Viral Fever Outbreak; ದಕ್ಷಿಣ ಕನ್ನಡದಲ್ಲಿ ತೀವ್ರ ವೈರಲ್ ಜ್ವರದ ಕಾಟ, ಶಾಲೆ, ಕಾಲೇಜುಗಳಲ್ಲೂ ಹೆಚ್ಚಾಗುತ್ತಿವೆ ಪ್ರಕರಣ-mangaluru news viral fever outbreak in dakshina kannada case increases in schools colleges a cause of concern hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Viral Fever Outbreak; ದಕ್ಷಿಣ ಕನ್ನಡದಲ್ಲಿ ತೀವ್ರ ವೈರಲ್ ಜ್ವರದ ಕಾಟ, ಶಾಲೆ, ಕಾಲೇಜುಗಳಲ್ಲೂ ಹೆಚ್ಚಾಗುತ್ತಿವೆ ಪ್ರಕರಣ

Viral Fever Outbreak; ದಕ್ಷಿಣ ಕನ್ನಡದಲ್ಲಿ ತೀವ್ರ ವೈರಲ್ ಜ್ವರದ ಕಾಟ, ಶಾಲೆ, ಕಾಲೇಜುಗಳಲ್ಲೂ ಹೆಚ್ಚಾಗುತ್ತಿವೆ ಪ್ರಕರಣ

Viral Fever in Dakshina Kannada; ದಕ್ಷಿಣ ಕನ್ನಡದಲ್ಲಿ ವೈರಲ್ ಜ್ವರದ ಕಾಟ ತೀವ್ರವಾಗಿದೆ. ಶಾಲೆ, ಕಾಲೇಜುಗಳಲ್ಲೂ ಪ್ರಕರಣ ಹೆಚ್ಚಾಗುತ್ತಿವೆ. ಇದು ಕಳವಳ ಮೂಡಿಸಿದ್ದು, ಆರೋಗ್ಯ ಇಲಾಖೆಯೂ ಈ ಬಗ್ಗೆ ಗಮನಹರಿಸತೊಡಗಿದೆ. (ವರದಿ- ಹರೀಶ ಮಾಂಬಾಡಿ, ಮಂಗಳೂರು)

ದಕ್ಷಿಣ ಕನ್ನಡದಲ್ಲಿ ತೀವ್ರ ವೈರಲ್ ಜ್ವರದ ಕಾಟ (ಸಾಂಕೇತಿಕ ಚಿತ್ರ)
ದಕ್ಷಿಣ ಕನ್ನಡದಲ್ಲಿ ತೀವ್ರ ವೈರಲ್ ಜ್ವರದ ಕಾಟ (ಸಾಂಕೇತಿಕ ಚಿತ್ರ)

ಮಂಗಳೂರು: ಕರಾವಳಿಯಲ್ಲಿ ಒಂದೆಡೆ ಬಿಟ್ಟು ಬರುತ್ತಿರುವ ಮಳೆ ಜತೆಗೆ ಡೆಂಘೆ ಭೀತಿ. ಇದರ ನಡುವೆ ವೈರಲ್ ಜ್ವರ. ಕರಾವಳಿಯಲ್ಲಿರುವ ಬಹುತೇಕ ಕ್ಲಿನಿಕ್, ಆಸ್ಪತ್ರೆಗಳಲ್ಲಿ ರೋಗಿಗಳು ಸಾಲಿನಲ್ಲಿ ನಿಂತು ಚಿಕಿತ್ಸೆಗೆ ಒಳಪಡುತ್ತಿದ್ದಾರೆ. ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಜ್ವರದ ಪ್ರಕರಣಗಳು ಏರಿಕೆ ಕಾಣಿಸಿಕೊಂಡಿದ್ದು, ಹೆತ್ತವರಲ್ಲಿ ಆತಂಕ ಮೂಡಿದೆ.

