ಬಂಟ್ವಾಳ ಸಮೀಪದ ವಗ್ಗ ಸರ್ಕಾರಿ ಪ್ರೌಢಶಾಲೆ ಈಗ ಮಳೆನೀರು ಕೊಯ್ಲಿಗೆ ಮಾದರಿ, ಮಕ್ಕಳಿಗೆ ಜಲ ಜಾಗೃತಿಯ ಪಾಠ
ಬಂಟ್ವಾಳ ಸಮೀಪದ ವಗ್ಗ ಸರ್ಕಾರಿ ಪ್ರೌಢಶಾಲೆ ಈಗ ಮಳೆನೀರು ಕೊಯ್ಲಿಗೆ ಮಾದರಿಯಾಗಿ ರೂಪುಗೊಂಡಿದೆ. ಇದು ವಗ್ಗದ ಸರ್ಕಾರಿ ಪದವೀಪೂರ್ವ ಕಾಲೇಜಿನ ಭಾಗವೇ ಆಗಿದ್ದು, ಮಕ್ಕಳಿಗೆ ಜಲ ಜಾಗೃತಿಯ ಪಾಠ, ಪ್ರಾತ್ಯಕ್ಷಿತೆಯಾಗಿ ಕಾಣಿಸಿಕೊಂಡಿದೆ. (ವಿಶೇಷ ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು: ನೀರು ನದಿ ಸೇರಿ ಸಮುದ್ರ ಪಾಲಾಗುವುದರ ಬದಲು, ಭೂಮಿಯಲ್ಲೇ ಇಂಗಿ ಅಂತರ್ಜಲ ಮಟ್ಟ ಹೆಚ್ಚಾಗುವಂತೆ ಮಾಡುವುದಕ್ಕೋಸ್ಕರ ದಕ್ಷಿಣ ಕನ್ನಡದ ಹಲವೆಡೆ ಜಲಜಾಗೃತಿ ನಡೆಯುತ್ತಿದೆ. ಆದರೆ ಸರಕಾರಿ ಕಟ್ಟಡಗಳಲ್ಲಿ ಮಳೆಕೊಯ್ಲುಇ ವ್ಯವಸ್ಥೆ ಇನ್ನೂ ಕಲ್ಪಿಸಲಾಗಿಲ್ಲ ಎಂದ ಆಪಾದನೆಗಳ ನಡುವೆಯೇ ಜಿಲ್ಲೆಯ ಪುಂಜಾಲಕಟ್ಟೆ ಸಮೀಪ ವಗ್ಗ ಎಂಬಲ್ಲಿ ಇರುವ ಸರಕಾರಿ ಪ್ರೌಢಶಾಲೆಯಲ್ಲಿ ಜಲಸಂರಕ್ಷಣೆಯನ್ನು ಪ್ರಾಕ್ಟಿಕಲ್ ಆಗಿಯೇ ಮಾಡಲಾಗುತ್ತಿದೆ.
ಶಾಲಾ ಛಾವಣಿಯಲ್ಲಿ ಸಂಗ್ರಹವಾಗುವ ನೀರು ಹಾಗೂ ಶಾಲೆಯ ಕಟ್ಟಡದ ಸುತ್ತಮುತ್ತ ಬರುವ ಮಳೆನೀರು ವ್ಯಯವಾಗದಂತೆ ಪೈಪ್ ಅಳವಡಿಸಿ, ಶಾಲೆಯ ಬೋರ್ ವೆಲ್ ಗೆ ಹರಿದುಹೋಗುವಂತೆ ಮಾಡಿ ಬೋರ್ ವೆಲ್ ರೀಚಾರ್ಜ್ ಮಾಡುವ ಮೂಲಕ ಮಳೆಕೊಯ್ಲು ಮಾಡಲಾಗುತ್ತಿದೆ. ಇದಲ್ಲದೆ, ಸೂರ್ಯನ ಬೆಳಕಿನಿಂದಲೇ ಶಾಲಾ ಫ್ಯಾನ್, ಲೈಟ್ ಉರಿಯಲು ಸೋಲಾರ್ ಅಳವಡಿಸಿ ಶಾಲೆಗೆ ಬೇಕಾದ ಮೂಲ ಸೌಕರ್ಯವನ್ನು ಪರಿಸರದಿಂದಲೇ ಪಡೆಯಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದಲ್ಲಿರುವ ವಗ್ಗ ಸರಕಾರಿ ಪ್ರೌಢಶಾಲೆಗೆ ಶಾಶ್ವತವಾಗಿ ಕುಡಿಯುವ ನೀರಿಗೆ ಯಾವುದೇ ಕೊರತೆ ಬಾರದಂತೆ ದಾನಿಗಳ ಮೂಲಕ 3.5 ಲಕ್ಷ ರೂ ವೆಚ್ಚದಲ್ಲಿ ಮಳೆ ಕೊಯ್ಲು ನಿರ್ಮಾಣ ಮತ್ತು ಮೂರು ಲಕ್ಷ ರೂ ವೆಚ್ಚದಲ್ಲಿ ಸೋಲಾರ್ ಲೈಟ್ ಅಳವಡಿಸಿ ಮೂಲ ಸೌಕರ್ಯಗಳಿಂದ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ.
