ಕನ್ನಡ ಸುದ್ದಿ  /  ಕರ್ನಾಟಕ  /  Ut Khader: ರಾಜಕೀಯ ಗುರುವನ್ನು ಮರೆಯದ ಶಿಷ್ಯ: ಸ್ಪೀಕರ್ ಆದ ಮೇಲೆ ಜನಾರ್ದನ ಪೂಜಾರಿ ಆಶೀರ್ವಾದ ಪಡೆದುಕೊಂಡ ಯುಟಿ ಖಾದರ್

UT Khader: ರಾಜಕೀಯ ಗುರುವನ್ನು ಮರೆಯದ ಶಿಷ್ಯ: ಸ್ಪೀಕರ್ ಆದ ಮೇಲೆ ಜನಾರ್ದನ ಪೂಜಾರಿ ಆಶೀರ್ವಾದ ಪಡೆದುಕೊಂಡ ಯುಟಿ ಖಾದರ್

UT Khader - Janardhana Poojary: ಯು.ಟಿ.ಖಾದರ್ ತನ್ನ ಪ್ರತಿಯೊಂದು ರಾಜಕೀಯ ಹೆಜ್ಜೆಯಿಡುವ ಮುನ್ನ ಜನಾರ್ದನ ಪೂಜಾರಿ ಪಾದಕ್ಕೆರಗುತ್ತಾರೆ. ಸೋಮವಾರವೂ (ಮೇ 29)ಬಿಡುವಿಲ್ಲದ ಮೀಟಿಂಗ್ ಗಳನ್ನು ನಡೆಸಿದ್ದ ಖಾದರ್ ಸಂಜೆ ವೇಳೆ ಜನಾರ್ದನ ಪೂಜಾರಿ ಮನೆಗೆ ಬಂದು ಆಶೀರ್ವಾದ ಪಡೆದುಕೊಂಡರು.

ಜನಾರ್ದನ ಪೂಜಾರಿ ಭೇಟಿ ಮಾಡಿದ ಸ್ಪೀಕರ್​ ಯುಟಿ ಖಾದರ್
ಜನಾರ್ದನ ಪೂಜಾರಿ ಭೇಟಿ ಮಾಡಿದ ಸ್ಪೀಕರ್​ ಯುಟಿ ಖಾದರ್

ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ, ಇಂದಿರಾಗಾಂಧಿ, ರಾಜೀವ್ ಗಾಂಧಿ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದ ಬಿ.ಜನಾರ್ದನ ಪೂಜಾರಿ ಅವರಿಗೆ ಈಗ 86ರ ಹರೆಯ. ಉಳ್ಳಾಲದ ಶಾಸಕರಾಗಿದ್ದ ಯು.ಟಿ.ಫರೀದ್ ಪೂಜಾರಿ ಆಪ್ತಬಳಗದವರು. ಫರೀದ್ ಪುತ್ರ ಯು.ಟಿ.ಖಾದರ್ ಅವರೂ ಪೂಜಾರಿ ಪಾಳಯದವರೇ. ಸತತ ಜಯಶಾಲಿಯಾಗುತ್ತಾ ಬರುತ್ತಿರುವ ಖಾದರ್ ಪೂಜಾರಿ ಅವರನ್ನು ರಾಜಕೀಯ ಗುರು ಎಂದೇ ಸ್ವೀಕರಿಸಿಕೊಂಡಿದ್ದಾರೆ. ಸಂದರ್ಭ ಸಿಕ್ಕಾಗಲೆಲ್ಲಾ ಹೇಳುತ್ತಾರೆ. ಸ್ಪೀಕರ್ ಆಗಿ ತನ್ನ ಮೊದಲ ಭಾಷಣದಲ್ಲೂ ಖಾದರ್ ಅವರು ಪೂಜಾರಿ ಅವರನ್ನು ಉಲ್ಲೇಖಿಸಿದರು. ಹೀಗಾಗಿಯು.ಟಿ.ಖಾದರ್ ತನ್ನ ಪ್ರತಿಯೊಂದು ರಾಜಕೀಯ ಹೆಜ್ಜೆಯಿಡುವ ಮುನ್ನ ಜನಾರ್ದನ ಪೂಜಾರಿ ಪಾದಕ್ಕೆರಗುತ್ತಾರೆ. ಸೋಮವಾರವೂ (ಮೇ 29)ಬಿಡುವಿಲ್ಲದ ಮೀಟಿಂಗ್ ಗಳನ್ನು ನಡೆಸಿದ್ದ ಖಾದರ್ ಸಂಜೆ ವೇಳೆ ಜನಾರ್ದನ ಪೂಜಾರಿ ಮನೆಗೆ ಬಂದು ಆಶೀರ್ವಾದ ಪಡೆದುಕೊಂಡರು.

