Praveen Nettaru Wife: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ; ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಸರ್ಕಾರಿ ಉದ್ಯೋಗಕ್ಕೆ ಕುತ್ತು
Nuthana Kumari govt job: ನೂತನ ಕುಮಾರಿ ಸುಳ್ಯದವರಾದ ಕಾರಣ ಅವರ ಅಪೇಕ್ಷೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಕೆಸಲ ನೀಡಲಾಗಿತ್ತು. ಆದರೆ, ಮುಖ್ಯಮಂತ್ರಿ ಅಧಿಕಾರ ಇರುವ ವರೆಗೆ ಅಥವಾ ಮುಂದಿನ ಆದೇಶದವರೆಗೆ ಉದ್ಯೋಗ ಎಂಬುದನ್ನು ನೇಮಕಾತಿ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ (Praveen Nettaru Murder) ಬಳಿಕ ಅನುಕಂಪದ ಆಧಾರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅಧಿಕಾರದಲ್ಲಿ ನೆಟ್ಟಾರು ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿಸಲಾಗಿತ್ತು. ಆದರೆ ಇದೀಗ ಅವರ ಉದ್ಯೋಗಕ್ಕೆ ಕುತ್ತು ಬಂದಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಇನ್ನೆರಡು ತಿಂಗಳು ಕಳೆದರೆ ಪ್ರವೀಣ್ ನೆಟ್ಟಾರು ಹತ್ಯೆಯಾಗಿ ವರ್ಷ ತುಂಬುತ್ತದೆ. 2022ರ ಸೆಪ್ಟೆಂಬರ್ 22ರಂದು ಮಾನವೀಯ ನೆಲೆಯಲ್ಲಿ ಪ್ರವೀಣ್ ನೆಟ್ಟಾರ್ ಅವರ ಪತ್ನಿ ನೂತನ ಕುಮಾರಿ (Nuthana Kumari) ಅವರಿಗೆ ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ಸಚಿವಾಲಯದಲ್ಲಿ ಹಿರಿಯ ಸಹಾಯಕಿ ( ಗ್ರೂಪ್ ಸಿ) ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿತ್ತು.
ನೂತನ ಕುಮಾರಿ ಸುಳ್ಯದವರಾದ ಕಾರಣ ಅವರ ಅಪೇಕ್ಷೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಕೆಸಲ ನೀಡಲಾಗಿತ್ತು. ಆದರೆ, ಮುಖ್ಯಮಂತ್ರಿ ಅಧಿಕಾರ ಇರುವ ವರೆಗೆ ಅಥವಾ ಮುಂದಿನ ಆದೇಶದವರೆಗೆ ಉದ್ಯೋಗ ಎಂಬುದನ್ನು ನೇಮಕಾತಿ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.
ಆದರೆ ಇದೀಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಎಲ್ಲಾ ತಾತ್ಕಾಲಿಕ ನೇಮಕಾತಿಯನ್ನು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸುವ ನಿರ್ಧಾರ ಕೈಗೊಂಡಿದೆ. ಈ ಪೈಕಿ ನೂತನ ಕುಮಾರಿ ಅವರ ಹುದ್ದೆಯೂ ರದ್ದಾಗುವ ಸಾಧ್ಯತೆಯಿದೆ.
ಪ್ರವೀಣ್ ನೆಟ್ಟಾರು ಹತ್ಯೆ
ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಬೆಳ್ಳಾರೆಯಿಂದ ಪೆರುವಾಜೆಗೆ ಹೋಗುವ ಕ್ರಾಸ್ ಬಳಿ ಕೋಳಿ ಮಾಂಸದಂಗಡಿ ಹೊಂದಿರುವ ಪ್ರವೀಣ್ ನೆಟ್ಟಾರು ಅವರು 2022ರ ಜುಲೈ 26ರ ರಾತ್ರಿ ಅಂಗಡಿಗೆ ಬಾಗಿಲು ಹಾಕುತ್ತಿರುವಾಗ ಬೈಕೊಂದರಲ್ಲಿ ಮೂವರು ದುಷ್ಕರ್ಮಿಗಳು ಬಂದು ಮಾರಾಕಾಸ್ತ್ರಗಳಿಂದ ಏಕಾಏಕೆ ದಾಳಿ ಮಾಡಿ ಹತ್ಯೆ ಮಾಡಿದ್ದರು. ಅದಾದ ಬಳಿಕ ಅವರ ಶವಯಾತ್ರೆ ಸಂದರ್ಭ ಸಹಸ್ರಾರು ಮಂದಿ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಸೇರಿದ್ದರು. ಈ ಸಂದರ್ಭ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದ ಕಾರ್ಯಕರ್ತರು ಅವರ ಕಾರನ್ನೇ ಅಲ್ಲಾಡಿಸಿದ್ದು ದೊಡ್ಡ ಸುದ್ದಿಯಾಗಿತ್ತು.
ಶಿವಮೊಗ್ಗದಲ್ಲಿ ಬಜರಂಗ ದಳ ಕಾರ್ಯಕರ್ತ ಹರ್ಷನ ಕೊಲೆ ಬಳಿಕ ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದ್ದನ್ನು ತೀವ್ರವಾಗಿ ಖಂಡಿಸಿದ್ದ ಬಿಜೆಪಿ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ತಾಲೂಕು ಶಾಸಕರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಎಸ್. ಅಂಗಾರ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಬಿಜೆಪಿಯ ಅನೇಕ ಯುವ ಮೋರ್ಚಾ ಸದಸ್ಯರು, ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಳಿನ್ ಕುಮಾರ್ ವಿರುದ್ಧ ಕಾರ್ಯಕರ್ತರ ಬಂಡಾಯ ಇದೀಗ ಮತ್ತೊಂದು ಮಜಲನ್ನು ಪಡೆದು ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಕಣಕ್ಕಿಳಿಯುವವರೆಗೆ ತಲುಪಿದೆ. ಆ ಸಂದರ್ಭ ಕೂಡಲೇ ಎಚ್ಚೆತ್ತ ಬಿಜೆಪಿ ವರಿಷ್ಠರು ನೆಟ್ಟಾರು ಕುಟುಂಬಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸಲು ಮುಂದಾಗಿದ್ದರು. ಬಿಜೆಪಿ ವತಿಯಿಂದ ಕೆಲ ದಿನಗಳ ಹಿಂದಷ್ಟೆಯೇ ನೆಟ್ಟಾರು ಮನೆ ನಿರ್ಮಾಣವಾಗಿದ್ದು ಗೃಹಪ್ರವೇಶವೂ ಆಗಿತ್ತು.