ಕನ್ನಡ ಸುದ್ದಿ  /  ಕರ್ನಾಟಕ  /  ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ 2024ರ ಪ್ರಶಸ್ತಿ ಘೋಷಣೆ; ವಿಶ್ವೇಶ್ವರ ಭಟ್ ಸೇರಿ 14 ಪತ್ರಕರ್ತರಿಗೆ ಗೌರವ

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ 2024ರ ಪ್ರಶಸ್ತಿ ಘೋಷಣೆ; ವಿಶ್ವೇಶ್ವರ ಭಟ್ ಸೇರಿ 14 ಪತ್ರಕರ್ತರಿಗೆ ಗೌರವ

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ 2024ನೇ ಸಾಲಿನ ದತ್ತಿನಿಧಿ ಪ್ರಶಸ್ತಿ ಘೋಷಣೆಯಾಗಿದೆ. ವಿಶ್ವೇಶ್ವರ ಭಟ್, ಸದಾನಂದ ಜೋಶಿ, ಚೇತನಾ ಬೆಳಗೆರೆ ಸೇರಿದಂತೆ 14 ಪತ್ರಕರ್ತರಿಗೆ ಗೌರವ ಸಲ್ಲಿಕೆಯಾಗಲಿದೆ. ಪ್ರಶಸ್ತಿ ವಿಜೇತರ ವಿವರ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ 2024ರ ಪ್ರಶಸ್ತಿ ಘೋಷಣೆ; ವಿಶ್ವೇಶ್ವರ ಭಟ್ ಸೇರಿ 14 ಪತ್ರಕರ್ತರಿಗೆ ಗೌರವ
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ 2024ರ ಪ್ರಶಸ್ತಿ ಘೋಷಣೆ; ವಿಶ್ವೇಶ್ವರ ಭಟ್ ಸೇರಿ 14 ಪತ್ರಕರ್ತರಿಗೆ ಗೌರವ

ಮಂಗಳೂರು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ 2024ನೇ ಸಾಲಿನ ದತ್ತಿನಿಧಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಸೇರಿದಂತೆ 14 ಪತ್ರಕರ್ತರಿಗೆ ಪ್ರಶಸ್ತಿ ಘೋಷಣೆಯಾಗಿದೆ. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದಲ್ಲಿ ದತ್ತಿನಿಧಿ ಪ್ರಶಸ್ತಿ ಪ್ರದಾನ ಮತ್ತು ಕನ್ನಡ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಜುಲೈ 13ರಂದು ಕಾಸರಗೋಡಿನ ಸೀತಾಂಗೋಳಿ ಆಲಯನ್ಸ್ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆಯಲಿದೆ. ಪ್ರಶಸ್ತಿಗೆ ಆಯ್ಕೆಯಾದವರ ವಿವರ ಹೀಗಿದೆ.

1) ವಿಶ್ವೇಶ್ವರ ಭಟ್

(ಬೃಹೈಕ್ಯ ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಸ್ಮರಣಾರ್ಥ ಶ್ರೀ ಮಠವು ನೀಡುವ ದತ್ತಿನಿಧಿ ಪ್ರಶಸ್ತಿ)

ಟ್ರೆಂಡಿಂಗ್​ ಸುದ್ದಿ

ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಪ್ರಯೋಗಗಳಿಗೆ ಒತ್ತುಕೊಟ್ಟ ಸಂಪಾದಕ ವಿಶ್ವೇಶ್ವರ ಭಟ್. ಪ್ರಸ್ತುತ ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ಹಾಗೂ ಮಾಲಕರಾಗಿರುವ ಇವರು ವಿಶ್ವಾಕ್ಷರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮುಖ್ಯಸ್ಥರೂ ಹೌದು. ರಾಜ್ಯದ ಯುವ ಸಾಹಿತಿಗಳಿಗೆ, ಸಾಹಿತ್ಯಾಸಕ್ತರಿಗೆ ಪ್ರೇರಣೆಯಾಗಿರುವ ಇವರು ತಮ್ಮ ಸಂಸ್ಥೆಯಲ್ಲಿ ಭಾವಿ ಪತ್ರಕರ್ತರನ್ನು ಬೆಳೆಸಿದ ಕೀರ್ತಿಯನ್ನು ಹೊಂದಿದ್ದಾರೆ. ಪತ್ರಿಕೋದ್ಯಮ ವಿದ್ಯಾಭ್ಯಾಸವನ್ನು ಮುಗಿಸಿ ಪತ್ರಿಕಾ ರಂಗಕ್ಕೆ ಕಾಲಿರಿಸುವ ಅದೆಷ್ಟೋ ಹೊಸಬರನ್ನು ಪತ್ರಿಕೋದ್ಯಮದ ಹತ್ತು ಹಲವು ಆಯಾಮಗಳಲ್ಲಿ ಪಳಗುವಂತೆ ಮಾಡಿದವರು.

1966 ಜುಲೈ 22 ಉತ್ತರ ಕನ್ನಡ ಜಿಲ್ಲೆಯ ಮೂರೂರಿನಲ್ಲಿ ಜನಿಸಿದ ಇವರು ಒಟ್ಟು 83 ಕೃತಿಗಳನ್ನು ಪ್ರಕಟಿಸಿದ ಜನ ಮೆಚ್ಚುಗೆ ಪಡೆದಿದ್ದಾರೆ. ಇವರ ನೂರೆಂಟು ಮಾತು, ದಾರಿದೀಪೋಕ್ತಿ, ವಕ್ರತುಂಡೋಕ್ತಿ, ನೂರೆಂಟು ವಿಶ್ವ ಸಂಪಾದಕೀಯ ಬರಹಗಳಿಗೆ ಅಪಾರ ಜನ ಮನ್ನಣೆ ಪ್ರಾಪ್ತವಾಗಿದೆ. ಈ ಹಿಂದೆ ಕನ್ನಡಪ್ರಭ ಹಾಗೂ ಸುವರ್ಣ ವಾಹಿನಿಯ ಮುಖ್ಯ ಸಂಪಾದಕರಾಗಿದ್ದ ಇವರು 2016 ರಲ್ಲಿ ವಿಶ್ವವಾಣಿ ಪತ್ರಿಕೆಯನ್ನು ಆರಂಭಿಸಿದ್ದರು. ಮಾತ್ರವಲ್ಲ ಈ ಪತ್ರಿಕೆ ಇಂದು ಪ್ರಬುದ್ಧರ ವಲಯದಲ್ಲಿ ಬಹಳ ಮೆಚ್ಚುಗೆ ಪಡೆದ ದಿನಪತ್ರಿಕೆ ಎನಿಸಿದೆ.

ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಇವರು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ, ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ವಿದೇಶ ಪ್ರವಾಸಗಳ ಸಂದರ್ಭ ಪತ್ರಿಕಾ ವರದಿಗಾರಿಕೆಯನ್ನು ನಿಭಾಯಿಸಿದ್ದಾರೆ.

2. ಚೇತನಾ ಬೆಳಗೆರೆ

(ಅವ್ವಾ ಸೇವಾ ಟ್ರಸ್ಟ್, ಹುಬ್ಬಳ್ಳಿ ದತ್ತಿನಿಧಿ ಪ್ರಶಸ್ತಿ)

ಪ್ರಾಯೋಗಿಕ ಪತ್ರಿಕೋದ್ಯಮಕ್ಕೆ ತಳುಕು ಹಾಕಿಕೊಂಡಿರುವ ಹೆಸರು ಚೇತನಾ ಬೆಳಗೆರೆ ಅವರದ್ದು, ಚೇತನಾ ಬೆಳಗೆರೆ ಅವರು ತಮ್ಮ ತಂದೆ, ರವಿ ಬೆಳಗರೆ ಅವರಿಂದ ಸ್ಪೂರ್ತಿ ಪಡೆದು ಪತ್ರಿಕೋದ್ಯಮಕ್ಕೆ ಕಾಲಿಟ್ಟವರು. ತಂದೆಯವರಂತೆಯೇ ಪತ್ರಿಕೋದ್ಯಮದ ಅನಂತ ಸಾಧ್ಯತೆಗಳನ್ನು ಅರಸುತ್ತಾ ಸಾಗುತ್ತಿರುವ ಅವರು ಕ್ರೈಂ ವರದಿಗಾರಿಕೆಯನ್ನು ಆರಿಸಿಕೊಂಡವರು. ’ವಿಜಯಾ ಟೈಮ್ಸ್’ಪತ್ರಿಕೆ ಮೂಲಕ ವೃತ್ತಿ ಬದುಕು ಆರಂಭಿಸಿ ಈ ಟಿವಿಯ ’ಕ್ರೈಂ ಡೈರಿ’ ಕಾರ್ಯಕ್ರಮದಲ್ಲಿ ಮಿಂಚಿದರು. ತಂದೆಯ ಉತ್ಸಾಹ, ಆತ್ಮವಿಶ್ವಾಸ, ಧೈರ್ಯ ಮತ್ತು ಶಕ್ತಿಯನ್ನು ಹೀರಿಕೊಂಡಿರುವ ಚೇತನಾ ಕುಖ್ಯಾತ ದಂಡುಪಾಳ್ಯ ಗ್ಯಾಂಗನ್ನು ಸಂದರ್ಶಿಸಿ ಸಮಗ್ರ ವರದಿ ತಯಾರಿಸಿದ್ದಾರೆ. ಕರ್ನಾಟಕದಿಂದ ವಲಸೆ ಹೋಗಿ ಮುಂಬಯಿಯ ಕಾಮಾಟಿಪುರದಲ್ಲಿ ವೇಶ್ಯಾವೃತ್ತಿ ನಡೆಸುತ್ತಿರುವ ಮಹಿಳೆಯರ ಬದುಕಿನ ಚಿತ್ರಣವನ್ನು ದಾಖಲಿಸಿ ಗಮನ ಸೆಳೆದರು. ಕ್ರೈಂ ಡೈರಿಗಾಗಿ ಕುಂಭಮೇಳದ, ಅದರಲ್ಲೂ ಮುಖ್ಯವಾಗಿ ಅಘೋರಿಗಳನ್ನು ಸಂದರ್ಶಿಸಿದ ಕರ್ನಾಟಕದ ಪ್ರಥಮ ವರದಿಗಾರ್ತಿ ಇವರು. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, ಮಿಡ್‌ಡೇ ಪತ್ರಿಕೆಗಳಲ್ಲೂ ಸೇವೆ ಸಲ್ಲಿಸಿದ್ದಾರೆ.

3 ಅಶೋಕ ಚಂದರಗಿ

(ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ. ಸಿ ಸೋಮಶೇಖರ ನೀಡುವ ದತ್ತಿನಿಧಿ ಪ್ರಶಸ್ತಿ)

ಹಿರಿಯ ಹಾಗೂ ಹಳೆಕಾಲದ ಪತ್ರಕರ್ತರ ಸಾಲಿನಲ್ಲಿ ಗುರುತಿಸಿಕೊಂಡಿರುವ ಅಶೋಕ ಯಂಕಪ್ಪ, ಚಂದರಗಿ ಬೆಳಗಾವಿ ಜಿಲ್ಲೆಯ ರಾಮದುರ್ಗ ನಿವಾಸಿ. 1979 ರಲ್ಲಿ ರಾಮದುರ್ಗದಲ್ಲಿ ’ಕನ್ನಡಮ್ಮ’ ದಿನಪತ್ರಿಕೆಯ ಅರೆಕಾಲಿಕ ವರದಿಗಾರನಾಗಿ ಪತ್ರಿಕಾರಂಗ ಪ್ರವೇಶಿಸಿದ ಇವರು ಮುಂದೆ ನಾಡೋಜ ದೈನಿಕ, ’ಅಭಿಮಾನಿ’ ಸಾಪ್ತಾಹಿಕಕ, ಅರಗಿಣಿ ಸಾಪ್ತಾಹಿಕ, ’ಪೊಲೀಸ್ ಫೈಲ್’ ಸಾಪ್ತ್ರಾಹಿಕ ಪತ್ರಿಕೆಗಳಲ್ಲಿ ಉಪ ಸಂಪಾದಕ, ಸಹಾಯಕ ಸಂಪಾದಕನಾಗಿ ದುಡಿದು 1988 ರಲ್ಲಿ ಸ್ವಂತವಾಗಿ ’ಚಂದರಗಿ ಪ್ರಿಂಟರ್ಸ್’ ಸ್ಥಾಪಿಸಿದ್ದಲ್ಲದೆ, 1993 ರವರೆಗೆ ಪೂರ್ಣಕಾಲಿಕ ಪತ್ರಕರ್ತರಾಗಿ ಸೇವೆ ಸಲ್ಲಿಸಿದರು. ಆ ಬಳಿಕ ವಿವಿಧ ಪತ್ರಿಕೆಗಳಿಗೆ ವಿಶೇಷ ವರದಿ, ಲೇಖನ, ಕಾಲಂಗಳನ್ನು ನಿರಂತರವಾಗಿ ಬರೆಯುತ್ತಿದ್ದಾರೆ. ಓರ್ವ ಸಂಪನ್ಮೂಲ ವ್ಯಕ್ತಿಯೂ ಆಗಿದ್ದಾರೆ.

