Mangaluru Crime News: ಬಾಲ್ಯ ವಿವಾಹ ತಯಾರಿ, ಮದುವೆ ನಿಲ್ಲಿಸಿ ಮನವರಿಕೆ ಮಾಡಿದ ಅಧಿಕಾರಿಗಳು, ಕೊರಗಜ್ಜನ ಅಭಯದಿಂದ ನಾಪತ್ತೆಯಾದ ಯುವಕ ಪತ್ತೆ
ಉಳ್ಳಾಲ ತಾಲೂಕಿನ ಇರಾ ಎಂಬಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಗೆ ಬಾಲ್ಯವಿವಾಹ ಮಾಡಲು ತಯಾರಿಯಲ್ಲಿದ್ದ ಮನೆಗೆ ಸರಿಯಾದ ಸಮಯದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಮುಚ್ಚಳಿಕೆ ಬರೆಸಿಕೊಂಡು ಮದುವೆ ನಿಲ್ಲಿಸಿದ ಘಟನೆ ನಡೆದಿದೆ.

ಮಂಗಳೂರು: ಅಪ್ರಾಪ್ತ ವಯಸ್ಕ ಬಾಲಕಿಗೆ ಬಾಲ್ಯವಿವಾಹ ಮಾಡಲು ತಯಾರಿಯಲ್ಲಿದ್ದ ಮನೆಗೆ ಸರಿಯಾದ ಸಮಯದಲ್ಲಿ ಅಧಿಕಾರಿಗಳು ದಾಳಿ ನಡೆಸಿ ಮುಚ್ಚಳಿಕೆ ಬರೆಸಿಕೊಂಡು ಮದುವೆ ನಿಲ್ಲಿಸಿದ ಘಟನೆ ಬೆಳಕಿಗೆ ಬಂದಿದೆ.
ಟ್ರೆಂಡಿಂಗ್ ಸುದ್ದಿ
ಉಳ್ಳಾಲ ತಾಲೂಕಿನ ಇರಾ ಎಂಬಲ್ಲಿ ಘಟನೆ ನಡೆದಿದೆ. ವಿಟ್ಲ ಸಿ.ಡಿ.ಪಿ.ಒ.ಇಲಾಖೆ ವ್ಯಾಪ್ತಿಗೊಳಪಟ್ಟ ಇರಾ ನಿವಾಸಿ 17 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ಯುವಕನೋರ್ವನಿಗೆ ಮದುವೆ ನಡೆಸುವ ಉದ್ದೇಶದಿಂದ ನಿಶ್ಚಿತಾರ್ಥ ನಡೆದು ಮದುವೆಗಾಗಿ ಹಾಲ್ ಬುಕ್ ಆಗಿತ್ತು. ಬಾಲಕಿಯ ಮನೆಯಲ್ಲಿ ನಿನ್ನೆ ಮದರಂಗಿ ಕಾರ್ಯಗಳು ನಡೆಯುತ್ತಿದ್ದ ವೇಳೆ ಇಲಾಖೆಗೆ ಮಾಹಿತಿ ಬಂದಿದ್ದು, ಕೂಡಲೇ ಸಿ.ಡಿ.ಪಿ.ಒ.ಇಲಾಖೆಯ ಹಿರಿಯ ಮೇಲ್ವಿಚಾರಕಿ, ಗ್ರಾ.ಪಂ, ತಾಪಂ ಅಧಿಕಾರಿಗಳು, ಕಂದಾಯ ನಿರೀಕ್ಷಕ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಬಂಟ್ವಾಳ ಗ್ರಾಮಾಂತರ ಪೋಲೀಸರು ಮನೆಗೆ ದಾಳಿ ನಡೆಸಿದ್ದಾರೆ.
