ಮಾವಿನ ಹಣ್ಣಿನ ದರ ಕುಸಿತ: ಬಾದಾಮಿ, ತೋತಾಪುರಿಗೆ ಬೇಡಿಕೆಯಿಲ್ಲ; ಸಂಕಷ್ಟದಲ್ಲಿ ಬೆಳೆಗಾರರು
ರಾಜ್ಯದಲ್ಲಿ ಮಾವಿನ ಹಣ್ಣಿನ ದರ ತೀವ್ರ ಕುಸಿತ ಕಂಡಿದ್ದು, ಬಾದಾಮಿ ಮಾವು ಬೇಡಿಕೆ ಕಳೆದುಕೊಂಡರೆ, ತೋತಾಪುರಿಯನ್ನು ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲವಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಮಾವಿನ ಹಣ್ಣಿನ ಸಗಟು ಧಾರಣೆ ತೀವ್ರ ಕುಸಿತವಾಗಿದ್ದು, ಬೆಳೆಗಾರರಿಗೆ ನಷ್ಟ ಉಂಟಾಗಿದೆ. ಹವಾಮಾನ ವೈಪ್ಯರೀತ್ಯದಿಂದ ಈ ಬಾರಿ ಮಾವಿನ ಹಣ್ಣು ಮಾರುಕಟ್ಟೆಗೆ ತಡವಾಗಿ ಬಂದಿತ್ತು. ಅಲ್ಲದೆ, ವಿವಿಧ ತಳಿಗಳ ಮತ್ತು ಜಿಲ್ಲೆಗಳ ಮಾವಿನ ಹಣ್ಣು ಏಕಕಾಲಕ್ಕೆ ಮಾರುಕಟ್ಟೆಗೆ ಪ್ರವೇಶಿಸಿದ್ದು, ಬೆಲೆ ಇಳಿಕೆಯಾಗಲು ಕಾರಣವಾಗಿದೆ.
ರಾಜ್ಯದ ಮಾರುಕಟ್ಟೆಗೆ ಹೆಚ್ಚಿನ ಮಾವಿನ ಹಣ್ಣನ್ನು ಪೂರೈಸುವ ರಾಮನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಕೂಡ ಮಾರುಕಟ್ಟೆಗೆ ಮಾವು ಒಂದೇ ಸಮಯದಲ್ಲಿ ಬಂದಿರುವುದು, ಬೇಡಿಕೆ ಕುಸಿಯಲು ಕಾರಣವಾಗಿದೆ. ಬಾದಾಮಿ ಮಾವಿನ ಹಣ್ಣಿಗೆ ಕೂಡ ಬೇಡಿಕೆ ಇಳಿಮುಖವಾಗಿದೆ. ನೀಲಂ ಮಾವು ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿರುವ ಸೇಂದೂರ, ತೂತಾಪುರಿ ಮತ್ತು ಸಿರಿ ತಳಿಯ ಮಾವಿನ ಹಣ್ಣಿಗೆ ಬೇಡಿಕೆ ಇಳಿಮುಖವಾಗಿದೆ.
ರೈತರಿಗೆ ನಷ್ಟ, ಮಾರಾಟಗಾರರಿಗೆ ಲಾಭ
ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಒಮ್ಮೆಲೆ ವಿವಿಧ ತಳಿಯ ಮಾವಿನ ಹಣ್ಣು ಅವಕವಾಗಿದ್ದು, ರೈತರಿಂದ ಕಡಿಮೆ ಬೆಲೆಗೆ ಸಗಟು ಹಣ್ಣು ಖರೀದಿಸಿದ ವರ್ತಕರು, ಚಿಲ್ಲರೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಲ್ಲಿಯೇ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರ ಬೇಡಿಕೆ ಇರುವುದರಿಂದ, ದುಬಾರಿ ದರದಲ್ಲಿ ಮಾರಾಟ ಮಾಡಿ ಲಾಭ ಪಡೆದುಕೊಳ್ಳುತ್ತಿದ್ದಾರೆ. ಹಾಪ್‌ಕಾಮ್ಸ್ ದರದ ಪ್ರಕಾರ, ಕೇಸರಿ ಮಾವು ಕೆಜಿ 160 ರೂ., ದಶೇರಿ 180 ರೂ., ಮತ್ತು ಇಮಾಮ್ ಪಸಂದ್ ಕೆಜಿಗೆ 250 ರೂ., ದರ ಹೊಂದಿದೆ.
ರಸಪೂರಿ ಮಾವಿನ ಹಣ್ಣು ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದುಕೊಂಡಿದ್ದು, ನಗರಗಳ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ. ಮಾರುಕಟ್ಟೆಯಲ್ಲಿ ರಸಪೂರಿ ಮಾವು ಕೆಜಿಗೆ 120 ರೂ. ದರ ಹೊಂದಿದೆ.