ಕನ್ನಡ ಸುದ್ದಿ  /  Karnataka  /  Mangaluru News Ganeshotsav Celebrations At Mangalore University Triggers Pro And Counter Debate News In Kannada Uks

ಮಂಗಳೂರು ವಿವಿಯಲ್ಲಿ ಗಣೇಶೋತ್ಸವ ಆಚರಣೆ ಹುಟ್ಟುಹಾಕಿತು ಪರ ವಿರೋಧ ಚರ್ಚೆ, ಕಾರಣಗಳು ಹಲವು, ವಿದ್ಯಮಾನದ ಪೂರ್ಣ ವಿವರ ಹೀಗಿದೆ

ಮಂಗಳೂರು ವಿಶ್ವವಿದ್ವಾನಿಲಯದಲ್ಲಿ ಕಳೆದ 4 ದಶಕಗಳಿಂದ ಆಚರಿಸಲ್ಪಡುತ್ತಿರುವ ಗಣೇಶೋತ್ಸವ ಈ ಬಾರಿ ಹಲವು ಕಾರಣಗಳಿಗೆ ಸುದ್ದಿಯಲ್ಲಿದೆ. ಈ ವಿಚಾರವಾಗಿ ಪರ- ವಿರೋಧ ಚರ್ಚೆ ಶುರುವಾಗಿದ್ದು, ಈ ವಿದ್ಯಮಾನದ ಸಮಗ್ರ ವಿವರಣೆ ನೀಡಿದ್ದಾರೆ ಹರೀಶ್ ಮಾಂಬಾಡಿ.

ಮಂಗಳೂರು ವಿ.ವಿ.ಯಲ್ಲಿ ಗಣೇಶೋತ್ಸವ ಆಚರಣೆ ವಿಚಾರ ಪರ ವಿರೋಧ ಚರ್ಚೆಯನ್ನು  ಹುಟ್ಟುಹಾಕಿದೆ. (ಸಾಂಕೇತಿಕ ಚಿತ್ರ)
ಮಂಗಳೂರು ವಿ.ವಿ.ಯಲ್ಲಿ ಗಣೇಶೋತ್ಸವ ಆಚರಣೆ ವಿಚಾರ ಪರ ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ. (ಸಾಂಕೇತಿಕ ಚಿತ್ರ)

ಮಂಗಳೂರು: ಕಳೆದ 40 ವರ್ಷಗಳಿಂದ ಮಂಗಳೂರು ವಿಶ್ವವಿದ್ವಾನಿಲಯದಲ್ಲಿ ನಡೆದುಕೊಂಡು ಬರುತ್ತಿದ್ದ ಗಣೇಶೋತ್ಸವ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಆಡಿಟ್ ಸಮಸ್ಯೆಯ ಹಿನ್ನೆಲೆಯಲ್ಲಿ ಈ ಬಾರಿ ಗಣೇಶೋತ್ಸವ ಆಚರಣೆಯನ್ನು ಮಾಡುವ ಕುರಿತು ಗೊಂದಲಗಳು ಎದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ವಿವಿ ಕುಲಪತಿ ಜೊತೆ ಮಾತುಕತೆ ನಡೆಸಿ, ಗಣೇಶೋತ್ಸವವನ್ನು ಎಂದಿನಂತೆ ನಡೆಸಲೇಬೇಕು ಎಂದು ಒತ್ತಾಯಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಶಾಸಕರ ಈ ವರ್ತನೆಗೆ ಸ್ಪೀಕರ್ ಯು.ಟಿ.ಖಾದರ್, ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕುಲಪತಿ ಜಯರಾಜ್ ಅಮೀನ್ ಅವರು ಸ್ಪಷ್ಟನೆ ನೀಡಿ, ಎಂದಿನಂತೆ ಗಣೇಶೋತ್ಸವ ನಡೆಯಲಿದೆ ಎಂದು ಹೇಳಿ ವಿವಾದಕ್ಕೆ ಸದ್ಯ ತೆರೆ ಎಳೆದಿದ್ದಾರೆ.

