ಮಂಗಳೂರು: ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ ಡಾ ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನ
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು: ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ ಡಾ ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನ

ಮಂಗಳೂರು: ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ ಡಾ ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನ

ತುಳುನಾಡಿನಲ್ಲಿ ತುಳು ವಿದ್ವಾಂಸರಾಗಿ ಗುರುತಿಸಿಕೊಂಡಿದ್ದ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ ಡಾ ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನರಾಗಿದ್ದಾರೆ. ಜಾನಪದ ವಿದ್ವಾಂಸ, ಸಾಹಿತಿ, ಶಿಕ್ಷಕರಾಗಿದ್ದ ಆಚಾರ್ ಅವರು ತುಳುಭಾಷೆಗೆ ಮಾನ್ಯತೆ ಒದಗಿಸಲು ಶ್ರಮಿಸಿದವರಲ್ಲಿ ಒಬ್ಬರು. ಅವರ ಕಿರುಪರಿಚಯದ ಅಕ್ಷರ ನಮನ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ ಡಾ ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನ
ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ ಡಾ ಪಾಲ್ತಾಡಿ ರಾಮಕೃಷ್ಣ ಆಚಾರ್ ನಿಧನ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ, ಸಾಹಿತಿ, ಶಿಕ್ಷಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ (79) ಮಂಗಳವಾರ (ಮೇ 7) ನಿಧನರಾಗಿದ್ದಾರೆ. ಅವರಿಗೆ ಪತ್ನಿ ಸುಮಾ ಆರ್. ಆಚಾರ್, ಪುತ್ರಿಯರಾದ ಕಿರಣ ಪಿ.ಆರ್, ಸುಪ್ರಿಯ ಪಿ.ಆರ್, ಮಗ ಹರ್ಷವರ್ಧನ ಪಿ.ಆರ್ ಹಾಗೂ ಅಳಿಯ ಕೃಷ್ಣ ಎಂ.ವಿ, ಜಯಪಾಲ್ ಎಚ್.ಆರ್. ಸೊಸೆ ಸುಧಾ ಟಿ.ಜೆ ಹಾಗೂ ಮೊಮ್ಮಕ್ಕಳು ಸುಹೃತ್, ಸಹಜ, ನಿಸ್ವನ, ಅವಲೋಕಿತ, ನಲ್ಮೆ, ಆತ್ಮೀಯ ಇದ್ದಾರೆ.

ಕಾವ್ಯ, ನಾಟಕ, ಕತೆ, ಸಂಶೋಧನೆ, ವಿಮರ್ಶೆ ಸಹಿತ ಜಾನಪದ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದ ಡಾ. ಆಚಾರ್ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೆಲತ್ತಾಜೆಯಲ್ಲಿ ಜನಿಸಿದವರು. ಬಳಿಕ ಪಾಲ್ತಾಡಿಯಲ್ಲಿ ವಾಸಿಸಿ, ನಿವೃತ್ತಿ ಬಳಿಕ ಪುತ್ತೂರಿನ ಬೆದ್ರಾಳದಲ್ಲಿ ನೆಲೆಸಿದ್ದರು.

ಸುಳ್ಯ ತಾಲೂಕಿನ ಪೆರುವಾಜೆಯಲ್ಲಿರುವ ತನ್ನ ಮಗಳ ಮನೆಯಲ್ಲಿದ್ದ ಅವರ ಆರೋಗ್ಯದಲ್ಲಿ ಮಂಗಳವಾರ ಸಂಜೆ ಏರುಪೇರು ಕಂಡುಬಂದಿತ್ತು. ರಾತ್ರಿ ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆತರುತ್ತಿದ್ದ ಸಂದರ್ಭ ದಾರಿ ಮಧ್ಯೆ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.

ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಹಿನ್ನೆಲೆ

ಬೆಟ್ಟಂಪಾಡಿ, ಪಾಣಾಜೆ ಹಿ.ಪ್ರಾ.ಶಾಲೆ, ಬೆಳ್ಳಾರೆ ಬೋರ್ಡ್ ಹೈಸ್ಕೂಲು, ಪುತ್ತೂರು ಸಂತ ಫಿಲೋಮಿನಾ ಕಾಲೇಜು, ಉಜಿರೆ ಸರಕಾರಿ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಪೂರೈಸಿ, 1963ರಲ್ಲಿ ಕುಂತೂರು ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದ ಅವರು, ಬಳಿಕ ಉಪ್ಪಿನಂಗಡಿ, ಬೆಟ್ಟಂಪಾಡಿ, ಕಾಣಿಯೂರು ಪಪೂ ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದರು. ನಿವೃತ್ತಿ ಬಳಿಕ ಸವಣೂರಿನ ವಿದ್ಯಾರಶ್ಮಿ ಶಿಕ್ಷಕ ತರಬೇತಿ ಸಂಸ್ಥೆಯಲ್ಲಿ ಗೌರವ ಪ್ರಾಚಾರ್ಯರಾಗಿದ್ದರು. ಅವರ ನಲಿಕೆ ಜನಾಂಗದ ಕುಣಿತಗಳು ಎಂಬ ವಿಷಯಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.

ಜಾನಪದ ಕ್ಷೇತ್ರದ ಸಂಶೋಧನೆ ಮೂಲಕ ತುಳುನಾಡಿನ ಪರಂಪರೆಯನ್ನು ತಮ್ಮದೇ ಶೈಲಿಯಲ್ಲಿ ಜನರಿಗೆ ತಿಳಿಸುವಲ್ಲಿ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಮುಂಚೂಣಿಯಲ್ಲಿದ್ದರು. ಕೆದಂಬಾಡಿ ರಾಮೇಗೌಡ ರ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ 1830ರ ದಶಕದಲ್ಲಿ ನಡೆದಿದ್ದ ತುಳುನಾಡಿನ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಬೆಳಕಿಗೆ ತರುವಲ್ಲಿ ಡಾ. ಪಾಲ್ತಾಡಿಯವರ ಶ್ರಮ ಅನನ್ಯ.

ಪ್ರಾಥಮಿಕ ಶಾಲೆ ಶಿಕ್ಷಕರಾಗಿ ಸೇರಿದ ಅವರು ಬಳಿಕ ಬಿಎ ಬಿಎಡ್ ಹಾಗೂ ಎಂಎ ಮಾಡಿ ಉಪನ್ಯಾಸಕರಾದರು. ಬಳಿಕ ಪಿಎಚ್.ಡಿ. ಪದವಿಯನ್ನೂ ಪಡೆದರು. ಜಾನಪದ ಪರಿಸರ, ಜಾನಪದ ವೈದ್ಯ, ಜಾನಪದ ಕುಣಿತ, ದೈವಾರಾಧನೆ, ತುಳುನಾಡಿನ ಸಮಗ್ರ ಪ್ರದರ್ಶನ ಕಲೆ ಮತ್ತು ಸಾಕಷ್ಟು ಧ್ವನಿಸುರುಳಿಗಳಿಗೆ ಸಾಹಿತ್ಯವನ್ನು ಒದಗಿಸಿದ್ದಾರೆ.

ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಸಾಹಿತ್ಯ ಕೃಷಿ

1970ರಲ್ಲಿ ಬಾಂಗ್ಲಾ ವಿಜಯ ಎಂಬ ಯಕ್ಷಗಾನ ಪ್ರಸಂಗ ಕೃತಿ ರಚನೆ ಮಾಡಿದ್ದ ಅವರು ಮಕ್ಕಳ ಕವನ ಸಂಕಲನ, ಕಥಾ ಸಂಕಲನ, ಸಂವಹನ ಮಾಧ್ಯಮವಾಗಿ ಜಾನಪದ, ದೈವಾರಾಧನೆ, ತುಳುನಾಡಿನ ಸಮಗ್ರ ಪ್ರದರ್ಶನ ಕಲೆಗೆ ಸಾಹಿತ್ಯ ನೀಡಿದ ಪಾಲ್ತಾಡಿ ತುಳು ಭಾಷೆ ಬೆಳವಣಿಗೆಗೆ ಶ್ರಮಿಸಿದ ಕೆಲಸಗಳನ್ನು ಗುರುತಿಸಿ, ತುಳು ಅಕಾಡೆಮಿ ಅಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದರು. ತುಳು ಜಾನಪದ ಕೂಡುಕಟ್ಟು ಅಧ್ಯಕ್ಷರಾಗಿ, ತುಳು ಅಕಾಡಮಿ ರಿಜಿಸ್ಟ್ರಾರ್ ಆಗಿಯೂ ಅವರು ಕಾರ್ಯನಿರ್ವಹಿಸಿದ್ದು, ಆಟಿ ಉತ್ಸವ, ಕೆಡ್ಡಸ ಕೂಟವನ್ನು ಸಾರ್ವಜನಿಕವಾಗಿ ಪರಿಚಯಿಸಿದ್ದರು. ತುಳು ಭಾಷೆಯನ್ನು ಎಂಟನೇ ಪರಿಚ್ಛೇಧಕ್ಕೆ ಸೇರಿಸಬೇಕು ಎಂಬ ಹೋರಾಟದಲ್ಲಿ ಅವರು ಮುಂಚೂಣಿಯಲ್ಲಿದ್ದರು. ಅವರಿಗೆ ಜಾನಪದ ಅಕಾಡೆಮಿ, ತುಳು ಅಕಾಡೆಮಿ ಸಹಿತ ಹಲವು ಪ್ರಶಸ್ತಿಗಳು ಸಂದಿವೆ.

ಧರ್ಮಸ್ಥಳದಲ್ಲಿ ನಡೆದ ವಿಶ್ವ ತುಳು ಸಮ್ಮೇಳನ ಆಯೋಜನೆಯಲ್ಲಿ ಪಾಲ್ತಾಡಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ತುಳುವನ್ನು ತೃತೀಯ ಭಾಷೆಯನ್ನಾಗಿಸುವಲ್ಲಿ ಅವರ ಕೊಡುಗೆಯೂ ಇದೆ.

ಪಾಲ್ತಾಡಿ ಕೃತಿಗಳು: ಕಿರಣ, ಮೆಲುಕಾಡಿದಾಗ, ಅಜಕೆ (ತುಳು), ದುನಿಪು (ತುಳು), ಪಚ್ಚೆಕುರಲ್ (ತುಳು) – ಇವು ಮಕ್ಕಳ ಕವನ ಸಂಕಲನಗಳು.

ತುಳು ಸಂಸ್ಕೃತಿದ ಪೊಲಬು, ನಾಗ ಬೆರ್ಮೆರ್, ತುಳು ಕಲ್ಬುಗ, ಕೆದಂಬಾಡಿ ರಾಮ ಗೌಡೆರ್, ಅತ್ತಾವರ ಅನಂತಾಚಾರ್ಯೆ, ಕೆನರಾ ರೈತ ಬಂಡಾಯ, ತುಳುನಾಡಿನ ಪಾಣಾರರು, ತುಳುನಾಡಿನ ಜನಪದ ಕಥೆಗಳು, ವಿಶಿಷ್ಟ ತುಳುನಾಡು.

