ಮೇಲುಕೋಟೆಯಲ್ಲಿ ಭಕ್ತರಿಗೆ ವಾರಾಂತ್ಯ, ರಜೆ ದಿನಗಳಲ್ಲಿ ದಾಸೋಹ ಸೇವೆ; 3 ವರ್ಷದ ನಂತರ ಶುರುವಾಯ್ತು ಮಧ್ಯಾಹ್ನ ಪ್ರಸಾದ ವ್ಯವಸ್ಥೆ
ಕನ್ನಡ ಸುದ್ದಿ  /  ಕರ್ನಾಟಕ  /  ಮೇಲುಕೋಟೆಯಲ್ಲಿ ಭಕ್ತರಿಗೆ ವಾರಾಂತ್ಯ, ರಜೆ ದಿನಗಳಲ್ಲಿ ದಾಸೋಹ ಸೇವೆ; 3 ವರ್ಷದ ನಂತರ ಶುರುವಾಯ್ತು ಮಧ್ಯಾಹ್ನ ಪ್ರಸಾದ ವ್ಯವಸ್ಥೆ

ಮೇಲುಕೋಟೆಯಲ್ಲಿ ಭಕ್ತರಿಗೆ ವಾರಾಂತ್ಯ, ರಜೆ ದಿನಗಳಲ್ಲಿ ದಾಸೋಹ ಸೇವೆ; 3 ವರ್ಷದ ನಂತರ ಶುರುವಾಯ್ತು ಮಧ್ಯಾಹ್ನ ಪ್ರಸಾದ ವ್ಯವಸ್ಥೆ

Melkote Dasoha: ಪ್ರಮುಖ ಧಾರ್ಮಿಕ ಪ್ರವಾಸಿ ತಾಣ ಮಂಡ್ಯದ ಮೇಲುಕೋಟೆಯಲ್ಲಿ ವಾರಾಂತ್ಯ ಮತ್ತು ರಜೆ ದಿನಗಳಂದು ನೀಡುವ ದಾಸೋಹ ಸೇವೆಗೆ ಚಾಲನೆ ಸಿಕ್ಕಿದೆ.

ಮೇಲುಕೋಟೆಯಲ್ಲಿ ಮಧ್ಯಾಹ್ನದ ದಾಸೋಹ ವ್ಯವಸ್ಥೆ ಆರಂಭಗೊಂಡಿದೆ.
ಮೇಲುಕೋಟೆಯಲ್ಲಿ ಮಧ್ಯಾಹ್ನದ ದಾಸೋಹ ವ್ಯವಸ್ಥೆ ಆರಂಭಗೊಂಡಿದೆ.

ಮಂಡ್ಯ: ದಕ್ಷಿಣ ಭಾರತ ಪ್ರಮುಖ ಪ್ರವಾಸಿ ತಾಣ, ರಾಮಾನುಜರ ಕರ್ಮಭೂಮಿಯೂ ಆಗಿರುವ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಈಗ ವಾರಾಂತ್ಯ ಹಾಗೂ ರಜೆ ದಿನಗಳಲ್ಲಿ ಭಕ್ತರಿಗೆ ಪ್ರಸಾದ ಸೇವೆ ಶುರುವಾಗಿದೆ. ಇಲ್ಲಿಗೆ ಬರುವ ಭಕ್ತರಿಗೆ ನಿತ್ಯ ದಾಸೋಹ ಕಲ್ಪಿಸಬೇಕು ಎನ್ನುವುದು ಬಹಳ ವರ್ಷಗಳ ಬೇಡಿಕೆ. ಮೂರು ವರ್ಷದ ಹಿಂದೆಯೇ ಇಲ್ಲಿ ವಿಶಾಲ ದಾಸೋಹ ಭವನ ರೂಪಿಸಿದ್ದರೂ ದಾಸೋಹ ಮಾತ್ರ ಆರಂಭವಾಗಿರಲೇ ಇಲ್ಲ. ಒಂದಿಲ್ಲೊಂದು ನೆಪವನ್ನು ಹೇಳಿ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳು ದಾಸೋಹ ಆರಂಭಿವುದನ್ನು ಮುಂದೂಡುತ್ತಲೇ ಇದ್ದರು. ಈಗ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರ ಒತ್ತಾಸೆಯ ಫಲವಾಗಿ ಸದ್ಯ ಶನಿವಾರ ಹಾಗೂ ಭಾನುವಾರದ ಜತೆಗೆ ರಜಾ ದಿನಗಳಲ್ಲಿ ಮಾತ್ರ ಪ್ರಸಾದ ವ್ಯವಸ್ಥೆ ಭಕ್ತರಿಗೆ ಲಭಿಸಲಿದೆ.