ಡೆಂಘೆ ಜ್ವರದ ಜತೆಯಲ್ಲಿ ಕಾಣಿಸಿಕೊಳ್ಳುತ್ತಿರುವ ವೈರಲ್ ಜ್ವರಗಳು ಎರಡರ ನಡುವೆ ರೋಗಿಗಳಲ್ಲಿ ಗೊಂದಲ ಮೂಡಿದ್ದು ರಕ್ತ ಪರೀಕ್ಷೆ ಮಾಡುವವರ ಸಂಖ್ಯೆ ಹೆಚ್ಚಳಗೊಂಡಿದೆ.

160ಕ್ಕೂ ಅಧಿಕ ಲ್ಯಾಬ್ ಗಳಲ್ಲಿ ರಕ್ತಪರೀಕ್ಷೆ ಹೆಚ್ಚಳ

ಜಿಲ್ಲೆಯಲ್ಲಿರುವ 160ಕ್ಕೂ ಹೆಚ್ಚು ಲ್ಯಾಬ್‍ಗಳಲ್ಲಿ ರಕ್ತ ಪರೀಕ್ಷೆಗೆ ಡಿಮ್ಯಾಂಡ್ ಕಾಣಿಸಿಕೊಂಡಿದೆ. ಮಳೆಗಾಲ ಎಂದಾಕ್ಷಣ ಸಾಮಾನ್ಯವಾಗಿ ವೈರಲ್ ಜ್ವರಗಳು ಕೂಡ ಕಾಣಿಸಿಕೊಳ್ಳುತ್ತವೆ. ಆದರೆ ಈ ಬಾರಿ ಡೆಂಗೆ ಅಬ್ಬರ ಕೊಂಚ ಹೆಚ್ಚಾಗಿರುವುದರಿಂದ ವೈರಲ್ ಜ್ವರದ ಲಕ್ಷಣಗಳು ಇದ್ದರೂ ಕೂಡ ರೋಗಿಗಳು ಡೆಂಘೆಗಾಗಿ ರಕ್ತಪರೀಕ್ಷೆಗಳನ್ನು ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಆದರೆ ಎಲೀಸಾ ಪರೀಕ್ಷೆಯಲ್ಲಿ ಡೆಂಘೆಯ ನಿಖರತೆಯನ್ನು ಹೇಳಬಹುದಾದರೆ ಕಾರ್ಡ್ ಟೆಸ್ಟ್(ಸಿಎಆರ್‍ಡಿ)ಯಲ್ಲಿ ಬರೀ ಶೇ.40ರಿಂದ 60ರಷ್ಟು ಮಾತ್ರ ಡೆಂಘೆ ಪೀಡಿತರೆಂದು ಪರಿಗಣಿಸಲಾಗುತ್ತಿದೆ. ಸಿಎಆರ್‍ಡಿಯ ಎನ್‍ಎಸ್1 ಪರೀಕ್ಷೆಯಲ್ಲಿ ಡೆಂಗೆ ದೃಢಪಟ್ಟರೆ ಡೆಂಗೆ ಹರಡುವ ಪ್ರಮಾಣ ಹೆಚ್ಚಾಗಿರುತ್ತದೆ ಎಂದು ಪರಿಗಣಿಸಲಾಗುತ್ತಿದೆ. ಜಿಲ್ಲೆಯಲ್ಲಿ ಎಲೀಸಾ ಪರೀಕ್ಷೆ ನಡೆಸುವ ಕೇಂದ್ರಗಳು ಬಹಳ ಕಡಿಮೆ.