4. ಬಿ. ರವೀಂದ್ರ ಶೆಟ್ಟಿ

(ಹವ್ವಾ ಹಸನ್ ಫೌಂಡೇಶನ್ ಕುದ್ಕೊಳಿ ಸಂಸ್ಥಾಪಕ ಅಬ್ದುಲ್ಲ ಮಾದುಮೂಲೆ ನೀಡುವ ದತ್ತಿನಿಧಿ ಪ್ರಶಸ್ತಿ)

ಮಂಗಳೂರಿನ ಹಿರಿಯ ಪತ್ರಕರ್ತರಾದ ಬಿ. ರವೀಂದ್ರ ಶೆಟ್ಟಿ ಅವರು ’ವಿಜಯ ಕರ್ನಾಟಕ’ ಪತ್ರಿಕೆಯ ಸ್ಥಾನಿಕ ಸಂಪಾದಕರಾಗಿದ್ದಾರೆ.

ಸುಮಾರು 30 ವರ್ಷಗಳಿಂದ ದೃಶ್ಯ ಮತ್ತು ಮುದ್ರಣ ಮಾದ್ಯಮಗಳಲ್ಲಿ ಸೇವೆ ಸಲ್ಲಿಸಿರುವ ಅವರು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ ಗ್ರಾಹಕ ಜಾಗೃತಿ ಬಗ್ಗೆ ಆದ್ಯತೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ’ ವಿಜಯ ಕರ್ನಾಟಕ’ ದಲ್ಲಿ ತುಳು ಚಿತ್ರರಂಗಕ್ಕೆ ಮೀಸಲಿಡಲಾಗಿರುವ ಕೋಸ್ಟಲ್ ವುಡ್ ಆವೃತ್ತಿಯ ಮುಖ್ಯಸ್ಥನಾಗಿ ಕರ್ತವ್ಯ ನಿರ್ವಹಿಸುವ ಮೂಲಕ ತುಳು ಚಲನಚಿತ್ರ, ನಾಟಕ ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಸ್ವತಃ ಚಲನಚಿತ್ರ ನಾಟಕ, ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 300ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಕರಾಗಿದ್ದಾರೆ. ’ನಮ್ಮ ಮಂಗಳೂರು’ ’ನಮ್ಮ ಉಡುಪಿ’ ಎಂಬ ಎರಡು ಕೃತಿಗಳ ಕರ್ತೃ ಬಿ.ಎ. ಎಲ್.ಎಲ್.ಬಿ. ಪದವೀಧರರು.

5. ಜಿ. ಸುಬ್ರಾಯ ಭಟ್ ಭಟ್ಕಳ

(ಅನಿವಾಸಿ ಉದ್ಯಮಿ ಕಲಾಪೋಷಕ ಶ್ರೀ ಜೋಸೆಫ್ ಮಾಥಿಯಾಸ್ ನೀಡುವ ದತ್ತಿನಿಧಿ ಪ್ರಶಸ್ತಿ)

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಭಟ್ಕಳ ನಿವಾಸಿಯಾಗಿರುವ ಜಿ.ಸುಬ್ರಾಯ ಭಟ್ ಅವರು ’ಉಳುಮೆ’ ಸಾಹಿತ್ಯ ಪತ್ರಿಕೆ, ಜನಮಾಧ್ಯಮ ದಿನಪತ್ರಿಕೆ, ಉದ್ಯಮದರ್ಶಿ ಮಾಸಪತ್ರಿಕೆಗಳಲ್ಲಿ ಉಪ ಸಂಪಾದಕ, ಸಂಪಾದಕ, ಪ್ರಕಾಶಕ ಮುದ್ರಕರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸ್ತುತ ಕಳೆದ 10 ವರ್ಷಗಳಿಂದ ’ಸುಮುಖ’ ಟಿವಿಯ ಪ್ರಧಾನ ಸಂಪಾದಕರಾಗಿ ದೃಶ್ಯ ಮಾಧ್ಯಮ ಕ್ಷೇತ್ರದಲ್ಲೂ ’ಸೈ’ ಎನಿಸಿಕೊಂಡಿದ್ದಾರೆ.

ಕರ್ನಾಟಕ ಸರಕಾರದ ಕರ್ನಾಟಕ ಮಾಧ್ಯಮ ಅಕಾಡೆಮಿಯ ನಿಕಟಪೂರ್ವ ಸದಸ್ಯರಾಗಿರುವ ಇವರು ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಿರಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತುಗಳ ಅಧ್ಯಕ್ಷರು. ಹಲವಾರು ಕೃತಿಗಳನ್ನು ರಚಿಸಿರುವ ಇವರು ಕನ್ನಡ ಸಾಹಿತ್ಯದಲ್ಲಿ ಪ್ರಪ್ರಥಮ ’ಗಝಲ್’ ಸಂಕಲನ ಹೊರತಂದಿರುವ ಕೀರ್ತಿಗೆ ಪಾತ್ರರು. ನೂರಾರು ಕಡೆ ಪ್ರಶಸ್ತಿ, ಪುರಸ್ಕಾರ, ಸನ್ಮಾನಕ್ಕೆ ಅರ್ಹರಾಗಿದ್ದಾರೆ.

6 ಇಬ್ರಾಹಿಂ ಅಡ್ಕಸ್ಥಳ

(ಕೆ ವಿ ಆರ್ ಠ್ಯಾಗೋರ್ ಸ್ಮರಣಾರ್ಥ ಶ್ರೀಮತಿ ಭಾಗ್ಯ ಠ್ಯಾಗೋರ್ ನೀಡುವ ದತ್ತಿನಿಧಿ ಪ್ರಶಸ್ತಿ)

’ವಾರ್ತಾಭಾರತಿ’ ಕನ್ನಡ ದಿನಪತ್ರಿಕೆಯ ಮಂಗಳೂರು ಬ್ಯೂರೋ ಹಿರಿಯ ವರದಿಗಾರರಾಗಿರುವ ಇಬ್ರಾಹಿಂ ಅಡ್ಕಸ್ಥಳ ದ.ಕ. ಜಿಲ್ಲೆಯ ಪತ್ರಿಕಾ ರಂಗದಲ್ಲಿ ಮುಖ್ಯ ಹೆಸರುಗಳಲ್ಲೊಂದು. ಎಂ.ಎ., ಎಂ.ಸಿ.ಜೆ. ಸ್ನಾತಕೋತ್ತರ ಪದವೀಧರರಾಗಿರುವ ಅವರು ಕಳೆದ 30 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸಕ್ರಿಯ ಸಾನಿಧ್ಯವಾಗಿದ್ದಾರೆ.

