ಕನ್ನಡ ಸುದ್ದಿ  /  Karnataka  /  Mangaluru News Story Writer Senior Journalist Who Worked For 36 Years For Udayavani Manohar Prasad Passed Away Hsm

Mangaluru News: ಹಿರಿಯ ಪತ್ರಕರ್ತ, ಕಥೆಗಾರ, ನಟ, ರಂಗಭೂಮಿ ಕಲಾವಿದ ಮನೋಹರ ಪ್ರಸಾದ್ ಇನ್ನಿಲ್ಲ

ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ಜನಪ್ರಿಯರಾಗಿದ್ದ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಶುಕ್ರವಾರ ಬೆಳಗ್ಗೆ ಮಂಗಳೂರಿನಲ್ಲಿ ಶುಕ್ರವಾರ ಬೆಳಗ್ಗೆ ನಿಧನರಾದರು. ರಂಗಭೂಮಿ ಹಾಗೂ ಚಲನಚಿತ್ರ ನಟ, ಕಾರ್ಯಕ್ರಮ ನಿರೂಪಕರಾಗಿಯೂ ಅವರು ಗುರುತಿಸಿಕೊಂಡಿದ್ದರು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಹಿರಿಯ ಪತ್ರಕರ್ತ ಮನೋಹರ ಪ್ರಸಾದ್
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್

ಮಂಗಳೂರು: ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ (64) ಮಂಗಳೂರಿನಲ್ಲಿ ಶುಕ್ರವಾರ ಬೆಳಗ್ಗೆ ನಿಧನ ಹೊಂದಿದರು.

ಪತ್ರಕರ್ತ, ರಂಗಭೂಮಿ ಹಾಗೂ ಚಲನಚಿತ್ರ ನಟ, ಕಾರ್ಯಕ್ರಮ ನಿರೂಪಕ ಮನೋಹರ ಪ್ರಸಾದ್ ಸ್ವತಃ ಉತ್ತಮ ಕತೆಗಾರ ಹಾಗೂ ಕವಿ.

'ಉದಯವಾಣಿ' ಪತ್ರಿಕೆಯ ಮಂಗಳೂರು ಬ್ಯೂರೋದ ಮುಖ್ಯಸ್ಥರಾಗಿದ್ದ ಮನೋಹರ ಪ್ರಸಾದ್ ತಮ್ಮ ಸಾಧನೆ ಹಾಗೂ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಸಂದೇಶ ಪ್ರತಿಷ್ಠಾನದ ಪ್ರಶಸ್ತಿ ಪಡೆದಿದ್ದಾರೆ.

ಮೂಲತಃ ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮದವರಾದ ಮನೋಹರ ಪ್ರಸಾದ್ ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣ ಪೂರ್ತಿಗೊಳಿಸಿ “ನವ ಭಾರತ’ ಪತ್ರಿಕೆಯಲ್ಲಿ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ “ಉದಯವಾಣಿ’ ಮಂಗಳೂರು ವರದಿಗಾರರಾಗಿ ಸೇರ್ಪಡೆಗೊಂಡಿದ್ದರು. ಅಲ್ಲಿಂದ ಮೊದಲ್ಗೊಂಡು ಮುಖ್ಯ ವರದಿಗಾರರಾಗಿ, ಬಳಿಕ ಬ್ಯೂರೋ ಚೀಫ್ ಆಗಿದ್ದ ಅವರು ಬಳಿಕ ಸಹಾಯಕ ಸಂಪಾದಕರಾಗಿದ್ದರು ಇದರೊಂದಿಗೆ ಉದಯವಾಣಿಯಲ್ಲಿ ಸತತ 36 ವರ್ಷಗಳ ಸೇವೆ ಸಲ್ಲಿಸಿದ್ದ ಅವರು ಕಳೆದ ಎರಡು ವರ್ಷದ ಹಿಂದೆ ನಿವೃತ್ತಿಗೊಂಡಿದ್ದರು.

