ಎಲ್ಲರಂತಲ್ಲ ಇವರು: ಎಲ್ಲರೂ ಮುದ್ದಾದ ನಾಯಿ ಸಾಕಿದ್ರೆ, ರೋಗಗ್ರಸ್ತ ಶ್ವಾನಗಳ ಆರೈಕೆ ಮಾಡುತ್ತಾರೆ ಮಂಗಳೂರಿನ ಉಷಾ ಸುವರ್ಣ
ಕನ್ನಡ ಸುದ್ದಿ  /  ಕರ್ನಾಟಕ  /  ಎಲ್ಲರಂತಲ್ಲ ಇವರು: ಎಲ್ಲರೂ ಮುದ್ದಾದ ನಾಯಿ ಸಾಕಿದ್ರೆ, ರೋಗಗ್ರಸ್ತ ಶ್ವಾನಗಳ ಆರೈಕೆ ಮಾಡುತ್ತಾರೆ ಮಂಗಳೂರಿನ ಉಷಾ ಸುವರ್ಣ

ಎಲ್ಲರಂತಲ್ಲ ಇವರು: ಎಲ್ಲರೂ ಮುದ್ದಾದ ನಾಯಿ ಸಾಕಿದ್ರೆ, ರೋಗಗ್ರಸ್ತ ಶ್ವಾನಗಳ ಆರೈಕೆ ಮಾಡುತ್ತಾರೆ ಮಂಗಳೂರಿನ ಉಷಾ ಸುವರ್ಣ

ಬಹುತೇಕ ಮಂದಿ ತಮ್ಮ ಮನೆಗಳಲ್ಲಿ ನಾಯಿ-ಬೆಕ್ಕುಗಳನ್ನು ಮುದ್ದಿನಿಂದ ಸಾಕುತ್ತಾರೆ. ಒಂದು ವೇಳೆ ಅವು ರೋಗಪೀಡಿತವಾದರೆ ಅಥವಾ ವಯಸ್ಸಾದರೆ ಅದನ್ನು ನಡುಬೀದಿಯಲ್ಲಿ ಬಿಟ್ಟುಬಿಡುವವರಿದ್ದಾರೆ. ಇಂಥ ನಾಯಿ-ಬೆಕ್ಕುಗಳಿಗೆ ಬದುಕುವ ಹಕ್ಕಿಲ್ಲವೇ ಎಂದು ಪ್ರಶ್ನಿಸುವ ಮಂಗಳೂರಿನ ಉಷಾ ಸುವರ್ಣ ಎಂಬುವವರು ಈ ಪ್ರಾಣಿಗಳಿಗೆ ಆಶಾಕಿರಣವಾಗಿದ್ದಾರೆ. (ವರದಿ:ಹರೀಶ್ ಮಾಂಬಾಡಿ,ಮಂಗಳೂರು)

ಅನಾರೋಗ್ಯಪೀಡಿತ ಅಥವಾ ಗಾಯಗೊಂಡ ಶ್ವಾನ-ಬೆಕ್ಕುಗಳ ಆರೈಕೆ ಮಾಡುತ್ತಾರೆ ಮಂಗಳೂರಿನ ಉಷಾ ಸುವರ್ಣ.
ಅನಾರೋಗ್ಯಪೀಡಿತ ಅಥವಾ ಗಾಯಗೊಂಡ ಶ್ವಾನ-ಬೆಕ್ಕುಗಳ ಆರೈಕೆ ಮಾಡುತ್ತಾರೆ ಮಂಗಳೂರಿನ ಉಷಾ ಸುವರ್ಣ.

