Mangaluru News: ಭಾರಿ ಮಳೆಗೆ ಮಂಗಳೂರು ಪಂಪ್‌ವೆಲ್ ಜಲಾವೃತ: ಪರದಾಡಿದ ವಾಹನಗಳು
Mangaluru News: ಕರ್ನಾಟಕದ ಕರಾವಳಿ ಭಾಗದಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು, ಮಂಗಳೂರು ನಗರದ ಹಲವೆಡೆ ಮಳೆ ನೀರಿನ ಕಾರಣ ಜನಜೀವನ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ.
ಪಂಪ್ ವೆಲ್ ಫ್ಲೈಓವರ್ ನಿರ್ಮಾಣ ಸಂದರ್ಭವೇ ನಿಧಾನಗತಿಯ ಕಾಮಗಾರಿಗಾಗಿ ಟ್ರೋಲ್ ಗೆ ಒಳಗಾಗಿತ್ತು. ಇದೀಗ ಕಾಮಗಾರಿ ಮುಗಿದು ವಾಹನ ಸಂಚಾರಕ್ಕೆ ತೆರವಾದ ಬಳಿಕ ಅದರಡಿಯಲ್ಲಿ ರಸ್ತೆಯ ಪಕ್ಕದಲ್ಲಿ ಸಮರ್ಪಕವಾಗಿ ನೀರು ಹರಿದುಹೋಗುವ ವ್ಯವಸ್ಥೆಗಳು ಇಲ್ಲದ ಕಾರಣ ರಸ್ತೆಯಲ್ಲೇ ವಾಹನಗಳ ಚಕ್ರಗಳೇ ಮುಳುಗಿ ಮತ್ತೂ ಮೇಲೆ ಬರುವಷ್ಟು ನೀರು ಹರಿಯಲಾರಂಭಿಸಿತು. ಪೀಕ್ ಅವರ್ ನಲ್ಲಿ ವಾಹನ ದಟ್ಟಣೆಯೂ ಜಾಸ್ತಿಯಾದವು. ಆಂಬುಲೆನ್ಸ್ ಒಂದು ಆಸ್ಪತ್ರೆಗೆ ಸಾಗಲು ಪರದಾಡಬೇಕಾಯಿತು.
ಪಂಪ್ ವೆಲ್ ಜಂಕ್ಷನ್‌ನಲ್ಲೇಕೆ ನೀರು ತುಂಬಿತು
ಕರಾವಳಿ ಭಾಗದಲ್ಲಿ ವಿಶೇಷವಾಗಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಮಳೆ ತೀವ್ರಗೊಂಡಿತ್ತು. ಈ ಸಂದರ್ಭ ಸಮರ್ಪಕವಾಗಿ ಚರಂಡಿಗಳನ್ನು ಹೂಳೆತ್ತದೇ ಇರುವುದು, ತಗ್ಗು ಪ್ರದೇಶಗಳಲ್ಲಿ ಕಸಕಡ್ಡಿಗಳು ತುಂಬಿರುವುದೇ ಮೊದಲಾದ ಅವ್ಯವಸ್ಥೆಗಳು, ಹಾಗೂ ನಾಲ್ಕೂ ದಿಕ್ಕುಗಳಿಂದ ಪಂಪ್ ವೆಲ್ ಫ್ಲೈಓವರ್ ನ ಅಂಡರ್ ಪಾಸ್ ಇಳಿದಿಕ್ಕಿನಲ್ಲಿವುದೇ ಮೊದಲಾದ ಸಮಸ್ಯೆಗಳಿಂದ ಮೆಲ್ಲಮೆಲ್ಲನೆ ನೀರು ಏರಿಕೆ ಕಂಡಿತು. ಒಂದು ಹಂತದಲ್ಲಿ ವಾಹನಗಳು ಮುಳುಗುತ್ತವೆಯೋ ಎಂಬಂತೆ ಭಾಸವಾಯಿತು.
