ಮನಮೋಹನ್ ಸಿಂಗ್ ನಿಧನ: ರಾಜ್ಯಾದ್ಯಂತ ಇಂದು ಸರ್ಕಾರಿ ರಜೆ, 7 ದಿನಗಳ ಶೋಕಾಚರಣೆ ಘೋಷಿಸಿದ ಕರ್ನಾಟಕ ಸರ್ಕಾರ
Manmohan Singh death: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆ ಕರ್ನಾಟಕ ಸರ್ಕಾರ 7 ದಿನಗಳ ಶೋಕಾಚರಣೆ, ಇಂದು (ಡಿಸೆಂಬರ್ 27) ಸರ್ಕಾರಿ ರಜೆ ಘೋಷಿಸಲಾಗಿದೆ.
ಬೆಂಗಳೂರು: ಭಾರತದ ಮಾಜಿ ಪ್ರಧಾನಿ, ಪ್ರಸಿದ್ಧ ಅರ್ಥಶಾಸ್ತ್ರಜ್ಞ, ಹಿರಿಯ ಕಾಂಗ್ರೆಸ್ಸಿಗ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಏಳು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಅಲ್ಲದೆ, ಇಂದು (ಡಿಸೆಂಬರ್ 27ರಂದು) ರಜೆ ಘೋಷಿಸಿದೆ. ಈ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಮನಮೋಹನ್ ಸಿಂಗ್ ಅವರನ್ನು ರಾತ್ರಿ 8 ಗಂಟೆ ಸುಮಾರಿಗೆ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ತುರ್ತು ನಿಗಾ ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ರಾತ್ರಿ 9.50ರ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಸಿಂಗ್ ಅವರು ಪತ್ನಿ ಗುರುಚರಣ್ ಸಿಂಗ್ ಮತ್ತು ಮೂವರು ಪುತ್ರಿಯರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಕರ್ನಾಟಕದ ಕಾಂಗ್ರೆಸ್ ನಾಯಕರು ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ದುಃಖ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಸಂತಾಪ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅಪಾರ ಜ್ಞಾನ, ದೂರದೃಷ್ಟಿಯ ಆಲೋಚನೆ ಹಾಗೂ ಸಮರ್ಥ ನಾಯಕತ್ವವು ಭಾರತದ ನೆಲದಲ್ಲಿ ಅವರನ್ನು ಅಮರವಾಗಿಸಲಿದೆ ಎಂದಿದ್ದಾರೆ ಸಿದ್ದರಾಮಯ್ಯ.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡೆ. ಈ ಸಂದರ್ಭದಲ್ಲಿ ನಮ್ಮ ಸರ್ಕಾರದ ಯೋಜನೆಗಳಿಗೆ ಅವರಿಂದ ದೊರೆತ ಮಾರ್ಗದರ್ಶನ ಹಾಗೂ ಬೆಂಬಲವನ್ನು ಸ್ಮರಿಸಲೇಬೇಕು. ಯುಪಿಎ ಸರ್ಕಾರದ ಆಹಾರ ಹಕ್ಕು ಕಾಯ್ದೆಯು ನಮ್ಮ ನಾಡಿನ ಪ್ರಗತಿಯ ಹಾದಿಗೆ ಹೊಸ ಆಯಾಮ ಕಲ್ಪಿಸಿಕೊಟ್ಟಿದೆ.
ಮಾತಿಗಿಂತ ಕೃತಿ ಲೇಸೆಂಬ ನುಡಿಗಟ್ಟಿಗೆ ಅನ್ವರ್ಥದಂತೆ ಬದುಕಿದ ಓರ್ವ ಮುತ್ಸದ್ದಿ ನಾಯಕನನ್ನು ಕಳೆದುಕೊಂಡ ಭಾರತವಿಂದು ಬಡವಾಗಿದೆ. ಮೃತರ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗ ಮತ್ತು ಕೋಟ್ಯಂತರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಪರಮೇಶ್ವರ್ ಸಂತಾಪ
ದಾರ್ಶನಿಕ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನ ಭಾರತಕ್ಕೆ ಅಪಾರ ನಷ್ಟವನ್ನು ಉಂಟು ಮಾಡಿದೆ. ಅವರ ದಿಟ್ಟ ಸುಧಾರಣೆಗಳು ಆಧುನಿಕ ಭಾರತದ ಆರ್ಥಿಕತೆಯನ್ನು ರೂಪಿಸಿದವು. ಅವರ ನಾಯಕತ್ವವು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಅವರ ಕುಟುಂಬಕ್ಕೆ ಮತ್ತು ಅವರನ್ನು ಮೆಚ್ಚಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ ಎಂದು ಗೃಹ ಸಚಿವ ಜಿ ಪರಮೇಶ್ವರ ಪೋಸ್ಟ್ ಹಾಕಿದ್ದಾರೆ.
ಡಿಕೆ ಶಿವಕುಮಾರ್ ಸಂತಾಪ
ರಾಜನೀತಿ, ಸಮಗ್ರತೆ ಮತ್ತು ಶಾಂತ ಶಕ್ತಿಯಿಂದ ವ್ಯಾಖ್ಯಾನಿಸಲಾದ ಯುಗವು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಜಿ ಅವರ ನಿಧನದೊಂದಿಗೆ ಕೊನೆಗೊಳ್ಳುತ್ತಿದೆ. ಪ್ರಧಾನ ಮಂತ್ರಿಯಾಗಿ, ಆರ್ಥಿಕ ವಾಸ್ತುಶಿಲ್ಪಿಯಾಗಿ ರಾಷ್ಟ್ರದ ಬಗ್ಗೆ ಅವರ ದೃಷ್ಟಿಕೋನವು ಅವರ ಚೇತರಿಸಿಕೊಳ್ಳುವ ನಾಯಕತ್ವದ ಬಗ್ಗೆ ಹೇಳುತ್ತದೆ. ಅವರ ಅಗಲಿಕೆಯು ನನಗೆ ವೈಯಕ್ತಿಕ ನಷ್ಟದಂತೆ ಭಾಸವಾಗುತ್ತಿದೆ. ಅವರು ಅಸಾಧಾರಣ ನಾಯಕ ಮಾತ್ರವಲ್ಲ, ಅವರು ಅಸಾಧಾರಣ ಮಾನವರೂ ಆಗಿದ್ದರು! ನಿಜವಾದ ಮಣ್ಣಿನ ಮಗನಿಗೆ ನಾವು ವಿದಾಯ ಹೇಳುತ್ತಿರುವಾಗ ಕುಟುಂಬದ ಸದಸ್ಯರಿಗೆ ಮತ್ತು ಆತ್ಮೀಯರಿಗೆ ನನ್ನ ಆಳವಾದ ಸಂತಾಪ ಎಂದು ದುಃಖಿಸಿದ್ದಾರೆ.