Crime News: ಗುದನಾಳದಲ್ಲಿ 98 ಲಕ್ಷ ರೂ ಮೌಲ್ಯದ ಚಿನ್ನ ಕಳ್ಳಸಾಗಣೆ; ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಪಿಯ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Crime News: ಗುದನಾಳದಲ್ಲಿ 98 ಲಕ್ಷ ರೂ ಮೌಲ್ಯದ ಚಿನ್ನ ಕಳ್ಳಸಾಗಣೆ; ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಪಿಯ ಬಂಧನ

Crime News: ಗುದನಾಳದಲ್ಲಿ 98 ಲಕ್ಷ ರೂ ಮೌಲ್ಯದ ಚಿನ್ನ ಕಳ್ಳಸಾಗಣೆ; ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರೋಪಿಯ ಬಂಧನ

ಅಬುಧಾಬಿಯಿಂದ ಮಂಗಳೂರಿಗೆ ಬಂದ ವಿಮಾನದಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಗುದನಾಳದಲ್ಲಿ ಚಿನ್ನ ಕಳ್ಳಸಾಗಣೆ ಮಾಡಲು ಪ್ರಯತ್ನಿಸಿ ಕಸ್ಟಮ್ಸ್ ಬಲೆಗೆ ಬಿದ್ದಿದ್ದಾನೆ. ಬಂಧಿತನಿಂದ 98 ಲಕ್ಷ ರೂಪಾಯಿ ಮೌಲ್ಯದ ಚಿನ್ನ ವಶಪಡಿಸಲಾಗಿದೆ.

ಕಳ್ಳಸಾಗಣೆ ಮಾಡುತ್ತಿದ್ದಾಗ ಸಿಕ್ಕ ಚಿನ್ನ
ಕಳ್ಳಸಾಗಣೆ ಮಾಡುತ್ತಿದ್ದಾಗ ಸಿಕ್ಕ ಚಿನ್ನ

ಮಂಗಳೂರು: ಗುದನಾಳದಲ್ಲಿ ಮರೆಮಾಡಿ ಚಿನ್ನ ಸಾಗಾಟ ಮಾಡುತ್ತಿರುವುದನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ IX 816 ಮೂಲಕ ಜನವರಿ 8 ರಂದು ಅಬುಧಾಬಿಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ. ಪ್ರಯಾಣಿಕನ ಅನುಮಾನಾಸ್ಪದ ಚಲನವಲನದ ಆಧಾರದ ಮೇಲೆ, ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಆತನನ್ನು ತಡೆದು ಪರಿಶೀಲನೆ ನಡೆಸಿದರು.

ಆತನ ದೇಹವನ್ನು ಪರೀಕ್ಷಿಸುವಾಗ, ಅವರ ಸೊಂಟದ ಪ್ರದೇಶದಲ್ಲಿ ಬೀಪ್ ಶಬ್ದ ಹೊರಹೊಮ್ಮಿದೆ. ಪೇಸ್ಟ್ ರೂಪದಲ್ಲಿ ಚಿನ್ನವನ್ನು ಹೊಂದಿರುವ 5 ಅಂಡಾಕಾರದ ಆಕಾರದ ವಸ್ತುಗಳನ್ನು ಅವನ ಗುದನಾಳದಲ್ಲಿ ಮರೆಮಾಡಲಾಗಿತ್ತು. ಅದರಲ್ಲಿ 24 ಕ್ಯಾರೆಟ್ ಶುದ್ಧತೆಯ 1579 ಗ್ರಾಂ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ 98,68,750 ರೂಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.

