ಬಂಟ್ವಾಳ ಬಾಲಕನ ಸಾವಿಗೆ ಕಾರಣವಾಯ್ತು ಮೊಬೈಲ್ ಗೀಳು: ಮಹಡಿಯಿಂದ ಬಿದ್ದು ಮೃತಪಟ್ಟ 15 ವರ್ಷದ ಆದಿಶ್
ಮೊಬೈಲ್ ಗೀಳು ಬಂಟ್ವಾಳ ಬಾಲಕನ ಸಾವಿಗೆ ಕಾರಣವಾಯ್ತು. ಮನೆಯ ಮಹಡಿಯಿಂದ ಬಿದ್ದು 15 ವರ್ಷದ ಆದಿಶ್ ಮೃತಪಟ್ಟ ಘಟನೆ ಮತ್ತೆ ಪೇರೆಂಟಿಂಗ್ ವಿಚಾರವನ್ನು ಮುನ್ನೆಲೆಗೆ ತಂದಿದೆ. ಇದಲ್ಲದೆ ಇನ್ನೆರಡು ಅಪರಾಧ ಸುದ್ದಿಗಳು ಈ ವರದಿಯಲ್ಲಿದೆ. (ವರದಿ - ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಮೊಬೈಲ್ ಗೀಳು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ 15 ವರ್ಷದ ಬಾಲಕನ ಪ್ರಾಣವನ್ನೇ ತೆಗೆದಿದೆ. ಮೊಬೈಲ್ ನೋಡುತ್ತಾ ಎಲ್ಲಿ ಹೋಗುತ್ತಿದ್ದೇನೆ ಎಂಬ ಪರಿವೆ ಇಲ್ಲದೆ ಹೆಜ್ಜೆ ಹಾಕಿದ ಬಾಲಕ ಆದಿಶ್, ಮನೆಯ ಮೇಲ್ಭಾಗದಿಂದ ಕೆಳಬಿದ್ದು ಸಾವನ್ನಪ್ಪಿದ್ದಾನೆ.
ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಪುತ್ರ ಆದಿಶ್(15) ಮೃತಪಟ್ಟ ಬಾಲಕ. ಮನೆಮಂದಿಗೆ ಗೊತ್ತಿಲ್ಲದಂತೆ ಮೊಬೈಲ್ ಹಿಡಿದುಕೊಂಡು ಮನೆಯ ಹೊರಗೆ ಬಂದಿದ್ದು, ಈ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಘಟನೆಯಲ್ಲಿ ಬಾಲಕನ ತಲೆಗೆ ಗಂಭೀರ ಗಾಯವಾಗಿದ್ದು, ವಿಪರೀತ ರಕ್ತಸ್ರಾವಗೊಂಡಿದೆ. ಬಾಲಕನ ತಂದೆ ಬೆಳಗ್ಗೆ ಎದ್ದು ಹೊರಗೆ ಬರುವಾಗಲೇ ಆತ ಕೆಳಗೆ ಬಿದ್ದಿರುವುದು ಗಮನಕ್ಕೆ ಬಂದಿದ್ದು, ಅದಾಗಲೇ ಮೃತಪಟ್ಟಿದ್ದನು. ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬಿದ್ದು ಈತನ ಪ್ರಾಣ ಹೋಗಿದೆ. ಬಾಲಕನಿಗೆ ರಾತ್ರಿ ವೇಳೆಯೂ ಮೊಬೈಲ್ ಬಳಕೆ ಹಾಗೂ ಟಿವಿ ನೋಡುವ ಅಭ್ಯಾಸ ಇತ್ತು ಎನ್ನಲಾಗಿದೆ. ಮನೆ ತಗ್ಗು ಪ್ರದೇಶದಲ್ಲಿರುವ ಕಾರಣಕ್ಕೆ ಪಿಲ್ಲರ್ ಹಾಕಿ ಮೇಲೆ ಮನೆ ನಿರ್ಮಿಸಿದ್ದರು. ಘಟನೆಯ ಕುರಿತು ಬಂಟ್ವಾಳ ನಗರ ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕನ ತಂದೆ ದಿನೇಶ್ ಹೋಟೆಲ್ ನಡೆಸುತ್ತಿದ್ದು, ಅವರ ಪತ್ನಿ ಬೆಳಗ್ಗೆ ಹೋಟೆಲ್ ನಲ್ಲಿ ಕೆಲಸವಿದೆ ಎಂದು ಅಲ್ಲೇ ಮಲಗಿದ್ದರು. ಬಾಲ್ಯದಿಂದಲೂ ಒಬ್ಬನೇ ಮಲಗುವ ಅಭ್ಯಾಸವಿದ್ದ ಆದಿಶ್, ರಾತ್ರಿ ವೇಳೆ ಎದ್ದರೂ ತಂದೆ, ತಾಯಿ ಗಮನಕ್ಕೆ ಬರುತ್ತಿರಲಿಲ್ಲ. ದಿನೇಶ್ ದಂಪತಿಗೆ ಇಬ್ಬರು ಮಕ್ಕಳು. ದೊಡ್ಡವಳು ಹುಡುಗಿ, ಸಣ್ಣವನು ಆದಿಶ್. ಬಂಟ್ವಾಳ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದ ಆದಿಶ್ ಗೆ ಪರೀಕ್ಷೆಗಳು ಮುಗಿದಿದ್ದವು. ಆದರೆ ಮೊಬೈಲ್ ಅನ್ನು ಹಿಡಿದುಕೊಂಡೇ ಯಾವಾಗಲು ಇರುತ್ತಿದ್ದ. ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದನೇ ಅಥವಾ ಏನನ್ನು ನೋಡುತ್ತಿದ್ದ ಎಂಬುದು ಗೊತ್ತಿಲ್ಲ ಎಂದು ಹೆತ್ತವರು ತಿಳಿಸಿದ್ದಾರೆ.
