Mangaluru News: ನಿರ್ಮಾಣ ಹಂತದ ಮನೆ ಕೆಡವಲು ಮುಂದಾದ ಅರಣ್ಯಾಧಿಕಾರಿಗಳು: ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಶಾಸಕರಿಂದ ತೀವ್ರ ಪ್ರತಿರೋಧ-mangaluru news forest officials about to demolish dharmanna gowda house under construction in kalenj news in kannada hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mangaluru News: ನಿರ್ಮಾಣ ಹಂತದ ಮನೆ ಕೆಡವಲು ಮುಂದಾದ ಅರಣ್ಯಾಧಿಕಾರಿಗಳು: ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಶಾಸಕರಿಂದ ತೀವ್ರ ಪ್ರತಿರೋಧ

Mangaluru News: ನಿರ್ಮಾಣ ಹಂತದ ಮನೆ ಕೆಡವಲು ಮುಂದಾದ ಅರಣ್ಯಾಧಿಕಾರಿಗಳು: ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಶಾಸಕರಿಂದ ತೀವ್ರ ಪ್ರತಿರೋಧ

ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕರೆ ಮಾಡಿದ ಶಾಸಕ ಹರೀಶ್ ಪೂಂಜ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು. ಅರಣ್ಯ ಜಮೀನಿನಲ್ಲಿ ಒತ್ತುವರಿ ಮಾಡಿ ಮನೆಕಟ್ಟಿದರೆ ನ್ಯಾಯಾಲಯ ಕ್ರಮ ಕೈಗೊಳ್ಳುತ್ತದೆ. ಇದೀಗ ನಿಮ್ಮ ವ್ಯಾಪ್ತಿಯಲ್ಲಿ 100 ವರ್ಷ ಹಿಂದೆ ಮನೆ ಕಟ್ಟಿ ಕೂತಿದ್ದೀರಿ ಎಂದಾದರೆ ಸದ್ಯ ತಾತ್ಕಾಲಿಕ ನಿರ್ಮಿತ ಮನೆ ಯಥಾಸ್ಥಿತಿ ಇರಲಿ.

ನಿರ್ಮಾಣ ಹಂತದ ಮನೆ ಕೆಡವಲು ಮುಂದಾದ ಅರಣ್ಯಾಧಿಕಾರಿಗಳು: ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಶಾಸಕರಿಂದ ತೀವ್ರ ಪ್ರತಿರೋಧ
ನಿರ್ಮಾಣ ಹಂತದ ಮನೆ ಕೆಡವಲು ಮುಂದಾದ ಅರಣ್ಯಾಧಿಕಾರಿಗಳು: ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಶಾಸಕರಿಂದ ತೀವ್ರ ಪ್ರತಿರೋಧ

ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸೋಮವಾರ ಬೆಳ್ಳಂಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದಲ್ಲಿ ವಾಸವಾಗಿರುವ ಧರ್ಮಣ್ಣ ಗೌಡ ಅವರು ಕಟ್ಟಿದ ಮನೆಯನ್ನು ಕೆಡಹಲು ಮುಂದಾದ ಅರಣ್ಯ ಇಲಾಖಾಧಿಕಾರಿಗಳಿಗೆ ಪ್ರತಿರೋಧ ತೋರಲು ಸ್ಥಳಕ್ಕೆ ಧಾವಿಸಿದ್ದು, ಗೌಡರ ಪರವಾಗಿ ಒಟ್ಟಾಗಿ ನಿಂತರು.

ವಿಷಯವೇನು?