ಪ್ರಮುಖ ಪ್ರವಾಸಿ ತಾಣ

ಮಂಡ್ಯದಿಂದ 30 ವರ್ಷ ದೂರ ಇರುವ ಮೇಲುಕೋಟೆ ಸುಮಾರು 3589 ಅಡಿ ಎತ್ತರದ ಯದುಗಿರಿ ಬೆಟ್ಟದ ಮೇಲಿರುವ ಚಾರಿತ್ರಿಕ, ಧಾರ್ಮಿಕ ಮಹತ್ವದ ಸ್ಥಳ. ತೀರ್ಥಕ್ಷೇತ್ರಪುರ. ಶ್ರೀವೈಷ್ಣವಯತಿ, ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಕರಾದ ಆಚರ‍್ಯ ರಾಮಾನುಜರ ಕರ್ಮಭೂಮಿಯೂ ಹೌದು. ಪಾಂಡವಪುರ ತಾಲ್ಲೂಕಿನ ವಿಶ್ವ ವಿಖ್ಯಾತ ಪ್ರವಾಸಿ ತಾಣ ಮೇಲುಕೋಟೆಯು ರಾಜ್ಯದಲ್ಲಿನ ಅತ್ಯಂತ ಪ್ರಮುಖ ಧಾರ್ಮಿಕ, ಪಾರಂಪರಿಕ ಹಾಗೂ ಐತಿಹಾಸಿಕ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ.ಇಲ್ಲಿನ ಶ್ರೀ ಚೆಲುವನಾರಾಯಣ ಸ್ವಾಮಿ ದೇವಾಲಯ, ಶ್ರೀ ಯೋಗನರಸಿಂಹಸ್ವಾಮಿ ದೇವಾಲಯ, ಪಂಚಕಲ್ಯಾಣಿ, ಅಕ್ಕತಂಗಿ ಕೊಳ, ರಾಯಗೋಪುರ, ಧನುಷ್ಕೋಟಿ ಮುಂತಾದ ಇನ್ನೂ ಹತ್ತು ಹಲವು ಸ್ಮಾರಕಗಳು ದೇಶ ವಿದೇಶಗಳ ಪ್ರವಾಸಿಗರನ್ನು ಪ್ರತಿನಿತ್ಯ ಸೆಳೆಯುತ್ತಿವೆ. ಇಲ್ಲಿಗೆ ನಿತ್ಯ ಭಕ್ತರು ಬರುತ್ತಾರೆ. ಮುಜರಾಯಿ ಇಲಾಖೆ ವ್ಯಾಪ್ತಿಯಡಿ ದೇಗುವ ನಿರ್ವಹಣೆ ಆಗುತ್ತಿದೆ.

ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಸಹಿತ ಪ್ರಮುಖ ಜಿಲ್ಲೆಗಳ ಧಾರ್ಮಿಕ ಪ್ರವಾಸಿ ತಾಣಗಳಲ್ಲಿ ನಿತ್ಯ ಪ್ರಸಾದ ವ್ಯವಸ್ಥೆಯಿದೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಹೊರನಾಡು, ಸಿಗಂದೂರು ಸಹಿತ ಹಲವು ಕಡೆ ನಿತ್ಯ ದಾಸೋಹವಿದೆ. ಇದೇ ಮಾದರಿಯಲ್ಲಿಯೇ ಮೇಲುಕೋಟೆಯಲ್ಲೂ ಪ್ರವಾಸ ವ್ಯವಸ್ಥೆ ಮಾಡಬೇಕು ಎನ್ನುವ ಬೇಡಿಕೆಯಿತ್ತು. ಇದು ಜಾರಿಯಾಗಿರಲಿಲ್ಲ.

ಹಿಂದಿನ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ನೀಡಿದ್ದ ಎರಡು ಕೋಟಿ ರೂ. ಅನುದಾನದಲ್ಲಿ ದಾಸೋಹ ಭವನವನ್ನು ಹಿಂದಿನ ಶಾಸಕ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನಿರ್ಮಿಸಲು ಶ್ರಮಿಸಿದ್ದರು. ಆದರೆ ದಾಸೋಹವೇ ಶುರುವಾಗಿರಲಿಲ್ಲ.

