Massage Parlour Attack: ಗೃಹ ಸಚಿವರ ಉಡುಪಿ ಪ್ರವಾಸದ ವೇಳೆ ಮಂಗಳೂರಿನಲ್ಲಿ ಪಾರ್ಲರ್ ಮೇಲೆ ದಾಳಿ, ಪ್ರಸಾದ್ ಅತ್ತಾವರ ಸೇರಿ 14 ಜನರ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Massage Parlour Attack: ಗೃಹ ಸಚಿವರ ಉಡುಪಿ ಪ್ರವಾಸದ ವೇಳೆ ಮಂಗಳೂರಿನಲ್ಲಿ ಪಾರ್ಲರ್ ಮೇಲೆ ದಾಳಿ, ಪ್ರಸಾದ್ ಅತ್ತಾವರ ಸೇರಿ 14 ಜನರ ಬಂಧನ

Massage Parlour Attack: ಗೃಹ ಸಚಿವರ ಉಡುಪಿ ಪ್ರವಾಸದ ವೇಳೆ ಮಂಗಳೂರಿನಲ್ಲಿ ಪಾರ್ಲರ್ ಮೇಲೆ ದಾಳಿ, ಪ್ರಸಾದ್ ಅತ್ತಾವರ ಸೇರಿ 14 ಜನರ ಬಂಧನ

Massage Parlour Attack: ಗೃಹಸಚಿವ ಡಾ ಪರಮೇಶ್ವರ ಅವರು ಉಡುಪಿ ಪ್ರವಾಸದಲ್ಲಿರುವಾಗಲೇ ಮಂಗಳೂರಿನ ಮಸಾಜ್ ಸೆಂಟರ್ ದಾಳಿ ನಡೆದಿದೆ. ರಾಮ ಸೇನೆ ಕಾರ್ಯಕರ್ತರು ಈ ದಾಳಿ ನಡೆಸಿದ್ದಾಗಿ ಆರೋಪವಿದೆ. ಇದಕ್ಕೆ ಸಂಬಂಧಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗಲೇ ಶ್ರೀರಾಮ ಸೇನೆಯ ನಾಯಕ ಪ್ರಸಾದ್ ಅತ್ತಾವರ ಬಂಧನವಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಗೃಹ ಸಚಿವರ ಉಡುಪಿ ಪ್ರವಾಸದ ವೇಳೆ ಮಂಗಳೂರಿನಲ್ಲಿ ಪಾರ್ಲರ್ ಮೇಲೆ ದಾಳಿ ನಡೆದಿದ್ದು, ಶ್ರೀರಾಮ ಸೇನೆ ನಾಯಕ ಪ್ರಸಾದ್ ಅತ್ತಾವರ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಗೃಹ ಸಚಿವರ ಉಡುಪಿ ಪ್ರವಾಸದ ವೇಳೆ ಮಂಗಳೂರಿನಲ್ಲಿ ಪಾರ್ಲರ್ ಮೇಲೆ ದಾಳಿ ನಡೆದಿದ್ದು, ಶ್ರೀರಾಮ ಸೇನೆ ನಾಯಕ ಪ್ರಸಾದ್ ಅತ್ತಾವರ ಅವರನ್ನು ಪೊಲೀಸರು ಬಂಧಿಸಿದ್ದಾರೆ.

Massage Parlour Attack: ಮಂಗಳೂರು ಬಿಜೈ ಕೆಎಸ್ಆರ್‌ಟಿಸಿ ಬಳಿ‌ ಕಾರ್ಯಾಚರಿಸುತ್ತಿದ್ದ ಮಸಾಜ್ ಸೆಂಟರ್‌ಗೆ ಶ್ರೀರಾಮಸೇನೆ ಸಂಘಟನೆಯ ಕಾರ್ಯಕರ್ತರು ಗುರುವಾರ (ಜನವರಿ 23) ದಾಳಿ ನಡೆಸಿದರು. ಮಸಾಜ್ ಪಾರ್ಲರ್‌ನ ಗಾಜು, ಪೀಠೋಪಕರಣವನ್ನು ಧ್ವಂಸಗೈದರು. ಈ ಘಟನೆಗೆ ಸಂಬಂಧಿಸಿ ರಾಮ ಸೇನೆ ಮುಖಂಡ ಪ್ರಸಾದ್ ಅತ್ತಾವರ ಪತ್ರಿಕಾ ಹೇಳಿಕೆ ನೀಡುತ್ತಿರುವಾಗಲೇ ಪೊಲೀಸರು ಅವರನ್ನು ಬಂಧಿಸಿದರು. ಅವರ ಜತೆಗೆ ಇತರೆ 13 ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ಗೃಹಸಚಿವ ಜಿ.ಪರಮೇಶ್ವರ್ ಉಡುಪಿ ಪ್ರವಾಸದಲ್ಲಿರುವಾಗಲೇ ಈ ಘಟನೆ ನಡೆದಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವುದಾಗಿ ಸಚಿವರು ತಿಳಿಸಿದ್ದಾರೆ.

