್ಲೆಯಲ್ಲಿ ಬಳಸಲಾದ ಟ್ಯಾಕ್ಸಿ ಮ್ಯಾಕ್ಸಿಕ್ಯಾಬ್ ಸೇರಿದಂತೆ ಖಾಸಗಿ ವಾಹನಗಳಿಗೆ ಚುನಾವಣಾ ಆಯೋಗ ನಿಗದಿಪಡಿಸಿದ್ದ ಬಾಡಿಗೆ ಮೊತ್ತವನ್ನು ಪಾವತಿಸಲಾಗಿದೆ. ಚುನಾವಣಾ ಕರ್ತವ್ಯ ಮುಗಿದ ನಂತರ ಕ್ಯಾಬ್‌ಗೆ 2,700 ರೂ. ಮ್ಯಾಕ್ಸಿ ಕ್ಯಾಬ್‌ಗೆ 3800 ರೂ., ಸರ್ಕಾರಿ ದರದಲ್ಲೇ ಹಣ ಪಾವತಿಯಾಗಿದೆ ಎಂದು ದ.ಕ.ಜಿಲ್ಲಾ ಟೂರಿಸ್ಟ್ ಕಾರು ಚಾಲಕ,ಮಾಲಕರ ಸಂಘ ತಿಳಿಸಿದೆ.

ದ.ಕ.ಜಿಲ್ಲಾ ಚುನಾವಣಾಧಿಕಾರಿ ನೇತೃತ್ವದಲ್ಲಿ ವರ್ಗ, ಸೆಕ್ಟರ್ ಅಧಿಕಾರಿಗಳು-170, ಸ್ಥಿರ ಸರ್ವೇಕ್ಷಣಾ ತಂಡ-140, ವಿಡಿಯೋ ವೀಕ್ಷಣಾ ತಂಡ-30 ಸೇರಿದಂತೆ ಸುಮಾರು 1,637 ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿದ್ದರು. ಇವರಿಗಾಗಿ ವಾಹನ ಬಳಸಲಾಗಿತ್ತು. ಕ್ಯಾಬ್‌ಗಳಿಗೆ ಬಾಡಿಗೆ ಹಣ ಪಾವತಿಗೆ ಜಿಲ್ಲಾ ಚುನಾವಣಾಧಿಕಾರಿ ಅಥವಾ ಜಿಲ್ಲಾಧಿಕಾರಿ ಆದೇಶ ಸಹಿತ ಅನುದಾನ ನೀಡಲಾಗಿತ್ತು. ಆದರೆ, ಬಹುತೇಕ ಮ್ಯಾಕ್ಸಿ ಕ್ಯಾಬ್‌ಗೆ ಸರ್ಕಾರಿ ನಿಗದಿತ ದರ 3,800 ರೂ., ಬದಲಾಗಿ 3 ಸಾವಿರ ರೂ, ಕ್ಯಾಬ್‌ಗೆ ಸರ್ಕಾರಿ ನಿಗದಿತ ದರ 2700 ರೂ.ಬದಲಾಗಿ 2 ಸಾವಿರ ರೂಪಾಯಿಯನ್ನು ತಾಲೂಕು ಚುನಾವಣಾ ಅಧಿಕಾರಿಗಳು ವಿತರಿಸಿದ್ದಾರೆ.

ಕೆಲವು ತಾಲೂಕುಗಳಲ್ಲಿ ನಿಗದಿತ ದರ ಲಭಿಸಿಲ್ಲ

ಬಂಟ್ವಾಳ, ಬೆಳ್ತಂಗಡಿ, ಉಳ್ಳಾಲ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಕ್ಯಾಬ್, ಮ್ಯಾಕ್ಸಿ ಕ್ಯಾಬ್‌ಗಳಿಗೆ ಸರ್ಕಾರ ನಿಗದಿತ ದರ ಲಭಿಸಿಲ್ಲ. ಖಾಸಗಿ ಕ್ಯಾಬ್, ಮ್ಯಾಕ್ಸಿ ಕ್ಯಾಬ್ ಮಾಲೀಕರಿಗೆ ಚನಾವಣಾ ಆಯೋಗ ನಿಗದಿಪಡಿಸಿದ್ದ ಬಾಡಿಗೆ ಮೊತ್ತ ಪಾವತಿಸಿಲ್ಲ, ಈ ಬಗ್ಗೆ ಪ್ರತಿ ತಾಲೂಕಿನಲ್ಲಿ ಸಂಘಟಿತ ಹೋರಾಟ ಮಾಡುತ್ತೇವೆ. ಇದನ್ನು ಪರಿಶೀಲಿಸುವಂತೆ ಎಸ್ಪಿ,ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದೆವೆ. ಸೀಸನ್ ಸಂದರ್ಭದಲ್ಲಿ ಚುನಾವಣಾ ಕರ್ತವ್ಯಕ್ಕೆ ವಾಹನ ಒದಗಿಸಿದ್ದೇವೆ. ಆದರೆ ಈಗ ಬಾಡಿಗೆ ಪಾವತಿಯಲ್ಲಿ ಚುನಾವಣಾ ಆಯೋಗದ ನಿಗದಿತ ದರವನ್ನು ಕಡಿತಗೊಳಿಸಲಾಗಿದೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಈ ಕುರಿತು ಟೂರಿಸ್ಟ್ ಕಾರು ಚಾಲಕ,ಮಾಲಕರ ಚಾಲಕ ಮಾಲೀಕರ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ವಿಠಲ ರೈ HTಕನ್ನಡಕ್ಕೆ ತಿಳಿಸಿದ್ದಾರೆ.

ವರದಿ - ಹರೀಶ್‌ ಮಾಂಬಾಡಿ

IPL_Entry_Point