ಶುರುವಾಯ್ತು ದಾಸೋಹ ಸೇವೆ

ಈಗಿನ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರು ಇಲಾಖೆಯವರಿಗೆ ಸೂಚನೆ ನೀಡಿ ಆದಷ್ಟು ಬೇಗನೇ ಮಧ್ಯಾಹ್ನದ ದಾಸೋಹ ವ್ಯವಸ್ಥೆ ಆರಂಭಿಸುವಂತೆ ಸೂಚಿಸಿದ್ದರು. ವಾರಾಂತ್ಯ ಹಾಗೂ ರಜೆ ದಿನಗಳಲ್ಲಿ ಹೆಚ್ಚಿನ ಭಕ್ತರು ಬರುವುದರಿಂದ ಆ ದಿನ ಕನಿಷ್ಠ ಒಂದು ಸಾವಿರ ಭಕ್ತರಿಗಾದರೂ ಪ್ರಸಾದ ವ್ಯವಸ್ಥೆ ಮಾಡಬಹುದು ಎನ್ನುವ ನಿರ್ಧಾರಕ್ಕೆ ಬರಲಾಗಿತ್ತು. ಅದರಂತೆಯೇ ಈಗ ವಾರಾಂತ್ಯ, ರಜೆ ದಿನಗಳಲ್ಲಿ ಪ್ರಸಾದಕ್ಕೆ ಚಾಲನೆ ಸಿಕ್ಕಿದೆ.

ಅನ್ನ ಸಾರು, ಮೇಲುಕೋಟೆಯಲ್ಲಿ ಹೆಸರುವಾಸಿಯಾದ ಪುಳಿಯೊಗರೆ, ಖಾರಾ ಹಾಗೂ ಸಿಹಿ ಪೊಂಗಲ್‌ ಅನ್ನು ಭಕ್ತರಿಗೆ ಒದಗಿಸುವ ಯೋಜನೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ 11 ರಿಂದ 3 ಗಂಟೆವರೆಗೂ ದಾಸೋಹವು ಮೇಲುಕೋಟೆಯಲ್ಲಿರುವ ದಾಸೋಹ ಭವನದಲ್ಲಿ ಶನಿವಾರ, ಭಾನುವಾರ ಇರಲಿದೆ. ಮೊದಲ ವಾರ ಅನ್ನಸಾರ ಅನ್ನು ಭಕ್ತರಿಗೆ ವಿತರಣೆ ಮಾಡಲಾಗಿದೆ. ಕಡಿಮೆ ಜನ ಬರಬಹುದು ಎನ್ನುವ ನಿರೀಕ್ಷೆಯಿತ್ತಾದರೂ 2 ಸಾವಿರ ಮಂದಿ ಬಂದಿದ್ದರಿಂದ ವ್ಯವಸ್ಥೆ ಮಾಡಲಾಗಿದೆ.

ಇಲ್ಲಿ ದಾಸೋಹ ಇದೆ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಈಗಿನ್ನೂ ಆರಂಭವಾಗಿರುವುದರಿಂದ ಮೇಲುಕೋಟೆಗೆ ಬರುವ ಭಕ್ತರಿಗೆ ತಿಳಿಸಲಾಗುವುದು. ಮೇಲುಕೋಟೆಯಲ್ಲಿ ಅನ್ನಪ್ರಸಾದ ಭವನದಲ್ಲಿ ಪ್ರಸಾದ ವಿತರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚೆಲುವರಾಯಸ್ವಾಮಿ ದಂಪತಿ ಹಾಗೂ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಆರಂಭಿಸಿದರು. ಮೊದಲಿಗೆ ಶನಿವಾರ ಭಾನುವಾರ ರಜಾ ದಿನಗಳಂದು ಅನ್ನಪ್ರಸಾದ ಭಕ್ತರಿಗೆ ದೊರೆಯಲಿದೆ ಹಂತ ಹಂತವಾಗಿ ಎಲ್ಲ ದಿನಗಳಿಗೆ ವಿಸ್ತರಿಸುವ ಯೋಜನೆ ಇದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಹೇಳುತ್ತಾರೆ.

Whats_app_banner