ಅಪ್ರಾಪ್ತ ವಯಸ್ಕ ಬಾಲಕಿ ಎಂಬುದರ ಸಂಪೂರ್ಣ ದಾಖಲೆಗಳ ಮೂಲಕ ಮನೆಗೆ ಹೋಗಿರುವ ಅಧಿಕಾರಿಗಳು ಮನೆಯವರಿಗೆ ಕಾನೂನಾತ್ಮಕ ವಿಚಾರಗಳನ್ನು ತಿಳಿಸಿದ್ದಾರೆ. ಬಳಿಕ ಮದುವೆ ನಿಲ್ಲಿಸಲು ನಿರ್ಧರಿಸಿದ ಮನೆಯವರಿಂದ ಮುಚ್ಚಳಿಕೆ ಬರೆಸಿಕೊಂಡರು.
ಅ ಬಳಿಕ ಮದುವೆ ನಿಘಂಟು ಮಾಡಿದ್ದ ವರನ ಕಡೆಯವರಿಗೆ ಮತ್ತು ಮದುವೆ ಹಾಲ್ ನ ಮಾಲೀಕರಿಗೆ ಸರಿಯಾದ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ. ಬಾಲಕಿಗೆ 18 ವರ್ಷ ತುಂಬದ ಕಾರಣ ಇದು ಬಾಲ್ಯವಿವಾಹವಾಗುತ್ತದೆ. ಹಾಗಾಗಿ ಕಾನೂನಿನಡಿಯಲ್ಲಿ ಬರುವ ವಿಚಾರಗಳನ್ನು ತಿಳಿಸಿ ಮದುವೆ ನಿಲ್ಲಿಸಲು ತಿಳಿಸಿದ್ದಾರೆ.
ಕೊರಗಜ್ಜನ ಅಭಯ, ನಾಪತ್ತೆಯಾದ ಯುವಕ ಪತ್ತೆಯಾಗಿ ಸನ್ನಿಧಿಗೆ ಬಂದು ಪ್ರಾರ್ಥನೆ
ಉಡುಪಿ ಜಿಲ್ಲೆಯ ತೊಂಭಟ್ಟು ಇರ್ಕಿಗದ್ದೆ ನಿವಾಸಿ ಯುವಕ ನಾಪತ್ತೆಯಾದ ವಿಚಾರದ ಸಂದರ್ಭ ಕೊರಗಜ್ಜ ದೈವಕ್ಕೆ ಪ್ರಾರ್ಥನೆ ಸಲ್ಲಿಸಿದ್ದು, ಈಗ ಯುವಕ ಪತ್ತೆಯಾಗಿದ್ದು, ಸನ್ನಿಧಿಗೆ ಕುಟುಂಬಸ್ಥರು ಬಂದು ಪ್ರಾರ್ಥನೆ ಸಲ್ಲಿಸಿದರು. ಎಂಟು ದಿನಗಳ ಹಿಂದೆ ಕಾಡಿನಲ್ಲಿ ನಾಪತ್ತೆಯಾದ ಯುವಕ ವಿವೇಕಾನಂದ ಕೊನೆಗೂ ಮನೆಗೆ ಮರಳಿದ್ದಾನೆ. ಈ ಸಂದರ್ಭ ಕೊರಗಜ್ಜನ ಸನ್ನಿಧಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದಾನೆ.
ನಾಪತ್ತೆಯಾದ ಆರು ದಿನಗಳ ಬಳಿಕ ಮನೆಯವರು ಮುಳ್ಳುಗಡ್ಡೆ ಕೊರಗಜ್ಜ ಸನ್ನಿಧಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದರು. ಈ ಸಂದರ್ಭ ಎರಡು ದಿನಗಳ ಒಳಗೆ ಆತ ಬರುತ್ತಾನೆ ಎಂದು ಕ್ಷೇತ್ರದ ಧರ್ಮದರ್ಶಿ ಪುನೀತ್ ಹೇಳಿದ್ದರು. ಅದರಂತೆ ವಿವೇಕಾನಂದ ದೊರಕಿದ್ದಾನೆ. ಇದು ಕೊರಗಜ್ಜನ ಪವಾಡವೇ ಸರಿ ಎಂದು ಮನೆಯವರು ಬಲವಾಗಿ ನಂಬಿದ್ದು, ಮುಳ್ಳುಗುಡ್ಡೆ ಕ್ಷೇತ್ರಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ್ದರು.