ಸೃಜನಶೀಲ ಬರಹಗಾರರಾಗಿ, ಅನೇಕ ಕಥೆ, ಕವನಗಳನ್ನು ಬರೆದಿದ್ದು, ಬೊಗಾಣೆ (ಕೊಂಕಣಿ), ಸೀತಾನದಿ (ಕನ್ನಡ), ದಬಕ್‌ ದಬಕ್‌ ಐಸಾ (ತುಳು), ಐಸ್‌ಕ್ರೀಂ (ತುಳು) ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಕರ್ನಾಟಕ ಕರಾವಳಿ ಇತಿಹಾಸದ ಕುರಿತು 608 ಸಂಶೋಧನ ಲೇಖನಗಳನ್ನು ಬರೆದು ಉದಯವಾಣಿಯ ಮೂಲಕ ಪ್ರಕಟಿಸಿದ್ದಾರೆ.

ರಾಜದೂತ್ ಬೈಕಲ್ಲಿ ಅಂದಿನ ಸೂಪರ್ ಸ್ಟಾರ್ ....

ಮನೋಹರ್ ಪ್ರಸಾದ್ ಕೃತಿ ಬಿಡುಗಡೆ ಸಂದರ್ಭ ಅವರ ಕುರಿತು ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಅವರು ಬರೆದಿದ್ದು ಹೀಗೆ

ರಾಜದೂತ್ ಬೈಕಲ್ಲಿ ಅಂದಿನ ಸೂಪರ್ ಸ್ಟಾರ್ .... ನಾನು ಮಂಗಳೂರಲ್ಲಿ ಪತ್ರಕರ್ತನಾಗಿ ಕೆಲಸ ಆರಂಭಿಸಿದ ದಿನಗಳಲ್ಲಿ ಶ್ರೀ ಮನೋಹರ ಪ್ರಸಾದ್ ಸೂಪರ್ ಸ್ಟಾರ್ ಪತ್ರಕರ್ತರಾಗಿದ್ದರು

ನಮಗೆಲ್ಲ ಮನೋಹರ ಪ್ರಸಾದರೇ ಹೀರೋ. ಇದಕ್ಕೆ ಕಾರಣ ಆಗ ಅವರಿಗಿದ್ದ ಖ್ಯಾತಿ ಮತ್ತು ಅವರು ಪ್ರತಿನಿಧಿಸುತ್ತಿದ್ದ ಪತ್ರಿಕೆಯ ಹೆಸರು. ಕರಾವಳಿಯ ದೊಡ್ಡ ಪತ್ರಿಕೆಯ ವರದಿಗಾರ ಎಂದರೆ ಸ್ಥಳೀಯವಾಗಿ ಚಿರಪರಿಚಿತರಾಗುತ್ತಾರೆ. ಹಾಗೆಯೇ ಮನೋಹರ ಪ್ರಸಾದ್ ದಕ್ಷಿಣ ಕನ್ನಡಿಗರಿಗೆಲ್ಲ ಪರಿಚಿತರಾಗಿದ್ದರು.

