Ganesha Chaturthi: ಗೌರಿಗಣೇಶ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ; ಹೂವು 100 ರೂ. ಕಡಿಮೆಯಿಲ್ಲ, 150 ರೂ. ದಾಟಿದ ಬಾಳೆಹಣ್ಣು, ತರಕಾರಿಯೂ ದುಬಾರಿ-market news gowri ganesha bangalore mysore market flowers fruits vegetable rate high banana selling by 150 rs per kg kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Ganesha Chaturthi: ಗೌರಿಗಣೇಶ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ; ಹೂವು 100 ರೂ. ಕಡಿಮೆಯಿಲ್ಲ, 150 ರೂ. ದಾಟಿದ ಬಾಳೆಹಣ್ಣು, ತರಕಾರಿಯೂ ದುಬಾರಿ

Ganesha Chaturthi: ಗೌರಿಗಣೇಶ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ; ಹೂವು 100 ರೂ. ಕಡಿಮೆಯಿಲ್ಲ, 150 ರೂ. ದಾಟಿದ ಬಾಳೆಹಣ್ಣು, ತರಕಾರಿಯೂ ದುಬಾರಿ

Market News ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಭರಾಟೆ ಜೋರಿದೆ. ಗೌರಿ, ಗಣೇಶ ಹಬ್ಬಕ್ಕೆ ಹೂವು, ಹಣ್ಣು ಖರೀದಿಸಲು ಜನ ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ. ದರಗಳು ಹೇಗಿವೆ. ಇಲ್ಲಿದೆ ವರದಿ.

ಬೆಂಗಳೂರು ಮಾರುಕಟ್ಟೆಯಲ್ಲಿ ಹೂವುಗಳ ದರ ಹೆಚ್ಚಾಗಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ ಹೂವುಗಳ ದರ ಹೆಚ್ಚಾಗಿದೆ.

ಬೆಂಗಳೂರು: ಹಬ್ಬ ಬಂದರೆ ದರ ದುಬಾರಿ ಸಾಮಾನ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿ ಬಹಳ ವರ್ಷವೇ ಆಗಿದೆ. ಜನರೂ ಹಬ್ಬ ಮಾಡಲೇಬೇಕಲ್ಲ ಎನ್ನುವ ಕಾರಣಕ್ಕಾದರೂ ಖರೀದಿ ಮಾಡಿಯೇ ತೀರುತ್ತಾರೆ. ಈ ಬಾರಿ ಗೌರಿ ಗಣೇಶನ ಹಬ್ಬಕ್ಕೆ ಖರೀದಿ ಎಲ್ಲಾ ಕಡೆ ಜೋರಾಗಿದೆ. ಎಲ್ಲಾ ಊರಿನ ಮಾರುಕಟ್ಟೆಗಳು ಎರಡು ದಿನದಿಂದ ಗ್ರಾಹಕರಿಂದ ತುಂಬಿ ಹೋಗಿವೆ. ಗುರುವಾರ ಈ ಪ್ರಮಾಣ ಮೂರು ಪಟ್ಟು ಅಧಿಕವಾಗಿದೆ. ಗೌರಿ ಹಾಗೂ ಗಣೇಶನ ಹಬ್ಬಕ್ಕೆ ಇಂದೇ ಖರೀದಿ ಮಾಡಬೇಕಾಗಿರುವ ಕಾರಣದಿಂದ ಮಾರುಕಟ್ಟೆಗಳತ್ತ ಧಾವಿಸುತ್ತಿದ್ದಾರೆ. ಈ ಬಾರಿಯೂ ಮಾರುಕಟ್ಟೆಗೆ ಬಂದವರೇ ದರ ಕೇಳಿದ ತಕ್ಷಣ ಹೌಹಾರುತ್ತಿದ್ದಾರೆ. ಹಿಂದಿನ ಹಬ್ಬಕ್ಕೂ ಈ ಬಾರಿಯ ಗೌರಿ ಗಣೇಶನ ಹಬ್ಬಕ್ಕೂ ಆಗಿರುವ ದರ ವ್ಯತ್ಯಾಸವನ್ನು ಗಮನಿಸುತ್ತಿದ್ದು. ಈ ಬಾರಿ ಎಲ್ಲ ವಸ್ತುಗಳ ದರ ದುಬಾರಿಯಾಗಿದೆ.