ಕಳವು ಪ್ರಕರಣಗಳಿಗೆ ಬೇಕಾದ ಆರೋಪಿ ಅರೆಸ್ಟ್: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿ
ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ ಒಂಭತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಈತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಮಂಗಳೂರು ತಾಲೂಕಿನ ಸುರತ್ಕಲ್ ಕೃಷ್ಣಾಪುರ ಚೊಕ್ಕಬೆಟ್ಟು ನಿವಾಸಿ ಮಹಮ್ಮದ್ ಶಾಫಿ ಬಂಧಿತ ಆರೋಪಿ. ಈತ 2017 ರಲ್ಲಿ ಬಂಟ್ವಾಳ ಗ್ರಾಮಾಂತರ ವ್ಯಾಪ್ತಿಯ ಕಳ್ಳತನ ಪ್ರಕರಣವೊಂದರ ಆರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಇದರ ಜೊತೆಗೆ ಜಿಲ್ಲೆಯ ವಿವಿಧ ಠಾಣೆಯಲ್ಲಿ ಈತನ ಮೇಲೆ ಕಳ್ಳತನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣಗಳಿದ್ದು, ಅ ಪ್ರಕರಣದಲ್ಲಿಯೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ.
ಬಂಟ್ವಾಳ ನಗರ ಪೋಲೀಸ್ ಠಾಣೆ, ವಿಟ್ಲ ಪೋಲಿಸ್ ಠಾಣೆ, ಉಪ್ಪಿನಂಗಡಿ, ಬೆಳ್ತಂಗಡಿ ಹಾಗೂ ಕೋಣಾಜೆ ಪೋಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನ ಮೇಲೆ ಪ್ರಕರಣ ದಾಖಲಾಗಿದ್ದು,ಈತ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಇನ್ಸ್ ಪೆಕ್ಟರ್ ಶಿವಕುಮಾರ್, ಹಾಗೂ ಉಪನಿರೀಕ್ಷಕರಾದ ಹರೀಶ್ ಮತ್ತು ಮೂರ್ತಿ ಅವರ ಮಾರ್ಗದರ್ಶನ ದಲ್ಲಿ ಸಿಬ್ಬಂದಿ ಗಣೇಶ್ ಪ್ರಸಾದ್, ಪುನೀತ್ ಕುಮಾರ್ , ವಿಜಯಕುಮಾರ್ ,ರಂಜಾನ್ ಅವರು ಪುತ್ತೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆಟೊದಲ್ಲಿ ಪ್ರಯಾಣಿಸುತ್ತಿದ್ದಾಗ ರಿಕ್ಷಾದಿಂದ ಹೊರಕ್ಕೆಸೆಯಲ್ಪಟ್ಟ ಪುಟ್ಟ ಮಗು
ಬೆಳ್ತಂಗಡಿ ತಾಲೂಕು ಕುಕ್ಕಳ ಗ್ರಾಮದ ಹೋಂಡಾ ಶೋರೂಂ ಸಮೀಪ ನಡೆದ ಘಟನೆಯಲ್ಲಿ ತಿರುವು ರಸ್ತೆಯಲ್ಲಿ ಆಟೊದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಮಗು ಸಫಾ ಆಜ್ಮೀ (3) ಆಟೊದಿಂದ ಹೊರಕ್ಕೆಸೆಯಲ್ಪಟ್ಟು ತಲೆಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅಶ್ರಫ್ ಇಸ್ಮಾಯಿಲ್ ಅವರು ಭಾನುವಾರ ಮಧ್ಯಾಹ್ನ ಮಗಳ ಚಿಕಿತ್ಸೆಗಾಗಿ ತನ್ನ ತಮ್ಮ ಮುಸ್ತಾಫಾ ಅವರ ಆಟೊದಲ್ಲಿ ಮಕ್ಕಳಾದ ಸಫಾ ಆಜ್ಮೀ ಮತ್ತು ಐಜಾ ಫಾತಿಮಾ ಜೊತೆಗೆ ಪ್ರಯಾಣಿಸುತ್ತಿದ್ದ ವೇಳೆ ಆಟೊದಲ್ಲಿದ್ದ ಮಗು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಾಯಗೊಂಡು, ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ.