Breaking News: ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಧಾರಾಕಾರಾ ಮಳೆ, ಇಂದು ಶಾಲೆ, ಪ್ರೌಢಶಾಲೆಗಳಿಗೆ ರಜೆ ಘೋಷಿಸಿದ ತಾಲೂಕು ಆಡಳಿತ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಯ ಕಾರಣ ಈ ಎರಡು ತಾಲೂಕುಗಳ ಶಾಲೆ, ಪ್ರೌಢಶಾಲೆಗಳಿಗೆ ತಾಲೂಕು ಆಡಳಿತ ಇಂದು (ಜುಲೈ 4) ರಜೆ ಘೋಷಿಸಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ ಭಾಗದಲ್ಲಿ ವಿಶೇಷವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜು. 4 ರಂದು ಎಲ್ಲಾ ಸರಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಬೆಳ್ತಂಗಡಿ, ಬಂಟ್ವಾಳ ತಹಶೀಲ್ದಾರ್ ಹಾಗೂ ಬಿ.ಇ.ಒ ಬೆಳ್ತಂಗಡಿ, ಬಂಟ್ವಾಳ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆ ಭಾರಿ ಮಳೆಯ ಮುನ್ಸೂಚನೆಯನ್ನು ಗಮನಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕು ಆಡಳಿತ, ಶಾಲೆ, ಹೈಸ್ಕೂಲುಗಳಿಗೆ ರಜೆ ಘೋಷಿಸಿದೆ. ಆಯಾ ತಾಲೂಕುಗಳ ತಹಸೀಲ್ದಾರ್‌ಗಳು ಬಿಇಒಗಳ ಜೊತೆ ತುರ್ತು ಸಮಾಲೋಚನೆ ನಡೆಸಿ ರಜೆ ಘೋಷಿಸುವ ನಿರ್ಧಾರಕ್ಕೆ ಬಂದು ಬೆಳಗ್ಗೆಯೇ ಸೂಚನೆ ಹೊರಡಿಸಿದರು.
ಅದರಂತೆ ಬಿಇಒಗಳು ಆಯಾ ಶಾಲೆಗಳಿಗೆ ಸಂಬಂಧಿಸಿದ ಕ್ಲಸ್ಟರ್ ಮಟ್ಟದ ಅಧಿಕಾರಿಗಳಿಗೆ ತುರ್ತು ಸೂಚನೆ ಹೊರಡಿಸಿ, ಸಾಮಾಜಿಕ ಜಾಲತಾಣದ ಮೂಲಕ ಸಂದೇಶಗಳನ್ನು ನೀಡಿದ್ದಾರೆ. ಬೆಳಗ್ಗೆ ಶಾಲಾ ಬಸ್ಸುಗಳಿಗೆ ಕಾಯುತ್ತಿದ್ದ ಮಕ್ಕಳು ವಾಪಸ್ ಮನೆಗೆ ಮರಳಬೇಕಾಯಿತಾದರೆ, ಕೆಲವರು ಸೂಚನೆಗಳನ್ನು ಗಮನಿಸದೇ ಇದ್ದವರು ಶಾಲೆಗೆ ಹೊರಟು ನಿಂತಿದ್ದ ದೃಶ್ಯಗಳೂ ಕಂಡುಬಂದವು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ; ವಿವಿಧೆ ವಿವಿಧ ರೀತಿಯ ಹಾನಿ
ಮಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕಾಮಗಾರಿಯ ಸಂದರ್ಭ ಗಾಳಿ ಮಳೆಯಿಂದಾಗಿ ಮಣ್ಣು ಜರಿದು ಕಾರ್ಮಿಕ ಮೃತಪಟ್ಟ ಘಟನೆ ನಡೆದಿತ್ತು. ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳಲ್ಲಿ ಭಾರಿ ಗಾಳಿ ಮಳೆ ಬುಧವಾರ ಸುರಿದಿತ್ತು. ಬುಧವಾರ ಸುರಿದ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ಹಲವೆಡೆ ಹಾನಿಗಳು ಸಂಭವಿಸಿವೆ ಎಂದು ತಾಲೂಕು ಕಚೇರಿ ಮಾಹಿತಿಯಲ್ಲಿ ತಿಳಿಸಿದೆ.
ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆ ಕೇಂದ್ರ ಮೈದಾನ ಬಳಿ ನಿವಾಸಿ ಮೋಹಿನಿ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಯಾವುದೇ ಜೀವ ಹಾನಿಯಾಗಿರುವುದಿಲ್ಲ. ಇರ್ವತ್ತುರು ಗ್ರಾಮದ ಸುಮಿತ್ರ ಅವರ ಮನೆಗೆ ತೆಂಗಿನ ಮರ ಬಿದ್ದು ಭಾಗಶ ಹಾನಿಯಾಗಿರುತ್ತದೆ. ಕುರಿಯಾಳ ಕೊಪ್ಪಳ ಮನೆಯ ಮಾರ್ಸೆಲ್ ಬೆನಡಿಕ್ಟ್ ಲೋಬೊ ಮನೆಗೆ ತೀವ್ರ ಹಾನಿ ಆಗಿರುತ್ತದೆ. ಕುರಿಯಾಳದ ಜಗದೀಶ್ ರೈ ಮನೆ ಹಿಂಬದಿ ಬರೆ ಕುಸಿದಿರುತ್ತದೆ. ಬಾಳ್ತಿಲ ಗ್ರಾಮದ ಕಮಲ ನಾಯ್ಕ ಎಂಬವರ ಮನೆಯ ಮೇಲೆ ಮರ ಬಿದ್ದು ಮನೆಯ ಒಂದು ಬದಿಗೆ ತೀವ್ರ ಹಾನಿಯಾಗಿರುತ್ತದೆ. ಯಾವುದೇ ಜೀವ ಹಾನಿಯಾಗಿರುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ.
ಬಂಟ್ವಾಳ ತಾಲೂಕಿನಲ್ಲಿ ಯಾವುದೇ ಜೀವಹಾನಿ ಆಗದೇ ಇದ್ದರೂ ಗಾಳಿ ಮಳೆಗೆ ಮಕ್ಕಳು ಶಾಲೆಗಳಿಗೆ ಹೋಗುವ ಸಂದರ್ಭ ಅಥವಾ ಮರಳುವ ಸಂದರ್ಭ ಸಮಸ್ಯೆ ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದೆ ಎಂದು ಬಂಟ್ವಾಳ ತಹಸೀಲ್ದಾರ್ ಡಿ. ಅರ್ಚನಾ ಭಟ್ ಹಿಂದುಸ್ತಾನ್ ಟೈಂಸ್ ಕನ್ನಡ ಪ್ರತಿನಿಧಿಗೆ ತಿಳಿಸಿದ್ದಾರೆ.
ಕಳೆದ ವಾರ ಜಿಲ್ಲೆಯಾದ್ಯಂತ ರಜೆ ಇತ್ತು
ಜೂನ್ ಕೊನೆಯ ವಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿತ್ತು. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಬಳಿಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮಳೆಯಿಂದ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿದರು. ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಅಧಿಕಾರಿಗಳ ಸಭೆ ಕರೆದಿದ್ದರು.
ವಿಶೇಷವಾಗಿ ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಆವರು ಕಡಿದುಬಿದ್ದಿದ್ದ ತಂತಿಗಳನ್ನು ಮುಟ್ಟಿ ಸಾವನ್ನಪ್ಪಿರುವ ಘಟನೆಗಳನ್ನು ಉಲ್ಲೇಖಿಸಿ, ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದಿದ್ದರು. ಕಳೆದ ವಾರ ಮಳೆಯಿಂದಾಗಿ ಮನೆ ಪಕ್ಕದ ಕಂಪೌಂಡ್ ಜರಿದುಬಿದ್ದು ನಾಲ್ವರು ಸಾವನ್ನಪ್ಪಿದ್ದರೆ, ವಿದ್ಯುತ್ ಆಘಾತದಿಂದ ಮೂವರು ಸಾವನ್ನಪ್ಪಿದ್ದರು. ಬುಧವಾರ ಗಾಳಿ ಮಳೆಗೆ ಮಣ್ಣು ಜರಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳದಿರಲು ಜಿಲ್ಲಾಡಳಿತ ನಿರ್ಧರಿಸಿದ್ದು, ಗಾಳಿ ಮಳೆ ಬಂದ ಸಂದರ್ಭ ಆಯಾ ತಾಲೂಕುಗಳ ತಹಸೀಲ್ದಾರ್ ಮತ್ತು ಬಿಇಒಗಳಿಗೆ ರಜೆ ನೀಡುವ ಸ್ವಾಯತ್ತ ಅಧಿಕಾರವನ್ನು ಒದಗಿಸಿದೆ.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
