ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಗೆ ಕೆಎಂಸಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ; ಈ ಬಗ್ಗೆ ಇಲ್ಲಿದೆ ವಿವರ
ಅಪರೂಪದ ಮತ್ತು ಸವಾಲಿನ ಆರೋಗ್ಯ ಸಮಸ್ಯೆಯಾದ ನೆಸಿಡಿಯೋಬ್ಲಾಸ್ಟೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಗೆ ಕೆಎಂಸಿ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಮಂಗಳೂರು: ಅಪರೂಪದ ಮತ್ತು ಸವಾಲಿನ ಆರೋಗ್ಯ ಸಮಸ್ಯೆಯಾದ ನೆಸಿಡಿಯೋಬ್ಲಾಸ್ಟೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಗೆ ಕೆಎಂಸಿ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸದ್ಯ ಯುವತಿ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಈ ಅಪರೂಪದ ನೆಸಿಡಿಯೋಬ್ಲಾಸ್ಟೋಸಿಸ್ ಸಮಸ್ಯೆಯನ್ನು ನುರಿತ ತಜ್ಞರಾದ ಕನ್ಸಲ್ಟೆಂಟ್ ಸರ್ಜಿಕಲ್ ಆನ್‌ಕೋಲಾಜಿಸ್ಟ್ ಕಾರ್ತಿಕ್ ಕೆ.ಎಸ್ ಅವರ ತಂಡ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆ ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಏನಿದು ಸಮಸ್ಯೆ?
ಕುಮಾರಿ ನೇಹಾ (ಹೆಸರು ಬದಲಾಯಿಸಲಾಗಿದೆ) ಎಂಬ 26 ವರ್ಷದ ರೋಗಿ ಹೈಪೊಗ್ಲಿಸಿಮಿಯಾ (ಕಡಿಮೆ ರಕ್ತದಲ್ಲಿನ ಸಕ್ಕರೆ) ಎಂಬ ಮಾರಣಾಂತಿಕ ಕಾಯಿಲೆಯೊಂದಿಗೆ ಕಳೆದ 6 ವರ್ಷಗಳಿಂದ ಹೋರಾಡುತ್ತಿದ್ದರು. ಈ ಕಾಯಿಲೆ ಅಪರೂಪದ್ದಾಗಿದ್ದು ಒಂದು ಮಿಲಿಯನ್ ಜನರಲ್ಲಿ 0.03 ರಷ್ಟು ಕಾಣಿಸಿಕೊಳ್ಳುವಂತದ್ದು. ಈ ಸಮಸ್ಯೆ ಮಾರಣಾಂತಿಕವೂ ಆಗಿದೆ. ಈ ಕಾಯಿಲೆ ಹೊಂದಿದವರಲ್ಲಿ ಮೇದೋಜೀರಕ ಗ್ರಂಥಿ (ಪಾನ್‌ಕ್ರಿಯಾಸ್) ಯಲ್ಲಿ ಇನ್ಸುಲಿನ್ ಪ್ರಮಾಣ ಅತಿಯಾಗಿ ಉತ್ಪಾದನೆಯಾಗುತ್ತದೆ. ಇದರಿಂದ ಪದೇ ಪದೇ ಹಾಗೂ ತೀವ್ರವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಕುಸಿತ ಉಂಟಾಗುತ್ತದೆ.
ಆರಂಭದಲ್ಲಿ ರೋಗಿಯು ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಎಂಡೋಕ್ರಿನಾಲಾಜಿಸ್ಟ್ ಅವರ ಬಳಿ ಚಿಕಿತ್ಸೆ ಆರಂಭಿಸಿದ್ದು, ಚಿಕಿತ್ಸೆಗೆ ಉತ್ತಮವಾಗಿಯೇ ಸ್ಪಂದಿಸಿದ್ದಾರೆ. ಆದರೆ ಕಳೆದ ವರ್ಷ ಅವರ ಸ್ಥಿತಿ ಮತ್ತೆ ಹದಗೆಟ್ಟಿದ್ದು ತೀವ್ರವಾದ ಹೈಪೊಗ್ಲಿಸೆಮಿಕ್ ಸಮಸ್ಯೆಗೆ ಒಳಗಾಗಿದ್ದಾರೆ. ಕೆಲವು ಸಂದರ್ಭಗಳಲ್ಲಿ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಸುಮಾರು 20mg/dL ಗೆ ಕುಸಿತ ಕಂಡಿತ್ತು.