ಜಿಲ್ಲೆಯ ವೈದ್ಯಕೀಯ ಕಾಲೇಜು, ದೊಡ್ಡ ಲ್ಯಾಬ್‍ಗಳು ಸೇರಿದಂತೆ ವೆನ್ಲಾಕ್‍ನಲ್ಲಿ ಇದಕ್ಕೆ ವ್ಯವಸ್ಥೆ ಮಾಡಿಕೊಟ್ಟರೆ ಉಳಿದಂತೆ ಸಿಎಆರ್‍ಡಿ ಟೆಸ್ಟ್‍ಗೆ ಜಿಲ್ಲೆಯಲ್ಲಿ 160ಕ್ಕೂ ಹೆಚ್ಚು ಲ್ಯಾಬ್‍ಗಳಲ್ಲಿ ವ್ಯವಸ್ಥೆಯಿದೆ.

ಇರಲಿ ಎಚ್ಚರ ಆತಂಕ ಬೇಡ: ವೈರಲ್ ರೋಗ ಪೀಡಿತ ಸೊಳ್ಳೆ ಕಚ್ಚಿದ ವ್ಯಕ್ತಿಯಲ್ಲಿ 3ರಿಂದ 5 ದಿನಗಳವರೆಗೆ ಜ್ವರ ಸಾಮಾನ್ಯವಾಗಿ ಕಂಡು ಬರುತ್ತದೆ. ಬಳಿಕ ಜ್ವರ ಕಡಿಮೆಯಾಗುತ್ತದೆ. ಶೇ. 80ರಷ್ಟು ರೋಗಿಗಳಿಗೆ ನಾಲ್ಕು ದಿನಗಳಲ್ಲಿ ಜ್ವರ ಕಡಿಮೆಯಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಾರೆ. ಶೇ. 20ರಷ್ಟು ಮಂದಿಗೆ ಮಾತ್ರವೇ 2ನೆ ಬಾರಿಗೆ ಜ್ವರ ಬಾಧಿಸುತ್ತದೆ. ಆಗ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುತ್ತದೆ. ಹಾಗಾಗಿ ಆರಂಭದ ಮೂರು ದಿನಗಳ ಕಾಲ ಡೆಂಘೆ ಇದ್ದರೂ ಆತಂಕ ಪಡುವ ಅಗತ್ಯ ಇರುವುದಿಲ್ಲ.

ಆದರೆ ಜ್ವರ ಬಂದ ಸಂದರ್ಭ ರಕ್ತ ಪರೀಕ್ಷೆಯ ಮೂಲಕ ಯಾವ ಜ್ವರವೆಂದು ಖಚಿತಪಡಿಸಿಕೊಳ್ಳುವುದು ಸೂಕ್ತ ಎಂದು ವೆನ್ಲಾಕ್ ಆಸ್ಪತ್ರೆಯ ಶ್ವಾಸಕೋಶ ಶಾಸ್ತ್ರಜ್ಞ (ಪಲ್ಮನಾಲಜಿಸ್ಟ್) ಡಾ. ಶರತ್ ಬಾಬು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಶಾಲೆ- ಕಾಲೇಜುಗಳಲ್ಲಿ ಜ್ವರ ಅಧಿಕ

ಜಿಲ್ಲೆಯ ಬಹುತೇಕ ಶಾಲೆಯಲ್ಲಿ ಈಗ ಜ್ವರದ ಪ್ರಕರಣಗಳು ಕಾಣಿಸಿಕೊಂಡರೆ ಉಳಿದಂತೆ ಕಾಲೇಜು ವಿದ್ಯಾರ್ಥಿಗಳಲ್ಲಿಯೂ ಜ್ವರದ ಪ್ರಕರಣಗಳು ಪತ್ತೆಯಾಗಿದೆ. ಮಂಗಳೂರು ನಗರದ ಪ್ರಮುಖ ಕಾಲೇಜುಗಳಲ್ಲಿ ಡೆಂಗೆ ಜ್ವರದ ಜತೆಯಲ್ಲಿ ವೈರಲ್ ಜ್ವರದ ಕೇಸ್‍ಗಳು ಪತ್ತೆಯಾಗಿದೆ.