ಇದನ್ನೂ ಓದಿ| ಪೇರೆಂಟಿಂಗ್ ಸಂಬಂಧಿಸಿದ ಎಲ್ಲ ಮಾಹಿತಿಗಳಿಗೆ ಹಿಂದೂಸ್ತಾನ್ ಟೈಮ್ಸ್ ಕನ್ನಡದ ಈ ಪೇರೆಂಟಿಂಗ್ ಪುಟ ಗಮನಿಸಿ.
ಪಾವಗಡ ಘಟನೆ ವಿಡಿಯೋ ಬಂಟ್ವಾಳದ್ದೆಂದು ಪ್ರಸಾರ: ದೂರು ನೀಡಿದ ಬಿಜೆಪಿ
ತುಮಕೂರು ಪಾವಗಡದ ಘಟನೆಯ ವಿಡಿಯೋವನ್ನು ತಿರುಚಿ ಬಂಟ್ವಾಳದಲ್ಲಿ ಬಿಜೆಪಿ ಕಾರ್ಯಕರ್ತರ ನಡುವೆ ಹೊಡೆದಾಟ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗಿದೆ. ಸುಳ್ಳು ಸುದ್ದಿಯನ್ನು ದುರುದ್ದೇಶದೊಂದಿಗೆ ಪ್ರಸಾರ ಮಾಡಿದವರ ವಿರುದ್ಧ ಬಂಟ್ವಾಳ ಬಿಜೆಪಿಯ ನಿಯೋಗ ಸೋಮವಾರ ಉಪಚುನಾವಣಾಧಿಕಾರಿ ಹಾಗೂ ಬಂಟ್ವಾಳ ನಗರ ಠಾಣಾಧಿಕಾರಿಗೆ ದೂರು ನೀಡಿದೆ. ಮಾದರಿ ನೀತಿಸಂಹಿತೆಯ ಉಲ್ಲಂಘನೆ ಆಗಿದೆ ಎಂದು ಆರೋಪಿಸಿದೆ.
ಪದ್ಮನಾಭ ಸಾಮಂತ್ ಸಾವು, ಕಾಂಗ್ರೆಸ್ ನಾಯಕರಿಗೆ ಹಲವು ಸಂಶಯ
ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷರಾಗಿದ್ದ ವಾಮದಪದವು ನಿವಾಸಿ ಪದ್ಮನಾಭ ಸಾವಂತ ಭಾನುವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ದೊರಕಿದ್ದು, ಇವರ ಸಾವಿನ ಹಿಂದೆ ಹಲವು ಸಂಶಯಗಳಿದ್ದು, ಸಾವಿಗೆ ಕಾರಣರಾದವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಸಹಿತ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈ ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರೆ, ಬಂಟ್ವಾಳದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಅವರು ಇದೊಂದು ಹತ್ಯೆ ಎಂಬ ಸಂಶಯ ವ್ಯಕ್ತಪಡಿಸಿದರು.
ಸಾಮಂತ್ ಅವರು ಸಾಮಾಜಿಕ ಜಾಲತಾಣ ಸಹಿತ ಹಲವು ವಿಧಗಳಲ್ಲಿ ಅಕ್ರಮಗಳನ್ನು ಬಯಲಿಗೆಳೆಯುವ ಕೆಲಸವನ್ನು ಮಾಡಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ವಿರೋಧಿಗಳಿಂದ ಬೆದರಿಕೆ ಇತ್ತು. ಅವರ ಸಾವು ಸಂಶಯಾಸ್ಪದವಾಗಿದ್ದು, ಅದೊಂದು ಹತ್ಯೆ ಆಗಿರುವ ಸಂಶಯವಿದೆ ಎಂದವರು ಹೇಳಿದರು. ಸಾಮಂತ್ ವಿರುದ್ಧ ದೂರು ಕೊಟ್ಟವರ ತನಿಖೆ ನಡೆಸಿದರೆ ಸತ್ಯ ಬಹಿರಂಗಗೊಳ್ಳಬಹುದು ಎಂದು ಹೇಳಿದ ಅವರು, ಈ ಕುರಿತು ಪೊಲೀಸರು ಸ್ಪಷ್ಟವಾದ ತನಿಖೆಯನ್ನು ಮಾಡಬೇಕು ಎಂದು ಆಗ್ರಹಿಸಿದರು.
(ವರದಿ - ಹರೀಶ್ ಮಾಂಬಾಡಿ, ಮಂಗಳೂರು)
-----------------------
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.