ಕನ್ನಡ ಸುದ್ದಿ  /  ಕರ್ನಾಟಕ  /  ಭಾರತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣಗಳೇನು?, ಪ್ರಕೃತಿ ವಿಕೋಪದ ಜತೆಗೆ ರಾಜಕೀಯ ನಂಟೂ ಉಂಟು

ಭಾರತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣಗಳೇನು?, ಪ್ರಕೃತಿ ವಿಕೋಪದ ಜತೆಗೆ ರಾಜಕೀಯ ನಂಟೂ ಉಂಟು

indian inflation ಹಣದುಬ್ಬರದ ಕಾರಣದಿಂದಲೂ ಭಾರತದಲ್ಲಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನ ಏರುತ್ತಲೇ ಇವೆ. ಇದರ ಹಿಂದೆ ಪ್ರಾಕೃತಿಕ ಕಾರಣಗಳ ಜತೆಗೆ ರಾಜಕೀಯ ನಂಟು ಕೂಡ ಇದೆ.ವಿಶ್ಲೇಷಣೆ: ಎಚ್.ಮಾರುತಿ, ಬೆಂಗಳೂರು

ಭಾರತದಲ್ಲಿ ಹಣದುಬ್ಬರದ ಪರಿಣಾಮ ಅಗತ್ಯವಸ್ತುಗಳ ಬೆಲೆ ಗಗನಮುಖಿಯಾಗಿದೆ.
ಭಾರತದಲ್ಲಿ ಹಣದುಬ್ಬರದ ಪರಿಣಾಮ ಅಗತ್ಯವಸ್ತುಗಳ ಬೆಲೆ ಗಗನಮುಖಿಯಾಗಿದೆ.

ಬೆಂಗಳೂರು: 2023ರಿಂದಲೂ ಪ್ರತಿ ವರ್ಷ ಆಹಾರ ಕೊರತೆ ಶೇ.8ರಷ್ಟು ಏರಿಕೆಯಾಗುತ್ತಿದ್ದು ಕೃಷಿ ಉತ್ಪನ್ನಗಳ ಮೇಲುಂಟಾಗುವ ಪ್ರತಿಕೂಲ ಹವಾಮಾನ ದೇಶದಲ್ಲಿ ಆಹಾರ ಕೊರತೆಗೆ ಪ್ರಮುಖ ಕಾರಣವಾಗಿದೆ. ಈ ವರ್ಷ ಮುಂಗಾರು ವಾಡಿಕೆಗಿಂತ ಮುಂಚಿತವಾಗಿ ಆಗಮಿಸಿದ್ದರೂ ಸಾಮಾನ್ಯ ಮಳೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಭಾವಿಸಲಾಗಿದೆ. ಇದರಿಂದ ಆಹಾರ ಉತ್ಪನ್ನಗಳಬೆಲೆ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ತರಕಾರಿಗಳ ಬೆಲೆ ಹೆಚ್ಚಾಗುತ್ತದೆ. ಕಳೆದ ವರ್ಷ ಉಂಟಾದ ಬರಗಾಲ, ಉಷ್ಣತೆ, ನೀರಿನ ಕೊರತೆ ಆಹಾರ ಉತ್ಪನ್ನಗಳ ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ. ಧಾನ್ಯಗಳು, ತರಕಾರಿ ಬೇಳೆ ಕಾಳುಗಳು ಮತ್ತು ಹಣ್ಣು ಹಂಪಲುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಅತಿಯಾದ ಉಷ್ಣತೆ ಎಷ್ಟಿದೆ ಎಂದರೆ ಇಡೀ ದೇಶದ ಅರ್ಧ ಭಾಗದಲ್ಲಿ ವಾಡಿಕೆಗಿಂತ ಶೇ.4ರಿಂದ 9ರಷ್ಟು ಹೆಚ್ಚಳವಾಗಿದೆ. ತರಕಾರಿಗಳು, ಈರುಳ್ಳಿ, ಟೊಮಟೊ ಸೇರಿದಂತೆ ಬಹುತೇಕ ತರಕಾರಿಗಳು ಉಷ್ಣತೆಗೆ ಕಮರಿ ಹೋಗಿವೆ.