ಕೆಲ ದಿನಗಳ ಹಿಂದೆ ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬ ಸ್ಥಳದಲ್ಲಿ ಕಳೆದ 100 ವರ್ಷಕ್ಕಿಂತಲೂ ಅಧಿಕ ಸಮಯದಿಂದ ವಾಸವಾಗಿದ್ದ ಕುಟುಂಬವೊಂದು ಮನೆ ನಿರ್ಮಾಣಕ್ಕೆ ತಳಪಾಯ ಹಾಕಿರುವುದನ್ನು ಏಕಾಏಕಿ ಅರಣ್ಯಧಿಕಾರಿಗಳು ಕೆಡವಿದ್ದರು. ಕುದ್ದಮನೆ ಸೇಸ ಗೌಡ ಎಂಬವರ ಕುಟುಂಬ ಒಂದುವರೆ ಎಕ್ರೆ ಪ್ರದೇಶದಲ್ಲಿ ರಬ್ಬರ್ ಕೃಷಿ ಜತೆಗೆ ಒಟ್ಟು ಐವರು ಮಕ್ಕಳು ವಾಸವಾಗಿದ್ದರು. ಈ ಪೈಕಿ ಓರ್ವ ಪುತ್ರನ ಮಗ ನೂತನ ಮನೆ ನಿರ್ಮಾಣಕ್ಕೆ ತಳಪಾಯ ನಿರ್ಮಿಸಿ ಶೀಟ್ ಅಳವಡಿಸಿ ಕುಳಿತುಕೊಂಡಿದ್ದರು. ಆದರೆ ಉಪ್ಪಿನಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಅಕ್ಟೋಬರ್ 6 ರಂದು ಮನೆ ಕೆಡವಿದ್ದಾರೆ. ಈ ವಿಚಾರವಾಗಿ ನೊಂದ ಪುತ್ರ ಆತ್ಮಹತ್ಯೆಗೆ ಶರಣಲಾಗಲು ಯತ್ನಿಸಿದ್ದ. ಈ ಕುರಿತು ಮನೆಮಂದಿ ಶಾಸಕರ ಹರೀಶ್ ಪೂಂಜ ಅವರ ಗಮನಕ್ಕೆ ತಂದ ಹಿನ್ನೆಲೆ ಅ.7ರಂದು ಸ್ಥಳಕ್ಕೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿದ್ದರು. ಈ ವೇಳೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಶಾಸಕರು ಅರಣ್ಯಾಧಿಕಾರಿಗಳಲ್ಲಿ ಪ್ರಶ್ನಿಸಿ ಮನೆ ಕೆಡವಲು ಅವಕಾಶ ಸೂಚನೆ ನೀಡಿದವರಾರು.

ಸರ್ವೇ ನಂಬರ್ 309ನಲ್ಲಿ ಸುಮಾರು 100 ವರ್ಷಗಳಿಂದ 120 ಕ್ಕೂ ಅಧಿಕ ಕುಟುಂಬ ವಾಸವಾಗಿದ್ದಾರೆ. ಇಷ್ಟು ದಿನ ತೆರವುಗೊಳಿಸದ ನೀವು ಈಗ ಏಕಾಏಕಿ ಒಕ್ಕಲೆಬ್ಬಿಸುವ ಹುನ್ನಾರವೇನು ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಎಸಿಎಫ್ ಪ್ರತಿಕ್ರಿಯಿಸಿ ಇದು ಅರಣ್ಯ ಎಂದು ಇರುವುದರಿಂದ ಅರಣ್ಯ ಇಲಾಖೆ ಮನೆ ಕೆಡವಿದೆ ಎಂದರು. ಮನೆ ಮಂದಿಗೆ ಯಾವುದೇ ನೋಟಿಸ್ ಮಾಹಿತಿ ನೀಡದೆ ಹೇಗೆ ತೆರವುಗೊಳಿಸಿದ್ದೀರಿ, ಬಡವರು ಮನೆಕಟ್ಟಿದರೆ ಅವರನ್ನು ಬೆದರಿಸಿ ಅವರ ಮೇಲೆ ಅಧಿಕಾರ ಚಲಾಯಿಸುತ್ತೀರಿ ಎಂದು ಶಾಸಕ ಪೂಂಜಾ ಪ್ರಶ್ನಿಸಿದ್ದರು. ಶಾಸಕರು ಪ್ರತಿಕ್ರಿಯಿಸಿ ಅರಣ್ಯ ಮತ್ತು ಕಂದಾಯ ಜಂಟಿ ಸರ್ವೇ ನಡೆಸಿ, ಒಂದುವೇಳೆ ಮನೆ ಅರಣ್ಯದಲ್ಲಿದ್ದರೆ ನಾನು ತೆರವುಗೊಳಿಸುವೆ, ಅಲ್ಲಿವರೆಗೆ ಕೆಡವಲು ಬಿಡುವುದಿಲ್ಲ ಎಂದು ಅಧಿಕಾರಿಗಳ ಸಮ್ಮುಖದಲ್ಲೇ ಸ್ಥಳದಲ್ಲಿ ಸೇರಿದ್ದ ನೂರಾರು ಯುವಕರ ಸಹಾಯದಲ್ಲಿ ಕೆಡವಿದ ಮನೆ ಕಟ್ಟಲು ಸೂಚಿಸಿದರು. ಈ ವೇಳೆ ಅರಣ್ಯ ಇಲಾಖೆ ಮತ್ತು ಶಾಸಕರ ಮಧ್ಯೆ ಗಂಭೀರ ಮಾತಿನ ವಾಗ್ವಾದ ನಡೆಯಿತು. ಸಮವಸ್ತ್ರವಿಲ್ಲದೆ ಬಂದ ಉಪ್ಪಿನಂಗಡಿ ಅರಣ್ಯಾಧಿಕಾರಿ ಜಯಪ್ರಕಾಶ್ ಶಾಸಕರ ಮುಂದೆ ಅಶಿಸ್ತು ವರ್ತನೆ ತೋರಿದ್ದಾರೆಂದು ತಕ್ಷಣ ಇವರನ್ನು ಕರ್ತವ್ಯದಿಂದ ಅಮಾನತು ಮಾಡಿ ಎಂದು ಎಸಿಎಫ್‌ಗೆ ಶಾಸಕರು ರೇಗಾಡಿದ ಘಟನೆ ನಡೆದಿತ್ತು.

