ಮೂವತ್ತು ವರ್ಷಗಳಾದರೂ ಅನುಷ್ಠಾನವಾಗದ ಪೀರ್ ಸಮಿತಿ ವರದಿ: ಕೊರಗ ಸಮುದಾಯದವರಿಗೆ ಇನ್ನೂ ಸಿಕ್ಕಿಲ್ಲ ತಮ್ಮ ಹಕ್ಕಿನ ಭೂಮಿ
Koraga Tribe land rights: ಮಂಗಳೂರು ವಿವಿ ಪ್ರೊಫೆಸರ್ ಡಾ ಮೊಹಮ್ಮದ್ ಪೀರ್ ಸಮಿತಿ ಸಲ್ಲಿಸಿದ ವರದಿ 30 ವರ್ಷಗಳಿಂದ ನನೆಗುದಿಗೆ ಬಿದ್ದುಕೊಂಡಿದೆ. ಸಮಿತಿ ವರದಿ ಪ್ರಕಾರ ಸಿಗಬೇಕಾಗಿದ್ದ ಹಕ್ಕಿನ ಭೂಮಿ ಇನ್ನೂ ಕೊರಗ ಸಮುದಾಯದವರಿಗೆ ಸಿಕ್ಕಿಲ್ಲ. (ವರದಿ- ಹರೀಶ ಮಾಂಬಾಡಿ, ಮಂಗಳೂರು)

Koraga Tribe land rights: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅತ್ಯಂತ ಪ್ರಾಚೀನ ದುರ್ಬಲ ಬುಡಕಟ್ಟು ಎಂದೇ ಹೆಸರಿಸಲಾದವರು ಕೊರಗ ಸಮುದಾಯ. 90ರ ದಶಕದಲ್ಲಿ ಈ ಸಮುದಾಯದ ಅಭ್ಯುದಯಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಮಗ್ರವಾಗಿ ವಿವರಿಸಿ ಮಂಡಿಸಲಾದ ಆಗಿನ ಮಂಗಳೂರು ವಿವಿ ಪ್ರೊಫೆಸರ್ ಡಾ. ಮಹಮ್ಮದ್ ಪೀರ್ ಅವರ ನೇತೃತ್ವದ ಸಮಿತಿ ನೀಡಿದ ವರದಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ನಾನಾ ಕಾರಣಗಳಿಂದ ಅನುಷ್ಠಾನವಾಗಿಲ್ಲ. ಆಗಾಗ್ಗೆ ಇದರ ಜಾರಿ ಕುರಿತು ಹೋರಾಟಗಳು ನಡೆಯುತ್ತಿದ್ದರೂ ಆಳುವ ವರ್ಗದ ಕಿವಿಗೆ ಇನ್ನೂ ಬಿದ್ದಿಲ್ಲ. ಇದೀಗ ಮತ್ತೆ ಬೃಹತ್ ಹೋರಾಟವೊಂದಕ್ಕೆ ವೇದಿಕೆ ಸಜ್ಜಾಗುತ್ತಿದೆ. ಜನವರಿ 23ಕ್ಕೆ ಮಂಗಳೂರಿನಲ್ಲಿ ಈ ಕುರಿತು ಬೃಹತ್ ಪ್ರತಿಭಟನೆಯೂ ನಡೆಯಲಿದೆ. 1994ರಲ್ಲಿ ಸಲ್ಲಿಕೆಯಾದ ಪೀರ್ ಸಮಿತಿ ವರದಿ ಸಮರ್ಪಕವಾಗಿ ಅನುಷ್ಠಾನವಾಗಬೇಕಿದ್ದರೆ, ರಾಜಕೀಯ ಇಚ್ಛಾಶಕ್ತಿಯೂ ಬೇಕು. ಅದರ ಕೊರತೆ ಈಗ ಎದ್ದು ಕಾಣುತ್ತಿದೆ.
