ಅಬ್ಬಾ, ಮತ್ತೆ ಶುರುವಾಯ್ತು ಮಂಗಳೂರು-ಬೆಂಗಳೂರು ರೈಲು ಸಂಚಾರ; ನೆಮ್ಮದಿಯ ನಿಟ್ಟುಸಿರು ಬಿಟ್ಟ ಕರಾವಳಿ ಜಿಲ್ಲೆಗಳ ಜನ
ಕಾರವಾರ ಮತ್ತು ಮಂಗಳೂರು ಜಂಕ್ಷನ್‌ನಿಂದ ಸೇವೆಗಳು ಆಗಸ್ಟ್ 9 ಶುಕ್ರವಾರ ಪ್ರಾರಂಭ ಎಂದು ಸೌತ್ ವೆಸ್ಟರ್ನ್ ರೈಲ್ವೆ ಪ್ರಕಟಣೆ ತಿಳಿಸಿತ್ತು. ಎಡಕುಮಾರಿ ಮತ್ತು ಕಡಗರವಳ್ಳಿ ನಡುವಿನ ಎಲ್ಲಾ ರೈಲುಗಳು ಮುಂದಿನ ಆದೇಶದವರೆಗೆ 15 ಕಿ.ಮೀ ವೇಗದಲ್ಲಿ ಚಲಿಸುತ್ತವೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಮಂಗಳೂರು: ಬೆಂಗಳೂರು-ಮಂಗಳೂರು ರೈಲು ಸಂಚಾರ ಮತ್ತೆ ಆರಂಭವಾಗಿದೆ. ಭಾರಿ ಮಳೆಯಿಂದಾಗಿ ಪಶ್ಚಿಮಘಟ್ಟದ ಸಕಲೇಶಪುರದಲ್ಲಿ ಭೂಕುಸಿತ ಸಂಭವಿಸಿದ್ದರಿಂ ರೈಲು ಹಳಿಗಳಿಗೆ ಹಾನಿಯಾಗಿತ್ತು. ಇದೀಗ ದರಸ್ತಿ ಕಾರ್ಯ ಪೂರ್ಣಗೊಂಡಿದ್ದು ಮಂಗಳೂರು-ಬೆಂಗಳೂರು ರೈಲು ಸಂಚಾರ ಮತ್ತೆ ಆರಂಭವಾಗಿದೆ. ಸಕಲೇಶಪುರದಲ್ಲಿ ಭೂಕುಸಿತದಿಂದ ಹಾನಿಗೊಳಗಾದ ಮಾರ್ಗವನ್ನು ದುರಸ್ತಿಗೊಳಿಸಿದ ಬಳಿಕ ಮಂಗಳೂರು-ಬೆಂಗಳೂರು ರೈಲು ಸಂಚಾರ ಗುರುವಾರದಿಂದ ಪುನರಾರಂಭಗೊಂಡಿತು.
ಎಡಕುಮೇರಿ ಹಾಗೂ ಕಡಗರವಳ್ಳಿ ನಡುವೆ ಸಂಭವಿಸಿದ ಭೂಕುಸಿತ ಹಿನ್ನೆಲೆಯಲ್ಲಿ ಆಗಸ್ಟ್ 4 ರವರೆಗೆ ಕರಾವಳಿಯಿಂದ ಬೆಂಗಳೂರಿಗೆ ತೆರಳುವ ಹಾಗೂ ಆಗಮಿಸುವ ಎಲ್ಲ ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಹಾಸನ ಜಿಲ್ಲೆಯ ಸಕಲೇಶಪುರ ಸಮೀಪ ಕಳೆದ ವಾರ ಗುಡ್ಡ ಕುಸಿತವಾಗಿ ಬೆಂಗಳೂರು ಮಂಗಳೂರು ಸೇರಿ ರಾಜ್ಯದ ವಿವಿಧೆಡೆಯಿಂದ ಕರಾವಳಿಗೆ ಸಂಚರಿಸುವ 12 ರೈಲುಗಳು ರದ್ದಾಗಿದ್ದವು. ಸದ್ಯ ಸುರಕ್ಷತಾ ಕಾಮಗಾರಿ ನಡೆಸುತ್ತಿದ್ದು, ಭೂ ಭಾಗವನ್ನು ಭದ್ರ ಮಾಡಿ ರೈಲ್ವೆ ಟ್ರ್ಯಾಕ್ ಪುನಃ ಸ್ಥಾಪಿಸಲಾಯಿತು.