ಯಥಾಸ್ಥಿತಿ ಕಾಯ್ದುಕೊಳ್ಳಲು ಅರಣ್ಯ ಸಚಿವರಿಂದ ಸೂಚನೆ

ಸ್ಥಳದಿಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕರೆ ಮಾಡಿದ ಶಾಸಕ ಹರೀಶ್ ಪೂಂಜ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು. ಅರಣ್ಯ ಜಮೀನಿನಲ್ಲಿ ಒತ್ತುವರಿ ಮಾಡಿ ಮನೆಕಟ್ಟಿದರೆ ನ್ಯಾಯಾಲಯ ಕ್ರಮ ಕೈಗೊಳ್ಳುತ್ತದೆ. ಇದೀಗ ನಿಮ್ಮ ವ್ಯಾಪ್ತಿಯಲ್ಲಿ 100 ವರ್ಷ ಹಿಂದೆ ಮನೆ ಕಟ್ಟಿ ಕೂತಿದ್ದೀರಿ ಎಂದಾದರೆ ಸದ್ಯ ತಾತ್ಕಾಲಿಕ ನಿರ್ಮಿತ ಮನೆ ಯಥಾಸ್ಥಿತಿ ಇರಲಿ. ಮೇಲಾಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಸಮೀಕ್ಷೆ ಮಾಡಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಶಾಸಕ ಹರೀಶ್ ಪೂಂಜರಿಗೆ ಭರವಸೆ ನೀಡಿದರು. ಅರಣ್ಯಾಧಿಕಾರಿಗಳಿಗೂ ಮೌಕಿಕ ಅದೇಶ ನೀಡಿದರು.ಸ್ಥಳದಲ್ಲಿದ್ದ ಯುವಕರು ತಾತ್ಕಾಲಿಕ ಶೆಡ್ ನಿರ್ಮಿಸಿದ ಬಳಿಕ ಮನೆಮಂದಿ ಹಾಗೂ ಸ್ಥಳೀಯರು ಗೃಹಪ್ರವೇಶ ನಡೆಸಿದ್ದರು.

ಮತ್ತೆ ಬೆಳಗ್ಗೆ ಅರಣ್ಯ ಇಲಾಖೆ ಬಂದದ್ದೇಕೆ?

ಇದೀಗ ಸೋಮವಾರ ಮತ್ತೆ ಅರಣ್ಯ ಇಲಾಖೆ ತಂಡೋಪತಂಡವಾಗಿ ಬಂದು, ಕಟ್ಟಿದ ಮನೆಯನ್ನು ಕೆಡಹಲು ಹೊರಟಿದ್ದಾರೆ. ಮಾಹಿತಿ ತಿಳಿದ ಶಾಸಕ ಹರೀಶ್ ಪೂಂಜಾ, ಇತರ ಬಿಜೆಪಿ ಶಾಸಕರಾದ ರಾಜೇಶ್ ನಾಯ್ಕ್, ಭಾಗೀರಥಿ, ಪ್ರತಾಪ್ ಸಿಂಹ ನಾಯಕ್ ಅವರ ಜತೆಗೂಡಿ ಸ್ಥಳಕ್ಕೆ ಧಾವಿಸಿದ್ದಾರೆ. ಮತ್ತೆ ಅರಣ್ಯ ಇಲಾಖೆ ನಡೆ ವಿರುದ್ಧ ಎಲ್ಲ ಶಾಸಕರೂ ಒಂದಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಗೌಡರ ಜತೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಇನ್ನು ಈ ಘಟನೆ ಯಾವ ತಿರುವು ಪಡೆದುಕೊಳ್ಳುತ್ತದೋ ಎಂಬುದು ಕಾದು ನೋಡಬೇಕಾಗಿದೆ.


(ವರದಿ: ಹರೀಶ ಮಾಂಬಾಡಿ)

mysore-dasara_Entry_Point