ಮನೋಹರ್ ನಮಗೆಲ್ಲ ಆತ್ಮೀಯರಾಗಿದ್ದು ಈ ಕಾರಣದಿಂದ ಅಲ್ಲ. ಯುವ ಪತ್ರಕರ್ತರನ್ನು ಹುರಿದುಂಬಿಸುವ, ಖುದ್ದು ಮಾತನಾಡಿಸುವ ವಿರಳ ಪತ್ರಕರ್ತರಲ್ಲಿ ಮನೋಹರ್ ಅವರೂ ಒಬ್ಬರು. ಅವರು ಬರೆಯುತ್ತಿದ್ದ ನವಿರಾದ ವರದಿಯ ಶೈಲಿ ಎಲ್ಲರಿಗೂ ಮಾದರಿಯಾಗಿತ್ತು. ನಮ್ಮ ಯಾವುದೇ ಒಂದು ವಿಶೇಷ ವರದಿಯನ್ನು ಓದಿ, ಅದೇ ದಿನ ಕರೆ ಮಾಡಿ ಮೆಚ್ಚುಗೆಯ ಮಾತನ್ನು ಆಡುತ್ತಿದ್ದರು. ಸುಳ್ಯದಲ್ಲಿ ಕೋಮು ಗಲಭೆ ನಡೆದಾಗ ಎಲ್ಲರಿಗಿಂತ ಮೊದಲು ಸ್ಥಳಕ್ಕೇ ಹೋಗಿ ವರದಿ ಮಾಡಿದವನು ನಾನು. ಮರುದಿನದ ಮೊದಲ ಲ್ಯಾಂಡ್ ಲೈನ್ ಕರೆಯೇ ಮನೋಹರ ಅವರದ್ದಾಗಿತ್ತು. ಹೀಗೆ ಬೆಳೆದ ಸ್ನೇಹದ ಬೆಸುಗೆ ಇಂದಿಗೂ ಇದೆ.

ಅವರೇ ಚೀಫ್ ಆಫ್ ಬ್ಯೂರೋ ಆಗಿದ್ದ ಪತ್ರಿಕೆಗೆ ನಾನು ಬೆಂಗಳೂರಿನಲ್ಲಿ ಸಂಪಾದಕನಾಗಿ ನೇಮಕಗೊಂಡ ಕ್ಷಣದಲ್ಲೇ ಅಭಿನಂದನೆ ತಿಳಿಸಿ ಖುಷಿಪಟ್ಟವರು ಮನೋಹರ್. ಅವರು ಕೆಲಸ ಮಾಡುತ್ತಿದ್ದ ಪತ್ರಿಕೆಗೆ ಅವರೇ ಬ್ರಾಂಡ್ ಅಂಬಾಸಿಡರ್. ಆದರೆ ಅವರ ಖ್ಯಾತಿ ಹೆಚ್ಚಿದಂತೆ ಪತ್ರಿಕೆಯಲ್ಲೂ ಮತ್ಸರ ಹೆಚ್ಚಾಗಿತ್ತು. ಮನೋಹರ್ ರದ್ದು ಮಾತ್ರ ಅದನ್ನು ಮೀರಿ ಬೆಳೆದ ವ್ಯಕ್ತಿತ್ವವಾಗಿತ್ತು!

ಅವರ ಭಾವಚಿತ್ರಯಾನ- ಪತ್ರಿಕಾ ಬದುಕಿನ ಅನನ್ಯ ಚಿತ್ರ ಸಂಚಯ ಕೃತಿ ನನಗೆ ಇಂದು ತಲುಪಿತು. ಪತ್ರಕರ್ತರು ಗಣ್ಯರ ಜತೆ ಸಮಯ ಕಳೆಯೋದು ವಿಶೇಷವಲ್ಲ. ಆದರೆ ಅದರ ಫೊಟೋ ದಾಖಲೆ ವಿಶೇಷವೇ. ಕೃತಿಯಲ್ಲಿ ಮನೋಹರ ಪ್ರಸಾದರು ರಾಜದೂತ್ ಬೈಕ್ ಸವಾರರಾಗಿಯೇ ಕುಗ್ರಾಮ ಹುಡುಕಾಟಕ್ಕೆ ಸಾಗಿದ ಫೊಟೋ ಗಮನ ಸೆಳೆಯಿತು. ಅದೇ ರಾಜದೂತ್ ಬೈಕ್ ಸವಾರ ಬಂದೊಡನೆ ಅನೇಕ ಪತ್ರಿಕಾಗೋಷ್ಠಿ, ಸಮಾರಂಭಗಳು ಆರಂಭವಾಗುತ್ತಿದ್ದವು. ಮನೋಹರ ಪ್ರಸಾದರ ಪ್ರಾಮುಖ್ಯತೆ ಅಷ್ಟು ಇತ್ತು!