ಟ್ರೆಂಡಿಂಗ್​ ಸುದ್ದಿ

ಒಂದು ಕಾಲದಲ್ಲಿ ಕರಾವಳಿ ರಾಜಕೀಯದ ಕಾಂಗ್ರೆಸ್ ಹೈಕಮಾಂಡ್ ಆಗಿದ್ದ ಜನಾರ್ದನ ಪೂಜಾರಿ ಈಗಲೂ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಖಾದರ್ ಬಂದಾಗಲೂ ಅಷ್ಟೇ. ‘’ನಾನು ನಿಮ್ಮ ಭಾಷಣವನ್ನು ಕೇಳಿದೆ. ತಂದೆಯನ್ನೂ ಮೀರಿಸುವ ಮಗ. ಸ್ಪೀಕರ್ ಆದಾಗ ಏನು ಮಾಡುತ್ತಾನೋ ಎಂದುಕೊಂಡಿದ್ದೆ. ಆದರೆ ಸ್ಪೀಕರ್ ಭಾಷಣ ಕೇಳಿದ ಮೇಲೆ ನನಗನ್ನಿಸಿತು. ಭೇಷ್.. ಸ್ಪೀಕರ್ ಸ್ಥಾನಕ್ಕೆ ಅರ್ಹ ವ್ಯಕ್ತಿ’’ ಎಂದು ಹೊಗಳಿದರು.

ಕೆಲವರು ಸ್ಪೀಕರ್ ಆಗಲು ಹಿಂದೇಟು ಹಾಕುತ್ತಾರೆ ಎಂದು ಹಿರಿಯರೊಬ್ಬರು ಸ್ಪೀಕರ್ ಬೇಡವೇ ಬೇಡ ಎಂದು ಹೇಳಿದ ವಿಚಾರವನ್ನು ಉಲ್ಲೇಖಿಸಿದ ಪೂಜಾರಿ, ಸ್ಪೀಕರ್ ಎಂದರೇನು ಎಂಬ ಮೌಲ್ಯವೇ ಅವರಿಗೆ ಗೊತ್ತಿಲ್ಲ. ಕೆಲವರು ಕೇಂದ್ರದಲ್ಲಿ ಮಂತ್ರಿಯಾಗಿದ್ದವರು ಇಂದು ರಾಜ್ಯದ ಕ್ಯಾಬಿನೆಟ್ ಗೆ ಸೇರುತ್ತಾರೆ. ಮಂತ್ರಿಯಾಗದಿದ್ದರೆ ಬದುಕಲು ಸಾಧ್ಯವೇ ಇಲ್ಲವೆಂಬಂತೆ ಆಡುತ್ತಾರೆ. ಅವರೆಲ್ಲರ ಮಧ್ಯೆ ಖಾದರ್ ವ್ಯಕ್ತಿತ್ವ ಎಷ್ಟೋ ಮೇಲು. ಅವರು ಸ್ಪೀಕರ್ ಆಗುವ ಮೂಲಕ ಅದರ ಸ್ಥಾನದ ಘನತೆಯನ್ನು ಎತ್ತಿ ಹಿಡಿಯುತ್ತಾರೆ ಎಂಬ ಖಾತ್ರಿ ನನಗಿದೆ ಎಂದು ಪೂಜಾರಿ ಹೇಳಿದರು.

