ಮಂಗಳೂರು ಸಂತ ಜೆರೋಸಾ ಶಾಲಾ ವಿವಾದ ತನಿಖೆಗೆ ಐಎಎಸ್ ಅಧಿಕಾರಿ ನೇಮಕ; ವಿವಾದಕ್ಕೀಡಾಯಿತು ಆಂಗ್ಲ ಶಿಕ್ಷಕಿಯ ಪಠ್ಯ ವಿವರಣೆ
ಮಂಗಳೂರು ಸಂತ ಜೆರೋಸಾ ಶಾಲಾ ವಿವಾದ ತಾರಕಕ್ಕೇರಿದ್ದು, ತನಿಖೆಗೆ ಐಎಎಸ್ ಅಧಿಕಾರಿ ನೇಮಕ ಮಾಡಿರುವುದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಆಂಗ್ಲ ಶಿಕ್ಷಕಿಯ ಪಠ್ಯ ವಿವರಣೆ ವಿವಾದಕ್ಕೀಡಾದುದು ಇದಕ್ಕೆ ಕಾರಣ. (ವರದಿ ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಜೆಪ್ಪುವಿನಲ್ಲಿರುವ ಸಂತ ಜೆರೋಸಾ ಶಾಲಾ ವಿವಾದ ತನಿಖೆಗೆ ಐಎಎಸ್ ಅಧಿಕಾರಿ ನೇಮಕವಾಗಿದೆ. ಆಂಗ್ಲ ಭಾಷಾ ಶಿಕ್ಷಕಿಯ ಪಠ್ಯ ವಿವರಣೆಯಿಂದ ಶುರುವಾದ ವಿವಾದಕ್ಕೆ ರಾಜಕೀಯ ಬಣ್ಣವೂ ಸೇರಿಕೊಂಡಿದ್ದು, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುವಂತೆ ಮಾಡಿದೆ.
ಮಂಗಳೂರು ಜೆಪ್ಪು ಎಂಬಲ್ಲಿರುವ ಸಂತ ಜೆರೋಸಾ ಶಾಲೆಯ ಶಿಕ್ಷಕರೊಬ್ಬರು ಹಿಂದೂ ಧರ್ಮದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಕರ್ನಾಟಕ ಸರ್ಕಾರ ಹಿರಿಯ ಐಎಎಸ್ ಅಧಿಕಾರಿಯನ್ನು ತನಿಖಾಧಕಾರಿಯನ್ನಾಗಿ ನೇಮಕ ಮಾಡಿದೆ. ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರೂ ಆಗಿರುವ ಕಲಬುರಗಿಯ ಆಕಾಶ್ ಐಎಎಸ್‌ಗೆ ತನಿಖೆಯ ಹೊಣೆಗಾರಿಕೆ ನೀಡಲಾಗಿದೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಶಾಲೆಯಲ್ಲಿ ಏನೇ ನಡೆದರೂ ಅದು ಅತ್ಯಂತ ದುರದೃಷ್ಟಕರ. ಘಟನೆಯ ಸಂಪೂರ್ಣ ಚಿತ್ರಣವನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಹಾಗಾಗಿ ಘಟನೆಯ ತನಿಖೆಗೆ ತನಿಖಾ ಅಧಿಕಾರಿಯನ್ನು ನೇಮಿಸಿದ್ದೇವೆ. ಅವರು ಸರಕಾರಕ್ಕೆ ವರದಿ ಸಲ್ಲಿಸಲಿದ್ದು, ಅದರಂತೆ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದು ಇಷ್ಟು
ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗಿರುವ ಎರಡು ಆಡಿಯೋ ಸಂದೇಶಗಳೊಂದಿಗೆ ಈ ವಿವಾದ ದೊಡ್ಡದಾಯಿತು. ಸಂತ ಜೆರೋಸಾ ಶಾಲೆಯ ಇಂಗ್ಲಿಷ್ ಶಿಕ್ಷಕಿ ಸಿಸ್ಟರ್ ಪ್ರಭಾ ತಮ್ಮ ತರಗತಿಯಲ್ಲಿ ಹಿಂದೂ ಧಾರ್ಮಿಕ ಆಚರಣೆ ಮತ್ತು ರಾಜಕೀಯ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂತು. ಸಾಮಾಜಿಕ ಮಾಧ್ಯಮ ಸಂದೇಶಗಳು ವೈರಲ್ ಆಗುತ್ತಿದ್ದಂತೆ ನಾಲ್ವರು ಪಾಲಕರು ಶಾಲಾ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ ಅಹವಾಲು ಸಲ್ಲಿಸಿದರು. ಮುಖ್ಯೋಪಾಧ್ಯಾಯರು, ಸತ್ಯವನ್ನು ಬಹಿರಂಗಪಡಿಸಲು ಸಂಪೂರ್ಣ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.