ಈಗಾಗಲೇ ಡೆಂಗೆ, ವೈರಲ್ ಜ್ವರದ ವಿದ್ಯಾರ್ಥಿಗಳನ್ನು ಕಾಲೇಜಿನಲ್ಲಿ ಕೂರಿಸಿಕೊಳ್ಳಬೇಡಿ ಎಂದು ಇಲಾಖೆಯಿಂದ ಸೂಚನೆ ನೀಡಲಾಗಿದೆ. ಕೆಲವೊಂದು ಕಾಲೇಜುಗಳಲ್ಲಿ ಜ್ವರ ಪತ್ತೆಯಾಗುತ್ತಿದ್ದು, ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗೆ ಹರಡುತ್ತಿದೆ. ಹೆತ್ತವರು ಇಂತಹ ಮಕ್ಕಳನ್ನು ಕಾಲೇಜಿಗೆ ಕಳುಹಿಸಿಕೊಡಬಾರದು ಉಳಿದಂತೆ ಕಾಲೇಜಿನವರು ಕೂಡ ಇಂತಹ ಮಕ್ಕಳಿಗೆ ತರಗತಿಗೆ ಬನ್ನಿ ಎನ್ನುವ ಒತ್ತಡವನ್ನು ಹಾಕಬಾರದು ಎಂದು ಇಲಾಖೆ ಸ್ಪಷ್ಟ ಸೂಚನೆ ನೀಡಿದೆ.

ಈಗಿನ ಹವಾಮಾನ ಕಾಯಿಲೆಗಳಿಗೆ ಅನುಕೂಲಕರವಾಗಿದೆ. ಶಾಲೆಗಳಲ್ಲಿ ಈಗಾಗಲೇ ಸೂಚನೆಯನ್ನು ನೀಡಿದ್ದೇವೆ. ಆದರೂ ಜ್ವರದ ಪ್ರಕರಣಗಳು ಏರಿಕೆಯಾಗುತ್ತಿದೆ. ಶಾಲಾ ಶಿಕ್ಷಕರು ಬಹಳಷ್ಟು ಜಾಗರೂಕತೆಯಿಂದ ವಿದ್ಯಾರ್ಥಿಗಳ ಆರೋಗ್ಯದ ಕುರಿತು ಕಾಳಜಿ ವಹಿಸುವಂತೆ ಬಿಇಒಗಳ ಮೂಲಕ ಸೂಚನೆ ನೀಡಿದ್ದೇವೆ. ಜ್ವರದ ಲಕ್ಷಣಗಳಿರುವ ವಿದ್ಯಾರ್ಥಿಗಳನ್ನು ತರಗತಿಗೆ ಕರೆಸಿಕೊಳ್ಳಬಾರದು ಅವರನ್ನು ಮನೆಯಲ್ಲೇ ಇರಲು ಸೂಚನೆ ನೀಡಬೇಕು ಎಂದು ಮತ್ತೊಂದು ಬಾರಿ ಸೂಚನೆ ನೀಡಿದ್ದೇವೆ ಎಂದು ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಮಕ್ಕಳು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಪತ್ತೆ ಹಚ್ಚಿದ್ದು, ಇದಕ್ಕೆ ತಕ್ಕಂತೆ ಶಾಲೆ, ಕಾಲೇಜುಗಳು, ಹಾಸ್ಟೆಲ್‍ಗಳು, ನರ್ಸಿಂಗ್ ವಿದ್ಯಾಸಂಸ್ಥೆಗಳು, ಕಟ್ಟಡ ಕಾಮಗಾರಿ ನಡೆಸುವ ಮಂದಿಗೆ ಡೆಂಗೆ ಕುರಿತಾದ ಮಾರ್ಗಸೂಚಿಯನ್ನು ಆರೋಗ್ಯ ಇಲಾಖೆಯಿಂದ ಕಳುಹಿಸಿಕೊಡಲಾಗಿದೆ,

(ವರದಿ- ಹರೀಶ ಮಾಂಬಾಡಿ, ಮಂಗಳೂರು)