ರಾಜಕೀಯ ಏಳುಬೀಳುಗಳು ಇದ್ದೇ ಇರುತ್ತದೆ. ಅಧಿಕಾರ ಇವತ್ತು ಬರುತ್ತದೆ, ನಾಳೆ ಹೋಗುತ್ತದೆ. ಇವತ್ತು ಮಂತ್ರಿಯಾಗುತ್ತಾನೆ, ನಾಳೆ ಕಳೇದುಕೊಳ್ಳುತ್ತಾನೆ. ಆದರೆ ಸ್ಪೀಕರ್ ಆಗುವುದು ಎಂದರೆ ಹಾಗಲ್ಲ, ಅದೊಂದು ಗೌರವ. ಮಂತ್ರಿಯಾಗಿಲ್ಲ ಎಂಬ ಭಾವನೆ ಅಭಿಮಾನಿಗಳಿಗಿದೆ. ಆದರೆ ಸ್ಪೀಕರ್ ಆಗುವುದೆಂದರೆ ಅದೊಂದು ಹೆಮ್ಮೆಯ ವಿಚಾರ ಎಂದು ಜನಾರ್ದನ ಪೂಜಾರಿ ಹೇಳಿ, ಖಾದರ್ ಬೆನ್ನು ತಟ್ಟಿದರು.

ಮಂಗಳೂರು ಕ್ಷೇತ್ರವನ್ನು 2007 ರಿಂದ ಪ್ರತಿನಿಧಿಸುತ್ತಾ ಬಂದಿರುವ ಯು.ಟಿ.ಖಾದರ್, ಸದನವೀರ ಪ್ರಶಸ್ತಿ ಪಡೆದವರು. ವಿದ್ಯಾರ್ಥಿ ಜೀವನದಲ್ಲೇ ಸೆನೆಟ್ ಸದಸ್ಯರಾಗಿ ಆಯ್ಕೆಗೊಂಡು, ಸರ್ವಕಾಲೇಜು ವಿದ್ಯಾರ್ಥಿ ಸಂಘದ ಸಲಹೆಗಾರರಾಗಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಖಾದರ್, ಈಗ ಅನುಭವಿ ರಾಜಕಾರಣಿ. 2023ರ ವಿಧಾನಸಭಾ ಚುನಾವಣೆಯಲ್ಲಿ ಯು.ಟಿ.ಖಾದರ್ 83,219 ಮತಗಳನ್ನು ಪಡೆದು ಭರ್ಜರಿ ಜಯ ಗಳಿಸಿದ್ದಾರೆ. ಬಿಜೆಪಿಯ ಸತೀಶ್ ಕುಂಪಲ 60,429 ಹಾಗೂ ಎಸ್.ಡಿ.ಪಿ.ಐ.ನ ರಿಯಾಝ್ ಫರಂಗಿಪೇಟೆ 15,054 ಮತ ಗಳಿಸಿದ್ದಾರೆ. ಖಾದರ್ 22790 ಮತಗಳ ಅಂತರದ ಬೃಹತ್ ಗೆಲುವು ಸಾಧಿಸಿದ್ದಾರೆ. ತನ್ನ ಕ್ಷೇತ್ರದಲ್ಲಿ ಹಿಂದು ಬಾಂಧವರ ಕಾರ್ಯಕ್ರಮಗಳಿರಲಿ, ಮುಸ್ಲಿಮರ ಕಾರ್ಯಕ್ರಮಗಳಿರಲಿ, ಎಲ್ಲ ಕಡೆಯಲ್ಲೂ ಖಾದರ್ ಹಾಜರ್. ಉರಿನಾಲಗೆಯ ಹೇಳಿಕೆಗಳನ್ನು ನೀಡದೆ, ಸಮಾಧಾನಿಯಾಗಿಯೇ ಟೀಕೆಗಳನ್ನು ಎದುರಿಸುವ ಖಾದರ್ ವರ್ತನೆಗೆ ಜನರು ಮೆಚ್ಚಿದ್ದಾರೆ ಎನ್ನುವುದಕ್ಕೆ ಮಂಗಳೂರು ಜನರು ಐದು ಬಾರಿ ಅವರನ್ನು ಆಯ್ಕೆ ಮಾಡಿದ್ದೇ ಸಾಕ್ಷಿ. ಇದೀಗ ಅವರು ವಿಧಾನಸಭೆ ಸ್ಪೀಕರ್​ ಆಗಿಯೂ ಆಯ್ಕೆಯಾಗಿದ್ದಾರೆ.

IPL_Entry_Point