ಹಲವು ತಜ್ಞರ ಜೊತೆ ಚರ್ಚಿಸಿ ಚಿಕಿತ್ಸೆಯ ಪರಿಣಾಮ ಹಾಗೂ ಲಾಭವನ್ನು ಅರ್ಥೈಸಿಕೊಂಡು, ತಾನು ಜೀವನಪರ್ಯಂತ ಡಯಾಬಿಟಿಸ್ ಸಮಸ್ಯೆ ಅನುಭವಿಸಬೇಕಾಗುತ್ತದೆ. ಆದರೆ ತೀವ್ರ ಹೈಪೊಗ್ಲಿಸೆಮಿಕ್ ಸಮಸ್ಯೆಯಿಂದ ಬಚಾವಾಗಬಹುದು ಎಂದು ಅರಿತು ಬಳಿಕ ನೇಹಾ ಎಂಬುವವರು ಶಸ್ತ್ರಚಿಕಿತ್ಸೆ ಆಯ್ಕೆ ಮಾಡಿಕೊಂಡಿದ್ದಾರೆ.
ಡಾ. ಕಾರ್ತಿಕ್ ಕೆ.ಎಸ್., ಕನ್ಸಲ್ಟೆಂಟ್ ಜಿಐ ಸರ್ಜನ್ ಡಾ. ಸತ್ಯನಾರಾಯಣ್ ಭಟ್ ಮತ್ತು ಅರಿವಳಿಕೆ ತಜ್ಞ ಡಾ. ಕಾರ್ತಿಕ್ ಪ್ರಭು ಜೊತೆಗೂಡಿ ನಡೆಸಿದ ಸಂಕೀರ್ಣ ಶಸ್ತ್ರಚಿಕಿತ್ಸೆಯು ಯಾವುದೇ ತೊಡಕುಗಳಿಲ್ಲದೆ ಪೂರ್ಣಗೊಂಡಿತು. ನೇಹಾ ಅವರು ಶಸ್ತ್ರಚಿಕಿತ್ಸೆ ನಂತರದ ಎಲ್ಲಾ ರೀತಿಯ ತಪಾಸಣೆಯನ್ನು ಪೂರ್ಣಗೊಳಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಮತ್ತೆ ಬೆಂಗಳೂರಿನಲ್ಲಿ ಕೆಲಸಕ್ಕೆ ತೆರಳಲು ಸಿದ್ಧರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಡಾ. ಶ್ರೀನಾಥ್ ಶೆಟ್ಟಿ ನೆಸಿಡಿಯೊಬ್ಲಾಸ್ಟೊಸಿಸ್ ಎಂಬುದು ಅಪರೂಪದ ಸಮಸ್ಯೆ ಹಾಗೂ ಪದೇ ಪದೇ ಬದಲಾಗುವ ಇನ್ಸುಲಿನ್ ಪ್ರಮಾಣವನ್ನು ನಿರ್ವಹಿಸುವ ಕ್ಲಿಷ್ಟತೆಯ ಕಾರಣ ಈ ಕಾಯಿಲೆ ಸವಾಲಿನದ್ದಾಗಿದೆ. ಮೆಡಿಕಲ್ ಮ್ಯಾನೆಜ್ಮೆಂಟ್ ವಿಫಲವಾದಾಗ ಜೀವ ರಕ್ಷಣೆಗೆ, ಪ್ರಾಣಕ್ಕೆ ಹಾನಿ ಉಂಟಾಗುವ ಸಂದರ್ಭಗಳನ್ನು ತಡೆಯಲು ಶಸ್ತ್ರಚಿಕಿತ್ಸೆ ಅಗತ್ಯವಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಚಿಕಿತ್ಸೆ ಬಗ್ಗೆ ಮಾತನಾಡಿದ ಡಾ. ಕಾರ್ತಿಕ್ ಕೆ.ಎಸ್, ನಾವು ನೇಹಾ ಅವರ ಬಳಿ ಭಾಗಶಃ ಹಾಗೂ ಸಂಪೂರ್ಣ ಪಾನ್‌ಕ್ರಿಯಾಟೆಕ್ಟೊಮಿ (ಮೇದೋಜೀರಕ ಗ್ರಂಥಿಯ ಶಸ್ತ್ರಚಿಕಿತ್ಸೆ) ಮತ್ತು ಜೀವಿತಾವಧಿಯ ಅಂತಃಸ್ರಾವಕ ಮತ್ತು ಎಕ್ಸೋಕ್ರೈನ್ ಪ್ಯಾಂಕ್ರಿಯಾಟಿಕ್ ಕಾರ್ಯ ಬದಲಿ ಪರಿಣಾಮಗಳನ್ನು ಕೂಡ ಚರ್ಚಿಸಲಾಯಿತು. ರೋಗಿಯ ಆರೋಗ್ಯ ಸ್ಥಿತಿ ಗಮನದಲ್ಲಿರಿಸಿ ಸಂಪೂರ್ಣ ಪಾನ್‌ಕ್ರಿಯಾಟೆಕ್ಟೊಮಿ ಯನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎಂದರು.
ಶಸ್ತ್ರಚಿಕಿತ್ಸೆಯ ನಂತರ, ಇನ್ಸುಲಿನ್ ಉತ್ಪಾದನೆಯ ಅನುಪಸ್ಥಿತಿಯಿಂದಾಗಿ ರೋಗಿಯು ಮಧುಮೇಹದ ಸವಾಲನ್ನು ಎದುರಿಸಿದರು. ಇದನ್ನು ಡಾ. ಶ್ರೀನಾಥ್ ಶೆಟ್ಟಿ ಅವರು ಸೂಕ್ಷ್ಮವಾಗಿ ನಿರ್ವಹಿಸಿದರು. ಇದಲ್ಲದೆ, ಜೀರ್ಣಕಾರಿ ಕಿಣ್ವ ಬದಲಿ ನಿರ್ವಹಣೆ ನಿರ್ಣಾಯಕವಾಗಿತ್ತು. ಕನ್ಸಲ್ಟೆಂಟ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಅನುರಾಗ್ ಶೆಟ್ಟಿ ಮತ್ತು ಮುಖ್ಯ ಆಹಾರ ತಜ್ಞರಾದ ಅರುಣಾ ಮಲ್ಯ ಅವರ ಪರಿಣತಿಯ ಅಗತ್ಯವಿತ್ತು. ಅವರು ಅತ್ಯುತ್ತಮ ಪೌಷ್ಠಿಕಾಂಶದ ಬೆಂಬಲವನ್ನು ಖಚಿತಪಡಿಸಿಕೊಂಡರು.
ಚಿಕಿತ್ಸೆ ಬಳಿಕ ಕುಮಾರಿ ನೇಹಾ ಚೇತರಿಸಿಕೊಂಡದ್ದು ಹಾಗೂ ಗಮನಾರ್ಹ ಫಲಿತಾಂಶದ ಬಗ್ಗೆ ನಮಗೆ ಹೆಮ್ಮೆಯಿದೆ. ಇದು ಸಂಶೋಧನೆ ಮತ್ತು ವೈದ್ಯಕೀಯ ಆರೈಕೆಯ ಮೂಲಕ ವೈದ್ಯಕೀಯ ಸೇವೆಯನ್ನು ಮುನ್ನಡೆಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಪ್ರಕರಣ ಜೀವ ರಕ್ಷಣೆಯ ಕಾರ್ಯದಲ್ಲಿ ನಮ್ಮ ಆರೋಗ್ಯ ಸೇವೆ ತಜ್ಞರ ಕೌಶಲ್ಯ, ಬದ್ಧತೆಯನ್ನು ತೋರುತ್ತದೆ ಎಂದು ಕೆಎಂಸಿ ಆಸ್ಪತ್ರೆಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀ ಸಘೀರ್ ಸಿದ್ಧಿಕಿ ಹೇಳಿದರು.
ಈ ಯಶಸ್ವಿ ಚಿಕಿತ್ಸಾ ಫಲಿತಾಂಶವು, ಮುಂದುವರಿದ ಶಸ್ತ್ರಚಿಕಿತ್ಸಾ ತಂತ್ರಗಳು ಮತ್ತು ಸಮಗ್ರ ಆರೈಕೆಯ ಮೂಲಕ ಅಪರೂಪದ ಮತ್ತು ಸಂಕೀರ್ಣ ವೈದ್ಯಕೀಯ ಪರಿಸ್ಥಿತಿಗಳನ್ನು ನಿರ್ವಹಿಸುವಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪರಿಣತಿಯನ್ನು ಪ್ರತಿಬಿಂಬಿಸುತ್ತದೆ.