ಟ್ರೆಂಡಿಂಗ್​ ಸುದ್ದಿ

ಈರುಳ್ಳಿ, ಆಲೂಗೆಡ್ಡೆ ಮತ್ತು ಟೊಮಾಟೊ ಬೆಲೆ ಏರಿಕೆಯಿಂಧ ಶೇ.೧೬ರಷ್ಟು ಕುಟುಂಬಗಳು ಇವುಗಳ ಬಳಕೆಯನ್ನು ಕಡಿಮೆ ಮಾಡಿವೆ ಇಲ್ಲವೇ ಕೊಳ್ಳಲು ಆರ್ಥಿಕ ಶಕ್ತಿ ಇಲ್ಲವಾಗಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಜೂನ್ – ಸೆಪ್ಟಂಬರ್‌ ಮಧ್ಯ ಭಾಗದಲ್ಲಿ ತರಕಾರಿ ಬೀಜ ಬಿತ್ತನೆ ಮಾಡಲಾಗುತ್ತದೆ. ಆದರೆ ಈ ವರ್ಷ ಅತಿಯಾದ ಉಷ್ಣೆತೆಯಿಂದಾಗಿ ಬಿತ್ತನೆ ಸಾಧ್ಯವಾಗದೆ ರೈತ ಕಂಗಾಲಾಗಿದ್ದಾನೆ. ಒಂದು ವೇಳೆ ಸಕಾಲಕ್ಕೆ ಮಳೆಯಾದರೆ ಆಗಸ್ಟ್ ತಿಂಗಳಿನಿಂದ ತರಕಾರಿಗಳ ಬೆಲೆ ಇಳಿಯಬಹುದು ಎಂದು ಭಾವಿಸಲಾಗಿದೆ. ಆದರೆ ಅತಿಯಾದ

ಪ್ರವಾಹ ಇಲ್ಲವೇ ಬರದ ಕಾರಣಕ್ಕಾಗಿ ಬೆಲೆಗಳು ಇಳಿಕೆ ಕಾಣದಿರಲೂಬಹುದು ಎಂದು ಹೇಳಲಾಗುತ್ತಿದೆ. ಗೋಧಿಯನ್ನು ಆಮದು ಮಾಡಿಕೊಂಡರೆ ಮಾತ್ರ ಬೆಲೆ ಕಡಿಮೆಯಾಗಬಹುದು.

ಆದರೆ ಕೇಂದ್ರ ಸರಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲವಾದ್ದರಿಂದ ಬೆಲೆ ಕುರಿತು ಈಗಲೇ ಏನನ್ನೂ ಹೇಳುವಂತಿಲ್ಲ. ಭತ್ತದ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಿರುವುದರಿಂದ ಸಹಜವಾಗಿಯೇ ಅಕ್ಕಿಯ ಬೆಲೆಯೂ ಏರಿಕೆಯಾಗಲಿದೆ ಎಂದು ವರ್ತಕರು ಹೇಳುತ್ತಾರೆ.

ಬೆಲೆಗಳ ಏರಿಕೆಯಿಂದ ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಜನ ಹೈರಾಣಾಗಿದ್ದಾರೆ. ಹವಾಮಾನ ವೈಪರೀತ್ಯದ ಜೊತೆಗೆ ಕೃಷಿ ದುಬಾರಿಯಾಗುತ್ತಿರುವದೂ ಕಾರಣವಾಗಿದೆ. ಭಾರತದಲ್ಲಿ ಬೆಲೆ ಏರಿಕೆ ಎನ್ನುವುದು ಚೈನ್‌ ಲಿಂಕ್‌ ಇದ್ದ ಹಾಗೆ. ಒಂದರ ಬೆಲೆ ಏರಿಸಿದರೆ ಸಾಕು, ಉಳಿದ ವಸ್ತು ಮತ್ತು ಸೇವೆಗಳ ಬೆಲೆ ತಾನಾಗಿಯೇ ಏರಿಬಿಡುತ್ತದೆ.