ಪೀರ್ ಕಮಿಟಿ ವರದಿ ಏನು ಹೇಳುತ್ತದೆ
ಕರ್ನಾಟಕದಲ್ಲಿ ಅತ್ಯಂತ ಪ್ರಾಚೀನ ದುರ್ಬಲ ಬುಡಕಟ್ಟು ಗುಂಪು ಎಂದು ಗುರುತಿಸಲ್ಪಡುವ ಎರಡು ಬುಡಕಟ್ಟು ಸಮುದಾಯಗಳಲ್ಲಿ ಕೊರಗ ಸಮುದಾಯದವರೂ ಒಬ್ಬರು. ಭೂಮಿ ಪಡೆಯುವ ಹಕ್ಕು ಸಬಲೀಕರಣ ಪ್ರಕ್ರಿಯೆಯಲ್ಲಿ ಪ್ರಮುಖವಾದದ್ದು. ಕೊರಗ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಗಳು ಎಂಬ ಕುರಿತು ಪೀರ್ ಕಮಿಟಿ ವರದಿಯಲ್ಲಿ ಅನುಮೋದಿಸಲಾಗಿದೆ
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಮಹಮ್ಮದ್ ಪೀರ್ 1993-94ರಲ್ಲಿ ಕೊರಗ ಸಮುದಾಯದ ಕುರಿತು ಅಧ್ಯಯನ ಮಾಡಿ ತಮ್ಮ ಶಿಫಾರಸುಗಳನ್ನು ಮಾಡಿತು. ಈ ಸಮಿತಿಯಲ್ಲಿ ಅಧ್ಯಕ್ಷರಾಗಿ ಮಹಮ್ಮದ್ ಪೀರ್, ಸದಸ್ಯರಾಗಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಪ್ರೊ.ಗಿರಿಯಪ್ಪ, ಕೊರಗ ಸಮುದಾಯದಲ್ಲಿ ಇಂಜಿನಿಯರಿಂಗ್ ಪದವೀಧರರಾಗಿದ್ದ ಮೋಹನ್, ಸಮಗ್ರ ಗ್ರಾಮೀಣ ಆಶ್ರಮ ಹಾಗೂ ಐಟಿಡಿಪಿಯ ಸದಸ್ಯರು ಇದ್ದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಈ ಸಮಿತಿ ರಚನೆ ಮಾಡಿ ವರದಿ ಸಲ್ಲಿಸಲು ತಿಳಿಸಿದ್ದು, ಅದರಂತೆ ಪೀರ್ ಸಮಿತಿ ವರದಿಯನ್ನು ಒಪ್ಪಿಸಿತ್ತು. ಇದು 13 ಶಿಫಾರಸುಗಳನ್ನು ಮಾಡಿತ್ತು.
ಪೀರ್ ಸಮಿತಿ ಪ್ರಮುಖ 5 ಶಿಫಾರಸುಗಳು
1, ಕೊರಗ ಸಮುದಾಯದ ಸಹಕಾರಿ ಸಂಘ ಸ್ಥಾಪನೆಯಾಗಬೇಕು.
2. ಪ್ರತಿ ಕೊರಗ ಕುಟುಂಬಕ್ಕೆ 2.5 ಎಕರೆ ಭೂಮಿ ವಿತರಿಸಬೇಕು.
3. ಮಾದರಿ ಕೃಷಿ ಕ್ಷೇತ್ರವನ್ನು ಸರಕಾರ ಸಂಘಟನೆ ಮೂಲಕ ಒದಗಿಸಿ, ಕೊರಗ ಕುಟುಂಬಗಳು ಅಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಕೃಷಿಯಲ್ಲಿ ಪೂರ್ಣ ವಿಶ್ವಾಸ ಬಂದ ಮೇಲೆ ಅವರು ಕ್ರಿಯಾಶೀಲರಾಗುವಂತೆ ಮಾಡಬೇಕು.
4.ಸ್ವಪ್ರೇರಣೆ, ಸ್ವ ಅರಿವು ಹಾಗೂ ಸ್ವ ಸಂಘಟನೆ ಅತ್ಯಗತ್ಯ.
5. ಸುಸ್ಥಿರ ಅಭಿವೃದ್ಧಿ ಮಾದರಿಯೊಂದನ್ನು ರೂಪಿಸಬೇಕು.