ಡಾ.ಪಾಲ್ತಾಡಿ ಅವರಿಗೆ ನಿವೃತ್ತ ಪ್ರಾಧ್ಯಾಪಕ, ಸಂಶೋಧಕ ಡಾ.ಎಸ್.ಆರ್. ಅರುಣ್ ಕುಮಾರ್ ಅಕ್ಷರ ನಮನ

ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ತುಳು ಭಾಷೆ, ಸಂಸ್ಕೃತಿ, ಕುಣಿತ , ಆಚರಣೆ, ಆರಾಧನೆಗಳ ಕುರಿತ ಬಹು ಅಧ್ಯಯನಾತ್ಮಕ ಒಳನೋಟವಿದ್ದವರು. ಆ ಕುರಿತಾದ ಅವರ ಮಾತುಗಳು ಕೇಳುಗರಿಗೆ ಅಪಾರವಾದ ಮಾಹಿತಿಗಳನ್ನೂ, ಅದೇ ಹೊತ್ತಿನಲ್ಲಿ ತುಳು ಸಂಸ್ಕ್ರತಿ ಪ್ರೀತಿಯನ್ನು ಹುಟ್ಟಿಸುತ್ತಿದ್ದುವು.ಅವರ ಮಾತುಗಳಲ್ಲಿ ತಲಸ್ಪರ್ಶಿ ಕ್ಷೇತ್ರಕಾರ್ಯದ ಮಾಹಿತಿಗಳು ತುಂಬಿ ಬರುತ್ತಿದ್ದುವು. ವಿದ್ವತ್ಪೂರ್ಣ ಮಾತುಗಳು ಹರಿದು ಬರುತ್ತಿದ್ದುವು. ಕ್ಷೇತ್ರಕಾರ್ಯದ ಸಂದರ್ಭಗಳಲ್ಲಿ ಅವರ ಕುತೂಹಲ, ಪ್ರಶ್ನೋತ್ತರ ನಮ್ಮಂತವರಿಗೆ ಮಾದರಿ.

ಕಲಾವಿದರನ್ನು, ಮಾಹಿತಿದಾರರನ್ನು ಗೌರವಿಸುತ್ತಿದ್ದ ಅವರ ರೀತಿನೀತಿಗಳು ಮರೆಯಲಾಗದ್ದು. ಕಿರಿಯರಲ್ಲೂ ಮಾಹಿತಿಗಳನ್ನು ಕೇಳಿ ಸ್ಪಂದಿಸುತ್ತಿದ್ದ ರೀತಿ ಅನುಕರಣೀಯ. ತಾವೇ ಸಂಶೋಧನೆಯಲ್ಲಿ ತೊಡಗಿ ಡಾಕ್ಟರೇಟ್ ಪದವಿ ಗಳಿಸಿ ನಮ್ಮಂತವರಿಗೂ ಸಾಧ್ಯ ಎಂಬುದಾಗಿ ತೋರಿಸಿಕೊಟ್ಟ ಮಹನೀಯರು.ಮಾನ್ಯ ಗುರುಗಳಾದ ಪ್ರೊ. ಬಿ.ಎ. ವಿವೇಕ ರೈಗಳು ತುಳು ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಇವರು ರಿಜಿಸ್ಟ್ರಾರ್ ಆಗಿದ್ದವರು. ಆಗ ತುಳುವರು ನಿಜಾರ್ಥದಲ್ಲಿ ಸಂಭ್ರಮಿಸಿದರು. ಎಷ್ಟೊಂದು ಕಾರ್ಯಕ್ರಮ ಹಮ್ಮಿಕೊಂಡರು.