1993ರಲ್ಲಿ ಮಂಗಳೂರಿನಿಂದ ಪ್ರಸಾರವಾಗುವ ’ಹೊಸಸಂಜೆ’ ಸಂಜೆ ದೈನಿಕದಲ್ಲಿ ವರದಿಗಾರರಾಗಿ ವೃತ್ತಿ, ಸೇವಾ ಬದುಕು ಆರಂಭಿಸಿದ ಅವರು ವಿಜಯ ಕರ್ನಾಟಕ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಮುಂಗಾರು, ಸಂಜೆವಾಣಿ, ಜನವಾಹಿನಿ ಪತ್ರಿಕೆಗಳಲ್ಲಿ ಪ್ರಾದೇಶಿಕ ವರದಿಗಾರ, ಹಿರಿಯ ವರದಿಗಾರ, ಉಪ ಸಂಪಾದಕರಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿಯೂ ಕರ್ನಾಟ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರೀ ಸಮಿತಿ ಸದಸ್ಯರೂ ಆಗಿರುವ ಇಬ್ರಾಹಿಂ, ಪತ್ರಕರ್ತರ ಸಂಘ ಹಾಗೂ ಪ್ರೆಸ್‌ಕ್ಲಬ್‌ನ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

7. ವಾಲ್ಟರ್ ನಂದಳಿಕೆ

(ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ ಶ್ರೀ ಭೀಮಣ್ಣ ಖಂಡ್ರೆ, ಇವರ ಹೆಸರಿನ ದತ್ತಿನಿಧಿ ಪ್ರಶಸ್ತಿ, ಪ್ರಾಯೋಜಕರು ದೀಪಕ್ ವಿ ಕೆ)

ವಾಲ್ಟರ್ ಡಿಸೋಜಾ ನಂದಳಿಕೆ ಅವರು ಡೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಡೈಜಿವರ್ಲ್ಡ್ ಕರಾವಳಿ ಕರ್ನಾಟಕದ ಮಂಗಳೂರು ಮೂಲದ ಒಂದು ಮಾದ್ಯಮ ಕಂಪೆನಿಯಾಗಿದೆ.

2007 ರಲ್ಲಿ ವಾಲ್ಟರ್ ಅವರು ಮಂಗಳೂರಿನಲ್ಲಿ ಇಂಟರ್ನೆಟ್ ಟಿವಿ ಪರಿಕಲ್ಪನೆಯನ್ನು ಪರಿಚಯಿಸಿದ ಮೊದಲ ವ್ಯಕ್ತಿಯಾಗಿದ್ದಾರೆ. ಅವರು ಮಂಗಳೂರಿನಿಂದ ಮೊಟ್ಟ ಮೊದಲ ಇಂಟರ್ನೆಟ್ ಟಿಲಿವಿಶನ್ ’ಟಿವಿ ಡೈಜಿವರ್ಲ್ಡ್’ ಅನ್ನು ಪ್ರಾರಂಭಿಸಿದರು. ಮಂಗಳೂರು, ಬೆಂಗಳೂರು, ಮುಂಬಯಿ, ದೋಹಾ, ದುಬಾಯಿ ಅಲ್ಲದೆ ಪ್ರಪಂಚದ ವಿವಿದೆಡೆಗಳಿಂದ ವಿಶೇಷ ಕಾರ್ಯಕ್ರಮಗಳನ್ನು ತನ್ನ ವಾಹಿನಿಯಲ್ಲಿ ಪ್ರಸಾರ ಮಾಡಿದ ಕೀರ್ತಿ ಇವರಿಗೆ,

2014ರಲ್ಲಿ ದೈಜಿವರ್ಲ್ಡ್ ಟಿವಿ ಚಾನೆಲ್ ಆರಂಭಿಸಿದರು. ಇದು ಕರಾವಳಿ ಕರ್ನಾಟಕದಾದ್ಯಂತ ಸಂಚಲನ ಸೃಷ್ಠಿಸಿತ್ತು. ಕನ್ನಡ, ತುಳು, ಬ್ಯಾರಿ, ಕೊಂಕಣಿ ಭಾಷೆಗಳಲ್ಲಿ ಕಾರ್ಯಕ್ರಮ ನೀಡುವ ಮೂಲಕ ಕರ್ನಾಟಕದ ಮೊದಲ ಬಹುಭಾಷಾ ಚ್ಯಾನೆಲ್ ಆಗಿಯೂ ದಾಖಲೆ ನಿರ್ಮಿಸಿದೆ.

ಪ್ರಸ್ತುತ ಸಂಸ್ಥೆ ಮಂಗಳೂರು, ಉಡುಪಿ, ಮುಂಬಯಿ, ದುಬಾಯಿಯಲ್ಲಿ ಕಚೇರಿಗಳನು ಹೊಂದಿದೆ. ಸಂಸ್ಥೆ ಮೂಲಕ ಬಹುಕೋಟಿ ರೂಪಾಯಿಗಳ ಸಾಮಾಜಿಕ ಸೇವೆಯನ್ನು ಮಾಡಿದ್ದಾರೆ. ಮಾಡುತ್ತಲೇ ಬಂದಿದ್ದಾರೆ.

8 ಹೆಚ್.ಬಿ ಮದನಗೌಡ

(ಡಾ. ಸುಧಾಕರ ಶೆಟ್ಟಿ ಪುಣೆ, (ಹಿರಿಯ ಮಕ್ಕಳ ತಜ್ಞರು) ನೀಡುವ ದತ್ತಿನಿಧಿ ಪ್ರಶಸ್ತಿ)

ಎಚ್.ಬಿ. ಮದನಗೌಡ ಅವರು ಕರ್ನಾಟಕದ ಪ್ರಮುಖ ಪತ್ರಕರ್ತರೂ, ಪತ್ರಕರ್ತ ಬಳಗದ ಸಂಘಟಕರೂ ಆಗಿದ್ದಾರೆ.

ದಕ್ಷಿಣ ಕರ್ನಾಟಕದ ಹೆಸರಾಂತ ಪ್ರಾದೇಶಿಕ ಕನ್ನಡ ದೈನಿಕ ಎನಿಸಿರುವ ’ಜನಮಿತ್ರ’ ಪತ್ರಿಕೆಯ ಸರ್ವಸ್ವವೂ ಆಗಿ ಹಾಸನದಿಂದ ಪ್ರಕಟವಾಗುವ ಪತ್ರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದ್ದಾರೆ. ನಿಖರ ವಸ್ತುನಿಷ್ಠ ಸುದ್ಧಿಗೆ ಹೆಸರಾಗಿರುವ ’ಜನಮಿತ್ರ’ ವು ಎಂದೂ ಸಮಾಜಘಾತುಕ ಶಕ್ತಿಗಳೊಂದಿಗೆ ರಾಜಿ ಮಾಡಿಕೊಂಡದ್ದಿಲ್ಲ.