ಯಶವಂತಪುರ-ಮಂಗಳೂರು ಜಂಕ್ಷನ್ ಗೊಮ್ಮಟೇಶ್ವರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16575) ಸುರಕ್ಷಿತವಾಗಿ ಈ ರೈಲ್ವೆ ಮಾರ್ಗದಲ್ಲಿ ಹಾದುಹೋಗುವ ಮೂಲಕ, ಬೆಂಗಳೂರು-ಮಂಗಳೂರು ಪ್ಯಾಸೆಂಜರ್ ರೈಲು ಸಂಚಾರ ಸೇವೆ ಮತ್ತೆ ಆರಂಭಗೊಂಡಿತು. ಬೆಂಗಳೂರು ಮತ್ತು ವಿಜಯಪುರದಿಂದ ರಾತ್ರಿಯ ರೈಲುಗಳು ಬುಧವಾರ ರಾತ್ರಿಯಿಂದ ಪ್ರಾರಂಭವಾಗಲಿದ್ದು, ಕಾರವಾರ ಮತ್ತು ಮಂಗಳೂರು ಜಂಕ್ಷನ್‌ನಿಂದ ಸೇವೆಗಳು ಆಗಸ್ಟ್ 9 ಶುಕ್ರವಾರ ಪ್ರಾರಂಭ ಎಂದು ಸೌತ್ ವೆಸ್ಟರ್ನ್ ರೈಲ್ವೆ ಪ್ರಕಟಣೆ ತಿಳಿಸಿತ್ತು. ಎಡಕುಮಾರಿ ಮತ್ತು ಕಡಗರವಳ್ಳಿ ನಡುವಿನ ಎಲ್ಲಾ ರೈಲುಗಳು ಮುಂದಿನ ಆದೇಶದವರೆಗೆ 15 ಕಿ.ಮೀ ವೇಗದಲ್ಲಿ ಚಲಿಸುತ್ತವೆ ಎಂದು ತಿಳಿಸಲಾಗಿದೆ.
ಧಾರಾಕಾರ ಮಳೆಯಿಂದ ಭೂಕುಸಿತವಾಗಿತ್ತು
ಜುಲೈ 26ರ ಸಂಜೆ ಧಾರಾಕಾರ ಮಳೆಯಿಂದಾಗಿ ಸೇತುವೆಯೊಂದರ ಬಳಿ ಭೂಕುಸಿತವಾಗಿತ್ತು. ತಕ್ಷಣವೇ, ಎಸ್‌ಡಬ್ಲ್ಯೂಆರ್‌ನ ಮೈಸೂರು ವಿಭಾಗ ಬೆಂಗಳೂರು-ಮಂಗಳೂರು ಸೆಕ್ಟರ್‌ನಲ್ಲಿ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ, ಟ್ರ್ಯಾಕ್ ಮರುಸ್ಥಾಪನೆ ಕಾರ್ಯ ಪ್ರಾರಂಭಿಸಿತು. ಈ ದುರಸ್ಥಿ ಕಾರ್ಯವನ್ನು ಪೂರ್ಣಗೊಳಿಸಲು ರೈಲ್ವೆಗೆ ಸುಮಾರು 10 ದಿನಗಳು ಬೇಕಾದವು.
ಆಗಸ್ಟ್ 4ರಂದು ಬೆಳಿಗ್ಗೆ 8.58ಕ್ಕೆ ರೈಲ್ವೆ ಹಳಿಯನ್ನು ಸಂಚಾರಯೋಗ್ಯ ಎಂದು ಪ್ರಮಾಣೀಕರಿಸಲಾಯಿತು. ಆರಂಭದಲ್ಲಿ ಗೂಡ್ಸ್ ರೈಲು ಓಡಿಸಿ ಸುರಕ್ಷತೆಯನ್ನು ಪರೀಕ್ಷಿಸಲಾಯಿತು.
ಆಗಸ್ಟ್ 8ರಂದು ಮೊದಲ ಪ್ಯಾಸೆಂಜರ್ ರೈಲು ಗೋಮ್ಮಟೇಶ್ವರ ಎಕ್ಸ್‌ಪ್ರೆಸ್ ಮಧ್ಯಾಹ್ನ 12.37ಕ್ಕೆ ಯಶಸ್ವಿಯಾಗಿ ಹಾದುಹೋಯಿತು. ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ಹೆಚ್ಚುವರಿ ಜಿಎಂ ಕೆ.ಎಸ್.ಜೈನ್ ಮತ್ತು ಇತರ ಹಿರಿಯ ಅಧಿಕಾರಿಗಳು ಮೈಸೂರು ವಿಭಾಗದ ತಂಡ ಮತ್ತು ವಲಯ ಪ್ರಧಾನ ಕಚೇರಿಯ ಇತರ ಅಧಿಕಾರಿಗಳು ಟ್ರ್ಯಾಕ್ ಮರುಸ್ಥಾಪಿಸುವಲ್ಲಿ ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದರು.