ಹೆಬ್ಬಾಳದಲ್ಲಿ ಎರಡು ದಿನಗಳ ಬೃಹತ್ ಇ-ಖಾತಾ ಮೇಳ ಯಶಸ್ವಿ: ಅಗತ್ಯ ದಾಖಲೆ ಸಲ್ಲಿಸಿದವರಿಗೆ ಸ್ಥಳದಲ್ಲಿಯೇ ಅಂತಿಮ ಇ-ಖಾತಾಗಳ ವಿತರಣೆ
ಜುಲೈ 22 ಮತ್ತು 23, 2025 ರಂದು ಆಯೋಜಿಸಲಾದ ಎರಡು ದಿನಗಳ “ಬೃಹತ್ ಇ-ಖಾತಾ ಮೇಳ” ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ದೊರೆತು ಯಶಸ್ವಿಯಾಗಿದೆ.

ಬೆಂಗಳೂರು: ಬಿಬಿಎಂಪಿಯ ಪೂರ್ವ ವಲಯ ವ್ಯಾಪ್ತಿಯ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಆರ್.ಟಿ.ನಗರದ ಹೆಚ್.ಎಮ್.ಟಿ ಆಟದ ಮೈದಾನದಲ್ಲಿ, ಜುಲೈ 22 ಮತ್ತು 23, 2025 ರಂದು ಆಯೋಜಿಸಲಾದ ಎರಡು ದಿನಗಳ “ಬೃಹತ್ ಇ-ಖಾತಾ ಮೇಳ” ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ದೊರೆತು ಯಶಸ್ವಿಯಾಗಿದೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 08 ವಾರ್ಡ್‌ಗಳನ್ನು ಒಳಗೊಂಡಂತೆ, ಈ ಮೇಳದಲ್ಲಿ ಸಾರ್ವಜನಿಕರಿಗೆ ಸುಲಭ ಮತ್ತು ಪಾರದರ್ಶಕ ಸೇವೆ ಒದಗಿಸುವ ಉದ್ದೇಶದಿಂದ, ವಿವಿಧ ಹಂತದ ಕಾರ್ಯಚಟುವಟಿಕೆಗಳಿಗಾಗಿ:
- ಇಪಿಐಡಿ ಪರಿಶೀಲನೆಗಾಗಿ: 6 ಕೌಂಟರ್‌ಗಳು
- ದಾಖಲೆ ಸ್ಕ್ಯಾನಿಂಗ್ ಮತ್ತು ಅಪ್ಲೋಡ್‌ಗಾಗಿ: 10 ಕೌಂಟರ್‌ಗಳು
- ದಾಖಲೆ ಪರಿಶೀಲನೆ ಮತ್ತು ಅನುಮೋದನೆಗಾಗಿ: 10 ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು.
40 ಕ್ಕೂ ಅಧಿಕ ಲ್ಯಾಪ್‌ಟಾಪ್‌ಗಳ ಸಹಾಯದಿಂದ, ಪ್ರತಿ ಹಂತದ ಪ್ರಕ್ರಿಯೆ ಸಮರ್ಪಕವಾಗಿ ನಡೆಯುವಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಎರಡು ದಿನಗಳ ಈ ಮೇಳದಲ್ಲಿ ನಿನ್ನೆ ದಿನ 485 ಟೋಕನ್ ಹಾಗೂ ಇಂದು 286 ಟೋಕನ್ ಸೇರಿ ಒಟ್ಟು 771 ಟೋಕನ್‌ಗಳನ್ನು ನೀಡಲಾಗಿದ್ದು, ಈ ಪೈಕಿ ಅಗತ್ಯ ದಾಖಲೆಗಳನ್ನು ನೀಡದವರನ್ನು ಹಾಗೂ ಬಿಬಿಎಂಪಿ ಗೆ ಆಸ್ತಿ ತೆರಿಗೆ ಪಾವತಿಸದ ಸುಮಾರು 12 ಅರ್ಜಿದಾರರನ್ನು ಹೊರತುಪಡಿಸಿ, ಟೋಕನ್ ಪಡೆದುಕೊಂಡ ಎಲ್ಲಾ ಅರ್ಜಿದಾರರಿಗೆ ಇ-ಖಾತಾ ವಿತರಿಸುವುದರೊಂದಿಗೆ ಕಾರ್ಯಕ್ರಮವು ಯಶಸ್ಸು ಸಾಧಿಸಿದೆ ಎಂದು ಬಿಬಿಎಂಪಿ ತಿಳಿಸಿದೆ.
ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ
ರಾಜರಾಜೇಶ್ವರಿನಗರ ವಲಯದಲ್ಲಿ ಇದೇ ಜುಲೈ 25ರಂದು ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸ್ವಚ್ಛತಾ ಅಭಿಯಾನವನ್ನು ನಡೆಸಲಾಗುವುದು: ಡಾ. ಸತೀಶ್ ಬಿ.ಸಿ.
ಮಾನ್ಯ ಮುಖ್ಯ ಆಯುಕ್ತರು ಬಿಬಿಎಂಪಿರವರ ನಿರ್ದೇಶನದಂತೆ ವಲಯ ವ್ಯಾಪ್ತಿಯ ಪಾದಚಾರಿಗಳಿಗೆ ಅಡೆತಡೆಗಳಿಲ್ಲದ ಪಾದಚಾರಿ ಮಾರ್ಗವನ್ನು ಕಲ್ಪಿಸುವ ಸಲುವಾಗಿ ಪ್ರತಿ ತಿಂಗಳ 1ನೇ ಮತ್ತು 3ನೇ ಶನಿವಾರ ಹಾಗೂ 2ನೇ ಮತ್ತು 4ನೇ ಶುಕ್ರವಾರದಂದು ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯೊಂದಿಗೆ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸ್ವಚ್ಛತಾ ಅಭಿಯಾನವನ್ನು ನಡೆಸಲಾಗುವುದು. ಎಂದು ವಲಯ ಆಯುಕ್ತರು ತಿಳಿಸಿದರು.
ರಾಜರಾಜೇಶ್ವರಿನಗರ ವಲಯದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯ ಮುಂದುವರೆದ ಭಾಗವಾಗಿ ಇದೇ ಜುಲೈ 25ನೇ ತಾರೀಖಿನಂದು ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯೊಂದಿಗೆ, ಅನಧಿಕೃತ ಜಾಹೀರಾತು ತೆರವು ಕಾರ್ಯಾಚರಣೆ ಹಾಗೂ ಸ್ವಚ್ಛತಾ ಅಭಿಯಾನವನ್ನು ನಡೆಸಲಿರುವ ಸ್ಥಳಗಳ ಮಾಹಿತಿ ಈ ಕೆಳಗಿನಂತಿರುತ್ತದೆ:
- ಕೆಂಗೇರಿ ವಿಭಾಗದ: 1ನೇ ‘ಡಿ’ ಮುಖ್ಯರಸ್ತೆಯಿಂದ (ಹೊಯ್ಸಳ ವೃತ್ತದ ಹತ್ತಿರ) 1ನೇ ಮುಖ್ಯರಸ್ತೆ ಕೆಂಗೇರಿ ಉಪನಗರ (ಫುಡ್ ಪ್ಯಾಲೇಸ್) ಮತ್ತು 8 ನೇ ಅಡ್ಡರಸ್ತೆ, 1ನೇ ‘ಡಿ’ ಮುಖ್ಯರಸ್ತೆಯಿಂದ 1ನೇ ಮುಖ್ಯರಸ್ತೆ ಕೆಂಗೇರಿ ಉಪನಗರದವರೆಗೆ.
- ರಾಜರಾಜೇಶ್ವರಿನಗರ ವಿಭಾಗದ: ಜಯಣ್ಣ ವೃತ್ತದಿಂದ ಕೆಂಪೇಗೌಡ ಡಬ್ಬಲ್ ರಸ್ತೆವರೆಗೆ ಮತ್ತು ಕೆಂಪೇಗೌಡ ಡಬ್ಬಲ್ ರಸ್ತೆಯಿಂದ ಚನ್ನಸಂದ್ರ ಮುಖ್ಯರಸ್ತೆವರೆಗೆ.
ಆದ್ದರಿಂದ ವಲಯ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿರುವ ಅನಧಿಕೃತ ಪಾದಚಾರಿ ಮಾರ್ಗ ಒತ್ತುವರಿದಾರರು ಸ್ವಯಂ ಪ್ರೇರಿತರಾಗಿ ಪಾದಚಾರಿ ಮಾರ್ಗ ಒತ್ತುವರಿಯನ್ನು ತೆರವುಗೊಳಿಸಲು ಈ ಮೂಲಕ ತಿಳಿಯ ಪಡಿಸಿದೆ. ಒಂದು ವೇಳೆ ಸ್ವಯಂ ಪ್ರೇರಿತರಾಗಿ ತೆರವುಗೊಳಿಸದಿದ್ದಲ್ಲಿ ಬಿಬಿಎಂಪಿ ವತಿಯಿಂದ ತೆರವುಗೊಳಿಸಿ ಸಂಬಂಧಪಟ್ಟವರ ಮೇಲೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಲಯ ಆಯುಕ್ತರು ತಿಳಿಸಿದರು.