ಶಾಲಾ ಆಡಳಿತ ಮಂಡಳಿ ನಿಲುವು
ಆದಾಗ್ಯೂ, ಸಂತ ಜೆರೋಸಾ ಶಾಲಾ ಮುಖ್ಯೋಪಾಧ್ಯಾಯಿನಿ ಪೋಷಕರ ಆರೋಪವನ್ನು ನಿರಾಕರಿಸಿ ಇಂಗ್ಲಿಷ್ ಶಿಕ್ಷಕಿಯ ಬೆಂಬಲಕ್ಕೆ ನಿಂತರು. ಶಾಲೆಯ ಹೆಸರು ಹಾಳು ಮಾಡಲು ಈ ರೀತಿ ವಿಷಯಗಳನ್ನು ಪ್ರಸಾರ ಮಾಡಲಾಗುತ್ತಿದೆ. “ಶಿಕ್ಷಕರು ದೇವರ ವಿರುದ್ಧ ಏನನ್ನೂ ಮಾತನಾಡಿಲ್ಲ. ಆದರೆ ಟ್ಯಾಗೋರ್ ಅವರ 'ಕೆಲಸವೇ ಪೂಜೆ' ಎಂಬ ಕವಿತೆಯ ಅರ್ಥವನ್ನು ವಿದ್ಯಾರ್ಥಿಗಳಿಗೆ ವಿವರಿಸಿದ್ದಾರೆ" ಎಂದು ಆಡಳಿತ ಮಂಡಳಿ ಪರವಾಗಿ ಹೊರಡಿಸಿ ಪ್ರಕಟಣೆ ತಿಳಿಸಿದೆ.
ದೇವಾಲಯಗಳು, ಚರ್ಚ್‌ಗಳು ಮತ್ತು ಮಸೀದಿಗಳು ಕೇವಲ ಕಟ್ಟಡಗಳು ಮತ್ತು ದೇವರು ಮಾನವ ಹೃದಯದಲ್ಲಿ ನೆಲೆಸಿದ್ದಾನೆ ಎಂದು ಹೇಳುವ ಕವಿತೆಯ ಅರ್ಥವನ್ನು ಶಿಕ್ಷಕರು ವಿವರಿಸಿದ್ದಾರೆ ಎಂದು ಆಡಳಿತ ಮಂಡಳಿ ಹೇಳಿದೆ.
ಪ್ರಭಾ ಅವರು ಹಿಂದೂ ಧರ್ಮದ ವಿರುದ್ಧ ಕೆಲವು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ನಾಲ್ವರು ಫೆಬ್ರವರಿ 10 ರಂದು ತನ್ನನ್ನು ಸಂಪರ್ಕಿಸಿದ್ದಾರೆ ಮತ್ತು ತನಿಖೆ ನಡೆಸಲಾಗುವುದು ಎಂದು ಅವರಿಗೆ ಭರವಸೆ ನೀಡಲಾಗಿತ್ತು ಎಂದು ಮುಖ್ಯೋಪಾಧ್ಯಾಯಿನಿ ಹೇಳಿದ್ದಾರೆ.
(ವರದಿ ಹರೀಶ್ ಮಾಂಬಾಡಿ, ಮಂಗಳೂರು)
(This copy first appeared in Hindustan Times Kannada website. To read more like this please logon to kannada.hindustantimes.com)