ಶಾಲಾ ಜೀವನದ ವೇಳೆಯಲ್ಲೇ, ಕಥ, ಪ್ರಬಂಧ, ಕವನ ರಚನೆಯ ಗೀಳು ಹಚ್ಚಿಕೊಂಡಿದ್ದ ಇವರುದ ಇದರಿಂದಾಗೇ ಮುಂದೆ ಪತ್ರಿಕಾ ರಂಗವನ್ನು ವೃತ್ತಿರಂಗವನ್ನಾಗಿ ಆರಿಸಿದರು. ಜಿಲ್ಲಾ ಮಟ್ಟದ ಪತ್ರಿಕೆಯ ವರದಿಗಾರನಾಗಿ ವೃತ್ತಿ ಬದುಕನ್ನಾರಂಭಿಸಿ ಮುಂದೆ ಅದೇ ಪತ್ರಿಕೆಯ ಸಂಪಾದಕರಾದರು. ಮುಂದೆ ಪ್ರಾದೇಶಿಕ ಸುದ್ಧಿವಾಹಿನಿಯನ್ನು ಆರಂಭಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಹಾಸನ ಜಿಲ್ಲಾಧ್ಯಕ್ಷ ಸಹಿತ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿರುವ ಅವರು ಸದ್ಯ ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ (ಡಿ.ಎಫ್‌ಡಬ್ಲ್ಯೂಜೆ) ಸಂಘಟನೆಯ ಮುಖ್ಯ ಸಾರಥಿಗಳಲ್ಲೊಬ್ಬರು.

9 ನವೀನ್ ಕೆ. ಇನ್ನ, ಮುಂಬಯಿ

(ಮೊಹಮ್ಮದ್ ಇಬ್ರಾಹಿಂ ಪಾರ ಸ್ಮರಣಾರ್ಥ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲ ನೀಡುವ ದತ್ತಿನಿಧಿ ಪ್ರಶಸ್ತಿ)

ಕಳೆದ 32 ವರ್ಷಗಳಿಂದ ಮುಂಬಯಿ ಮಹಾನಗರದ ದೈನಿಕ ಕರ್ನಾಟಕ ಮಲ್ಲದಲ್ಲಿ ವರದಿಗಾರನಾಗಿ ಛಾಯಾಚಿತ್ರಗ್ರಾಹಕನಾಗಿ, ಜಾಹಿರಾತು ಪ್ರತಿನಿಧಿಯಾಗಿ, ಕ್ರೀಡಾ ಅಂಕಣಕಾರನಾಗಿ ಕಾರ್ಯ ನಿರ್ವಹಿಸುತ್ತಿರುವ ನವೀನ್ ಕೆ. ಇನ್ನ ಅವರು ಸಮಾಜಮುಖಿ ಸೇವೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸುವವರು. ಮುಂಬಯಿಯಲ್ಲಿ ಕನ್ನಡವನ್ನು ಗಟ್ಟಿಗೊಳಿಸುವಲ್ಲಿ ಶ್ರಮಿಸುತ್ತಾ ಬಂದವರಲ್ಲಿ ಪ್ರಮುಖ ಸಾಲಲ್ಲಿ ನಿಲ್ಲುವ ಅರ್ಹತೆ ಪಡೆದವರು ನವೀನ್ ಕೆ. ಇನ್ನ ಪತ್ರಿಕೆ ಮುಖೇನ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಸೇವೆಯನ್ನು ಮಾಡುತ್ತಾ ಮುಂಬಯಿ ಮಹಾನಗರದಲ್ಲಿ ಹೆಚ್ಚಿನ ವಿವಿಧ ಜಾತೀಯ, ಸಂಘಟನೆ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕಲಾ ಸಂಸ್ಥೆಗಳೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವವರು.

ತುಳುನಾಡ ಸಂಸ್ಕೃತಿಯನ್ನು ಪ್ರತಿಬಿಂಭಿಸುವಂತಹ ಲೇಖನಗಳು ಅಲ್ಲದೆ ಮುಂಬಯಿ ಮಹಾನಗರದ ಹಾಗೂ ತುಳುನಾಡಿನ ನೂರಾರು ಧಾರ್ಮಿಕ ಕ್ಷೇತ್ರಗಳ ಪರಿಚಯ ಲೇಖನಗಳು ಕರ್ನಾಟಕ ಮಲ್ಲದಲ್ಲಿ ಪ್ರಸಾರ ಮಾಡಿದವರು. ’ಬೀದಿಯಲ್ಲಿ ಅಣಕು ನಾಟಕವಾಗುತ್ತಿರುವ ಭೂತಾರಾಧನೆ’ ಎಂಬ ಲೇಖನಕ್ಕೆ ಓದುಗರಿಂದ ಪ್ರಶಂಸೆ ಹಾಗೂ ಬೆಂಬಲ ವ್ಯಕ್ತ. ಮುಂಬಯಿ ಮಹಾನಗರದಲ್ಲಿದ್ದು ಮನೆಯಿಂದ ತಪ್ಪಿಸಿಕೊಂಡಿದ್ದ ಮೂವರು ಎಳೆ ಪ್ರಾಯದ ಮಕ್ಕಳನ್ನು ಅವರವರ ಊರಿನ ಮನೆಗೆ ತಲುಪಿಸಿದ ತೃಪ್ತಿ. ನೂರಾರು ಕಡೆ ಪ್ರಶಸ್ತಿ, ಸನ್ಮಾನ, ಗೌರವಕ್ಕೆ ಪಾತ್ರರಾಗಿದ್ದಾರೆ.

10 ಡಾ. ನಂದಕುಮಾರ್ ಹೆಗ್ಡೆ

(ಮೊಗರೋಡಿ ಗೋಪಾಲಕೃಷ್ಣ ಮೇಲಾಂಟ ಸ್ಮರಣಾರ್ಥ ಶ್ರೀ ಹರ್ಷ ಮೇಲಾಂಟ ನೀಡುವ ದತ್ತಿನಿಧಿ ಪ್ರಶಸ್ತಿ)