ಮಹಮ್ಮದ್ ಪೀರ್ ಸಮಿತಿ ವರದಿಗೆ 3 ದಶಕ
ಮಹಮ್ಮದ್ ಪೀರ್ ಸಮಿತಿ ವರದಿ ಸಲ್ಲಿಸಿ 30 ವರ್ಷಗಳಾದರೂ ಇನ್ನೂ ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ಕಾಲಕಾಲಕ್ಕೆ ಅಧಿಕಾರಗ್ರಹಣ ಮಾಡಿದ ಜನಪ್ರತಿನಿಧಿಗಳಿಗೆ ಅನ್ನಿಸಿಲ್ಲ. ಕೊರಗ ಸಮುದಾಯದ ಅಭಿವೃದ್ಧಿ ಭಾಷಣಗಳಲ್ಲಿ ಮುಗಿದುಹೋಗುತ್ತಿದೆ. ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಮುದಾಯದ ಕುರಿತು ಆಸಕ್ತಿಯಿಂದ ಅಧ್ಯಯನ ಮಾಡುತ್ತಿರುವವರು ಮುಂದೆ ಬರಬೇಕಾಗಿದೆ. ಪೀರ್ ಸಮಿತಿ ಸ್ಪಷ್ಟವಾಗಿ ನಮೂದಿಸಿದಂತೆ ಕೊರಗ ಸಮುದಾಯದವರಿಗೆ ಭೂಮಿ ಕೊಡುವುದಷ್ಟೇ ಅಲ್ಲ, ಅವರು ಕೃಷಿ ಹಂತಕ್ಕೆ ತೊಡಗಿಸಿಕೊಳ್ಳುವಂತೆ ಮಾಡಬೇಕು. ಒಟ್ಟಾರೆಯಾಗಿ ಕೊರಗ ಸಮುದಾಯದ ಶೇ.೭-೮ರಷ್ಟು ಕುಟುಂಬಗಳಿಗೆ ಒಂದೆಕರೆ ಭೂಮಿ ದೊರಕಿದೆ,
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬಹುತೇಕ ಮಂದಿ ಬುಟ್ಟಿ ಹೆಣೆಯುವಂಥ ಕಾರ್ಯವನ್ನೇ ಜೀವನೋಪಾಯಕ್ಕಾಗಿ ಮಾಡುತ್ತಿದ್ದಾರೆ. ಇವರ ಪೈಕಿ ಸ್ವಪ್ರಯತ್ನದೊಂದಿಗೆ ಸಾಮಾಜಿಕ ಪ್ರೋತ್ಸಾಹವೂ ಸೇರಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಸಿರುವ ಸುಮಾರು 200 ಮಂದಿ ಪದವಿ ಮುಗಿಸಿ, ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಸುಮಾರು 5 ಮಂದಿ ಡಾಕ್ಟರೇಟ್ ಗಳಿಸಿದ್ದಾರೆ. ಆದಾಗ್ಯೂ ಸೂಕ್ಷ್ಮವಾಗಿ ಗಮನಿಸಿದರೆ, ಎಲ್ಲ ಸ್ನಾತಕೋತ್ತರ ಪದವೀಧರರಿಗೆ ಸಮರ್ಪಕ ಉದ್ಯೋಗಗಳು ಲಭಿಸಿಲ್ಲ. ಒಂದು ಪ್ರಬಲ ರಾಜಕೀಯ ಪ್ರಾತಿನಿಧ್ಯ, ಸಮುದಾಯದ ಉನ್ನತಿಗೆ ಆಸ್ಥೆಯಿಟ್ಟು ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಮುದಾಯದ ಜನರ ದೈಹಿಕ, ಮಾನಸಿಕ ಆರೋಗ್ಯ ಕಾಪಾಡುವುದು ಹಾಗೂ ಅವರಲ್ಲಿ ಭವಿಷ್ಯದ ಕುರಿತು ಉತ್ತೇಜನ ನೀಡುವ ಸಮಾಜದ ಎಲ್ಲ ವರ್ಗಗಳ ಸ್ಪಂದನೆ ಇಂದಿನ ತುರ್ತು ಅಗತ್ಯ.ಎಂದವರು ಪ್ರತಿಪಾದಿಸುತ್ತಾರೆ.
(ವರದಿ- ಹರೀಶ ಮಾಂಬಾಡಿ, ಮಂಗಳೂರು)