ಹಬ್ಬಕ್ಕೆ ಮುಖ್ಯವಾಗಿ ಬೇಕಾಗಿರುವುದು ಹೂವು ಮತ್ತು ಹಣ್ಣುಗಳು. ಅದರಲ್ಲೂ ಗಣೇಶನಿಗೆ ಇಂತಹದೇ ಹಣ್ಣು ಇಡಬೇಕು. ಇದು ಶ್ರೇಷ್ಠ ಎನ್ನುವ ನಂಬಿಕೆಯೂ ಇದೆ. ಇದರೊಟ್ಟಿಗೆ ಗಣೇಶನಿಗೆ ಈ ಹೂವುಗಳನ್ನು ಮೂಡಿಸಿದರೆ ಶ್ರೇಷ್ಠ ಎನ್ನಲಾಗುತ್ತದೆ. ಈ ಕಾರಣದಿಂದಾಗಿ ಆಯ್ದ ಹೂವು,. ಹಣ್ಣುಗಳನ್ನು ಖರೀದಿಸಲು ಹೋದರೆ ಜೇಬು ಸುಡುತ್ತದೆ.

ಈ ಬಾರಿಯ ಹಬ್ಬದ ಒಂದು ವಾರ ಮುಂಚೆಯೇ ಬಾಳೆ ಹಣ್ಣಿನ ದರ ಏರಿಕೆ ಕಂಡಿದೆ. ಮೈಸೂರು ಭಾಗದಲ್ಲಿ ನೂರು ರೂ. ಇದ್ದ ಕೆಜಿ ಬಾಳೆ ಹಣ್ಣಿನ ಬೆಲೆ ಈಗ 150 ರೂ. ತಲುಪಿದೆ. ಚಿಕ್ಕಮಗಳೂರು ಭಾಗದಲ್ಲಿ ಹದಿನೈದು ದಿನದ ಹಿಂದೆಯೇ ಕೆಜಿ ಬಾಳೆ ಹಣ್ಣಿನ ದರ 120 ರೂ. ಇತ್ತು. ಈಗ ಈ ಬೆಲೆ ಮತ್ತಷ್ಟು ಏರಿಕೆ ಕಂಡಿದೆ. ಬೆಂಗಳೂರು. ಹುಬ್ಬಳ್ಳಿ, ಮಂಗಳೂರು ಸಹಿತ ಹಲವು ಭಾಗಗಳಲ್ಲಿ ಬಾಳೆ ಹಣ್ಣಿನ ಬೆಲೆ ದುಬಾರಿಯಾಗಿದೆ.

ಅದೇ ರೀತಿ ಸೇಬೆ ಹಣ್ಣು, ದ್ರಾಕ್ಷಿ ಹಣ್ಣಿನ ಬೆಲೆಯೂ 200 ರೂ.ಗೆ ಕಡಿಮೆ ಇಲ್ಲವೇ ಇಲ್ಲ. ಸೇಬಿನ ದರವನ್ನು ಮೂರು ನೂರು ಕೂಡ ತಲುಪಿದೆ. ದ್ರಾಕ್ಷಿ ಬೆಲೆಯೂ ಕೂಡ ಕೆಜಿಗೆ 200ರೂ.ವರೆಗೆ ಇದೆ. ಸೀಬೆ ಹಣ್ಣು ಇತರೆ ಅವಧಿಯಲ್ಲ ಕೇಳುವವರೇ ಇರೋಲ್ಲ. ಈಗ ಸೀಬೆ ಹಣ್ಣಿನ ದರವೇ ಕೆಜಿಗೆ 150 ರೂ.

ಇನ್ನು ಹೂವಿನ ಬೆಲೆ ಕೇಳುವ ಹಾಗೆಯೇ ಇಲ್ಲ.ಮಲ್ಲಿಗೆ ಹೂವು ಮೀಟರ್‌ಗೆ 100 ರಿಂದ 150 ರೂ. ವರೆಗೂ ಇದೆ. ಶಾವಂತಿಗೆ ಹೂವು ಕಳೆದ ತಿಂಗಳು ಮಾರುಕಟ್ಟೆಗೆ ಬಂದಿದ್ದರಿಂದ ದರ ಇಳಿದಿತ್ತು. ಈಗ ದಿಢೀರ್‌ ಏರಿಕೆ ಕಂಡಿದೆ. ಕನಕಾಂಬರ, ಬಿಡಿ ಹೂವಿನ ದರವೂ ಕೂಡ ಹೆಚ್ಚಾಗಿದೆ. ಹೂವಿನ ಹಾರಗಳ ದರವೂ ದುಪ್ಪಟ್ಟಾಗಿದೆ.