ಮನೆಯಲ್ಲಿರುವ ನಾಯಿ, ಬೆಕ್ಕುಗಳು ಲವಲವಿಕೆಯಿಂದ ಓಡಾಡಿಕೊಂಡು, ಬಾಲ ಆಡಿಸುತ್ತಾ, ಯಜಮಾನನ ಸುತ್ತಮುತ್ತಲೂ ಓಡಾಡುತ್ತಿದ್ದರೆ, ಎಲ್ಲರಿಗೂ ಖುಷಿ. ಬೀದಿಯಲ್ಲಿರುವ ನಾಯಿಗಳೂ ಅಷ್ಟೇ. ಯಾವುದೇ ಅನಾರೋಗ್ಯ ಕಾಡದಿದ್ದರೆ, ಅವುಗಳನ್ನು ಪ್ರೀತಿ ಮಾಡುವವರೆಷ್ಟು? ಆಹಾರ ಹಾಕುವವರೆಷ್ಟು? ಅದೇ ಪ್ರಾಣಿಗಳು ಗಬ್ಬೆದ್ದು ನಾರುತ್ತಿದ್ದರೆ, ಮೂಗುಮುರಿಯುವವರು ಅಧಿಕ. ಇಂಥ ಪರಿತ್ಯಕ್ತ ಪ್ರಾಣಿಗಳನ್ನು ಹುಡುಕಿ ಅವುಗಳ ಆರೈಕೆ ಮಾಡುವವರ ಪೈಕಿ ಮಂಗಳೂರಿನ ಉಷಾ ಸುವರ್ಣ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಅನಾರೋಗ್ಯಪೀಡಿತವಾಗಿ, ಕರುಣಾಜನಕ ಸ್ಥಿತಿಯಲ್ಲಿ ರಸ್ತೆಯ ಬದಿಯಲ್ಲಿ ಅಸಹಾಯಕವಾಗಿ ಹೊಟ್ಟೆಗೂ ಇಲ್ಲದೆ, ಚಿಕಿತ್ಸೆಯೂ ಸಿಗದೆ ರೋಗಪೀಡಿತವಾಗಿರುವ ಸಹಸ್ರಾರು ನಾಯಿ-ಬೆಕ್ಕುಗಳಿಗೆ ಮಂಗಳೂರಿನ ಉಷಾ ಸುವರ್ಣ ಆಶಾಕಿರಣವಾಗಿದ್ದಾರೆ.

24 ವರ್ಷಗಳಿಂದ ಮಾಡುತ್ತಿದ್ದಾರೆ ಆರೈಕೆ

ಆರೋಗ್ಯಕರವಾಗಿರುವ ನಾಯಿ-ಬೆಕ್ಕುಗಳನ್ನು ಸಾಕುವವರು ಅಥವಾ ಅವುಗಳಿಗೆ ಅನ್ನ, ಆಹಾರ ನೀಡುವವರು ಅಥವಾ ಬಿಡಾಡಿ ನಾಯಿಗಳ ಹೊಟ್ಟೆ ತಣಿಸಲು ಹಲವು ಮಂದಿ ಸೇವೆ ನಡೆಸುತ್ತಿದ್ದಾರೆ. ಆದರೆ ಉಷಾ ಸುವರ್ಣ ಕಾರ್ಯ ಭಿನ್ನವಾಗಿದೆ.

24 ವರ್ಷಗಳಿಂದ ಮಂಗಳೂರು ಸಹಿತ ಜಿಲ್ಲೆಯ ವಿವಿಧ ಭಾಗಗಳಲ್ಲಿ ರಸ್ತೆ ಬದಿಯಲ್ಲಿ ಅನಾರೋಗ್ಯ ಪೀಡಿತ ನಾಯಿ-ಬೆಕ್ಕುಗಳನ್ನು ಮನೆಗೆ ತರುವ ಅವರು ಅದರ ಆರೈಕೆ ಮಾಡಿ, ವೈದ್ಯರಿಂದ ಚಿಕಿತ್ಸೆ ನೀಡಿಸಿ, ಅದು ಆರೋಗ್ಯಯುತವಾದ ಬಳಿಕ ತಂದಲ್ಲಿಯೇ ಬಿಟ್ಟು ಬರುತ್ತಾರೆ ಅಥವಾ ಸಾಕುವ ಆಸಕ್ತಿ ಇರುವವರಿಗೆ ನೀಡುತ್ತಾರೆ.

‘ಎಲ್ಲರಿಗೂ ಚಂದದ ನಾಯಿಯೇ ಇಷ್ಟ’

ಮಂಗಳೂರಿನ ವೆಲೆನ್ಸಿಯಾ ಸಮೀಪದ ಉಜ್ಜೋಡಿ ನಿವಾಸಿ ಉಷಾ ಸುವರ್ಣ ಅವರಿಗೆ ನಾಯಿ-ಬೆಕ್ಕು ಅಂದರೆ ತುಂಬಾ ಪ್ರೀತಿ. ಅದರಲ್ಲೂ ಅನಾರೋಗ್ಯ-ಅಶಕ್ತ, ಬದುಕಲು ಕಷ್ಟಪಡುವ ಹಾಗೂ ವಾಸನೆ ಬರುವ ನಾಯಿಗಳ ಆರೈಕೆ, ಚಿಕಿತ್ಸೆಯ ಮೂಲಕ ಗುಣಮುಖವಾಗುವುದನ್ನೇ ಕಂಡು ಅದರಲ್ಲಿ ಸಂತೃಪ್ತಿ ಕಾಣುತ್ತಿದ್ದಾರೆ.

