Mangaluru Fire Accident: ಬಂಟ್ವಾಳ ಲೊರೆಟ್ಟೊಪದವಿನಲ್ಲಿ ಕಸಕ್ಕೆ ಬೆಂಕಿ ಕೊಡಲು ಹೋದಾಗ ಅವಘಡ; 70 ವರ್ಷದ ದಂಪತಿ ಸಜೀವ ದಹನ
Mangaluru Fire Accident: ಬಂಟ್ವಾಳ ತಾಲೂಕು ಲೊರೆಟ್ಟೊಪದವು ಸಮೀಪದ ತುಂಡುಪದವು ಎಂಬಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಅಗ್ನಿದುರಂತಕ್ಕೆ 70 ವರ್ಷದ ದಂಪತಿ ಬಲಿಯಾಗಿದ್ದಾರೆ. ಕಸಕ್ಕೆ ಬೆಂಕಿ ಹಾಕಲು ಪ್ರಯತ್ನಿಸಿದಾಗ ನಡೆದ ಘಟನೆ ಎಂದು ಹೇಳಲಾಗುತ್ತಿದ್ದು, ಇನ್ನೂ ದೃಢಪಟ್ಟಿಲ್ಲ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಲೊರೆಟ್ಟೊಪದವು ಸಮೀಪದ ತುಂಡುಪದವು ಎಂಬಲ್ಲಿ ಭಾನುವಾರ ಮಧ್ಯಾಹ್ನ ನಡೆದ ಘಟನೆಯೊಂದರಲ್ಲಿ ದಂಪತಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ ದಹನಗೊಂಡಿದ್ದಾರೆ.
ಹೊರದೇಶದಲ್ಲಿ ಕೆಲಸದಲ್ಲಿದ್ದು ಊರಿನಲ್ಲಿ ನಿವೃತ್ತ ಜೀವನ ಸಾಗಿಸುತ್ತಿರುವ ಗಿಲ್ಬರ್ಟ್ ಕಾರ್ಲೊ (78) ಮತ್ತು ಅವರ ಪತ್ನಿ ಕ್ರಿಸ್ಟಿನಾ ಕಾರ್ಲೊ (70) ಸಾವನ್ನಪ್ಪಿದ ದಂಪತಿ. ಕಳೆದ ಒಂದೂವರೆ ವರ್ಷಗಳ ಹಿಂದೆ ಅವರ ದಾಂಪತ್ಯ ಜೀವನದ ಸುವರ್ಣ ಸಂಭ್ರಮಾಚರಣೆ ನಡೆದಿತ್ತು. ಇವರಿಗೆ ಮೂವರು ಮಕ್ಕಳಿದ್ದು ಎಲ್ಲರೂ ಹೆಣ್ಣುಮಕ್ಕಳು. ಇವರಲ್ಲಿ ಇಬ್ಬರು ಹೊರದೇಶದಲ್ಲಿ ವಾಸಿಸುತ್ತಿದ್ದರೆ, ಒಬ್ಬರು ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಘಟನೆ ಹೇಗೆ ನಡೆಯಿತು: ಭಾನುವಾರ ಮಧ್ಯಾಹ್ನ ಮನೆಯ ಪಕ್ಕ ಬೆಂಕಿ ಕಾಣಿಸಿಕೊಂಡದ್ದನ್ನು ನೋಡಿ ಸುತ್ತಮುತ್ತಲಿವರು ತುಂಡುಪದವು ಬಳಿಯ ಗುಡ್ಡದ ಸುತ್ತಲೂ ಬೆಂಕಿ ವ್ಯಾಪಿಸಿತ್ತು. ಅದನ್ನು ನಂದಿಸುವ ಹೊತ್ತಿನಲ್ಲಿ ಇಬ್ಬರ ಶವ ಕಂಡುಬಂದಿದೆ. ಕೂಡಲೇ ಗಾಬರಿಗೊಂಡ ಸ್ಥಳೀಯರು ಅಗ್ನಿಶಾಮಕ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬಂದಿ ಮತ್ತು ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾರೆ. ಪೊಲೀಸರು ಆಗಮಿಸಿ ಮಹಜರು ನಡೆಸಿದ್ದಾರೆ.
ಬೆಂಕಿ ಕೊಟ್ಟು ಕೈಮೀರಿ ಹೋಯಿತೇ
ಗಿಲ್ಬರ್ಟ್ ದಂಪತಿ ಸುತ್ತಮುತ್ತ ಇದ್ದ ಕಸಕಡ್ಡಿಗಳಿಗೆ ಬೆಂಕಿ ಹಚ್ಚಿರಬೇಕು, ಅಥವಾ ಬೆಂಕಿ ಗಾಳಿಗೆ ಇವರ ಮನೆ ಪಕ್ಕದ ಗುಡ್ಡೆಯಲ್ಲಿ ವ್ಯಾಪಿಸಿರಬೇಕು, ಈ ಸಂದರ್ಭ ದಂಪತಿ ಅದನ್ನು ನಂದಿಸಲೆಂದು ತೆರಳಿದಾಗ ಇಬ್ಬರೂ ಅಗ್ನಿಯ ತೆಕ್ಕೆಗೆ ಸಿಲುಕಿಕೊಂಡಿದ್ದಾರೆ. ಇಬ್ಬರೂ ವಯೋವೃದ್ಧರಾದ ಕಾರಣ ಅದರಿಂದ ಹೊರಬರಲಾಗದೆ ಅಲ್ಲೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಮಾಹಿತಿ ದೊರಕಿದ ಬೆನ್ನಲ್ಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಕೂಡಲೇ ಲೊರೆಟ್ಟೊ ಚರ್ಚ್ ನ ಯುವಕರ ಸಹಿತ ಸ್ಥಳೀಯರು ಸೇರಿ ಬೆಂಕಿ ನಂದಿಸುವುದರ ಜೊತೆಗೆ ಮೃತದೇಹದ ಸಾಗಾಟಕ್ಕೆ ಸಹಕರಿಸಿದ್ದಾರೆ. ಮಂಗಳೂರಿನಲ್ಲಿರುವ ಮಗಳು ಸ್ಥಳಕ್ಕೆ ಆಗಮಿಸಿದ ಸಂದರ್ಭ ಸುಟ್ಟು ಕರಕಲಾದ ಮೃತದೇಹಗಳನ್ನು ಕಂಡು ರೋದಿಸುತ್ತಿದ್ದ ದೃಶ್ಯ ಕಂಡುಬಂತು.
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)