ಡಾ. ನಂದಕುಮಾರ್ ಹೆಗ್ಡೆ ಅವರು ಕರ್ನಾಟಕ ಜಾನಪದ ಪರಿಷತ್ತಿನ ಆಡಳಿತಾಧಿಕಾರಿಯಾಗಿರುವ ಇವರು ಸಂಸ್ಥೆಯು ಹೊರ ತರುತ್ತಿರುವ ಜಾನಪದ ಲೋಕ ಮಾಸಿಕ ಪತ್ರಿಕೆಯಲ್ಲಿ ವರದಿಗಾಗರನಾಗಿ, ಉಪಸಂಪಾದಕ ಹಾಗೂ ಸಂಪಾದಕರಾಗಿ ಕರ್ನಾಟಕದಲ್ಲಿ ಜಾನಪದ ಲೋಕಕ್ಕೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಅವರೋರ್ವ ಶ್ರೇಷ್ಠ ಹಾಗೂ ಚತುರ ಸಂಘಟಕನೂ, ಕಲಾಪೋಷಕನೂ ಆಗಿದ್ದಾರೆ. ಬಡ ಅಶಕ್ತ ಜಾನಪದ ಕಲಾವಿದರನ್ನು ಸಮಾಜದ ಮುಖ್ಯವಾಹಿನಿಗೆ ಕೈಹಿಡಿದೆತ್ತಿ ಕರೆತರುವಲ್ಲಿ ಅವರು ನಿಸ್ವಾರ್ಥ ಹಾಗೂ ಅವಿಶ್ವಾಸನೀಯ ಸೇವೆ ಸಲ್ಲಿಸಿದ್ದಾರೆ. ಸಲ್ಲಿಸುತ್ತಲೇ ಇದ್ದಾರೆ. ಕರ್ನಾಟಕದ ಜಾನಪದ ಸಾಹಿತ್ಯ, ಕಲೆಯ ಸಿರಿವಂತಿಕೆಯನ್ನು ದಾಖಲೀಕರಣಗೊಳಿಸಿ ಸಂರಕ್ಷಿಸುವ ಗುರುತರ ಜವಾಬ್ದಾರಿಯನ್ನು ಬಹಳ ಕಾಳಜಿಯಿಂದ ನಿರ್ವಹಿಸುತ್ತಿದ್ದಾರೆ. ಎಂದಿಗೂ ಎಲೆಮರೆ ಕಾಯಿಯಂತೆ ತೆರೆಮರೆಯಲ್ಲೇ ನಿಂತು ಸೇವೆಗೈಯ್ಯುವ ಪ್ರಚಾರ ಬಯಸದ ಮೌನ ಸಾಧಕ ಅವರು. ಜಾನಪದ ಲೋಕದ ಸಾಹಿತ್ಯ ಪುರವಣಿಯ ಸಂಪಾದಕರಾಗಿ ಸ್ತುತ್ಯರ್ಹ ಸೇವೆ ಸಲ್ಲಿಸುತ್ತಿದ್ದಾರೆ. ಸದ್ರಿ ಪುರವಣಿಯು ಜಾನಪದ ಕ್ಷೇತ್ರದ ಅಮೂಲ್ಯ ಪ್ರಕಟಣೆಯಾಗಿ ಪ್ರಸಿದ್ಧಿ ಪಡೆದಿದೆ.

11 ಅನಿಲ್ ಹೆಚ್.ಟಿ

(ಉದ್ಯಮಿ, ಸಮಾಜ ಸೇವಕ ಶ್ರೀ ಅಶ್ರಫ್ ಶಾ ಮಂತೂರು ನೀಡುವ ದತ್ತಿನಿಧಿ ಪ್ರಶಸ್ತಿ)

ರಾಜ್ಯದ ಪತ್ರಿಕಾ ಓದುಗರಿಗೆ ಚಿರಪರಿಚಿತ ಹೆಸರಾಗಿರುವ ಅನಿಲ್ ಹೆಚ್.ಟಿ ಮೂಲತಃ ಚೆಟ್ಟಳ್ಳಿಯವರು. ಹೆಸರಾಂತ ಇತಿಹಾಸಕಾರ ದಿವಂಗತ ಡಿ.ಎಸ್ ಕೃಷ್ಣಯ್ಯ ಅವರ ಮರಿಮಗನಾಗಿರುವ ಅನಿಲ್‌ರ ತಾಯಿ ಆಶಾ ತಿಮ್ಮಪ್ಪಯ್ಯ ಕೊಡಗಿನ ಪ್ರಥಮ ಪಾಕಶಾಸ್ತ್ರ ಕೈಪಿಡಿ ಪಾಕಸಂಗಮದ ಲೇಖಕಿ. ತಂದೆ ಹೆಚ್.ಎಸ್ ತಿಮ್ಮಪ್ಪಯ್ಯ ಕೂಡ ಲೇಖಕರು, ಕಾಫಿ ತೋಟ ಮಾಲೀಕರಾಗಿದ್ದಾರೆ. ಕೊಡಗಿನ ಹೆಸರಾಂತ ದೈನಿಕ ಶಕ್ತಿಯ ಪ್ರಮುಖ ಲೇಖಕರಾಗಿ, ನೂರಾರು ಲೇಖನ ಬರೆದಿರುವ ಅನಿಲ್ ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆ ಕುರಿತು ವೀರಪ್ಪನ್ ಸಂಚರಿಸುತ್ತಿದ್ದ ಕಾಡಿನಲ್ಲಿ ಸತತ 2 ವರ್ಷಗಳ ಕಾಲ ತಿರುಗಾಡಿ ಶಕ್ತಿಯಲ್ಲಿ ಬರೆದ ತನಿಖಾ ವರದಿಗೆ ರಾಜ್ಯ ಪತ್ರಕರ್ತರ ಸಂಘದಿಂದ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ ಲಭಿಸಿತ್ತು. ಅನಿಲ್ ಅವರಿಗೆ ರಾಜ್ಯ ಮತ್ತು ಜಿಲ್ಲಾ ಪತ್ರಕರ್ತರ ಸಂಘದಿಂದ 59 ಪ್ರಶಸ್ತಿಗಳು ಉತ್ತಮ ವರದಿಗಾರಿಕೆಗೆ ಲಭಿಸಿರುವುದು ಕೊಡಗಿಗೆ ಹೆಮ್ಮೆಯಾಗಿದೆ. ಛಾಯಾಗ್ರಹಣದಲ್ಲಿಯೂ ಅನಿಲ್ ಎತ್ತಿದ ಕೈಯಾಗಿದ್ದು ರಾಷ್ಟ್ರಮಟ್ಟದ ಮಹೀಂದ್ರ ಅಂಡ್ ಮಹೀಂದ್ರ ಅವರ ಬೆಸ್ಟ್ ಫೋಟೋಗ್ರಫಿ ಪ್ರಶಸ್ತಿಯೂ ಲಭಿಸಿದೆ.

12 ವರ್ಷಗಳಿಂದ ಡಾಕ್ಯೂಮೆಂಟರಿ ನಿರ್ಮಾಣದಲ್ಲಿಯೂ ಹೆಸರಾಗಿರುವ ಅನಿಲ್ ನಿರ್ದೇಶನದ 2 ಡಾಕ್ಯುಮೆಂಟರಿಗೆ ಅತ್ಯುತ್ತಮ ಡಾಕ್ಯುಮೆಂಟರಿ ಪ್ರಶಸ್ತಿ ಲಭಿಸಿತ್ತು. ಈವರೆಗೆ 26 ಡಾಕ್ಯುಮೆಂಟರಿಗಳಿಗೆ ನಿರ್ಮಾಣ, ನಿರ್ದೇಶನ ನೀಡಿದ್ದಾರೆ. ರೋಟರಿ ಅಂತರರಾಷ್ಟ್ರೀಯ ಸಮಾಜಸೇವೆ ಸಂಘಟನೆಯಲ್ಲಿಯೂ ಸಕ್ರಿಯರಾಗಿದ್ದಾರೆ. ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾಗಿ ದಾಖಲೆಯ 11 ವರ್ಷ ಕಾರ್ಯನಿರ್ವಹಿಸಿದ್ದಾರೆ. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿಯೂ 8 ವರ್ಷ ಕಾರ್ಯನಿರ್ವಹಿಸಿದ್ದಾರೆ. ಕೊಡಗು ಜಿಲ್ಲೆಯ ಪ್ರಮುಖ ಶಕ್ತಿ ಪತ್ರಿಕೆಯಲ್ಲಿ 62 ದಿನಗಳ ಕಾಲ ನಿರಂತರವಾಗಿ ಅನಿಲ್ ಬರೆದ ಲಾಕ್‌ಡೌನ್ ಡೈರಿ ನಂತರ ಪುಸ್ತಕ ರೂಪದಲ್ಲಿ ಪ್ರಕಟಿತವಾಗಿತ್ತು. ಪ್ರಸ್ತುತ ಅನಿಲ್ ವಿಶ್ವವಾಣಿ ಪತ್ರಿಕೆಯ ಹಿರಿಯ ವರದಿಗಾರ ಆಗಿದ್ದು, ಜೊತೆಗೆ ಆಕಾಶವಾಣಿಯ ಕೊಡಗು ವರದಿಗಾರ ಆಗಿದ್ದಾರೆ. ಅಂತೆಯೇ ಕೊಡಗಿನ ಅತ್ಯಂತ ಜನಪ್ರಿಯ ಟಿವಿ ಮಾಧ್ಯಮವಾದ ಟಿವಿ 1 ನ ಮಾಲಕರಾಗಿ ಪ್ರಧಾನ ಸಂಪಾದಕರೂ ಆಗಿರುವರು.

12 ಸದಾನಂದ ಜೋಶಿ

(ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ನವಿಮುಂಬಯಿ ನೀಡುವ ದತ್ತಿನಿಧಿ ಪ್ರಶಸ್ತಿ)

ಇವರು ಮೂಲತಃ ಬೀದರ್ ಜಿಲ್ಲೆಯವರು. 1994 ರಲ್ಲಿ ಬೀದರಿನಿಂದ ಪ್ರಕಟವಾಗುವ ಉತ್ತರ ಕರ್ನಾಟಕ ಪತ್ರಿಕೆಯಲ್ಲಿ ಕರಡು ತಿದ್ದುವ (ಫ್ರೂಫ್ ರೀಡರ್) ಕೆಲಸದ ಮೂಲಕ ಪತ್ರಿಕಾ ರಂಗದಲ್ಲಿ ತಮ್ಮ ಸೇವೆ ಆರಂಭಿಸಿದರು. ನಂತರ ಉಪ ಸಂಪಾದಕ, ಸುದ್ದಿ ಸಂಪಾದನೆಯೊಂದಿಗೆ ವರದಿಗಾರಿಕೆ (ರಿಪೋರ್ಟಿಂಗ್) ಶುರು ಮಾಡಿದರು. ವಿಜಯ ಕರ್ನಾಟಕ ಪತ್ರಿಕೆಗೆ ಬೀದರ್ ಜಿಲ್ಲಾ ವರದಿಗಾರರಾಗಿ ಸದಾನಂದ ಜೋಶಿ ಅವರು1999 ರಲ್ಲಿ ನೇಮಕವಾದರು. ತಮಗೆ ಸಿಕ್ಕ ಅವಕಾಶದ ಭರಪೂರ ಸದ್ಭಳಕೆ ಮಾಡಿಕೊಂಡ ಸದಾನಂದ ಜೋಶಿ ಅವರು ತಮ್ಮ ಹರಿತವಾದ, ಪ್ರಖರವಾದ ಲೇಖನಿಗಳ ಮೂಲಕ ಬೀದರ್ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಅಪರೂಪದ ಕೊಡುಗೆ ನೀಡಿದರು. 2021 ರಲ್ಲಿ ವಿಜಯವಾಣಿ ಪತ್ರಿಕೆಗೆ ಬೀದರ್ ಜಿಲ್ಲಾ ಹಿರಿಯ ವರದಿಗಾರರಾಗಿ ಸೇವೆಗೆ ಸೇರಿದರು. ಸರ್ಕಾರ ಮತ್ತು ಜನರ ಕೊಂಡಿಯಾಗಿ ಪತ್ರಕರ್ತರು ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಸದಾನಂದ ಜೋಶಿ ಅವರು 26 ವರ್ಷ ಬೀದರ್ ಜಿಲ್ಲೆಯಲ್ಲಿ ಮಾಡಿದ ಕೆಲಸಗಳೇ ಸಾಕ್ಷಿಯಾಗಿವೆ. ಸದಾ ಜೋಶಿ ಹೆಸರಿನಲ್ಲಿ ಇವರ ಲೇಖನ ಬರುತ್ತವೆ. ಇವರ ಲೇಖನಗಳನ್ನು ಆಸಕ್ತಿ ಹಾಗೂ ಕುತೂಹಲದಿಂದ ಓದುವ ದೊಡ್ಡ ವರ್ಗವೇ ಈ ಭಾಗದಲ್ಲಿ ನಿರ್ಮಾಣವಾಗಿದೆ. ಇದು ಸದಾನಂದ ಜೋಶಿ ಅವರ ಪ್ರಖರ ಬರವಣಿಗೆ ಎಂಥದ್ದು ಎಂಬುದಕ್ಕೆ ನಿದರ್ಶನ ಎನಿಸಿದೆ.

ಬೀದರ್ ಜಿಲ್ಲೆಯಲ್ಲಿ ಸುದೀರ್ಘ ಅವಧಿ ಮಾದರಿಯಾಗಿ ಕೆಲಸ ಮಾಡಿದ ಸದಾನಂದ ಜೋಶಿ ಅವರಿಗೆ ಕಳೆದ 2021 ರ ಆಗಸ್ಟ್ 1 ರಂದು ಬಡ್ತಿ ಹೊಂದಿ ವಿಜಯವಾಣಿ ಕಲಬುರಗಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಸೇರಿ 2024 ರ ಜನವರಿಯಲ್ಲಿ ವಿಜಯವಾಣಿಯಿಂದ ಸ್ವಯಂ ನಿವೃತ್ತಿ ಪಡೆದರು. ಇದೀಗ ತಮ್ಮದೇ ಆದ ಜೋಶಿ ಮೀಡಿಯಾ ಹೌಸ್ ಸ್ಥಾಪಿಸಿದ್ದು, ಡಿಜಿಟಲ್, ಸೋಷಿಯಲ್ ಮೀಡಿಯಾ ಮುಖಾಂತರ ತಮ್ಮ ವಿಚಾರಗಳಿಗೆ ವೇದಿಕೆ ನೀಡುತ್ತಿದ್ದಾರೆ.