ಮಂಗಳೂರಿನ ಬಿಜೈ ಕೆಎಸ್‌ಆರ್‌ಟಿಸಿ ಬಳಿಯಿರುವ ಕಲರ್ಸ್ ಹೆಸರಿನ ಮಸಾಜ್ ಪಾರ್ಲರ್‌ಗೆ ರಾಮ ಸೇನಾ ಸಂಘಟನೆ ಪ್ರಸಾದ್ ಅತ್ತಾವರ ನೇತೃತ್ವದಲ್ಲಿ ದಾಳಿ ನಡೆದಿದೆ. ಮಸಾಜ್ ಸೆಂಟರ್‌ನಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಶ್ರೀರಾಮಸೇನಾ ಸಂಘಟನೆ ಮಸಾಜ್ ಸೆಂಟರ್‌ಗೆ ದಾಳಿ ನಡೆಸಿ ಪೀಠೋಪಕರಣ ಹಾಗೂ ಗಾಜುಗಳನ್ನು ಧ್ವಂಸಗೈದಿದೆ.

ಪೊಲೀಸ್ ಕಮೀಷನರ್ ಹೇಳುವುದೇನು?

ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಅವರು, ಇಂದು ಬೆಳಿಗ್ಗೆ 11:51 ರ ಸುಮಾರಿಗೆ, ಬಿಜೈ ಕೆಎಸ್‌ಆರ್‌ಟಿಸಿಯ ಆದಿತ್ಯ ಕಾಂಪ್ಲೆಕ್ಸ್ ಬಳಿಯ "ಕಲರ್ಸ್ ಯುನಿಸೆಕ್ಸ್ ಸಲೂನ್" ಗೆ 9-10 ಜನರ ಅಪರಿಚಿತ ವ್ಯಕ್ತಿಗಳ ಗುಂಪು ಅಕ್ರಮವಾಗಿ ಆವರಣಕ್ಕೆ ಪ್ರವೇಶಿಸಿ ಆಸ್ತಿಗೆ ಹಾನಿಯನ್ನುಂಟುಮಾಡಿದೆ. ಅವರು ಸಿಬ್ಬಂದಿಯನ್ನು ಅನೈತಿಕ ಚಟುವಟಿಕೆಗಳ ಆರೋಪ ಹೊರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ಅವರಿಗೆ ಮತ್ತಷ್ಟು ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಗುಂಪು ಸಲೂನ್ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಹಾನಿಗೊಳಿಸಿದೆ ಎಂದು ವರದಿಯಾಗಿದೆ. ಘಟನೆಯ ಸಮಯದಲ್ಲಿ ಇಬ್ಬರು ಸಿಬ್ಬಂದಿ ಮೇಲೆಯೂ ಹಲ್ಲೆ ನಡೆಸಲಾಗಿದೆ. ಒಳನುಗ್ಗಿದವರಲ್ಲಿ ಒಬ್ಬರು ಘಟನೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಾಗ ಬಂಧನ

ಬಿಜೈ ಕೆಎಸ್ಆರ್‌ಟಿಸಿ ಬಳಿಯಿರುವ ಕಲರ್ಸ್ ಮಸಾಜ್ ಸೆಂಟರ್‌ಗೆ ದಾಳಿ ನಡೆಸಿ ಗಾಜು ಪೀಠೋಪಕರಣ ಧ್ವಂಸಗೈದ ರಾಮಸೇನೆ ಸಂಘಟನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರನನ್ನು ಸಿಸಿಬಿ ಪೊಲೀಸರು ಆತನ ಮನೆಯಿಂದಲೇ ವಶಕ್ಕೆ ಪಡೆದಿದ್ದಾರೆ. ಮಧ್ಯಾಹ್ನ ವೇಳೆಗೆ ಶ್ರೀರಾಮಸೇನೆ ಸಂಘಟನೆಯ ಕಾರ್ಯಕರ್ತರು ಮಸಾಜ್ ಸೆಂಟರ್‌ಗೆ ದಾಳಿ ನಡೆಸಿದ್ದರು. ಘಟನೆ ನಡೆದು 2-3ಗಂಟೆಗಳಲ್ಲಿ ಮಂಗಳೂರಿನ ಕುಡುಪು ಬಳಿಯ ಪ್ರಸಾದ್ ಅತ್ತಾವರನ ನಿವಾಸಕ್ಕೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆತ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗಲೇ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಸಾಜ್ ಸೆಂಟರ್‌ನಲ್ಲಿ ಅನೈತಿಕ ದಂಧೆ ನಡೆಯುತ್ತಿತ್ತು ಎಂದು ಪ್ರಸಾದ್ ಅತ್ತಾವರ ಹೇಳಿಕೊಂಡಿದ್ದಾರೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Whats_app_banner