ಸಕಲೇಶಪುರ ಬಳಿ ಮತ್ತೆ ಭೂಕುಸಿತ, ಬೆಂಗಳೂರು ಮಂಗಳೂರು ರೈಲು ಸಂಚಾರ ವ್ಯತ್ಯಯ, ಪೂರ್ತಿ ದುರಸ್ತಿ ಬಳಿಕ ರೈಲು ಓಡಿಸಲು ಮನವಿ
ಕನ್ನಡ ಸುದ್ದಿ  /  ಕರ್ನಾಟಕ  /  ಸಕಲೇಶಪುರ ಬಳಿ ಮತ್ತೆ ಭೂಕುಸಿತ, ಬೆಂಗಳೂರು ಮಂಗಳೂರು ರೈಲು ಸಂಚಾರ ವ್ಯತ್ಯಯ, ಪೂರ್ತಿ ದುರಸ್ತಿ ಬಳಿಕ ರೈಲು ಓಡಿಸಲು ಮನವಿ

ಸಕಲೇಶಪುರ ಬಳಿ ಮತ್ತೆ ಭೂಕುಸಿತ, ಬೆಂಗಳೂರು ಮಂಗಳೂರು ರೈಲು ಸಂಚಾರ ವ್ಯತ್ಯಯ, ಪೂರ್ತಿ ದುರಸ್ತಿ ಬಳಿಕ ರೈಲು ಓಡಿಸಲು ಮನವಿ

Indian Railways News; ಸಕಲೇಶಪುರ – ಬಾಳ್ಳುಪೇಟೆ ಮಧ್ಯೆ ಮತ್ತೆ ಭೂಕುಸಿತ ಸಂಭವಿಸಿದ್ದು, ಬೆಂಗಳೂರು- ಮಂಗಳೂರು ರೈಲು ಸಂಚಾರ ವ್ಯತ್ಯಯವಾಗಿದೆ. ಆದ್ದರಿಂದ ಪೂರ್ತಿ ದುರಸ್ತಿಗೊಳಿಸಿ ಮತ್ತೆ ರೈಲು ಓಡಿಸಿ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. (ವರದಿ- ಹರೀಶ ಮಾಂಬಾಡಿ, ಮಂಗಳೂರು)

ಸಕಲೇಶಪುರ ಬಾಳ್ಳುಪೇಟೆ ನಡುವೆ ಶುಕ್ರವಾರ ಮತ್ತೆ ಭೂಕುಸಿತ (ಎಡಚಿತ್ರ) ಸಂಭವಿಸಿದ್ದು, ಬೆಂಗಳೂರು- ಮಂಗಳೂರು ರೈಲು ಸಂಚಾರಕ್ಕೆ ಅಡ್ಡಿಯಾಗಿದೆ.
ಸಕಲೇಶಪುರ ಬಾಳ್ಳುಪೇಟೆ ನಡುವೆ ಶುಕ್ರವಾರ ಮತ್ತೆ ಭೂಕುಸಿತ (ಎಡಚಿತ್ರ) ಸಂಭವಿಸಿದ್ದು, ಬೆಂಗಳೂರು- ಮಂಗಳೂರು ರೈಲು ಸಂಚಾರಕ್ಕೆ ಅಡ್ಡಿಯಾಗಿದೆ.

ಮಂಗಳೂರು: ಸಕಲೇಶಪುರ-ಬಾಳ್ಳುಪೇಟೆ ನಡುವೆ ಮತ್ತೆ ಭೂಕುಸಿತ ಸಂಭವಿಸಿದ್ದು, ಹಲವು ರೈಲುಗಳ ಸಂಚಾರ ವ್ಯತ್ಯಯಗೊಂಡಿದೆ. ಬೆಳಗ್ಗೆ ಮಂಗಳೂರಿನಿಂದ ಹೊರಟ ರೈಲು ಸಕಲೇಶಪುರದಲ್ಲಿ ಬಾಕಿಯಾಗಿದ್ದರೆ, ಬೆಂಗಳೂರಿನಲ್ಲಿ ಹೊರಟ ರೈಲು ಬಾಳ್ಳುಪೇಟೆಯಲ್ಲಿ ಬಾಕಿಯಾಗಿದೆ.

ರೈಲ್ವೆ ಇಲಾಖೆ ಮಧ್ಯಾಹ್ನ ಹೊರಟಿಸಿದ ಪ್ರಕಟಣೆಯಂತೆ, ಮಂಗಳೂರು ಸೆಂಟ್ರಲ್ ನಿಂದ ವಿಜಯಪುರಕ್ಕೆ ತೆರಳುವ ರೈಲು ರದ್ದುಗೊಂಡಿದೆ. ಯಶವಂತಪುರ ಕಾರವಾರ ರೈಲು ಹಾಸನದಲ್ಲೇ ಸಂಚಾರ ಮೊಟಕುಗೊಳಿಸಿದೆ. ಮಂಗಳೂರಿನಿಂದ ಯಶವಂತಪುರಕ್ಕೆ ತೆರಳುತ್ತಿದ್ದ ರೈಲು ಸಕಲೇಶಪುರದಲ್ಲಿ ಸಂಚಾರ ಮೊಟಕುಗೊಳಿಸಿದೆ.

ಗೊಂದಲಕ್ಕೆ ಒಳಗಾಗಬೇಡಿ; ರೈಲು ಪ್ರಯಾಣಿಕರ ಗಮನಕ್ಕೆ!