13 ದಿವಾಕರ ಬಿ. ಶೆಟ್ಟಿ

(ಕೆಯುಡಬ್ಲ್ಯೂಜೆ ರಾಜ್ಯ ಸಮಿತಿ ನೀಡುವ ದತ್ತಿನಿಧಿ ಪ್ರಶಸ್ತಿ)

ಸುಮಾರು ೩೦ ವರ್ಷಗಳಿಂದ ಕಾಪು ಪರಿಸರದಲ್ಲಿ ಪತ್ರಿಕಾ ವಿತರಣೆ ವರದಿಗಾರಿಕೆ ಮೂಲಕ ಸಮಾಜ ಸೇವಕನಾಗಿದ್ದು ತನ್ನ ಆಸುಪಾಸಿನ ಬಡವರಿಗೆ ಸರಕಾರದಿಂದ ದೊರಕುವ ಸೌಲಭ್ಯಗಳ ಬಗ್ಗೆ ತಿಳಿಸಿ ನೆರವಾದದಲ್ಲದೆ, ೧೦೦೦ ಕ್ಕೂ ಅಧಿಕ ಬಡಜನರಿಗೆ ತನ್ನ ಸ್ವಂತ ಖರ್ಚಿನಿಂದಲೇ ಎಲ್ಲ ಸರಕಾರಿ ನೆರವುಗಳನ್ನು ದೊರಕಿಸಿ ಕೊಟ್ಟಿದ್ದಾರೆ. ಜಾಗತಿಕ ಬಂಟರ ಸಂಘದ ಮೂಲಕ ನಾಲ್ಕು ಬಡ ಕುಟುಂಬಗಳಿಗೆ ತಲಾ ಏಳು ಲಕ್ಷ ರೂ. ವೆಚ್ಚದ ಮನೆ ನಿರ್ಮಿಸಿ ಕೊಡುವಲ್ಲಿ ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ.

ಕೊರೊನಾ ಸಂದರ್ಭದಲ್ಲಿ 6000 ದಷ್ಟು ಕುಟುಂಬಗಳಿಗೆ ಕಿಟ್ ವಿತರಣೆಗೆ ನೆರವಾದ ಕೀರ್ತಿ ಇವರದ್ದು ನೂರಾರು ಕಡೆ ಬಿರುದು, ಪ್ರಶಸ್ತಿ, ಸನ್ಮಾನ, ಗೌರವಕ್ಕೆ ಪಾತ್ರರಾಗಿದ್ದಾರೆ. ಗ್ರಾಮಗಳಲ್ಲಿ ನಾಯಿಗಳಿಗೆ ಲಸಿಕೆ, ಶಿಬಿರ, ಮದ್ಯಪಾನ ಶಿಬಿರ, ಉಚಿತ ಪುಸ್ತಕ ವಿತರಣೆ, ಕಲಿಕೋಪಕರಣ ವಿತರಣೆ, ಮುಂತಾದ ಕಾರ್ಯಕ್ರಮ ನಡೆಸಿ ಜನಮೆಚ್ಚುಗೆ ಗಳಿಸಿದ್ದಾರೆ. ಹಲವು ಗ್ರಾಮಗಳ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ. ಅಣೆಕಟ್ಟು ಕೊರತೆಯ ಬಗ್ಗೆ ಪತ್ರಿಕೆಗಳಲ್ಲಿ ಪ್ರಕರಿಸಿ ಸರಕಾರದ ಸ್ಪಂದನೆ ದೊರಕಿಸಿದ್ದಾರೆ.

14 ಬಿ.ಪಿ ಶೇಣಿ

(ಕೆಯುಡಬ್ಲ್ಯೂಜೆ ರಾಜ್ಯ ಸಮಿತಿ ನೀಡುವ ದತ್ತಿನಿಧಿ ಪ್ರಶಸ್ತಿ)

ಕಾಸರಗೋಡಿನ ಪತ್ರಿಕಾ ರಂಗದಲ್ಲಿ ಹಳೆಕಾಲದ ದೊಡ್ಡ ಹೆಸರಾಗಿರುವ ಬಿ.ಪಿ ಶೇಣಿ ಅವರು 1991 ರಿಂದ ಎಂಟು ವರ್ಷ ಕಾಲ ಕಾಸರಗೋಡಿನ ಪ್ರತಿಸೂರ್ಯ, 20 ವರ್ಷ ಕಾರವಲ್ ಪತ್ರಿಕೆಯಲ್ಲಿ ಪ್ರಧಾನ ಉಪ ಸಂಪಾದಕರಾಗಿ ದುಡಿದವರು. ಕಾರವಲ್‌ನ ಕನ್ನಡ ಸಂಚಿಕೆಯು ಆರಂಭಿಕ ಸಂಪಾದಕ ಕಳೆದ 15 ವರ್ಷಗಳಿಂದ ಪೆರ್ಲ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಿರ್ದೇಶಕ, ತುಳು ಕೂಟ ಕಾಸರಗೋಡು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ತುಳು ಒಕ್ಕೂಟ ಕಾರ್ಯದರ್ಶಿ, ಶೇಣಿ ಶ್ರೀ ಶಾರದಾಂಬ ಹೈಸ್ಕೂಲ್‌ನಲ್ಲಿ ೪ ಬಾರಿ ಪಿಟಿಎ ಅಧ್ಯಕ್ಷ, ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪಿಟಿಎ ಅಧ್ಯಕ್ಷ ಸಹಿತ ಅನೇಕ ಸಂಸ್ಥೆಗಳಲ್ಲಿ ದುಡಿದಿದ್ದಾರೆ.

ಕ್ಲಬ್ ಹೌಸ್ ಸಾಮಾಜಿಕ ಜಾಲತಾಣದಲ್ಲಿ ಸಮನ್ವಯ ವಾಹಿನಿಯ ಎಡ್ಮಿನ್. ಇದರಲ್ಲಿ 600 ಕಾರ್ಯಕ್ರಮ ನೀಡಿದ ಹೆಗ್ಗಳಿಕೆ. ವಿವಿಧ ಪತ್ರಿಕೆಗಳಲ್ಲಿ ೨೦೦೦ ಕ್ಕೂ ಮಿಕ್ಕ ಲೇಖನಗಳು ಪ್ರಕಟ ಆಕಾಶವಾಣಿಯಲ್ಲಿ ಬಾಷಣ ಇದೀಗ ವೃತ್ತಿಯಲ್ಲಿ ಕೃಷಿಕ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)