ಬೋರ್‌ವೆಲ್‌ಗೆ ಮಳೆಕೊಯ್ಲು
ಶಾಲೆಯ ಒಂದು ಬದಿಯಲ್ಲಿ ಬೋರ್‌ವೆಲ್ ಇದ್ದು ಅದರ ಸುತ್ತಲೂ ಆರು ಫೀಟ್ ಅಗಲ, 10 ಫೀಟ್ ಉದ್ದ ಮತ್ತು 40 ಫೀಟ್ ಆಳದ ಹೊಂಡವನ್ನು ಮಾಡಿ ಅದರಲ್ಲಿ ವೃತ್ತಾಕಾರದ ಬಾವಿ ರಿಂಗನ್ನು ಬೋರ್‌ವೆಲ್‌ಗೆ ಹಾನಿಯಾಗದಂತೆ ಅಳವಡಿಸಿ, ರಿಂಗ್ ಹೊರ ಭಾಗದಲ್ಲಿ ಸುತ್ತಲೂ ಜಲ್ಲಿ ಕಲ್ಲುಗಳನ್ನು ತುಂಬಿಸಿ ಮಳೆ ನೀರನ್ನು ಅದಕ್ಕೆ ಬರುವಂತೆ ಮಳೆ ನೀರು ಬೋರ್‌ವೆಲ್‌ನ ಸುತ್ತ ಶೇಖರಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ.
ಶಾಲೆ ಯು ಆಕಾರದಲ್ಲಿ ಇದ್ದು ಇದರ ಮಧ್ಯದಲ್ಲಿ ಸಭಾಂಗಣ ಇದ್ದು, ಶಾಲೆ ಮಾಡಿನಿಂದ ಬರುವ ಮಳೆ ನೀರು ಹಾಗೂ ಸಭಾಂಗಣದ ಮೇಲ್ಭಾಗದಲ್ಲಿ ಬರುವ ಮಳೆ ನೀರನ್ನು ಉತ್ತಮ ದರ್ಜೆಯ ಶೀಟ್ ಅಳವಡಿಸಿ ಅದರ ಮೂಲಕ ಮಳೆ ನೀರನ್ನು ಶಾಲೆಯ ಕಂಪೌಂಡಿನ ಒಂದು ಬದಿಯಲ್ಲಿ ಪ್ಲಂಬಿಂಗ್ ಜಂಕ್ಷನ್ ನಿರ್ಮಾಣ ಮಾಡಿ ಅಲ್ಲಿಂದ ಬೃಹತ್ ಪೈಪ್ ಮೂಲಕ 40 ಫೀಟ್ ಆಳದಲ್ಲಿ ಜಲ್ಲಿಕಲ್ಲಿ ತುಂಬಿಸಿರುವ ಮಳೆ ನೀರು ಶೇಖರಣೆಯಾಗುವ ಗುಂಡಿಗೆ ಬರುವಂತೆ ಮಾಡಲಾಗಿದೆ.
ಇದರಿಂದ ಬೋರ್‌ವೆಲ್‌ನ ಸುತ್ತಲೂ 40 ಫೀಟ್ ಆಳದಲ್ಲಿ ಜಲ್ಲಿಕಲ್ಲಿನೊಂದಿಗೆ ಮಳೆ ನೀರು ಶೇಖರಣೆಯಾಗುತ್ತದೆ. ನೀರು ಶೇಖರಣೆಯಾಗುವ ಗುಂಡಿಯಲ್ಲಿ ನೀರು ಹೆಚ್ಚಾದರೆ ನೀರನ್ನು ಹೊರಭಾಗಕ್ಕೆ ಕಳಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ.
ಸೋಲಾರ್ ವ್ಯವಸ್ಥೆ
ದಾನಿಗಳ ಮೂಲಕ ಸುಮಾರು ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲೆಗೆ ಅಗತ್ಯವಾದ ಎಲ್ಲಾ ತರಗತಿ, ಮುಖ್ಯೋಪಾಧ್ಯಾಯರ ಕೊಠಡಿ, ಶಿಕ್ಷಕಿಯರ ಕೊಠಡಿ, ಕಂಪ್ಯೂಟರ್ ಲ್ಯಾಬ್‌ಗೆ ಫ್ಯಾನ್ ಹಾಗೂ ಲೈಟ್ ಸೋಲಾರ್ ವ್ಯವಸ್ಥೆ ಮಾಡಲಾಗಿದೆ. ವಗ್ಗ ಸರಕಾರಿ ಪ್ರೌಢ ಶಾಲೆಯಲ್ಲಿ ಉತ್ತಮ ಫಲಿತಾಂಶ ಪ್ರತೀ ವರ್ಷ ಬರುತ್ತಿದೆ. ವಿದ್ಯಾರ್ಥಿಗಳಿಗಾಗಿ ಸುಸಜ್ಜಿತವಾದ ಕಂಪ್ಯೂಟರ್ ಲ್ಯಾಬ್ ಇದೆ. ದಾನಿಗಳ ಸಹಕಾರದಿಂದ ಶಾಲೆಗೆ ಮಳೆ ನೀರನ್ನು ಬೋರ್‌ವೆಲ್‌ನ ಸುತ್ತ ಶೇಖರಣೆ ವ್ಯವಸ್ಥೆ ಮತ್ತು ಸೋಲಾರ್ ಲೈಟ್ಸ್‌ನ ವ್ಯವಸ್ಥೆಯನ್ನೂ ಮಾಡಲಾಗಿದೆ ಎನ್ನುತ್ತಾರೆ ಮುಖ್ಯೋಪಾಧ್ಯಾಯ ಆದಂ.
(ವಿಶೇಷ ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