ಮೊದಲು ಉದ್ಯೋಗ ಮಾಡುತ್ತಿದ್ದ ಉಷಾ ಇದೀಗ ಕೆಲಸ ಬಿಟ್ಟು ಮನೆಯಲ್ಲಿ ನಾಯಿಗಳ ಸೇವೆ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ‘ಮಿಸಸ್ ತುಳುನಾಡು’ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ಅವರು ಸೆಕೆಂಡ್ ರನ್ನರ್ ಅಪ್ ಕೂಡ ಆಗಿದ್ದರು.

‘ಎಲ್ಲರಿಗೂ ಅಂದ ಚಂದದ ನಾಯಿಯೇ ಇಷ್ಟ. ಗಲೀಜು ಅಥವಾ ಅನಾರೋಗ್ಯದಿಂದ ಇರುವ ಬೀದಿನಾಯಿ ಅಂದ್ರೆ ಯಾರಿಗೂ ಇಷ್ಟ ಇಲ್ಲ. ಅಂತಹ ನಾಯಿಗಳಿಗೆ ಬದುಕು ಇಲ್ಲವೇ? ಅವುಗಳ ನೋವಿಗೆ ಸ್ಪಂದಿಸುವವರೇ ಇಲ್ಲವೇ? ಎಂಬುದು ನನ್ನ ಪ್ರಶ್ನೆ. ಹೀಗಾಗಿ ನಾನು ಇಂತಹ ನಾಯಿಗಳ ಬಗ್ಗೆ ಆದ್ಯತೆ ನೀಡುತ್ತೇನೆ’ ಎನ್ನುತ್ತಾರೆ ಉಷಾ.

ತಿಂಗಳ ಕಾಲ ಆರೈಕೆ ಮಾಡುತ್ತಾರೆ

ಬೀದಿ ಬದಿಯಲ್ಲಿ ಕಂಗಾಲಾಗಿ ಬಿದ್ದಿರುವ ಅನಾರೋಗ್ಯದ ನಾಯಿ-ಬೆಕ್ಕುಗಳು ಇದ್ದರೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳುವ ಉಷಾ ಸುವರ್ಣ, ಆ ನಾಯಿ-ಬೆಕ್ಕನ್ನು ಅತ್ಯಂತ ಎಚ್ಚರಿಕೆಯಿಂದ ಉಜ್ಜೋಡಿಯಲ್ಲಿರುವ ತಮ್ಮ ಮನೆಗೆ ತರುತ್ತಾರೆ. ಬಳಿಕ ಅದನ್ನು ಶುದ್ಧ ನೀರಿನಲ್ಲಿ ಸ್ನಾನ ಮಾಡಿಸಿ ವೈದ್ಯಕೀಯ ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಕರೆದುಕೊಂಡು ಹೋಗುತ್ತಾರೆ. ಚಿಕಿತ್ಸೆ ಕೊಡಿಸಿದ ಬಳಿಕ ಮನೆಗೆ ತಂದು ಆ ನಾಯಿ-ಬೆಕ್ಕನ್ನು ಅತ್ಯಂತ ಪ್ರೀತಿ-ಕಾಳಜಿಯಿಂದ 1 ಅಥವಾ 2 ತಿಂಗಳು ಆರೈಕೆ ಮಾಡುತ್ತಾರೆ. ಬಳಿಕ ವೈದ್ಯರ ಸಲಹೆಯನ್ನು ಪಡೆದು ಗುಣಮುಖವಾದ ಬಳಿಕ ಆ ನಾಯಿಯನ್ನು ಹಿಂದೆ ಸಿಕ್ಕಿದ ಜಾಗದಲ್ಲಿ ಆರಾಮವಾಗಿ ಓಡಾಡಲು ಬಿಡುತ್ತಾರೆ ಅಥವಾ ಯಾರಾದರೂ ದತ್ತು ಸ್ವೀಕರಿಸಲು ಮನಸಿದ್ದರೆ ಅಂಥವರಿಗೆ ನೀಡುತ್ತಾರೆ. ಇವೆಲ್ಲವನ್ನೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರಿಂದ ಉಷಾ ಅವರಿಗೆ ದಾನಿಗಳಿಂದ ನೆರವೂ ಲಭ್ಯವಾಗುತ್ತಿದೆ.