ಅವರು ಕೆಲಸ ಮಾಡುತ್ತಿದ್ದ ಪತ್ರಿಕೆಯಿಂದ ಅವರು ನಿವೃತ್ತರಾಗಿದ್ದಾರೆ . ಅವರು ಈಗ ಇಡೀ ಕರಾವಳಿಯ ಬ್ರಾಂಡ್ ಅಂಬಾಸಿಡರ್. ಶುಭ ಹಾರೈಕೆ ಗಳು ಸರ್. ಚಿತ್ರ ಸಂಚಯದ ಭಾಗ -2 ಶೀಘ್ರ ಪ್ರಕಟವಾಗಲಿ ಎಂದು ಆಶಿಸುವೆ

ಕರಾವಳಿಯ ಪತ್ರಿಕಾರಂಗಕ್ಕೆ ಝಲಕ್ ಕೊಟ್ಟವರು

ಹಿರಿಯ ಪತ್ರಕರ್ತ, ಕಥೆಗಾರ ಗೋಪಾಲಕೃಷ್ಣ ಕುಂಟಿನಿ ಮನೋಹರ್ ಕುರಿತು ಹೀಗೆ ಬರೆದಿದ್ದಾರೆ.

ಹೈಸ್ಕೂಲ್ ದಿನಗಳು. ಮಳೆಗಾಲ. ಹೆಲಿಕಾಪ್ಟರ್ ಒಂದು ಪಶ್ಚಿಮಘಟ್ಟ ಪ್ರದೇಶದಲ್ಲಿ ಕಾಣೆಯಾಯಿತು. ಕೆಲವು ದಿನಗಳ ಹುಡುಕಾಟದ ಬಳಿಕ ಸಕಲೇಶಪುರದ ಕಾಡ್ಮನೆ ಬಳಿ ಪತ್ತೆಯಾಯಿತು.

ಉದಯವಾಣಿಯ ಆ ವರದಿ ನನ್ನನ್ನು ಎಷ್ಟು ಕಾಡಿತು ಅಂದರೆ ನಾನೂ ಪತ್ರಕರ್ತನಾಗಬೇಕು ಎಂದು ನಿರ್ಧರಿಸಿದೆ ಮತ್ತು ಅದೇ ಗುರಿ ತಲುಪಿದೆ. ಆ ವರದಿ ಬರೆದವರು ಆಗಷ್ಟೇ ಪತ್ರಿಕಾರಂಗ ಪ್ರವೇಶಿಸಿದ ಯುವಕ ಮನೋಹರ ಪ್ರಸಾದ್‌.

ಕರಾವಳಿಯ ಪತ್ರಿಕಾರಂಗಕ್ಕೆ ಝಲಕಿನ, ಧಿಮಾಕಿನ, ಸೆಡವಿನ, ಸೊಬಗಿನ ರೂಪ ಕೊಟ್ಟವರು ಮನೋಹರ ಪ್ರಸಾದ್. ಪತ್ರಕರ್ತ ಅಂದರೆ ಜೋಳಿಗೆ ಚೀಲ, ನಿಲುವಂಗಿ,ಉರುಟು ಕನ್ನಡಕ, ಕುರುಚಲು ಗಡ್ಡ ಎಂಬ ರೂಪವನ್ನು ಕಿತ್ತೆಸೆದು, ಸಿನಿಮಾ ಹೀರೋ ರೂಪ ತೊಡಿಸಿದವರು ಮನೋಹರ ಪ್ರಸಾದ್.

ಕ್ಯಾರೇ ಅನ್ನದ ಬೀಡುಬೀಸು, ಹೀಗೇ ಇರೋದು ಮತ್ತು ಇರಬೇಕು ಎಂಬ ಘನತೆಯ ಶೈಲಿ ತೋರಿಸಿದವರು ಮನೋಹರ ಪ್ರಸಾದ್. ಇಂದಿನಿಂದ ಅವರಿಲ್ಲ.


(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)