ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ; ಮುಂದುವರೆದ ರಕ್ಷಣಾ ಕಾರ್ಯಾಚರಣೆ
ಬೆಂಗಳೂರು ನಗರದ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿರುವ ಘಟನೆ ವರದಿಯಾಗಿದೆ. ಕಟ್ಟದ ಅವಶೇಷಗಳಡಿ ಹಲವು ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಉದ್ಯಾನ ನಗರಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಈ ನಡುವೆ ದುರಂತವೊಂದು ಸಂಭವಿಸಿದ್ದು, ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದು ಅವಶೇಷಗಳಡಿ ಹಲವು ಕಾರ್ಮಿಕರು ಸಿಲುಕಿದ್ದಾರೆ. ಬೆಂಗಳೂರಿನ ಪೂರ್ವ ಭಾಗದ ಹೊರಮಾವು ಪ್ರದೇಶದಲ್ಲಿ ಘಟನೆ ನಡೆದಿದ್ದು, ಈಗಾಗಲೇ ಓರ್ವ ಕಾರ್ಮಿಕನ ಮೃತದೇಹ ಹೊರತೆಗೆಯಲಾಗಿದೆ. 10ಕ್ಕೂ ಹೆಚ್ಚು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಹೆಣ್ಣೂರು ಸಮೀಪದ ಬಾಬುಸಾಬ್ಪಾಳ್ಯದಲ್ಲಿ ಕಟ್ಟಡ ಕುಸಿದುಬಿದ್ದಿದ್ದು, ಅವಶೇಷಗಳಡಿ 16 ಕಾರ್ಮಿಕರು ಸಿಲುಕಿರಬಹುದು ಎಂದು ಪೊಲೀಸ್ ಇಲಾಖೆ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿ ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಮೂವರು ಕಾರ್ಮಿಕರ ಶವ ಹೊರತೆಗೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಉಳಿದಂತೆ ಕೆಲವು ಕಾರ್ಮಿಕರನ್ನು ರಕ್ಷಣೆ ಮಾಡಿದ್ದು, ಉಳಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಒಟ್ಟು 17 ಜನ ಸಿಲುಕಿರುವ ಬಗ್ಗೆ ಮಾಹಿತಿ ಇದೆ ಇದೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಟ್ಟಡದ ಅವಶೇಷಗಳಡಿ 20 ಜನರು ಸಿಕ್ಕಿಬಿದ್ದಿದ್ದಾರೆ. ಅವರಲ್ಲಿ ಒಬ್ಬರು ಸಾವನ್ನಪ್ಪಿದ್ದು, 14 ಮಂದಿಯನ್ನು ರಕ್ಷಿಸಲಾಗಿದೆ. 5 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಬೆಂಗಳೂರು ಪೂರ್ವ ಡಿಸಿಪಿ ಡಿ ದೇವರಾಜ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಗಾಯಗೊಂಡು ಕಟ್ಟದಿಂದ ಹೊರಬಂದ ಕಾರ್ಮಿಕ
ಕಟ್ಟಡ ಕುಸಿದ ಆರಂಭದಲ್ಲೇ, ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕನೋರ್ವ ತೀವ್ರ ಪ್ರಮಾಣದ ಗಾಯದೊಂದಿಗೆ ಹೊರಬಂದಿದ್ದಾನೆ. ಕಾರ್ಮಿಕನ ತಲೆ ಹಾಗೂ ದೇಹಕ್ಕೆ ಗಾಯವಾಗಿ ರಕ್ತ ಸೋರುತ್ತಿತ್ತು. ಇನ್ನೂ ಹಲವು ಕಾರ್ಮಿಕರು ಒಳಗೆ ಸಿಲಿಕಿದ್ದಾರೆ ಎಂದು ಆತ ಹೇಳಿದ್ದಾನೆ. ಆ ಬಳಿಕ ರಕ್ಷಣಾ ಕಾರ್ಯಚರಣೆ ಚುರುಕುಗೊಳಿಸಲಾಗಿದೆ.
ನಗರದಲ್ಲಿ ಕಳೆದ ಹಲವು ದಿನಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹಲವು ಭಾಗಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಮಳೆಯ ನಡುವೆಯೂ ಇಲ್ಲಿ ಕಾರ್ಮಿಕರು ಕಟ್ಟಡದ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಹೀಗಾಗಿ ದೊಡ್ಡ ಅವಾಂತರ ಸೃಷ್ಟಿಯಾಗಿದೆ.