ಸರ್ಕಾರ ಏನನ್ನೂ ಮಾಡಲಾಗದು ಎಂದು ಹೇಳುವಂತಿಲ್ಲ. ಗ್ರಾಹಕರ ಮತ್ತು ರೈತರ ಹಿತಾಸಕ್ತಿಯನ್ನು ಕಾಪಾಡಲು ಸಾಕಷ್ಟು ಅವಕಾಶಗಳಿವೆ. ರಫ್ತು ಮೇಲೆ ನಿರ್ಬಂಧ ಹೇರಿ ಆಮದನ್ನು ಹೆಚ್ಚಿಸಬಹುದಾಗಿದೆ. ಇದರಿಂದ ಕೆಲವು ಆಹಾರ ಪದಾರ್ಥಗಳ ಬೆಲೆ ಕಡಿಮೆ ಮಾಡಬಹುದಾಗಿದೆ.

ಆದರೆ ತರಕಾರಿಗಳ ಬೆಲೆಯ ಏರಿಳಿತ ಕುರಿತು ಸರ್ಕಾರದ ಪಾತ್ರ ಅಷ್ಟಾಗಿ ಇರುವುದಿಲ್ಲ. ಬೇಗ ಹಾಳಾಗುವ ಗುಣ ಹೊಂದಿರುವುದರಿಂದ ಆಮದು ಮಾಡಿಕೊಳ್ಳಲು ಅಸಾಧ್ಯ. ಆದರೆ ಸಕ್ಕರೆ, ಅಕ್ಕಿ, ಈರುಳ್ಳಿ ಮತ್ತು ಗೋಧಿಯ ರಫ್ತನ್ನು ನಿಯಂತ್ರಿಸಲು ಅವಕಾಶ ಇದೆ. ಆದರೆ ಇಂತಹ ಕ್ರಮಗಳನ್ನು ಅನುಸರಿಸುವುದರಿಂದ ಚುನಾವಣೆಯ ಸಂದರ್ಭದಲ್ಲಿ ಆಡಳಿತ ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತದೆ. ಏಕೆಂದರೆ ಇಂತಹ ಕ್ರಮಗಳಿಂದ ಸ್ಥಳೀಯವಾಗಿ ರೈತರಿಗೆ ನಷ್ಟ ಉಂಟಾಗುತ್ತದೆ.

ಕೃಷಿಯನ್ನೇ ಪ್ರಧಾನವಾಗಿರಿಸಿಕೊಂಡಿರುವ ರಾಜ್ಯ ವಿಧಾನಸಭಾ ಚುನಾವಣೆಗಳು ಸನ್ನಿಹಿತವಾಗಿದ್ದು, ಬೆಲೆಗಳನ್ನು ಇಳಿಸುವುದಕ್ಕೆ ಬದಲಾಗಿ ಹೆಚ್ಚಳ ಮಾಡಲು ಸರ್ಕಾರ ಪರೋಕ್ಷ ಬೆಂಬಲ ನೀಡುತ್ತದೆ ಎಂದೂ ವಿಶ್ಲೇಷಿಲಾಗುತ್ತಿದೆ.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಸರಕಾರಗಳು ಕೈಚೆಲ್ಲಿ ಕೂರಬಾರದು. ಮಧ್ಯ ವರ್ತಿಗಳನ್ನು ನಿಯಂತ್ರಿಸಿ ಅಗತ್ಯ ವಸ್ತುಗಳು ಗ್ರಾಹಕರ ಕೈಗೆಟಕುವಂತೆ ನೋಡಿಕೊಳ್ಳಬೇಕಾದ್ದು ಸರ್ಕಾರಗಳ ಧರ್ಮ. ಆದರೆ ಕೇಳಿಸಿಕೊಳ್ಳಲು ಆಳುವ ಮಂದಿಗೆ ಈ ಗೋಳು ಕೇಳಿಸದು ಎನ್ನುವುದು ಸಾಮಾನ್ಯ ಜನರ ಮನದಾಳದ ಮಾತು.

( ಎಚ್.ಮಾರುತಿ, ಬೆಂಗಳೂರು)