ಯಾಕೆ ಹುಟ್ಟಿತು ವಿವಾದ

ಕಳೆದ ನಲ್ವತ್ತು ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣೇಶೋತ್ಸವ ಆಚರಣೆ ನಡೆದುಕೊಂಡು ಬರುತ್ತಿತ್ತು. ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸ್ಟೇಡಿಯಂ ನಲ್ಲಿ ಆಚರಣೆ ನಡೆಯುತ್ತಿತ್ತು. ಇದರ ವೆಚ್ಚವನ್ನು ಮಂಗಳೂರು ವಿಶ್ವವಿದ್ಯಾನಿಲಯದಿಂದ ಭರಿಸಲಾಗಿತ್ತು. ಆದರೆ ಈ ಖರ್ಚಿಗೆ ಅಡಿಟ್ ವೇಳೆ ಆಕ್ಷೇಪ ಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಹೊಸದಾಗಿ ನೇಮಕವಾದ ಮಂಗಳೂರು ವಿ ವಿ ಕುಲಪತಿ ಜಯರಾಜ್ ಅಮೀನ್ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಗಣೇಶೋತ್ಸವ ಆಚರಿಸುವ ವಿಚಾರದಲ್ಲಿ ಗೊಂದಲದಲ್ಲಿದ್ದರು. ಮಾಧ್ಯಮಗಳಲ್ಲಿ ಈ ವಿಚಾರ ಬಿತ್ತರವಾಗುತ್ತಿದ್ದಂತೆ ಮತ್ತೆ ಪರ, ವಿರೋಧದ ಚರ್ಚೆಗಳು ಹುಟ್ಟಿದವು. ಇದರ ನಡುವೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಜಯರಾಜ್ ಅಮೀನ್ ಅವರೊಂದಿಗೆ ಚರ್ಚಿಸಿ, ಗಣೇಶೋತ್ಸವ ಆಚರಣೆ ಮಾಡಬೇಕೆಂದು ಒತ್ತಾಯಿಸಿದ್ದರು. ಈ ಬಗ್ಗೆ ಕುಲಪತಿ ಜಯರಾಜ್ ಅಮೀನ್ ಅವರು ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಈ ಬಗ್ಗೆ ಸಲಹೆ ಕೇಳಿದ್ದರು.

ವಿವಿ ಕುಲಪತಿಗಳು ಏನು ಹೇಳುತ್ತಾರೆ

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಜಯರಾಜ್ ಅಮೀನ್ ಸ್ಪಷ್ಟನೆ ನೀಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅದರಂತೆ ‘’ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಕುಲಪತಿಯವರಿಂದ ವಿರೋಧವಿದೆ ಎಂದು ಕಳೆದ ಕೆಲವು ದಿನಗಳಿಂದ ಮಾಧ್ಯಮದಲ್ಲಿ ವರದಿಯಾಗುತ್ತಿರುವ ವಿಚಾರ ಸತ್ಯಕ್ಕೆ ದೂರವಾದುದು ಹಾಗೂ ವಿಷಾದನೀಯ. ವಿಶ್ವವಿದ್ಯಾನಿಲಯದ ಆವರಣದಲ್ಲಿ ಗಣೇಶೋತ್ಸವ ನಡೆಸಲು ಯಾವುದೇ ನಿರಾಕರಣೆ/ವಿರೋಧ ಇರುವುದಿಲ್ಲ. ಈ ಹಿಂದಿನಂತೆಯೇ ಈ ವರ್ಷವೂ ವಿವಿಯ ಆವರಣದಲ್ಲಿ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತದೆ’’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಾಸಕ ವೇದವ್ಯಾಸ್ ವಿರುದ್ಧ ಡಿವೈಎಫ್ ಐ ಮುಖಂಡ ಮುನೀರ್ ಟೀಕೆ

ಶಾಸಕರು ಸ್ಥಳೀಯ ಏಳೆಂಟು ಬಿಜೆಪಿ ಮುಖಂಡರ ತಂಡದೊಂದಿಗೆ ಕುಲಪತಿ ಕಚೇರಿಗೆ ಗಣೇಶೋತ್ಸವಕ್ಕೆ ಹಣ ಬಿಡುಗಡೆ ಮಾಡುವಂತೆ ಆಕ್ರಮಣಕಾರಿಯಾಗಿ ಆಗ್ರಹಿಸಿದ್ದಾರೆ. ಇದು ಅನಾಗರಿಕ ನಡೆ ಉತ್ತರ ಭಾರತದ ಮಾದರಿಯನ್ನು ಶಾಸಕ ವೇದವ್ಯಾಸ ಕಾಮತ್ ಇಲ್ಲಿ ಅನುಕರಿಸಿದ್ದಾರೆ. ತುಳುನಾಡಿಗೆ ಇದು ಹೊಸತು. ಇಂತಹ ನಡೆಗಳನ್ನು ಈಗಲೇ ಬಲವಾಗಿ ವಿರೋಧಿಸಬೇಕು. ಸಜ್ಜನರಾದ ಕುಲಪತಿ ಜಯರಾಜ ಅಮೀನ್ ಇದನ್ನೆಲ್ಲ ಸೌಮ್ಯ ಭಾಷೆಯಲ್ಲೇ ಸರಕಾರದ ಗಮನಕ್ಕೆ ತಂದಿದ್ದಾರೆ. ಎಂದಿನಂತೆ ಧಾರ್ಮಿಕ ನಂಬಿಕೆಯನ್ನು ಮುಂದಿಟ್ಟು (ದುರಪಯೋಗ ಪಡಿಸಿ) ಹಿಂದೂ ವಿರೋಧಿ ಕುಲಪತಿ ವಿರುದ್ದ ಪ್ರತಿಭಟನಾ ಸಭೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಈಗ ಎಲ್ಲೂ ಒಂದಾಗಿ ಶಾಸಕರ ನಡೆಯನ್ನು ಪ್ರತಿಭಟಿಸಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ವಿವಿಯಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿದ ಕುರಿತು ಯಾರಿಗೆ ಕಾಳಜಿ ಇದೆ? ಸ್ಪೀಕರ್ ಖಾದರ್

ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸ್ಪೀಕರ್ ಹಾಗೂ ಮಂಗಳೂರು ಶಾಸಕ ಯು.ಟಿ.ಖಾದರ್, ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಸಿಬ್ಬಂದಿಗೆ ಮೂರು ತಿಂಗಳಿಂದ ಸಂಬಳವೇ ಆಗಿಲ್ಲ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣದ ಗುಣಮಟ್ಟ ಯಾಕೆ ಕುಸಿದಿದೆ? ಅಲ್ಲಿನ ಅನುದಾನವನ್ನು ಬೇರೆ ಯಾವುದಕ್ಕೋ ಕೊಟ್ಟು ಈಗ ಹಣ ಇಲ್ಲದಾಗಿದೆ. ನಿವೃತ್ತಿಯಾದ ಉಪನ್ಯಾಸಕರಿಗೆ ಪಿಂಚಣಿ ಕೊಡುವ ಗತಿಯಿಲ್ಲ. ಇದರ ಬಗ್ಗೆ ಯಾವುದೇ ಜನಪ್ರತಿನಿಧಿಗೆ ಕಾಳಜಿ ಇದೆಯೇ? ಎಂದು ಪರೋಕ್ಷವಾಗಿ ವೇದವ್ಯಾಸ್ ಕಾಮತ್ ವಿರುದ್ಧ ಕಿಡಿಕಾರಿದರು

ಗಣೇಶೋತ್ಸವವನ್ನು ಅಲ್ಲಿನವರು ಮಾಡ್ತಾರೆ, ಹೊರಗಿನವರಿಗೆ ಯಾಕೆ ಉಸಾಬರಿ - ಖಾದರ್

ಕಳೆದ 40ವರ್ಷಗಳಿಂದ ಮಂಗಳೂರು ವಿವಿಯಲ್ಲಿ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತದೆ‌. ಆದರೆ ಯಾವುದೇ ವಿದ್ಯಾಸಂಸ್ಥೆಯಲ್ಲಿ ಮೌಲ್ಯಯುತ ಶಿಕ್ಷಣ, ಅಕಾಡೆಮಿಕ್ ಶಿಕ್ಷಣ ಹಾಗೂ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕಿದೆ. ಗಣೇಶೋತ್ಸವ ವಿಚಾರಕ್ಕೆ ಸಂಬಂಧಿಸಿದಂತೆ ಕುಲಪತಿಗಳು ನಿರ್ಧಾರ ಕೈಗೊಳ್ಳಬೇಕು‌. ಹೊರಗಿನವರು ಇದರಲ್ಲಿ ಮೂಗು ತೂರಿಸುವ ಅಗತ್ಯವಿಲ್ಲವೆಂದು ಶಾಸಕ ವೇದವ್ಯಾಸ ಕಾಮತ್ ಅವರ ಹೆಸರು ಸೂಚಿಸದೆ ಪರೋಕ್ಷ ಟೀಕೆ ಮಾಡಿದರು.

ಕುಲಪತಿಗಳು ಅದು ಕಾನೂನುಬದ್ಧವಾಗಿ ಇದೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ತಪ್ಪಿದ್ದಲ್ಲಿ ಸರಕಾರಕ್ಕೆ ಮಾಹಿತಿ ನೀಡಬೇಕಾಗುತ್ತದೆ. ಆಸದ್ಯ ಮಂಗಳೂರು ವಿವಿ ಎ ಗ್ರೇಡ್ ನಿಂದ ಬಿ ಗ್ರೇಡ್ ಗೆ ಇಳಿದಿದೆ. ಕಳೆದ ವರ್ಷ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶ ಇನ್ನೂ ಬಂದಿಲ್ಲ. ನಿವೃತ್ತಿ ಹೊಂದಿದ ಪ್ರಾಧ್ಯಾಪಕರಿಗೆ ಇನ್ನೂ ಪಿಂಚಣಿ ಕೊಡಲು ಹಣವಿಲ್ಲ. ಅತಿಥಿ ಉಪನ್ಯಾಸಕರಿಗೆ ಮೂರು ತಿಂಗಳು ಸಂಬಳ ಬಂದಿಲ್ಲ. ಇದರ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.