ನನ್ನಂತವರನ್ನು ಬಳಸಿಕೊಂಡು ನಮ್ಮಲ್ಲಿ ತುಳು ಸಾಹಿತ್ಯ ಭಾಷೆ ಸಂಸ್ಕೃತಿ ಕುರಿತು ಗಮನಿಸುವಂತೆ ಮಾಡಿದರು. ವಿಚಾರಸಂಕಿರಣಗಳು, ಕಮ್ಮಟಗಳು, ಮನೆ ಮನೆ ಪುಸ್ತಕ ಮಾರಾಟ ಹೀಗೆ ಹಲವು ಯೋಜನೆಗಳು ಕಾರ್ಯರೂಪಕ್ಕೆ ಬಂದುವು. ಅವುಗಳ ಲ್ಲಿ ಹಲವರು ಪಾಲಸಮರ್ಪಿಸುಂದು ತುಳು ಕುರಿತಂತೆ ಅಧ್ಯ ಯನದ ಮುಂದುವರಿಕೆಗೆ ಕಾರಣೀ ಭೂತರಾದರು. ಅವರ ಪ್ರೀತಿ , ವಾತ್ಸಲ್ಯ ದಕ್ಕಿದವರು ಎಂದೂ ಮರೆಯಲಾರರು. ನಶ್ಯ ಸೇವಿಸಿ ಕರ್ಚೀಪಿನ ತುದಿಯಿಂದ ಅದನ್ನೊರಸಿ ಚೆಂದದ ನಗುವಿನ ಹಿಂದೆ ಮುಗ್ಧತೆ, ವಂಚನೆರಹಿತ ಮನಸ್ಸು ತಿಳಿ ತಿಳಿಯಾಗಿ ಇಳಿದು ಬರುತ್ತಿತ್ತು..ಹಮ್ಮು ಬಿಮ್ಮುಗಳಿಲ್ಲದ ಸುಂದರ ವ್ಯಕ್ತಿತ್ವ..ಮಾತುಗಳಂತೂ ಹಸನ್ಮುಖದ ನೆಲೆಯಾಗಿ ಹರಿಯುತ್ತಿದ್ದುವು.

ಅವರ ಜೊತೆಗೆ ಪ್ರಯಾಣ ಕಾಲದಲ್ಲಿ ತಿಳಿಹಾಸ್ಯ, ಪ್ರೀತಿ ತುಂಬಿದ ಮಾತುಗಳ ಲ್ಲೇ ಮನತುಂಬುತ್ತಿದ್ದ ಅವರು ಸಿಡಿಮಿಡಿಯಾದುದು ತಿಳಿಯೆ..ಅವರ ತುಳು ಸಾಹಿತ್ಯ ರಚನೆಗಳು ಸಾರ್ವಕಾಲಿಕವಾಗಿ ನಿಲ್ಲಬಲ್ಲಂತವುಗಳು..ಅನೇಕ ಹಾಡುಗಳು ಜನಮಾನಸದಲ್ಲಿ ನಿಂತುಬಿಟ್ಟಿವೆ.ಸಾಹಿತ್ಯ ಸಂಸ್ಕೃತಿಯ ದೃಷ್ಟಿಯಿಂದ ಅವರು ನೀಡಿದ ಕೊಡುಗೆ ಅವರನ್ನು ಎಂದೂ ಮರೆಯದಂತೆ ಮಾಡಿವೆ.ಅದೇ ನಮ್ಮ ಭಾಗ್ಯ. ನಿಧಾನಕ್ಕೆ ಮರೆಯಾಗುತ್ತಿರುವ ಸಂಸ್ಕೃತಿಯನ್ನು ಸಂಗ್ರಹಿಸಿ ಅಧಿಕೃತವಾಗಿ ಪುಸ್ತಕರೂಪದಲ್ಲಿ ಹೊರತಂದು ಮುಂದಿನ ತಲೆಮಾರಿಗೆ ಅಧ್ಯಯನಕ್ಕೆ ಬಿಟ್ಟುಹೋಗಿರುವುದು ನಿಜವಾಗಲೂ ನಮ್ಮ ಪುಣ್ಯ. ಇಂತಹ ಮಹಾನುಭಾವನಿಗೆ ಕೈಜೋಡಿಸಿ ಶ್ರದ್ಧಾಂಜಲಿಯನ್ನು ಭಕ್ತಿಪೂರ್ವಕವಾಗಿ ಸಮರ್ಪಿಸುವೆ

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Whats_app_banner