ಮಂಗಳೂರು ಪಂಪ್‌ವೆಲ್ ಫ್ಲೈಓವರ್ ಅಂಡರ್‌ಪಾಸ್ ಜಲಾವೃತ; ವಾಹನ ಸವಾರರ ಪರದಾಟದ ಫೋಟೋ ವರದಿಗೆ ಇಲ್ಲಿ ಕ್ಲಿಕ್ ಮಾಡಿ
ಪಂಪ್ ವೆಲ್ ಮೂಲಕವೇ ಬಿ.ಸಿ.ರೋಡ್ , ಬೆಂಗಳೂರು, ಮೈಸೂರು, ಕಾಸರಗೋಡು, ಸಹಿತ ವಿವಿಧೆಡೆಗಳಿಗೆ ವಾಹನಗಳು ಸಂಚರಿಸಬೇಕಾಗಿದ್ದು, ಮಂಗಳೂರು ನಗರ ಪ್ರವೇಶಿಸುವ ಹೆಬ್ಬಾಗಿಲ ರೀತಿಯಲ್ಲಿ ಈ ಭಾಗವಿದೆ. ಮೊದಲ ಮಳೆಗೇ ಹೀಗಾದರೆ, ಇನ್ನು ಧಾರಾಕಾರ ಮಳೆ ಬಂದಾಗ ಸ್ಮಾರ್ಟ್ ಸಿಟಿ ಎನಿಸಿಕೊಳ್ಳಲು ಹೊರಡುತ್ತಿರುವ ಮಂಗಳೂರು ಸ್ಥಿತಿ ಹೇಗಾಗಬಹುದು ಎಂದು ಟ್ರೋಲ್ ಮಾಡಲಾಗುತ್ತಿದೆ. ಸೋಮವಾರ ಬಹುತೇಕ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪಂಪ್ ವೆಲ್ ಮುಳುಗಿದೆ ಎಂಬ ಸಂದೇಶದೊಂದಿಗೆ ನೀರು ರಾಶಿ ಕಾಣಿಸುವ ವಿಡಿಯೋಗಳನ್ನು ಶೇರ್ ಮಾಡತೊಡಗಿದರು.
ಜೂನ್ 29ರಂದೇ ಮುನ್ನೆಚ್ಚರಿಕೆ ನೀಡಿತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ
ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನಗಳ ಕಾಲ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ಎಚ್ಚರಿಸಿತ್ತು.
ಕರ್ನಾಟಕದಲ್ಲಿ, ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಬಹುದು. ಕೆಲವು ಪ್ರದೇಶಗಳಲ್ಲಿ ಮುಂದಿನ 10 ದಿನಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ತಿಳಿಸಿತ್ತು.
ಕರ್ನಾಟಕದ ಎಲ್ಲ ಕರಾವಳಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಸಹಿತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಭಾರೀ ಮಳೆಯು ಹೆಚ್ಚಿನ ಉಬ್ಬರವಿಳಿತದೊಂದಿಗೆ ಹೊಂದಿಕೆಯಾಗಬಹುದು. ಇದು ಜಲಾವೃತ ಮತ್ತು ತಗ್ಗು ಪ್ರದೇಶಗಳ ಪ್ರವಾಹಕ್ಕೆ ಕಾರಣವಾಗುತ್ತದೆ.
ಕರಾವಳಿ ಜಿಲ್ಲೆಗಳಲ್ಲಿ ಮಧ್ಯಮದಿಂದ ಭಾರೀ (64.5 ಮಿಮೀ ನಿಂದ 115 ಮಿಮೀ) ಮಳೆಯಾಗುವ ನಿರೀಕ್ಷೆಯಿದೆ. ಪ್ರತ್ಯೇಕ ಸ್ಥಳಗಳಲ್ಲಿ ಈ ಅವಧಿಯಲ್ಲಿ ಅತಿ ಹೆಚ್ಚು (244.4 ಮಿಮೀ ವರೆಗೆ) ಮಳೆ ಬೀಳುತ್ತದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಹೇಳಿಕೆ ಉಲ್ಲೇಖಿಸಿ ಪಿಟಿಐ ಸುದ್ದಿ ಪ್ರಕಟಿಸಿತ್ತು.
ವರದಿ: ಹರೀಶ ಮಾಂಬಾಡಿ, ಮಂಗಳೂರು