ಶಿರಸಿಯಲ್ಲಿ ಶೌಚಾಲಯದಲ್ಲಿರುವ ಮಲ ಹೊರಿಸಿದ ಪ್ರಕರಣ ಬೆಳಕಿಗೆ

ಶೌಚಾಲಯದ ಮಲವನ್ನು ಸ್ಥಳದಿಂದ ಕಾರ್ಮಿಕರ ಮೂಲಕ ಸಾಗಿಸಿದ ಪ್ರಕರಣವೊಂದು ಶಿರಸಿಯಲ್ಲಿ ಬೆಳಕಿಗೆ ಬಂದಿದ್ದು, ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ಘಟನೆ ನಡೆದಿದ್ದು, ಕಟ್ಟಡದ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.

ದೇವಿಕೇರಿ ಹತ್ತಿರದ ಗೌಡಳ್ಳಿ ಹೊಟೇಲ್ ಹಿಂಭಾಗ ದಲ್ಲಿರುವ ಹೊಸದಾಗಿ ನಿರ್ಮಿಸುತ್ತಿರುವ ಕಟ್ಟಡ ಮಹಾಬಲೇಶ್ವರ ಬಿ.ಬೈಂದೂರು ಮಾಲಕತ್ವದ್ದಾಗಿದ್ದು, ಅವರು ತಮ್ಮ ಕಟ್ಟಡವನ್ನು ನಿರ್ಮಿಸಲು ಬಂದ ಕಾರ್ಮಿಕರನ್ನು ಬಳಸಿಕೊಂಡು ಸ್ಥಳದಲ್ಲಿರುವ ತಮ್ಮ ಹಳೆಯ ಶೌಚಾಲಯದ ಗುಂಡಿಯನ್ನು ಜ.4ರಂದು ಸ್ವಚ್ಛಗೊಳಿಸಿದ್ದು, ಈ ಸಂದರ್ಭ, ಶೌಚಾಲಯದ ಮಲವನ್ನು ಸ್ಥಳದಿಂದ ಕಾರ್ಮಿಕರ ಮೂಲಕ ಸಾಗಿಸಿರುವುದು ಮತ್ತು ಆ ಸ್ಥಳದ ಅಕ್ಕಪಕ್ಕದಲ್ಲಿ ಬಿದ್ದಿದ್ದ ಮಲದ ಕುರುಹುಗಳಿಂದ ಸ್ಪಷ್ಟವಾಗಿ ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಹಿನ್ನಲೆಯಲ್ಲಿ ಕಟ್ಟಡದ ಮಾಲೀಕ ಪಡ್ತಿಗಲ್ಲಿಯ ಮಹಾಬಲೇಶ್ವರ ಬಿ ಬೈಂದೂರು (60) ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಮಂಜುನಾಥ ವೆರ್ಣೀಕರ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ರತ್ನಾ ಕುರಿ ತನಿಖೆ ನಡೆಸುತ್ತಿದ್ದಾರೆ.

ನೆರಿಯ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆ ಪತ್ತೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ಅಣಿಯೂರು ಎಂಬಲ್ಲಿರುವ ಹೊಳೆಯಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಮರಳು ಕಳವು ಮಾಡಿ ಸಾಗಾಟ ಮಾಡುವ ಉದ್ದೇಶದಿಂದ ಮರಳು ರಾಶಿ ಹಾಕುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಇದರಂತೆ, ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಅನೀಲ್ ಕುಮಾರ್ ಡಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ್ದರು. ಅಲ್ಲಿ ಸುಮಾರು 15 ಪ್ಲಾಸ್ಟಿಕ್ ಬುಟ್ಟಿಯಷ್ಟು ರಾಶಿ ಹಾಕಿದ್ದ ಮರಳು ರಾಶಿ ಹಾಗೂ ಸ್ಥಳದಲ್ಲಿ ಕೃತ್ಯಕ್ಕೆ ಬಳಸಿದ ಪ್ಲಾಸ್ಟಿಕ್ ಬುಟ್ಟಿ ಸೇರಿ ಇತರೆ ವಸ್ತುಗಳು ಕಂಡುಬಂದಿದೆ. ಪೊಲೀಸರು ಇವುಗಳನ್ನು ವಶಪಡಿಸಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Whats_app_banner