ಕರ್ನಾಟಕ ಪಿಯುಸಿ ಫಲಿತಾಂಶ; ದಕ್ಷಿಣ ಕನ್ನಡದ ಅಳಿಕೆಯಲ್ಲಿ ಕಾಮರ್ಸ್ ಕಲಿತ ಶಮಿತ್‌, ಪ್ರಜ್ವಲ್‌ಗೆ ಸಿಎ ಮಾಡುವಾಸೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಪಿಯುಸಿ ಫಲಿತಾಂಶ; ದಕ್ಷಿಣ ಕನ್ನಡದ ಅಳಿಕೆಯಲ್ಲಿ ಕಾಮರ್ಸ್ ಕಲಿತ ಶಮಿತ್‌, ಪ್ರಜ್ವಲ್‌ಗೆ ಸಿಎ ಮಾಡುವಾಸೆ

ಕರ್ನಾಟಕ ಪಿಯುಸಿ ಫಲಿತಾಂಶ; ದಕ್ಷಿಣ ಕನ್ನಡದ ಅಳಿಕೆಯಲ್ಲಿ ಕಾಮರ್ಸ್ ಕಲಿತ ಶಮಿತ್‌, ಪ್ರಜ್ವಲ್‌ಗೆ ಸಿಎ ಮಾಡುವಾಸೆ

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ರ‍್ಯಾಂಕ್ ಪಡೆದವರ ಪೈಕಿ ದಕ್ಷಿಣ ಕನ್ನಡದವರೂ ಇದ್ದಾರೆ. ಈ ಪೈಕಿ ಅಳಿಕೆಯಲ್ಲಿ ಕಾಮರ್ಸ್ ಕಲಿತ ಇಬ್ಬರಿಗೂ ಸಿಎ ಮಾಡುವಾಸೆ ಇದೆ. ಶಮಿತ್‌ ಮತ್ತು ಪ್ರಜ್ವಲ್‌ ಲೆಕ್ಕಪರಿಶೋಧಕರಾಗುವ ಕನಸು ಹೊಂದಿದ್ದಾರೆ. (ವರದಿ - ಹರೀಶ್ ಮಾಂಬಾಡಿ, ಮಂಗಳೂರು)

 ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಶಮಿತ್ ವಿ. ಕುರ್ಡೇಕರ್ ಮತ್ತು ಪ್ರಜ್ವಲ್ ಕೆ.ಎನ್
ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಶಮಿತ್ ವಿ. ಕುರ್ಡೇಕರ್ ಮತ್ತು ಪ್ರಜ್ವಲ್ ಕೆ.ಎನ್

ಮಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜು ಶೇ.100 ಫಲಿತಾಂಶ ದಾಖಲಿಸಿದೆ. 213 ವಿದ್ಯಾರ್ಥಿಗಳಲ್ಲಿ 166 ವಿಶಿಷ್ಠ ಶ್ರೇಣಿ, 46 ಪ್ರಥಮ ಶ್ರೇಣಿ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಆಗಿದ್ದಾರೆ.

ವಾಣಿಜ್ಯ ವಿಭಾಗದ ಶಮಿತ್ ವಿ. ಕುರ್ಡೇಕರ್ 600ರಲ್ಲಿ 595 ಅಂಕ ಗಳಿಸಿ ರಾಜ್ಯಕ್ಕೆ 3ನೇ ಸ್ಥಾನ ಗಳಿಸಿದರೆ, ಪ್ರಜ್ವಲ್ ಕೆ.ಎನ್. 594 ಅಂಕ ಗಳಿಸಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಇಬ್ಬರೂ ಸಿಎ ವ್ಯಾಸಂಗ ಮಾಡುವ ಆಸಕ್ತಿ ಹೊಂದಿದ್ದು, ಪರೀಕ್ಷೆಯಲ್ಲಿ ಸಂಸ್ಥೆಯ ಶಿಕ್ಷಕರ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ನಿಯಮಿತ ಓದುವಿಕೆ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು ಎಂದಿದ್ದಾರೆ.