‘ಅನಾರೋಗ್ಯವಾದರೆ ದಾರಿಯಲ್ಲಿ ಬಿಡಬೇಡಿ’

ಮನೆಯಲ್ಲಿ ಸಾಕಿದ ನಾಯಿ, ಬೆಕ್ಕನ್ನು ಅದರ ಕೊನೆ ಜೀವಿತಾವಾಧಿಯವರೆಗೂ ಪ್ರೀತಿಯಿಂದ ಸಾಕಬೇಕು. ಅದಕ್ಕೆ ಚರ್ಮ ರೋಗ, ವಾಸನೆ ಬರುವುದು, ಕಾಲು ತುಂಡಾಗಿರುವುದು, ವಾಂತಿ ಮಾಡುವುದು, ಗಲೀಜು ಇದೆ ಎಂಬಿತ್ಯಾದಿ ಕಾರಣಗಳನ್ನು ನೀಡಿ ನಾಯಿ-ಬೆಕ್ಕನ್ನು ರಸ್ತೆಯಲ್ಲಿ ತಂದು ಬಿಡಬೇಡಿ. ಅದರ ಜೀವಿತಾವಧಿಯ ಕೊನೆಯವರೆಗೂ ಪ್ರೀತಿಯಿಂದಲೇ ಆಶ್ರಯ-ಆಸರೆ ನೀಡಿ. ಅದಕ್ಕಿಂತ ದೊಡ್ಡ ಪುಣ್ಯದ ಕೆಲಸ ಬೇರೆ ಇಲ್ಲ. ಹೀಗಾಗಿ ನಾಯಿ-ಬೆಕ್ಕಿಗೆ ಅನಾರೋಗ್ಯವಾದರೆ ದಯವಿಟ್ಟು ವೈದ್ಯರಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ಎಂದು ಉಷಾ ಸುವರ್ಣ ಅವರು ಕಳಕಳಿಯ ವಿನಂತಿ ಮಾಡಿದ್ದಾರೆ.

‘ಸಾವಿರಾರು ನಾಯಿ ಬೆಕ್ಕುಗಳು ಗುಣಮುಖ’

ಉಜ್ಜೋಡಿಯ ಉಷಾ ಅವರ ಮನೆಯಲ್ಲಿ ಸದ್ಯ 13ಕ್ಕೂ ಅಧಿಕ ನಾಯಿ, 20ರಷ್ಟು ಬೆಕ್ಕುಗಳಿವೆ. ಕೆಲವು ಗುಣಮುಖವಾಗುತ್ತಿದ್ದು, ಆರೈಕೆ ಮಾಡುತ್ತಿದ್ದಾರೆ. ಅವರ ಮನೆಯನ್ನೇ ಶ್ವಾನ-ಬೆಕ್ಕುಗಳ ಆರೈಕೆಯ ಕೇಂದ್ರವಾಗಿ ಮಾರ್ಪಡಿಸಿದ್ದಾರೆ. ಇದಕ್ಕೆ ನೆರೆಹೊರೆಯವರೂ ಸಾಥ್ ನೀಡಿದ್ದಾರೆ. ನೆರೆಯವರ ಸಹಕಾರದಿಂದ ಮನೆಯ ಆವರಣ ಪೂರ್ತಿ ಈಗ ನಾಯಿಗಳ ಪೋಷಣೆಯೇ ನಡೆಯುತ್ತಿದೆ. ಪತಿ ಹಾಗೂ ಮಗಳ ಸಹಕಾರದಿಂದ ಇದೆಲ್ಲವೂ ಸಾಧ್ಯ ಎಂಬುದು ಉಷಾ ಅವರ ಮಾತು. ಕೆಲವೊಮ್ಮೆ ಗ್ಲೌಸ್ ಹಾಕಲೂ ನೆನಪಾಗದೆ ಗಾಯಗೊಂಡಿರುವ ನಾಯಿಗಳನ್ನು ಕೈಯಲ್ಲೇ ಸ್ನಾನ ಮಾಡಿಸಿ ಆರೈಕೆ ಮಾಡುತ್ತಾರೆ. ನಾಯಿಗಳಿಗೆ ಪ್ರೀತಿ ಕೊಡಿ, ಸ್ವಾತಂತ್ರ್ಯ ಕೊಡಿ ಹಾಗೂ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸುವ ಬಗ್ಗೆ ಆದ್ಯತೆ ನೀಡಿ ಎಂಬುದು ಅವರ ಕಾಳಜಿ. ಅಂದಹಾಗೆ ಅವರು ಇಲ್ಲಿಯವರೆಗೆ ಅದೆಷ್ಟೋ ಸಾವಿರ ನಾಯಿ-ಬೆಕ್ಕಿಗೆ ಚಿಕಿತ್ಸೆ ನೀಡಿ, ಎಲ್ಲರಿಗೂ ಮಾದರಿಯಾಗಿದ್ದಾರೆ.

Whats_app_banner