ಹಣ್ಣು ಹೂವಿನ ಜತೆಗೆ ತರಕಾರಿ ದರಗಳೂ ಕೊಂಚ ಏರಿಕೆ ಕಂಡಿವೆ. ಕ್ಯಾರೇಟ್‌, ಬೀನ್ಸ್‌ಗಳ ದರ ಹೆಚ್ಚಾಗಿದೆ. ಟೊಮೆಟೋ ದರ ಭಾರೀ ಏರಿಕೆಯನ್ನೇ ಕಂಡಿಲ್ಲ.

ಬೆಂಗಳೂರಿನ ಮಾರುಕಟ್ಟೆಗಳಲ್ಲಂತೂ ಗುರುವಾರ ಜನ ಸಂದಣಿಯೇ ಕಂಡು ಬಂದಿತು. ಕೆಆರ್‌ ಮಾರುಕಟ್ಟೆ ಗಿಜಿಗುಡುತ್ತಿತ್ತು. ಮೈಸೂರಿನಲ್ಲಿ ದೇವರಾಜ ಮಾರುಕಟ್ಟೆ, ಅಗ್ರಹಾರ ಮಾರುಕಟ್ಟೆಗಳಲ್ಲಿ ಜನವೋ ಜನ. ದಾವಣಗೆರೆ ಮಂಡೀಪೇಟೆ, ಶಿವಮೊಗ್ಗದ ಶಿವಪ್ಪನಾಯಕ ಮಾರುಕಟ್ಟೆ, ವಿಜಯಪುರದ ಎಲ್‌ಬಿ ಶಾಸ್ತ್ರಿ ಮಾರುಕಟ್ಟೆಗಳೂ ಕೂಡ ಜನರಿಂದ ತುಂಬಿ ಖರೀದಿಗಳು ಜೋರಾಗಿಯೇ ಇದ್ದವು. ಬೆಳಗಾವಿ, ಕಲಬುರಗಿ, ಬೀದರ್‌, ಬಾಗಲಕೋಟೆ ಭಾಗದಲ್ಲಿ ಗಣೇಶನ ಹಬ್ಬದ ಸಡಗರ ಜೋರಾಗಿದ್ದರಿಂದ ಮನೆಗಳ ಜತೆಗೆ ಸಂಘ ಸಂಸ್ಥೆಗಳವರೂ ಹೂವು, ಹಣ್ಣನ್ನು ಭಾರೀ ಪ್ರಮಾಣದಲ್ಲಿಯೇ ಖರೀದಿ ಮಾಡಿದರು.

ವ್ಯತ್ಯಾಸ ನೋಡಿ

ಹೂವು ಬಿಡಿ ಕೇಜಿ- 320 ರೂ. ( ಹಬ್ಬಕ್ಕೆ ಮೊದಲು 120)

ಮಲ್ಲಿಗೆ ಹೂವು- 100 ರಿಂದ 150 ರೂ. ಮೀಟರ್‌ ಗೆ( ಹಿಂದೆ 40ರಿಂದ 60)

ಶಾವಂತಿಗೆ- 100 ರೂ ಮಾರಿಗೆ( ಹಿಂದೆ 50 ರೂ.)

ಕನಕಾಂಬರ- 150 ರೂ. ಮೀಟರ್‌ಗೆ( ಹಿಂದೆ 80 ರೂ.)

ಚೆಂಡು ಹೂವು- 100 ರೂ ಮಾರಿಗೆ( ಹಿಂದೆ ಕೇಳುವವರೇ ಇರಲಿಲ್ಲ)

ಸೇಬೆ ಹಣ್ಣು- 250 ರೂ. ಕೆಜಿಗೆ( ಹಿಂದೆ 150 ರೂ.)

ಬಾಳೆಹಣ್ಣು- . 150 ರೂ ಕೆಜಿಗೆ( ಹಿಂದೆ 80 ರೂ.)

ಸೀಬೆ ಹಣ್ಣು- 150 ರೂ ಕೆಜಿಗೆ( ಹಿಂದೆ 60 ರೂ.)

ದ್ರಾಕ್ಷಿ ಹಣ್ಣು- 200 ರೂ. ಕೆಜಿಗೆ( ಹಿಂದೆ 80 ರೂ.)