ಶಮಿತ್ ಕುರ್ಡೇಕರ್- ಲೆಕ್ಕಪರಿಶೋಧಕನಾಗುವ ಕನಸು

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಶಮಿತ್ ಕುರ್ಡೇಕರ್ ತಾವರಗೆರೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿ ಬಳಿಕ 6ನೇ ಕ್ಲಾಸಿಗೆ ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆ ವಿದ್ಯಾಸಂಸ್ಥೆ ಸೇರಿಕೊಂಡಿದ್ದ. ಎಸ್ಸೆಸ್ಸೆಲ್ಸಿಯಲ್ಲಿ ಶೇ.94.8 ಅಂಕ ಗಳಿಸಿರುವ ಶಮಿತ್ ಪಿಯುಸಿಯಲ್ಲೂ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜು ಸೇರಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯದಲ್ಲಿ 595 ಅಂಕ ಲಭಿಸಿದೆ. ಶಮಿತ್ ವಿ. ಕುರ್ಡೇಕರ್ ಸಿಎ ಆಗುವ ಆಸೆ ಹೊಂದಿದ್ದು ಅದಕ್ಕಾಗಿ ತಯಾರಿ ನಡೆಸಿದ್ದಾರೆ. ತಂದೆ ವಿಠಲ್ ಕುರ್ಡೇಕರ್ ಅಕ್ಕಸಾಲಿಗರಾಗಿದ್ದು, ತಾಯಿ ವಿದ್ಯಾ ಮನೆವಾರ್ತೆ ನೋಡಿಕೊಳ್ಳುತ್ತಿದ್ದು, ಬಡ ಕುಟುಂಬದಲ್ಲಿ ಜನಿಸಿದ ಶಮಿತ್ ಸಿಎ ಆಗಿ ದೊಡ್ಡ ಹೆಸರು ಮಾಡುವ ಆಸೆ ಹೊಂದಿದ್ದಾರೆ.

ಪ್ರಜ್ವಲ್ ಕೆ. ಎನ್.- ಸಿಎ ಮಾಡುವ ಆಸೆ

ಮೂಲತಃ ಕೋಲಾರ ನಿವಾಸಿಯಾಗಿರುವ ಪ್ರಜ್ವಲ್ ಕೆ.ಎನ್. ವಾಣಿಜ್ಯದಲ್ಲಿ 594 ಅಂಕ ಗಳಿಸಿದ್ದಾರೆ. ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜು ಸಂಸ್ಥೆಯಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ಹಾಸ್ಟೆಲ್ ನಲ್ಲಿದ್ದುಕೊಂಡು ಮಾಡಿರುವ ಪ್ರಜ್ವಲ್ ಗೆ ಮೊದಲನೇ ಸ್ಥಾನ ದೊರಕುವ ನಿರೀಕ್ಷೆ ಇತ್ತು. ಕೋಲಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸ ನಡೆಸಿ, ಬಳಿಕ ಅಳಿಕೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಪ್ರಜ್ವಲ್ ಬಾಲ್ಯದಲ್ಲೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ.

ಇನ್ನು ಸಿಎ ಮಾಡುವ ಆಸೆಯನ್ನು ಇಟ್ಟುಕೊಂಡಿರುವ ಪ್ರಜ್ವಲ್ ತಂದೆ ಕಿರಾಣಿ ಅಂಗಡಿಯನ್ನು ಹೊಂದಿದ್ದು, ಬಡತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ತಾಯಿ ಪೂರ್ಣಿಮಾ ಹಾಗೂ ತಂದೆ ನವೀನ್ ಕುಮಾರ್ ಅವರಿಗೆ ಪ್ರಜ್ವಲ್ ಉತ್ತಮ ಸಾಧನೆ ತೋರಿದ್ದು ಹೆಮ್ಮೆ ಎನಿಸಿದೆ. ಆದರೂ ಪದವಿ ಕಾಲೇಜಿಗೆ ಹಾಗೂ ಮುಂದಿನ ವಿದ್ಯಾಭ್ಯಾಸಕ್ಕೆ ಸಾಕಷ್ಟು ಖರ್ಚು ವೆಚ್ಚಗಳು ಆಗುವ ಕಾರಣ, ಟಾಪರ್ ಆಗಿರುವ ಪ್ರಜ್ವಲ್ ಗೆ ಶುಲ್ಕದಲ್ಲಿ ರಿಯಾಯಿತಿಯನ್ನು ಕಾಲೇಜಿನವರು ನೀಡಬಹುದು ಎಂಬ ನಿರೀಕ್ಷೆ ಹೆತ್ತವರಿಗಿದೆ.

(ವರದಿ - ಹರೀಶ್ ಮಾಂಬಾಡಿ, ಮಂಗಳೂರು)

ಓದಬಹುದಾದ ಇನ್ನಷ್ಟು ಸ್ಟೋರಿಗಳು

1) ವಿಜಯಪುರ ಮಕ್ಕಳ ಅನನ್ಯ ಸಾಧನೆ, ಕಲಾ ವಿಭಾಗದ ಟಾಪರ್‌ ವೇದಾಂತ್‌ ಓದಿಗೆ ನೆರವಾದ ಗ್ಯಾರಂಟಿ ಹಣ - ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

2) ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ-2ರ ಅಂತಿಮ ವೇಳಾಪಟ್ಟಿ ಪ್ರಕಟ, ಏ 29 ರಿಂದ ಮೇ 16ರ ತನಕ ಎಕ್ಸಾಂ - ಪೂರ್ಣ ವಿವರ ಇಲ್ಲಿದೆ

3) ಆಕೆಯದ್ದುಗುಜರಾತ್‌ ಮೂಲ, ಪಿಯುಸಿ ಸಾಧನೆಗೆ ನೆರವಾಯ್ತು ದಕ್ಷಿಣ ಕನ್ನಡ ನೆಲ - ಸಾಧನೆಯ ವರದಿ ಇಲ್ಲಿದೆ

Whats_app_banner