ಈ ಕುರಿತು ದಕ್ಷಿಣ ಕನ್ನಡ ರೈಲು ಬಳಕೆದಾರರ ಬಳಗ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ನೀಡಿದ್ದು, ರೈಲು ಸೇವೆಗಳು ರದ್ದುಗೊಂಡರೆ ರೈಲ್ವೆ ಇಲಾಖೆಯು ನಿಮಗೆ ಮೆಸೇಜ್ (ಎಸ್‌ಎಂಎಸ್), ಟ್ವಿಟರ್, ಫೇಸ್ಬುಕ್ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿಯನ್ನು ನೀಡುತ್ತದೆ. ಜೊತೆಗೆ ಎನ್.ಟಿ.ಇ.ಎಸ್ ಮೂಲಕವೂ ನೀವು ರೈಲುಗಳ ಓಡಾಟದ ಬಗ್ಗೆ ಪರಿಶೀಲಿಸಬಹುದಾಗಿದೆ. ರೈಲ್ವೆ ಇಲಾಖೆಯಿಂದ ಅಧಿಕೃತ ಮಾಹಿತಿ ಬರುವ ತನಕ ಯಾವುದೇ ಗೊಂದಲಕ್ಕೆ ಒಳಗಾಗದೆ ಇರಬೇಕೆಂದು ನಾವು ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದೆ.

ಆರಂಭಿಕ ಮಾಹಿತಿಯ ಪ್ರಕಾರ ರೈಲು ಸಂಖ್ಯೆ 16515 ಯಶವಂತಪುರ-ಕಾರವಾರ ಎಕ್ಸಪ್ರೆಸ್ ರೈಲನ್ನು ಹಾಸನ ಹಾಗು ಕಾರವಾರ ನಡುವೆ ಹಾಗು ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್-ಯಶವಂತಪುರ ಗೋಮಟೇಶ್ವರ ಎಕ್ಸಪ್ರೆಸ್ ರೈಲನ್ನು ಸಕಲೇಶಪುರ ಹಾಗು ಯಶವಂತಪುರ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ದಿನಾಂಕ 16.08.2024ರಂದು ಹೊರಡುವ ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸಪ್ರೆಸ್ ವಿಶೇಷ ರೈಲು ಸೇವೆ ಸಂಪೂರ್ಣವಾಗಿ ರದ್ದುಗೊಂಡಿದೆ.

ಇದೀಗ ಬಂದ ಮಾಹಿತಿ ಪ್ರಕಾರ, ಇವತ್ತಿನ ಬೆಂಗಳೂರು ಮುರುಡೇಶ್ವರ, ಮುರುಡೇಶ್ವರ ಬೆಂಗಳೂರು ರೈಲು ಸಂಚಾರ ಇರಲ್ಲ. ಅದೇ ರೀತಿ, ನಾಳೆ (ಆಗಸ್ಟ್ 17) ಕಾರವಾರ ಯಶವಂತಪುರ ರೈಲು ಸಂಚಾರ ಇರಲ್ಲ. ಕೆಲವು ರೈಲುಗಳ ಮಾರ್ಗ ಬದಲಾಯಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ.

ಕೆಲಸ ಪೂರ್ತಿ ಮಾಡಿದ ಬಳಿಕ ರೈಲು ಓಡಿಸಲು ಆಗ್ರಹ

ಈ ರೀತಿ ರೈಲು ಸೇವೆ ವ್ಯತ್ಯಯವಾಗುತ್ತಿರುವುದು ಇದು ಎರಡು ತಿಂಗಳಲ್ಲಿ ಮೂರನೇ ಬಾರಿ. ಹೀಗಾಗಿ ರೈಲು ಬಳಕೆದಾರರು ಗೊಂದಲಕ್ಕೆ ಒಳಗಾಗಿದ್ದಾರೆ. ಬುಕ್ ಮಾಡಿದರೂ ರೈಲು ಓಡುತ್ತೆ ಎಂಬ ಗ್ಯಾರಂಟಿ ಇರುವುದಿಲ್ಲ. ಸಮರ್ಪಕವಾಗಿ ಮಣ್ಣು ತೆರವು ಮಾಡಿ, ಅಪಾಯ ಕಂಡುಬಂದಲ್ಲೆಲ್ಲಾ ಅದನ್ನು ಗುರುತಿಸಿ, ಅಪಾಯ ಮುಂದೆ ಬಾರದಂತೆ ಎಚ್ಚರಿಕೆ ವಹಿಸಿ, ಬಳಿಕ ರೈಲು ಓಡಿಸಿ, ಹೀಗೇ ಹೊರಟ ಮೇಲೆ ಅರ್ಧದಲ್ಲೇ ಬಾಕಿಯಾಗುವ ವಾತಾವರಣ ಸೃಷ್ಟಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಹಳಿಯ ಮೇಲಿನ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದ್ದರೂ ಪದೇಪದೇ ಹಳಿಯ ಮೇಲೆ ಮಣ್ಣು ಕುಸಿಯುತ್ತಿರುವುದರಿಂದ ರೈಲುಗಳ ಓಡಾಟಕ್ಕೆ ಅಡ್ಡಿಯಾಗುತ್ತಿದೆ.

(ವರದಿ- ಹರೀಶ ಮಾಂಬಾಡಿ, ಮಂಗಳೂರು)

Whats_app_banner